ಕೊಪ್ಪಳ: ನರೇಗಾ ಕೆಲಸ ಕೇಳಿದ ಯುವಕನಿಗೆ ಅವಾಜ್ ಹಾಕಿದ ಪಿಡಿಒ

ಗ್ರಾಮಸ್ಥರು

ಗ್ರಾಮಸ್ಥರು

ನೀನೇನು ದೊಡ್ಡ ಲೀಡರ್ ಅಲ್ಲ, ನನ್ನ ಹಿಂದೆ ತಿರುಗಾಡಬೇಡ. ಮಹಿಳೆಯರು ಬರಲಿ, ಅವರು ಬಂದಾಗ ಪಂಚಾಯಿತಿಗೆ ಕಡೆಗೆ ಬಾ. ಚುನಾವಣೆ ಮುಗಿದ ನಂತರ ಕೆಲಸ ಕೊಡ್ತಿನಿ. ಫಾರಂನ್ನು ನಾನೇ ತುಂಬುತ್ತೇನೆ. ಇಲ್ಲಿ ಪಿಡಿಓ ನಾನೇ ಹೊರತು ನೀನಲ್ಲ. ನಿನ್ನ ಆಟ ಬೇರೆಯವರ ಹತ್ತಿರ ಇಟ್ಕೊ. ನನ್ನ ಹತ್ತಿರ ನಡೆಯಲ್ಲ. ಇಡೋ ಫೋನು ಅಂತ ಆವಾಜ್ ಹಾಕಿದ ಆಡಿಯೊ ವೈರಲ್ ಆಗಿದೆ.

ಮುಂದೆ ಓದಿ ...
  • Share this:

ಕೊಪ್ಪಳ(ಡಿ.16): ಹಳ್ಳಿಗಳಲ್ಲಿ ಈಗ ಗ್ರಾಮ ಪಂಚಾಯಿತಿ ಚುನಾವಣೆಯದ್ದೇ ಸದ್ದು. ಗ್ರಾಮೀಣ ಮಟ್ಟದ ಅಧಿಕಾರಿಗಳಿಗಂತೂ ಇದೊಂದು ಅಸ್ತ್ರವೂ, ವರವೂ ಆದಂತಿದೆ. ಸಾರ್ವಜನಿಕರು ಏನೇ ಕೇಳಿದರೂ ಗ್ರಾ.ಪಂ. ಚುನಾವಣೆ ಮುಗಿಯಲಿ, ಮುಂದೆ ನೋಡೋಣ ಎಂದು ಹೇಳಿ ಸಾಗಿ ಹಾಕುತ್ತಿದ್ದಾರೆ. ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಕೊಪ್ಪಳ ತಾಲೂಕಿನ ಕೊಳೂರು ಗ್ರಾಮ ಪಂಚಾಯಿತಿಯ ಪುರಾಣ. ಕೊಳೂರು ಗ್ರಾಪಂ ವ್ಯಾಪ್ತಿಯ ಕೂಲಿ ಕಾರ್ಮಿಕರು ನರೇಗಾ ಯೋಜನೆಯಡಿ ಕೆಲಸ ಕೇಳಲು ಹೋದಾಗ ಪಿಡಿಒ ಸಿದ್ದಮ್ಮ ಮಠದ ಅವರು ಚುನಾವಣೆ ನೆಪ ಹೇಳಿದ್ದಾರೆ. ಮಂಗಳಾಪುರದ ಮುತ್ತು ದೊಡ್ಡಮನಿ ಎಂಬ ಯುವಕ ಈ ಕುರಿತು ಜಿಪಂ ಸಿಎಸ್ ಅವರಿಗೆ ದೂರು ನೀಡಿದ್ದಾನೆ. ದೂರು ಬಂದ ತಕ್ಷಣ ಸಿಎಸ್ ಅವರು ಕೊಳೂರು ಗ್ರಾಪಂ ಪಿಡಿಒ ಅವರಿಗೆ ಲೆಫ್ಟ್ ರೈಟ್ ತೆಗೆದುಕೊಂಡಿದ್ದು ಪಿಡಿಓ ಸಿದ್ದಮ್ಮ ಕೆಂಡಾಮಂಡಲರಾಗಿದ್ದಾರೆ.


ದೂರು ನೀಡಿದ ಯುವಕ ನರೇಗಾ ಕೆಲಸದ ವಿಚಾರವಾಗಿ ಪಿಡಿಒ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಮಹಿಳೆಯರಿಗೆ ಚುನಾವಣೆ ಮುಗಿದ ಮೇಲೆ ಕೆಲಸ ಕೊಡ್ತಿನಿ. ನೀನೂ ಅವರ ಹಾಗೆ ಕೆಲಸ ಕೇಳೋನು. ನೀನೇನು ದೊಡ್ಡ ಲೀಡರ್ ಅಲ್ಲ, ನನ್ನ ಹಿಂದೆ ತಿರುಗಾಡಬೇಡ. ಮಹಿಳೆಯರು ಬರಲಿ, ಅವರು ಬಂದಾಗ ಪಂಚಾಯಿತಿಗೆ ಕಡೆಗೆ ಬಾ. ಚುನಾವಣೆ ಮುಗಿದ ನಂತರ ಕೆಲಸ ಕೊಡ್ತಿನಿ. ಫಾರಂನ್ನು ನಾನೇ ತುಂಬುತ್ತೇನೆ. ಇಲ್ಲಿ ಪಿಡಿಓ ನಾನೇ ಹೊರತು ನೀನಲ್ಲ. ನಿನ್ನ ಆಟ ಬೇರೆಯವರ ಹತ್ತಿರ ಇಟ್ಕೊ. ನನ್ನ ಹತ್ತಿರ ನಡೆಯಲ್ಲ. ಇಡೋ ಫೋನು ಅಂತ ಆವಾಜ್ ಹಾಕಿದ ಆಡಿಯೊ ವೈರಲ್ ಆಗಿದೆ.


Vijay Diwas 2020: 1971ರ ಇಂಡೋ-ಪಾಕ್ ಯುದ್ಧ; ಭಾರತಕ್ಕೆ ಜಯ; ಇಂದು ವಿಜಯ್ ದಿವಸದ ಸ್ಮರಣೆ


ಪಿಡಿಓ ಅವರು ನನ್ನ ಚಾರಿತ್ರ್ಯ ವಧೆಯಾಗುವಂಥ ಮಾತುಗಳನ್ನಾಡಿದ್ದಾರೆ. ಇದರಿಂದ ತುಂಬಾ ಬೇಸರವಾಗಿದೆ. ವಯಸ್ಸಿನಲ್ಲಿ ಅವರು ನನ್ನ ತಾಯಿ ಸಮಾನರಾಗಿದ್ದಾರೆ. ನನಗಿಂತಲೂ ಹೆಚ್ಚು ವಯಸ್ಸಿನ ಮಕ್ಕಳಿರುವ ಅವರು, ಉದ್ದೇಶಪೂರ್ವಕವಾಗಿ ನನ್ನ ವ್ಯಕ್ತಿತ್ವ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಬಡವರಿಗೆ ಕೆಲಸ ಕೊಡಿ ಎಂದು ಕೇಳಿದ್ದೇ ತಪ್ಪಾ ಸರ್? ಎಂದು ಮಂಗಳಾಪುರದ ಮುತ್ತು ದೊಡ್ಡಮನಿ ಪ್ರಶ್ನಿಸಿದ್ದಾರೆ.


ಚುನಾವಣೆಗೂ, ನರೇಗಾ ಕೆಲಸಕ್ಕೂ ಸಂಬಂಧ ಇಲ್ಲ. ಬುಧವಾರ ಬಹದ್ದೂರ್ ಬಂಡಿ ಕೆರೆ ಪರಿಶೀಲನೆಗೆ ಹೊರಟಿದ್ದೇವೆ. ನಾಡಿದ್ದೇ ಅರ್ಹರಿಗೆ ಫಾರಂಸಮೇತ ನರೇಗಾದಡಿ ಕೆಲಸ ಕೊಡ್ತಿವಿ. ಮುತ್ತು ಎಂಬ ಹುಡುಗ ಫಾರಂಗಳಿಗೆ ಸಹಿ ಹಾಕುವಂತೆ ಹಿಂದೆ ಹಿಂದೆ ದುಂಬಾಲು ಬೀಳುತ್ತಾನೆ. ಹಿಂದೆ ಇದ್ದ ಪಿಡಿಓಗಳಿಗೂ ಇದೇ ರೀತಿ ಕಾಟ ಕೊಟ್ಟಿದ್ದಾನಂತೆ. ನಾನು ಚುನಾವಣೆ ನಂತರ ಕೆಲಸ ಕೊಡ್ತಿನಿ ಅಂತ ಹೇಳೇ ಇಲ್ಲ ಎಂದು ಕೊಳೂರು ಗ್ರಾ.ಪಂ.ಪಿಡಿಓ ಸಿದ್ದಮ್ಮ ಮಠದ ಹೇಳಿದ್ದಾರೆ.


ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಘುನಂದನ್ ಅವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿದರೂ ಅವರು ಪ್ರತಿಕ್ರಿಯೆ ನೀಡಲು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು