HOME » NEWS » State » KOLI COMMUNITY LEADERS DEMAND TO GIVE BASAVA KALYANA BY ELECTION CONGRESS TICKET TO B NARAYANA RAO WIFE SESR SAKLB

ದಿನಾಂಕ ಘೋಷಣೆಗೂ ಮುನ್ನವೇ ಬಸವಕಲ್ಯಾಣ ಟಿಕೆಟ್ ಫೈಟ್; ನಾರಾಯಣರಾವ್ ಹೆಂಡತಿಗೆ ಕಾಂಗ್ರೆಸ್​​ ಟಿಕೆಟ್​ನೀಡುವಂತೆ ಪಟ್ಟು

ಒಂದು ವೇಳೆ ಬಿ. ನಾರಾಯಣ ಅವರ ಕುಟುಂಬಕ್ಕೆ ಟಿಕೆಟ್ ಕೈ ತಪ್ಪಿದರೆ, ಕಲ್ಯಾಣ ಕರ್ನಾಟಕ ಸೇರಿ ರಾಜ್ಯದಲ್ಲಿ ಕೋಲಿ ಕಬ್ಬಲಿಗ ಸಮಾಜದ ಪ್ರತಿರೋಧ ಪರಿಣಾಮವನ್ನು ಕಾಂಗ್ರೆಸ್ ಪಕ್ಷ ಎದುರಿಸಬೇಕಾಗುತ್ತದೆ.

news18-kannada
Updated:January 11, 2021, 4:00 PM IST
ದಿನಾಂಕ ಘೋಷಣೆಗೂ ಮುನ್ನವೇ ಬಸವಕಲ್ಯಾಣ ಟಿಕೆಟ್ ಫೈಟ್; ನಾರಾಯಣರಾವ್ ಹೆಂಡತಿಗೆ ಕಾಂಗ್ರೆಸ್​​ ಟಿಕೆಟ್​ನೀಡುವಂತೆ ಪಟ್ಟು
ನಾರಾಯಣರಾವ್ ಹೆಂಡತಿ
  • Share this:
ಕಲಬುರ್ಗಿ (ಜ. 11):   ಶಾಸಕ ಬಿ.ನಾರಾಯಣರಾವ್ ಅಕಾಲಿಕ ನಿಧನದಿಂದಾಗಿ ಬೀದರ್ ಜಿಲ್ಲೆ ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆ ಎದುರಿಸುವಂತಾಗಿದೆ. ಇನ್ನೂ ಉಪ ಚುನಾವಣೆ ದಿನಾಂಕ ಘೋಷಣೆಯಾಗಿಲ್ಲವಾದರೂ ರಾಷ್ಟ್ರೀಯ ಪಕ್ಷಗಳಿಂದ ಗರಿಗೆದರಿದ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಬಿಜೆಪಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಗ ವಿಜಯೇಂದ್ರ ರನ್ನು ಕಣಕ್ಕಿಳಿಸಲು ಒಲವು ವ್ಯಕ್ತವಾಗುತ್ತಿದ್ದು, ಅದೇ ಹಿನ್ನೆಲೆಯಲ್ಲಿ ಮೊನ್ನೆ ಅನುಭವ ಮಂಟಪ ನಿರ್ಮಾಣ ಸೇರಿ ಒಂದು ಸಾವಿರಕ್ಕೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಸ್ವತಃ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ವಿಜಯೇಂದ್ರ ಅಖಾಡಕ್ಕೆ ಇಳಿಯಲಿಲ್ಲವೆಂದರೇ ನಮಗೆ ಕೊಡಿ ಎಂದು ಬೀದರ್ ಜಿಲ್ಲೆಯ ಹಲವು ಬಿಜೆಪಿ ನಾಯಕರು ಈಗಾಗಲೇ ಬೇಡಿಕೆ ಇಟ್ಟಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಟಿಕೆಟ್ ಕುರಿತು ಜೋರಾದ ಚರ್ಚೆಗಳು ಆರಂಭಗೊಂಡಿವೆ. ಮಾಜಿ ಸಿಎಂ ದಿ.ಧರ್ಮಸಿಂಗ್ ಮಗ ವಿಜಯಸಿಂಗ್ ಹೆಸರು ಮುನ್ನಲೆಗೆ ಬರುತ್ತಿರುವ ಸಂದರ್ಭದಲ್ಲಿಯೇ ಕೋಲಿ ಸಮಾಜದ ಮುಖಂಡರೂ ತಮ್ಮ ಸಮುದಾಯದವರಿಗೆ ನೀಡುವಂತೆ ಒತ್ತಾಯಿಸಿದ್ದಾರೆ. ಅದರಲ್ಲಿಯೂ ದಿವಂಗತ ಬಿ. ನಾರಾಯಣ ಅವರ ಪತ್ನಿ ಮಲ್ಲಮ್ಮ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಕೋಲಿ ಕಬ್ಬಲಿಗ ಸಮಾಜದ ಮುಖಂಡರು ಕಾಂಗ್ರೆಸ್ ನಾಯಕರಿಗೆ ಆಗ್ರಹಿಸಿದ್ದಾರೆ.

ರಾಜಕೀಯ ಪ್ರಭಾವಕ್ಕೆ ಒಳಗಾಗಿ ಹಣವಿದ್ದವರಿಗೆ ಟಿಕೆಟ್ ನೀಡಬೇಡಿ ಎಂದು ಕೋಲಿ ಸಮಾಜದ ಮುಖಂಡರು ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೋಲಿ ಸಮಾಜದ ಮುಖಂಡ ಶಿವಶರಣಪ್ಪ ಖೋಬಾಳ, ಬಸವರಾಜ ಬೂದಿಹಾಳ ಮತ್ತಿತರರು, ಸಂಘರ್ಷದ ಮೂಲಕ ರಾಜಕೀಯ ಹಾದಿ ಸವೆಸಿ ಅಕಾಲಿಕ ನಿಧನ ಹೊಂದಿದ ಬಿ.ನಾರಾಯಣರಾವ್ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ. ಜೀವನುದ್ದಕ್ಕೂ ಕಾಂಗ್ರೆಸ್ ತತ್ವ ಸಿದ್ದಾಂತಕ್ಕೆ ಬದ್ದವಾಗಿ ದಿವಂಗತ ಬಿ. ನಾರಾಯಣ ಅವರು ದುಡಿದಿದ್ದಾರೆ.

ಇದನ್ನು ಓದಿ: ನರಭಕ್ಷಕ ಚಿರತೆಗಳ ಶೂಟೌಟ್?; ವಿವಾದ ಮೂಡಿಸಿದ ಅರಣ್ಯ ಸಚಿವ ಆನಂದ್​ ಸಿಂಗ್​ ಹೇಳಿಕೆ

ಶಾಸಕರಾಗಿ ಇರುವಷ್ಟು ದಿನ ಬಸವಕಲ್ಯಾಣದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಯಾವುದೇ ಉಪ ಚುನಾವಣೆ ನಡೆದ ಸಂದರ್ಭದಲ್ಲಿ ಮೃತರ ಕುಟುಂಬದ ಸದಸ್ಯರಿಗೆ ಟಿಕೇಟ್ ನೀಡುವುದು ಸಂಪ್ರದಾಯ. ಹೀಗಾಗಿ ಅವರ ಕುಟುಂಬಸ್ಥರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು‌. ಬಿ.ನಾರಾಯಣರಾವ್ ಪತ್ನಿ ಮಲ್ಲಮ್ಮಗೆ ಟಿಕೆಟ್ ನೀಡಬೇಕು. ಒಂದು ವೇಳೆ ಬಿ. ನಾರಾಯಣ ಅವರ ಕುಟುಂಬಕ್ಕೆ ಟಿಕೆಟ್ ಕೈ ತಪ್ಪಿದರೆ, ಕಲ್ಯಾಣ ಕರ್ನಾಟಕ ಸೇರಿ ರಾಜ್ಯದಲ್ಲಿ ಕೋಲಿ ಕಬ್ಬಲಿಗ ಸಮಾಜದ ಪ್ರತಿರೋಧ ಪರಿಣಾಮವನ್ನು ಕಾಂಗ್ರೆಸ್ ಪಕ್ಷ ಎದುರಿಸಬೇಕಾಗುತ್ತದೆ. ಈ ಸಂಬಂಧ ಬೆಂಗಳೂರಿಗೆ ಕೋಲಿ ಸಮಾಜದ ಮುಖಂಡರ ನಿಯೋಗ ಕೊಂಡೊಯ್ಯುವುದಾಗಿ  ತಿಳಿಸಿದ್ದಾರೆ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಮತಗಳೇ ನಿರ್ಣಾಯಕವಾಗಿವೆ. ಹೀಗಾಗಿಯೇ ಬಿಜೆಪಿ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಮರಾಠರ ಮನವೊಲಿಕೆಗೆ ಮುಂದಾಗಿತ್ತು. ಕೋಲಿ ಸಮುದಾಯ, ಕುರುಬ ಮತ್ತಿತರ ಹಿಂದುಳಿದ ಸಮುದಾಯಗಳ ಮತಗಳೇ ನಿರ್ಣಾಯಕವಾಗಿರೋದರಿಂದ ಕಾಂಗ್ರೆಸ್ ಟಿಕೇಟ್ ಹಿಂದುಳಿದ ವರ್ಗಕ್ಕೇ ನೀಡುವುದಾಗಿ ಈ ಹಿಂದೆ ಸಿದ್ಧರಾಮಯ್ಯ ತಿಳಿಸಿದ್ದರು. ವಿಜಯಸಿಂಗ್ ಸಹ ಹಿಂದುಳಿದ ರಜಪೂತ ಸಮುದಾಯದವರಾಗಿದ್ದು, ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಲಿದೆ ಎನ್ನುವುದರ ಬಗ್ಗೆ ಎಲ್ಲರಲ್ಲಿಯೂ ಕುತೂಹಲ ಮೂಡಿದೆ.

(ವರದಿ - ಶಿವರಾಮ ಅಸುಂಡಿ)
Published by: Seema R
First published: January 11, 2021, 4:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories