ಚಾಮರಾಜನಗರ: ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಸಕ ಎನ್.ಮಹೇಶ್ (N Mahesh) ಅವರನ್ನು ಮೈಸೂರಿನ (Mysuru) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಾಸಕರ ಆರೋಗ್ಯದಲ್ಲಿ (Health) ಚೇತರಿಕೆ ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಶಾಸಕರಿಗೆ ಆಂಜಿಯೋಗ್ರಾಮ್ (Angiogram) ಚಿಕಿತ್ಸೆ ನೀಡಿದ್ದು, ಇನ್ನು ಒಂದು ದಿನ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇಂದು ಬೆಳಗ್ಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಆತಂಕಪಡುವ ಅಗತ್ಯವಿಲ್ಲ ಎಂದ ಶಾಸಕರ ಪುತ್ರ
ತಂದೆಯ ಆರೋಗ್ಯ ಕುರಿತಂತೆ ಶಾಸಕ ಎನ್ ಮಹೇಶ್ ಅವರ ಪುತ್ರ ಅರ್ಜುನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇಂದು ಬೆಳಗ್ಗೆ ತಂದೆಯವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದೇವೆ. ವೈದ್ಯರು ಅವರಿಗೆ ಆ್ಯಂಜಿಯೋಗ್ರಾಮ್ ಚಿಕಿತ್ಸೆ ನೀಡಿದ್ದಾರೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದು, ಅವರಿಗೆ ವಿಶ್ರಾಂತಿಯನ್ನು ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ. ಯಾರು ಆತಂಕಪಡುವ ಅಗತ್ಯವಿಲ್ಲ. ಅವರಿಗೆ ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Bengaluru Mysuru Expresswayನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳ; ಇದುವರೆಗೂ 84 ಪ್ರಯಾಣಿಕರು ಸಾವು!
ರಾಜಕೀಯ ನಾಯಕರಿಗೆ ಮಾನಸಿಕ ಒತ್ತಡ ಹೆಚ್ಚಿದೆ ಎಂದಿದ್ದ ಶಾಸಕ
ನಿನ್ನೆಯಷ್ಟೇ ಕಾಂಗ್ರೆಸ್ ನಾಯಕ ಧ್ರುವನಾರಾಯಣ ಸಾವಿಗೆ ಸಂತಾಪ ಸೂಚಿಸಿ ಮಾತನಾಡಿದ್ದ ಶಾಸಕ ಎನ್.ಮಹೇಶ್, ಮಾನಸಿಕ ಒತ್ತಡ ಮಾಜಿ ಸಂಸದ ಧ್ರುವನಾರಾಯಣ ಅವರ ಸಾವಿಗೆ ಕಾರಣವಾಗಿದೆ ಎಂದು ಹೇಳಿದ್ದರು. ಕೊಳಕು ರಾಜಕಾರಣದಲ್ಲಿ ರಾಜಕಾರಣಿಗಳಿಗೆ ಮಾನಸಿಕ ಒತ್ತಡ ಹೆಚ್ಚಿದೆ. ಅದರಲ್ಲೂ ದಲಿತ ರಾಜಕಾರಣಿಗಳಲ್ಲಿ ಹೆಚ್ಚು ಒತ್ತಡ ಕಂಡು ಬರುತ್ತಿದೆ. ಒತ್ತಡ ನಿರ್ವಹಣೆ ಮಾಡಲು ಸೋತ್ತಿದ್ದೇವೆ. ಈ ಒತ್ತಡವೇ ಧ್ರುವನಾರಾಯಣ ಅವರನ್ನು ಬಲಿ ಪಡೆಯಿತು ಎಂದು ಹೇಳಿದ್ದರು.
ಧ್ರುವನಾರಾಯಣ ಅವರು ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡುತ್ತಿದ್ದರು. ಸದಾ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದ ರಾಜಕಾರಣಿ ಆಗಿದ್ದರು. ಚಾಮರಾಜನಗರ ಅಭಿವೃದ್ಧಿಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಯಾವ ಪಕ್ಷವೇ ಆಗಿರಲಿ, ಯಾರೇ ಆಗಲಿ ಅವರ ಕೆಲಸ ಮಾಡಿ ಕೊಡುತ್ತಿದ್ದರು. ಎಲ್ಲರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಅವರು ಮಾಡಬೇಕು ಎಂದುಕೊಂಡಿದ್ದ ಕೆಲಸಗಳನ್ನು ನಾವು ಒಟ್ಟಾಗಿ ಸೇರಿ ಎಲ್ಲರೂ ಮಾಡೋಣಾ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದ್ದರು.
ಇದನ್ನೂ ಓದಿ: Bengaluru: ಹಿಂದಿ ಮಾತನಾಡಿ ಎಂದ ಯುವತಿಗೆ ಚಳಿ ಬಿಡಿಸಿದ ಆಟೋ ಚಾಲಕ; ಕನ್ನಡ ಪ್ರೇಮಿಯ ಭಾಷಾ ಪ್ರೇಮದ ವಿಡಿಯೋ ವೈರಲ್
ಹಿಂದೂ ಪೂರ್ವಗ್ರಹ ಪೀಡಿತನಾಗಿ ಬಿಜೆಪಿ ವಿರುದ್ಧ ಮಾತನಾಡಿದ್ದೆ
ಅತಿ ಹೆಚ್ಚು ಟ್ರೋಲ್ ಗೆ ಗುರಿಯಾಗುತ್ತಿರುವ ಬಗ್ಗೆ ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ವೇಳೆ ಪ್ರತಿಕ್ರಿಯೆ ನೀಡಿದ್ದ ಎನ್ ಮಹೇಶ್ ಅವರು, ಹಿಂದೆ ಪೂರ್ವ ಗ್ರಹ ಪೀಡಿತನಾಗಿ ಬಿಜೆಪಿ ವಿರುದ್ದ ಮಾತನಾಡಿದ್ದು ನಿಜ. ಬಿಜೆಪಿಯ ಒಳ್ಳೆಯ ಕೆಲಸ ಗುರುತಿಸಿ ಮಾತನಾಡುತ್ತೇನೆ. ಈಗ ಟ್ರೋಲ್ ಮಾಡಿದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಒಳ್ಳೆಯದು ಕೆಟ್ಟದ್ದು ಎರಡನ್ನೂ ನನಗೆ ಟಾರ್ಗೆಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಎಲ್ಲರು ನನ್ನನ್ನೇ ಕೇಂದ್ರೀಕರಿಸಿ ಟ್ರೋಲ್ ಮಾಡುತ್ತಿದ್ದಾರೆ ಎಂದರೆ ನಾನು ಜನಪ್ರಿಯ ವ್ಯಕ್ತಿ ಅಂತ ಆಯ್ತು ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ