ಚಾಮರಾಜನಗರ (ಜ. 11) ಬಿಜೆಪಿ ಫ್ಲೆಕ್ಸ್ ಗಳಲ್ಲಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಬಿಎಸ್ಪಿ ಉಚ್ಛಾಟಿತ ಶಾಸಕ ಎನ್. ಮಹೇಶ್ ಅವರ ಫೋಟೋ ಮುದ್ರಿಸಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಚಾಮರಾಜನಗರದಲ್ಲಿ ಹಾಕಿರುವ ಬಿಜೆಪಿ ಪೋಸ್ಟರ್ ಗಳಲ್ಲಿ ಬಿಜೆಪಿ ನಾಯಕರ ಭಾವಚಿತ್ರಗೊಳೊಂದಿಗೆ ಎನ್. ಮಹೇಶ್ ಅವರ ಭಾವಚಿತ್ರ ಸಹ ರಾರಾಜಿಸುತ್ತಿದೆ. ಇಂದು ಚಾಮರಾಜನಗರದಲ್ಲಿ ಬಿಜೆಪಿ ಜನಸೇವಕ ಸಮಾವೇಶ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್, ಸಚಿವರಾದ ಆರ್. ಅಶೋಕ್, ಎಸ್.ಟಿ. ಸೋಮಶೇಖರ್, ಹಾಗೂ ಸಂಸದ ಪ್ರತಾಪ್ ಸಿಂಹ ಮೊದಲಾದವರು ಭಾಗವಹಿಸಲಿದ್ದಾರೆ. ಇವರಿಗೆ ಸ್ವಾಗತ ಕೋರುವ ಜಿಲ್ಲಾ ಬಿಜೆಪಿಯ ಫ್ಲೆಕ್ಸ್ ಹಾಗೂ ಪೋಸ್ಟರ್ ಗಳಲ್ಲಿ ಎನ್. ಮಹೇಶ್ ಅವರ ಫೋಟೋವನ್ನು ಸಹ ಹಾಕಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವಾಗಲೇ ಬಿಎಸ್ಪಿ ಉಚ್ಛಾಟಿತ ಶಾಸಕ ಎನ್. ಮಹೇಶ್ ಅವರ ಫೋಟೋ ಹಾಕಿರುವುದು ಅಚ್ಚರಿ ಉಂಟು ಮಾಡಿದೆ. ಅವರು ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳಿಗೆ ಈ ಪ್ಲೆಕ್ಸ್ ಹಾಗೂ ಪೋಸ್ಟರ್ ಗಳು ಪುಷ್ಠಿ ನೀಡುತ್ತಿವೆ. ಸಂಕ್ರಾಂತಿ ನಂತರ ಸಿಹಿ ಸುದ್ದಿ ನೀಡುತ್ತೇನೆ ಎಂದು ಎನ್. ಮಹೇಶ್ ಹೇಳಿದ್ದರು. ಅದಕ್ಕೆ ಇಂಬು ನೀಡುವಂತೆ ಬಿಜೆಪಿ ಫ್ಲೆಕ್ಸ್ ಗಳಲ್ಲಿ ಅವರ ಭಾವಚಿತ್ರವನ್ನು ಮುದ್ರಿಸಲಾಗಿದೆ.
ಈ ಬಗ್ಗೆ ನ್ಯೂಸ್ 18ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಸುಂದರ್, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಪರೋಕ್ಷವಾಗಿ ಬೆಂಬಲ ನೀಡಿದ್ದರು. ಅಲ್ಲದೆ ಕೊಳ್ಳೇಗಾಲ ನಗರಸಭೆಯಲ್ಲಿ ಎನ್ ಮಹೇಶ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದ್ದೇವೆ. ಅಲ್ಲದೆ ಈಗ ಜಿಲ್ಲೆಯಲ್ಲಿ ಚುನಾವಣೆ ನಡೆದಿರುವ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ಹಿಡಿಯಲು ಎನ್. ಮಹೇಶ್ ಅವರ ಸಹಕಾರ ಅಗತ್ಯವಾಗಿದೆ. ಇನ್ನೂ ಕೆಲವು ಪಂಚಾಯ್ತಿಗಳಲ್ಲಿ ಅವರ ಬೆಂಬಲಿಗರಿಗೆ ನಮ್ಮ ಸಹಕಾರವೂ ಅಗತ್ಯವಾಗಿದೆ. ಹಾಗಾಗಿ ಜೊತೆಜೊತೆಯಾಗಿ ಹೋಗುತ್ತಿರುವುದರಿಂದ ಎನ್ ಮಹೇಶ್ ಅವರ ಭಾವಚಿತ್ರವನ್ನು ಹಾಕಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Cabinet Expansion: ಸಂಪುಟ ವಿಸ್ತರಣೆ ಬಗ್ಗೆ ಮುಗಿಯದ ಗೊಂದಲ; ಹೈಕಮಾಂಡ್ನಿಂದ ಸಿಕ್ಕಿಲ್ಲ ಸ್ಪಷ್ಟ ಅನುಮತಿ
ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಆಗಿದೆ. ಅವರು ಬಿಎಸ್ಪಿಯಿಂದ ಉಚ್ಛಾಟಿತರಾಗಿರುವುದರಿಂದ ಬಿಜೆಪಿಗೆ ಸೇರ್ಪಡೆಯಾಗಲು ಕೆಲವು ತಾಂತ್ರಿಕ ತೊಡಕುಗಳು ಉಂಟಾಗಬಹುದು. ಹಾಗಾಗಿ ಅದೆಲ್ಲವನ್ನು ನಿವಾರಿಸಿಕೊಂಡು ಬಿಜೆಪಿ ಸೇರುವ ನಿರೀಕ್ಷೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಸುಂದರ್ ತಿಳಿಸಿದ್ದಾರೆ. ಜೊತೆಗೆ ಅವರ ಬೆಂಬಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಸೇರ್ಪಡೆಯಾಗುವುದು ಎನ್ . ಮಹೇಶ್ ಅವರ ಉದ್ದೇಶವಾಗಿದೆ ಎಂದು ಆರ್. ಸುಂದರ್ ಹೇಳಿದ್ದಾರೆ.
ಸಚಿವ ಸ್ಥಾನ ನೀಡಿದರೆ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ಬಿಎಸ್ಪಿ ಉಚ್ಛಾಟಿತ ಶಾಸಕ ಎನ್. ಮಹೇಶ್ ಇತ್ತೀಚೆಗೆ ಹೇಳಿದ್ದರು. ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನಬೆಟ್ಟದಲ್ಲಿ ಮಾತನಾಡಿದ್ದ ಅವರು ಬಿಜೆಪಿ ಸೇರ್ಪಡೆ ವಿಚಾರ ನಾನೋಬ್ಬನೆ ತೀರ್ಮಾನಿಸುತ್ತಿಲ್ಲ. ಬಿಜೆಪಿ ಸೇರಬೇಕೆಂಬುದು ರಾಜ್ಯಾದ್ಯಂತ ಇರುವ ನನ್ನ ಕಾರ್ಯಕರ್ತರ ನಿರೀಕ್ಷೆಯಾಗಿದೆ. ಒಂದು ಸ್ಥಾನ ತೆಗೆದುಕೊಂಡು ಬಿಜೆಪಿ ಸೇರಿ ಅಂತಿದ್ದಾರೆ. ನನ್ನ ಕ್ಷೇತ್ರದ ಹಾಗೂ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ತೀರ್ಮಾನ ಕೈಗೊಳ್ಳಬೇಕೆಂಬುದು ನಮ್ಮ ಕಾರ್ಯಕರ್ತರ ಅಪೇಕ್ಷೆಯಾಗಿದೆ ಎಂದಿದ್ದರು.
(ವರದಿ: ಎಸ್.ಎಂ. ನಂದೀಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ