ಕೊಪ್ಪಳ: 2023ರ ವಿಧಾನಸಭಾ ಚುನಾವಣೆ (Karnataka Elections 2023) ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಗದಿಗೆದರಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಅಖಾಡ ರೆಡಿಯಾಗುತ್ತಿದ್ದು, ಈ ನಡುವೆ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿಯಲ್ಲಿ (Gangawati constituency) ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಸ್ಪರ್ಧೆಯಿಂದಾಗಿ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿದೆ. ರೆಡ್ಡಿ ಎಂಟ್ರಿಯಾಗುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ.
ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್ಗಾಗಿ ಪೈಪೋಟಿ
ಬಿಜೆಪಿಯಲ್ಲಿ ಹಾಲಿ ಶಾಸಕ ಪರಣ್ಣ ಮುನವಳ್ಳಿ ನನಗೆ ಟಿಕೆಟ್ ಎಂದರೆ, ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ ಮೂವರು ಪೈಪೋಟಿ ನಡೆಸಿದ್ದಾರೆ. ಈಗ ಗಂಗಾವತಿ ಕ್ಷೇತ್ರದಲ್ಲಿ ಸ್ಥಳೀಯ ಹೊರ ಜಿಲ್ಲೆಯವರು ಎಂಬ ಲೆಕ್ಕಾಚಾರ ಆರಂಭವಾಗಿದೆ. ನಾಯಕರ ನಡುವಿನ ವಾಗ್ದಾಳಿ ಕೂಡ ಜೋರಾಗಿದೆ. ಕ್ಷೇತ್ರದ ಜನತೆ ಸ್ಥಳೀಯ ವ್ಯಕ್ತಿಗೆ ಪ್ರಾಧಾನ್ಯತೆ ನೀಡುತ್ತಾರೆ ಎಂದು ಬಿಜೆಪಿ ಹಾಲಿ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಂಗಭದ್ರಾ ಎಡದಂಡೆ ನಾಲೆಯಿಂದ ಅರ್ಧ ಪ್ರದೇಶ ನೀರಾವರಿಯಾಗಿದ್ದರೆ, ಉಳಿದ ಪ್ರದೇಶ ಒಣಭೂಮಿ ಪ್ರದೇಶವಾಗಿದೆ. ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಗಂಗಾವತಿ ಹಾಗೂ ಕೊಪ್ಪಳ ತಾಲೂಕಿನ ಪ್ರದೇಶಗಳನ್ನು ಹೊಂದಿದೆ. ಕೊಪ್ಪಳ ತಾಲೂಕಿನ ಕ್ಷೇತ್ರ ಒಣಭೂಮಿ ಪ್ರದೇಶವಾಗಿದೆ. ಇದರ ಜೊತೆಗೆ ಗಂಗಾವತಿ ನಗರ ಹಾಗೂ ಗ್ರಾಮೀಣ ಭಾಗ ಸಮವಾಗಿ ಮತದಾರರನ್ನು ಹೊಂದಿದೆ. ಇದರಿಂದಾಗಿ ಈಗ ಚುನಾವಣೆಯು ನಗರ ಪ್ರದೇಶದಲ್ಲಿ ಕೇಂದ್ರಿಕೃತವಾಗಿದೆ.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ, ಮುಸ್ಲಿಂ ಹಾಗೂ ಕುರುಬ ಜನಾಂಗದ ಮತಗಳು ಅಧಿಕವಾಗಿವೆ. ಮುಸ್ಲಿಂ ಮತಗಳು ನಗರ ಪ್ರದೇಶದಲ್ಲಿದ್ದರೆ ಗ್ರಾಮೀಣ ಭಾಗದಲ್ಲಿ ಲಿಂಗಾಯತ ಹಾಗು ಕುರುಬ ಮತಗಳು ಅಧಿಕವಾಗಿವೆ. ಈ ಹಿಂದೆ ಮೂರು ಬಾರಿ ಶ್ರೀರಂಗದೇವರಾಯಲು ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆ ನಂತರ 2004ರಲ್ಲಿ ಇಕ್ಬಾಲ್ ಅನ್ಸಾರಿ ಆಯ್ಕೆಯಾಗಿದ್ದರು. 2008ರಲ್ಲಿ ಬಿಜೆಪಿಯಿಂದ ಪರಣ್ಣ ಮುನವಳ್ಳಿ, 2013ರಲ್ಲಿ ಮತ್ತೆ ಇಕ್ಬಾಲ್ ಅನ್ಸಾರಿ, 2018ರಲ್ಲಿ ಮತ್ತೆ ಪರಣ್ಣ ಮುನವಳ್ಳಿ ಆಯ್ಕೆಯಾಗಿದ್ದರು.
ಪರಣ್ಣ, ಅನ್ಸಾರಿಗೆ ಜನಾರ್ದನ ರೆಡ್ಡಿ ಠಕ್ಕರ್
ಕಳೆದ 40 ವರ್ಷಗಳಲ್ಲಿ ಮೂರು ಜನ ಶಾಸಕರನ್ನು ಕಂಡಿರುವ ಗಂಗಾವತಿಯಲ್ಲಿ ಈಗ ಬಳ್ಳಾರಿಯ ಗಣಿಧಣಿ ಜನಾರ್ದನ ರೆಡ್ಡಿ ಎಂಟ್ರಿಯಾಗಿದ್ದಾರೆ. ಜನಾರ್ದನ ರೆಡ್ಡಿ ಆಗಮನದಿಂದ ಗಂಗಾವತಿಯಲ್ಲಿ ರಾಜಕೀಯ ಚುಟುವಟಿಕೆಗಳು ಬಿರುಸುಗೊಂಡಿವೆ. ಗಂಗಾವತಿಯಲ್ಲಿ ಮನೆ ಮಾಡಿರುವ ರೆಡ್ಡಿ, ಡಿಸೆಂಬರ್ 25ರಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಗಂಗಾವತಿಯಿಂದಲೇ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಅಲ್ಲದೇ, ಗಂಗಾವತಿಯಲ್ಲಿ ದೇವಸ್ಥಾನ ಹಾಗು ಮಸೀದಿಗಳಿಗೆ ಭೇಟಿ ನೀಡುತ್ತಿರುವ ರೆಡ್ಡಿ, ಬಿಜೆಪಿ ಪಕ್ಷದಲ್ಲಿ ಅಸಮಾಧಾನಗೊಂಡಿರುವ ಕಾರ್ಯಕರ್ತರು ಹಾಗೂ ಇಕ್ಬಾಲ್ ಅನ್ಸಾರಿ ಅವರ ಬೆಂಬಲಿಗರನ್ನು ಸಂಪರ್ಕಿಸುತ್ತಿದ್ದಾರೆ. ಇದರಿಂದಾಗಿ ಗಂಗಾವತಿಯಲ್ಲಿ ಪರಣ್ಣ ಹಾಗೂ ಇಕ್ಬಾಲ್ ಅನ್ಸಾರಿ ಅವರಿಗೆ ಠಕ್ಕರ್ ಕೊಡಲು ಮುಂದಾಗಿದ್ದಾರೆ.
ಇದರ ನಡುವೆ ಬಳ್ಳಾರಿಯಂತೆ ಗಂಗಾವತಿಯನ್ನು ಐದು ವರ್ಷದಲ್ಲಿ ಅಭಿವೃದ್ಧಿ ಮಾಡಲಾಗುವುದು. ವಿಶ್ವ ವಿಖ್ಯಾತವಾಗಿರುವ ಆನೆಗೊಂದಿ ಹಾಗೂ, ಹನುಮನ ಜನ್ಮ ಸ್ಥಳ ಅಂಜನಾದ್ರಿಯನ್ನು ಅಭಿವೃದ್ದಿಪಡಿಸುವುದಾಗಿ ಹೇಳಿ ಮತ ಬೇಟೆ ಆರಂಭಿಸಿದ್ದಾರೆ. ರೆಡ್ಡಿ ಎಂಟ್ರಿಯಿಂದ ನೇರವಾಗಿ ಬಿಜೆಪಿಯ ಹಾಲಿ ಶಾಸಕ ಪರಣ್ಣ ಮುನವಳ್ಳಿ ಅವರ ಗೆಲುವಿನ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಪರಣ್ಣ ಅವರು, ಸ್ಥಳೀಯರಿಗೆ ಕ್ಷೇತ್ರದ ಮತದಾರ ಆದ್ಯತೆ ನೀಡುತ್ತಾರೆ. ನಾನು ಜನಸಾಮಾನ್ಯರೊಂದಿಗೆ ಇರುತ್ತೇನೆ. ಅವರ ಫೋನ್ ಸಂಪರ್ಕಕ್ಕೆ ಸಿಗುತ್ತೇನೆ, ಪಕ್ಷದಲ್ಲಿ ನನಗೆ ಟಿಕೆಟ್ ಸಿಗುತ್ತದೆ. ಮತದಾರರ ಸಹ ನನ್ನನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Janardhan Reddy: ನನ್ನ ಬಳಿಯಲ್ಲಿರೋದು 4 ಸಾವಿರ ಕೋಟಿ ಆಸ್ತಿ, ಮುಂದೆ ಏನಾಗುತ್ತೆ ಕಾದು ನೋಡೋಣ; ಜನಾರ್ದನ ರೆಡ್ಡಿ
ಈ ನಡುವೆ ಕಾಂಗ್ರೆಸ್ನಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಸಿಗಬಹುದು ಎನ್ನಲಾಗುತ್ತಿದೆ. ಆದರೆ ಇತ್ತೀಚಿಗೆ ಕಾಂಗ್ರೆಸ್ ವೀಕ್ಷಕರು ಬಂದಾಗ ಇಕ್ಬಾಲ್ ಅನ್ಸಾರಿ ಹಾಗೂ ಹೆಚ್.ಆರ್ ಶ್ರೀನಾಥ್ ಬೆಂಬಲಿಗರು ತಮ್ಮ ಮುಖಂಡರ ಪರವಾಗಿ ಘೋಷಣೆ ಹಾಕಿದ್ದರು. ಇದೇ ವೇಳೆ ಈ ಇಬ್ಬರು ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.
ಎಲ್ಲದರ ನಡುವೆ ಟಿಕೆಟ್ ಆಕಾಂಕ್ಷಿಯಾಗಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಎಂಟ್ರಿ ಕೊಟ್ಟಿದ್ದು, ತಮಗೆ ಟಿಕೆಟ್ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟಿಕೆಟ್ ನನಗೆ ಕೊಡಬೇಕು ಇಲ್ಲವೇ, ಹೆಚ್.ಆರ್ ಶ್ರೀನಾಥ್ ಅವರಿಗೆ ನೀಡಬೇಕೆಂದು ಹೇಳುತ್ತಿದ್ದಾರೆ.
ಕಾಂಗ್ರೆಸ್ನಲ್ಲಿ ಟಿಕೆಟ್ ಗೊಂದಲದಿಂದಾಗಿ ಕಾರ್ಯಕರ್ತರಲ್ಲೂ ಗೊಂದಲ ಹೆಚ್ಚಾಗಿದೆ. ಆದರೆ ಜನಾರ್ದನ ರೆಡ್ಡಿ ಅವರ ಎಂಟ್ರಿಯಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹೊಂದಾಣಿಕೆ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಜನಾರ್ದನ ರೆಡ್ಡಿ ಅವರು ಲಿಂಗಾಯತ ಹಾಗೂ ಮುಸ್ಲಿಂ ಮತಗಳ ಮೇಲೆ ಕಣ್ಣೀಟ್ಟಿದ್ದು, ಪರಣ್ಣ ಮುನವಳ್ಳಿ ಅವರು ಲಿಂಗಾಯತ ಮತಗಳು ಹಾಗೂ ಇಕ್ಬಾಲ್ ಅನ್ಸಾರಿ ಅವರು ಮುಸ್ಲಿಂ ಹಾಗೂ ಕುರುಬ ಮತಗಳ ಮೇಲೆ ಅವಲಂಬಿತರಾಗಿದ್ದಾರೆ. ಎಲ್ಲದರ ನಡುವೆ ಮತದಾರ ಪ್ರಭು ಯಾರ ಪರ ನಿಲ್ಲುತ್ತಾನೋ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ