ಕೊಪ್ಪಳ ಜಿ.ಪಂ. ಸದಸ್ಯರ ಪಟ್ಟಿಯಲ್ಲಿ 2011ರ ಜನಪ್ರತಿನಿಧಿಗಳ ಹೆಸರು; ಜಿಲ್ಲಾಡಳಿತಕ್ಕೇ ಶಾಕ್

ಈಗಷ್ಟೇ ಆರಂಭವಾಗಿರುವ 2020-21ನೇ ಆಡಳಿತಾತ್ಮಕ ವರ್ಷದ ಕಾಲಂ ಸೃಷ್ಟಿಸಿ ವೆಬ್‌ಸೈಟ್ ಅಪ್ಡೇಟ್ ಇದೆ ಎಂಬುದನ್ನು ಸಾಬೀತುಪಡಿಸಲು ಹೋಗಿ ಎಡವಟ್ಟು ಮಾಡಿಕೊಳ್ಳಲಾಗಿದೆ.

news18-kannada
Updated:May 18, 2020, 4:18 PM IST
ಕೊಪ್ಪಳ ಜಿ.ಪಂ. ಸದಸ್ಯರ ಪಟ್ಟಿಯಲ್ಲಿ 2011ರ ಜನಪ್ರತಿನಿಧಿಗಳ ಹೆಸರು; ಜಿಲ್ಲಾಡಳಿತಕ್ಕೇ ಶಾಕ್
ಕೊಪ್ಪಳ ಜಿಲ್ಲಾ ಪಂಚಾಯತ್​ ಕಚೇರಿ
  • Share this:
ಕೊಪ್ಪಳ(ಮೇ 18): ಕೊಪ್ಪಳ ಜಿಲ್ಲಾ ಪಂಚಾಯತ್​ ಅಧ್ಯಕ್ಷ ಸ್ಥಾನದ ಮೇಲೆ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಕಣ್ಣಿಟ್ಟಿದ್ದು, ಅಧಿಕಾರಕ್ಕಾಗಿ ತೆರೆಮರೆಯ ಕಸರತ್ತು ನಡೆಸಿವೆ. ಹಾಲಿ ಅಧ್ಯಕ್ಷ ವಿಶ್ವನಾಥರೆಡ್ಡಿ ಕಾಂಗ್ರೆಸ್ ಪಕ್ಷ ಪ್ರತಿನಿಧಿಸಿ ಆಯ್ಕೆಯಾಗಿದ್ದರೂ, ಸದ್ಯ ಬಿಜೆಪಿ ಮಡಿಲು ಸೇರಿರುವುದರಿಂದ ಅಧ್ಯಕ್ಷ ಸ್ಥಾನ ಯಾವ ಪಕ್ಷದ ಪಾಲಾಗಲಿದೆ ಎಂಬ ಕುತೂಹಲ ಜಿಲ್ಲೆಯಲ್ಲಿದೆ.

ಪ್ರಸ್ತುತ 29 ಜನ ಸದಸ್ಯರನ್ನು ಹೊಂದಿರುವ ಕೊಪ್ಪಳ ಜಿಲ್ಲಾ ಪಂಚಾಯತ್​​ನಲ್ಲಿ 17 ಜನ ಕಾಂಗ್ರೆಸ್ ಸದಸ್ಯರು, 11 ಜನ ಬಿಜೆಪಿ ಸದಸ್ಯರು ಹಾಗೂ ಓರ್ವ ಪಕ್ಷೇತರ ಸದಸ್ಯರ ಬಲಾಬಲ ಹೊಂದಿದೆ. ಪಕ್ಷೇತರ ಸದಸ್ಯ ಬಿಜೆಪಿ ಜೊತೆ ಗುರುತಿಸಿಕೊಂಡಿರುವುದರಿಂದ ಬಿಜೆಪಿಯ ಬಲ 12 ಎಂದು ಹೇಳಬಹುದು. ‌

ವಾಸ್ತವದಲ್ಲಿ ಈ ಅಂಕಿ-ಸಂಖ್ಯೆ ಸದ್ಯ ಕೊಪ್ಪಳ ಜಿಲ್ಲಾ ಪಂಚಾಯತ್​ ನಲ್ಲಿ ಇದೆ. 2019-20ನೇ ಸಾಲಿನಲ್ಲೂ ಸದಸ್ಯರ ಸಂಖ್ಯೆ ಇಷ್ಟೇ ಇದ್ದು, ಇನ್ನೇನು 2020ರ ನವೆಂಬರ್-ಡಿಸೆಂಬರ್‌ಗೆ ಜಿಪಂ ಸದಸ್ಯರ ಅವಧಿ ಮುಗಿದು‌ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಹಾಗೆಯೇ  ಏಪ್ರಿಲ್ 1 ರಿಂದ 2020-21ನೇ ಸಾಲಿನ ಆಡಳಿತಾತ್ಮಕ ವರ್ಷ ಆರಂಭಗೊಂಡಿದೆ. ಈ ಸಾಲಿನಲ್ಲಿ ಕೊಪ್ಪಳ ಜಿಪಂ ಸದಸ್ಯರ ಸಂಖ್ಯೆ 20 ಹಾಗೂ ವಿನಯಕುಮಾರ್ ಮೇಲಿನಮನಿ ಉಪಾಧ್ಯಕ್ಷ ಎಂಬ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ!

ಅದು ಹೇಗೆ?

ಸಾಮಾನ್ಯವಾಗಿ ಮೇಲ್ನೋಟಕ್ಕೆಯೇ ಇದು ಶುದ್ಧ ಸುಳ್ಳು ಅನಿಸುತ್ತೆ. ಆದರೆ ಇದನ್ನ ಹೇಳುತ್ತಿರುವುದು ಮತ್ತು ಪ್ರಕಟಿಸಿರುವುದು ನಾವಲ್ಲ! ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಕೊಪ್ಪಳ ಜಿಲ್ಲಾ ಪಂಚಾಯತ್​ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಮಾಹಿತಿ ದಾಖಲಾಗಿದೆ.

ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲಿ 16 ಅಂಶಗಳ ಆಯ್ಕೆಯ ಲಿಂಕ್ ಇದೆ. ಅದರಲ್ಲಿ ಎರಡನೇ ಆಯ್ಕೆ ಸದಸ್ಯರು ಎಂಬುದೊಂದಿದೆ. ಇಲ್ಲಿ‌ ಕ್ಲಿಕ್ ಮಾಡಿದರೆ ಕೊಪ್ಪಳ ಜಿಲ್ಲಾ ಪಂಚಾಯತ್​ನ 2015-16ನೇ ಸಾಲಿನಿಂದ ಹಿಡಿದು 2020-21ನೇ ಸಾಲಿನವರೆಗೆ ಕೊಪ್ಪಳ ಜಿಲ್ಲಾ ಪಂಚಾಯತ್​ ಸದಸ್ಯರ ಹೆಸರು, ಲಿಂಗ, ಮೀಸಲಾತಿ, ಹುದ್ದೆ, ಸದಸ್ಯರಾದ ದಿನಾಂಕ ಹಾಗೂ ಅವರ ಮೊಬೈಲ್ ಸಂಖ್ಯೆಯನ್ನು ನಮೂದಿಸಲಾಗಿದೆ. 2015-16ನೇ ಸಾಲಿನಿಂದ ಹಿಡಿದು 2019-20ನೇ ಸಾಲಿನವರೆಗೂ ಸರಿಯಾದ ಮಾಹಿತಿ ವೆಬ್‌ಸೈಟ್‌ನಲ್ಲಿದೆ. ಆದರೆ ಈಗಷ್ಟೇ ಆರಂಭವಾಗಿರುವ 2020-21ನೇ ಆಡಳಿತಾತ್ಮಕ ವರ್ಷದ ಕಾಲಂ ಸೃಷ್ಟಿಸಿ ವೆಬ್‌ಸೈಟ್ ಅಪ್ಡೇಟ್ ಇದೆ ಎಂಬುದನ್ನು ಸಾಬೀತುಪಡಿಸಲು ಹೋಗಿ ಎಡವಟ್ಟು ಮಾಡಿಕೊಳ್ಳಲಾಗಿದೆ.

ವೆಬ್​ ಸೈಟ್​ನಲ್ಲಿರುವ ಹೆಸರಿನ ಪಟ್ಟಿ
 

2020-21ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲಾ ಪಂಚಾಯಿತಿಯ 20  ಸದಸ್ಯರ ಹೆಸರನ್ನು ಮಾತ್ರ ತೋರಿಸುತ್ತಿದ್ದು, ಇವರ ಪೈಕಿ ಯಾರಿಗೂ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ. ವಿನಯಕುಮಾರ್ ಮೇಲಿನಮನಿ ಉಪಾಧ್ಯಕ್ಷ ಎಂಬ ಅಂಶ ದಾಖಲಿಸಲಾಗಿದೆ.

ಅಸಲಿಗೆ ಅಪ್ಡೇಟ್ ಮಾಡುವ ಭರದಲ್ಲಿ 2011ರಲ್ಲಿ ಕೊಪ್ಪಳ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿದ್ದ ಸದಸ್ಯರ ಹೆಸರನ್ನು ಕಾಪಿ‌, ಪೇಸ್ಟ್ ಮಾಡಿದ್ದೇ ಗೊಂದಲಕ್ಕೆ ಕಾರಣವಾಗಿದೆ. ಕಾಪಿ, ಪೇಸ್ಟ್ ಮಾಡುವುದಾಗಿದ್ದರೆ 2019-20ನೇ ಸಾಲಿನ ಸದಸ್ಯರ ಪಟ್ಟಿಯನ್ನೇ ಮಾಡಿದ್ದರೆ ಬಹುಶಃ ಇಷ್ಟು ಗೊಂದಲ ಉಂಟಾಗುತ್ತಿರಲಿಲ್ಲ.

ಇದನ್ನೂ ಓದಿ : ಅತಿಯಾದ ಕೊರೋನಾ ಗುಮ್ಮ ಬೇಡ; ಪುಟ್ಟ ಮಕ್ಕಳಿಗ್ಯಾಕೆ ಆನ್​ಲೈನ್ ಕ್ಲಾಸ್?

ಹೌದಾ! ಗಮನಕ್ಕೆ ತಂದದ್ದು ಒಳ್ಳೇಯದಾಯಿತು. ನಾನು ನೋಡ್ತಿನಿ. ಇದು ಕೊಪ್ಪಳದಿಂದ ಅಪ್ಡೇಟ್ ಆಗುತ್ತಾ? ಅಥವಾ ಇಲಾಖೆಯಿಂದ ನಿರ್ವಹಣೆ ಮಾಡಲಾಗುತ್ತಾ? ನನಗೆ ಸರಿಯಾಗಿ ಗೊತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಜಿಲ್ಲಾ ಪಂಚಾಯತ್​ ಸಿಇಒ ರಘುನಂದನ್ ಮೂರ್ತಿ ಹೇಳುತ್ತಾರೆ.

(ವರದಿ : ಬಸವರಾಜ ಕರುಗಲ್)
First published: May 18, 2020, 4:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading