ಕೊಪ್ಪಳದಲ್ಲಿ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ವಿಫಲ; ಸಕಾಲಕ್ಕೆ ಬರುತ್ತಿಲ್ಲ ಬೆಳೆ ವಿಮೆ

ಈಗ 2021 ರ ಮುಂಗಾರು ಹಂಗಾಮು ಮುಗಿಯುತ್ತಾ ಬಂದರೂ ಹಿಂದಿನ ವರ್ಷದ ಬೆಳೆ ವಿಮೆ ಹಣ ರೈತರಿಗೆ ಬಂದಿಲ್ಲ, ಬೆಳೆ ವಿಮೆಗಾಗಿ ರೈತರು ಕಾಯುತ್ತಿದ್ದಾರೆ.

ಬೆಳೆ

ಬೆಳೆ

  • Share this:
ಕೊಪ್ಪಳ(ಆ.22): ಅಧಿಕ ಮಳೆ, ಬರ, ವಿವಿಧ ಕಾರಣಕ್ಕೆ ಬೆಳೆ ನಾಶವಾಗಿ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದಿದ್ದರೆ, ಅವರಿಗೆ ಬೆಳೆ ವಿಮೆಯನ್ನು ನೀಡುವ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಿಂದ ರೈತರಿಗೆ ಲಾಭವಾಗುತ್ತಿಲ್ಲ. ಬೆಳೆಗೆ ಮಾಡಿದ ಖರ್ಚು ಬಾರದಿದ್ದಾಗ ಕೊನೆಗೆ ವಿಮಾ ಕಂಪನಿಗಳು ಹಣ ನೀಡುತ್ತಾರೆ ಎಂಬ ಆಸೆಯಿಂದ ಕೋಟ್ಯಂತರ ರೂಪಾಯಿಯನ್ನು ವಿಮೆಗಾಗಿ ಪಾವತಿಸಿದ್ದರೂ ಬಂದಿದ್ದು ಮಾತ್ರ ಅತ್ಯಲ್ಪ. ಇದರಿಂದಾಗಿ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ವಿಫಲವಾಗುತ್ತಿದೆ. 

2016 ರಿಂದ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಜಾರಿಯಾಗಿದ್ದು ರೈತರು ತಮ್ಮ ಕೃಷಿ ಭೂಮಿಯಲ್ಲಿ ಬಿತ್ತನೆ ಮಾಡಿದ ನಂತರ ತಮ್ಮ ಬೆಳೆಗೆ ನಿಗಿದಿತ ಕಂತನ್ನು ಪಾವತಿಸಿ ವಿಮೆ ಮಾಡಿಸಿದರೆ ಒಂದು ವೇಳೆ ಬೆಳೆ ಹಾಳಾಗಿ, ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದಿದ್ದರೆ ರೈತರಿಗೆ ನೆರವಾಗುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಈ ಯೋಜನೆಯಿಂದ ಬಹಳಷ್ಟು ರೈತರಿಗೆ ಬೆಳೆಯೂ ಇಲ್ಲ. ಬೆಳೆಗಾಗಿ ಮಾಡಿಸಿದ ವಿಮೆಯ ಹಣವು ಇಲ್ಲವೆಂಬಂತಾಗಿದೆ.

2020 ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯ ಮುಂಗಾರು ಹಂಗಾಮಿನಲ್ಲಿ ಒಟ್ಟು 94,641 ಜನ ರೈತರು ಬೆಳೆ ವಿಮೆಗಾಗಿ ಹಣ ಪಾವತಿಸಿದ್ದಾರೆ. ಇದರಲ್ಲಿ ಬೆಳೆ ವಿಮೆ ನೀಡುವ ವಿಮಾ ಸಂಸ್ಥೆಯಾದ ಫ್ಯೂಚರ್ ಜಿಐಸಿ ಕಂಪನಿಯು ಕೃಷಿ, ಕಂದಾಯ, ಸಾಂಖಿಕ ಇಲಾಖೆಯ ಸಮಿಕ್ಷೆಯಲ್ಲಿ ಒಟ್ಟು 20302 ರೈತರಿಗೆ ಬೆಳೆ 1995.07 ಲಕ್ಷ ರೂಪಾಯಿ ಬೆಳೆ ವಿಮೆ ನೀಡಲು ಒಪ್ಪಿಕೊಳ್ಳಲಾಗಿದೆ, ಆದರೆ ಇಲ್ಲಿಯವರೆಗೂ ಜಮಾ ಮಾಡಿದ್ದು ಮಾತ್ರ 10006 ರೈತ ಫಲಾನುಭವಿಗಳಿಗೆ 1002.16 ಲಕ್ಷ ರೂಪಾಯಿ ಜಮಾ ಮಾಡಿದೆ. ಆದರೆ ಇನ್ನೂ 10296 ರೈತರಿಗೆ 991 ವಿಮೆ ಹಣ ಬಾಕಿ ಉಳಿಸಿಕೊಂಡಿದೆ.

ಈಗ 2021 ರ ಮುಂಗಾರು ಹಂಗಾಮು ಮುಗಿಯುತ್ತಾ ಬಂದರೂ ಹಿಂದಿನ ವರ್ಷದ ಬೆಳೆ ವಿಮೆ ಹಣ ರೈತರಿಗೆ ಬಂದಿಲ್ಲ, ಬೆಳೆ ವಿಮೆಗಾಗಿ ರೈತರು ಕಾಯುತ್ತಿದ್ದಾರೆ. ಇದು ಕೇವಲ ಒಂದು ವರ್ಷವಷ್ಟೆ ಅಲ್ಲ 2016 ರಿಂದ 2020 ರವರೆಗೆ ಒಟ್ಟು 545106 ರೈತರು ಬೆಳೆ ವಿಮೆ ಮಾಡಿಸಿದ್ದು, ಅವರಲ್ಲಿ 277506 ಫಲಾನುಭವಿಗಳಿಗೆ 45666.532 ಹಣ ನೀಡಬೇಕಾಗಿತ್ತು. ಆದರೆ 264612 ರೈತರಿಗೆ 44211.54 ಲಕ್ಷ ರೂಪಾಯಿ ಹಣ ವಿಮೆ ರೂಪದಲ್ಲಿ ನೀಡಿದೆ.

ಇನ್ನೂ 16567 ಜನರಿಗೆ ಒಟ್ಟು 1839.18 ಲಕ್ಷ ರೂಪಾಯಿ ವಿಮಾ ಹಣವನ್ನು ರೈತರಿಗೆ ನೀಡಬೇಕಾಗಿದೆ.ಬೆಳೆ ವಿಮೆ ಎಂಬುವುದು ರೈತರಿಗಿಂತ ವಿಮಾ ಕಂಪನಿಗಳಿಗೆ ಲಾಭವಾಗುತ್ತಿದೆ. ಒಂದು ರೀತಿಯಲ್ಲಿ ಮಟ್ಕಾ ದಂಧೆ ರೀತಿಯಲ್ಲಿ 10 ಜನರ ಹಣವನ್ನು ತೆಗೆದುಕೊಂಡು ಒಬ್ಬರಿಗೆ ಹಣ ನೀಡಿದಂತಾಗಿದೆ. ಇಲ್ಲಿ ಸರಿಯಾದ ಬೆಳೆ ಸಮೀಕ್ಷೆಯಾಗುವುದಿಲ್ಲ. ಅಧಿಕಾರಿಗಳು ನೀಡಿರುವ ವರದಿ ಆಧಾರದಲ್ಲಿ ಬೆಳೆ ವಿಮೆ ನೀಡುತ್ತಾರೆ. ಈ ಪದ್ದತಿ ಬಿಟ್ಟು ಹಾನಿಯಾದ ರೈತರಿಗೆ ಹಣವನ್ನು ಸಕಾಲಕ್ಕೆ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಕೆಲವರಿಗೆ ಬ್ಯಾಂಕ್ ಖಾತೆ, ಬ್ಯಾಂಕ್ ಖಾತೆ ಸ್ಥಗಿತಗೊಂಡಿರುವುದು, ರೈತರಿಂದ ಸರಿಯಾದ ದಾಖಲೆಗಳು ಇಲ್ಲದೆ ಇರುವುದರಿಂದ ವಿಮೆ ಹಣ ಜಮಾ ಆಗುವುದು ತಡವಾಗುತ್ತಿದೆ. ಇದರಿಂದಾಗಿ ರೈತರಿಗೆ ವಿಮೆ ಹಣ ಜಮಾ ಆಗುವುದು ತಡವಾಗುತ್ತಿದೆ. ಈ ಕುರಿತು ವಿಮಾ ಕಂಪನಿಗಳೊಂದಿಗೆ ಸಂಪರ್ಕಿಸಿ ಬೇಗ ಇತ್ಯಾರ್ಥ ಪಡಿಸಲು ಕೋರಲಾಗಿದೆ ಎಂದು ತಿಳಿಸಿದ್ದಾರೆ.
Published by:Latha CG
First published: