• Home
  • »
  • News
  • »
  • state
  • »
  • ಕೆಸಿ ವ್ಯಾಲಿ ಯೋಜನೆ ಮೂಲಕ ಅಮ್ಮೇರಹಳ್ಳಿ ಕೆರೆಗೆ ನೀರು; ಬಯಲುಸೀಮೆಯಲ್ಲಿ ಅಂತರ್ಜಲ ಅಭಿವೃದ್ಧಿ ಕ್ರಾಂತಿ

ಕೆಸಿ ವ್ಯಾಲಿ ಯೋಜನೆ ಮೂಲಕ ಅಮ್ಮೇರಹಳ್ಳಿ ಕೆರೆಗೆ ನೀರು; ಬಯಲುಸೀಮೆಯಲ್ಲಿ ಅಂತರ್ಜಲ ಅಭಿವೃದ್ಧಿ ಕ್ರಾಂತಿ

ತುಂಬಿ ಕೋಡಿ ಹರಿದಿರುವ ಅಮ್ಮೇರಹಳ್ಳಿ ಕೆರೆ

ತುಂಬಿ ಕೋಡಿ ಹರಿದಿರುವ ಅಮ್ಮೇರಹಳ್ಳಿ ಕೆರೆ

ಕೋಲಾರದ ಅಮ್ಮೇರಹಳ್ಳಿ ಕೆರೆಯು ಸಂಪೂರ್ಣ ತುಂಬಿದ್ದು, ಅಕ್ಟೋಬರ್ 28 ರಂದು  ಬೆಳಗಿನ ಸಮಯದಲ್ಲಿ ಕೆರೆಯ ನೀರು ಕೋಡಿ ಹರಿದಿದೆ ಎಂದು, ಸಣ್ಣ ನೀರಾವರಿ ಮತ್ತು ಅಂತರ್ಜಲ  ಅಭಿವೃದ್ಧಿ ವಿಬಾಗದ ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಕುಮಾರ್  ತಿಳಿಸಿದ್ದಾರೆ.

  • Share this:

ಕೋಲಾರ(ಅ.31): ಕೋಲಾರ ನಗರ ಹೊರವಲಯದ ಅಮ್ಮೇರಹಳ್ಳಿ ಕೆರೆಗೆ ಕೆಸಿ ವ್ಯಾಲಿ ಯೋಜನೆಯ ಮೂಲಕ ನೀರು ಹರಿಬಿಟ್ಟಿದ್ದರಿಂದ, ಕೆರೆ ಹಲವು ವರ್ಷಗಳ ಬಳಿಕ ತುಂಬಿ ಕೋಡಿ ಹರಿಯುತ್ತಿದ್ದು, ಕೆರೆಗೆ ಮತ್ತೊಮ್ಮೆ ಜೀವಕಳೆ ಬಂದಂತಾಗಿದೆ. ಕೋಲಾರ ನಗರದ ಹೊರವಲಯದಲ್ಲಿನ ಅಮ್ಮೇರಹಳ್ಳಿ ಕೆರೆ ನಗರಸಭೆ ವ್ಯಾಪ್ತಿಯಲ್ಲಿ ಇದ್ದು, ಕೆರೆಗೆ ನೀರು ಬಂದಲ್ಲಿ, ಪಕ್ಕದಲ್ಲೆ ಶುದ್ದೀಕರಣ ಮಾಡಿ ನಗರಕ್ಕೆ ನೀರು ಸರಬರಾಜು ಮಾಡುವ ಪಂಪ್ ಹೌಸ್ ಸಹ ಇಲ್ಲಿ ನಿರ್ಮಿಸಲಾಗಿದೆ. ಕೆರೆ ಕೋಡಿ ಹರಿದು ಐತಿಹಾಸಿಕ ಕೋಲಾರಮ್ಮ ಕೆರೆಗೆ ನೀರು ಮುಂದಕ್ಕೆ ಹರಿಯುತ್ತಿದೆ ಎಂಬ, ಸಂತಸದಲ್ಲಿ ಇರುವಾಗಲೆ ಅಮ್ಮೇರಹಳ್ಳಿ ಕೆರೆಯ ಕಟ್ಟೆಯನ್ನ ಭದ್ರಪಡಿಸುವುದು ಅಧಿಕಾರಿಗಳಿಗೆ ಸವಾಲಾಗಿದೆ. ಪಂಪ್ ಹೌಸ್ ಬಳಿಯಿರುವ ಕೆರೆಯ ತೂಬಿನಿಂದ ನೀರು ಹೊರೆಗೆ ಪೋಲಾಗಿ ಹರಿಯುತ್ತಿದ್ದು, ಪಕ್ಕದಲ್ಲೆ ಇರುವ ಜಮೀನಿನ ರೈತರು ಇದನ್ನ ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.  ನೀರು ಕಡಿಮೆ ಪ್ರಮಾಣದಲ್ಲಿ ಹೊರಗೆ ಹರಿಯುತ್ತಿದ್ದು, ಪಕ್ಕದಲ್ಲೇ ರೈತರು ಕೊತ್ತಂಬರಿ, ಟೊಮೆಟೊ, ಜೋಳ ಬೆಳೆಗಳನ್ನ ಹಾಕಿದ್ದು ಬೆಳೆನಾಶದ ಭೀತಿಯಲ್ಲಿದ್ದಾರೆ.


ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಕೋಲಾರ ನಗರಸಭೆ ಕಮಿಷನರ್ ಶ್ರೀಕಾಂತ್ ಅವರು, ಎಮ್ ಸ್ಯಾಂಡ್​ ಮರಳನ್ನು ಚೀಲಗಳಲ್ಲಿ ತುಂಬಿಸಿ ಕೆರೆಯ ತೂಬನ್ನು ಮುಚ್ಚುವ ಕಾರ್ಯವನ್ನ ವೇಗವಾಗಿ ಮಾಡಿಸಿದ್ದಾರೆ. ತೂಬನ್ನ ಮುಚ್ಚಲು ಕಾರ್ಮಿಕರು ಕೆರೆಯ ಒಳಗೆ ಇಳಿದು,  300ಕ್ಕೂ ಹೆಚ್ಚು ಮರಳು ಮೂಟೆಗಳನ್ನ ಇಟ್ಟು ನೀರು ಹೊರ ಹೋಗದಂತೆ ತಡೆಯುವ ಕಾರ್ಯ ಮಾಡಿದ್ದಾರೆ. ಇತ್ತ ಬೆಳೆನಾಶದ ಭೀತಿಯಲ್ಲಿದ್ದ ರೈತರು ಮಾಹಿತಿ ತಿಳಿಸಿದ ಕೂಡಲೇ,  ಸ್ಥಳಕ್ಕೆ ಬಂದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ‌ ಅಧಿಕಾರಿಗಳ ಕಾರ್ಯವೈಖರಿಗೆ ಸ್ಥಳೀಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112; ಕರ್ನಾಟಕದ 5 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ


ಈ ಬಗ್ಗೆ ಮಾತನಾಡಿರುವ ಕೋಲಾರ ನಗರಸಭೆ ಪೌರಾಯುಕ್ತ ಶ್ರೀಕಾಂತ್,  ಕೆರೆಯು ತುಂಬಿರುವುದರಿಂದ ಬಹುತೇಕ ನಗರದ ನೀರಿನ ಸಮಸ್ಯೆ ಬಗೆಹರಿಯಲಿದೆ.  ಕೆರೆಗೆ ನೀರನ್ನು ಹರಿಸಿರುವ ಕ್ರಮವನ್ನು ಸ್ವಾಗತಿಸಿ, ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಇನ್ನು ನೀರು ಪೋಲಾಗಿ ಹರಿಯುತ್ತಿರುವ ತೂಬನ್ನ ಮುಚ್ಚಿ ರೈತರ ಜಮೀನಿಗೆ ನೀರು ಹರಿಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.


ಅಮ್ಮೇರಹಳ್ಳಿ ಕೆರೆ ಕಟ್ಟೆ ಭದ್ರವಾಗಿದೆ, ಆತಂಕವಿಲ್ಲ: ಜಿಲ್ಲಾಧಿಕಾರಿ ಸಿ ಸತ್ಯಭಾಮ


ಕೋಲಾರದ ಅಮ್ಮೇರಹಳ್ಳಿ ಕೆರೆಯು ಸಂಪೂರ್ಣ ತುಂಬಿದ್ದು, ಅಕ್ಟೋಬರ್ 28 ರಂದು  ಬೆಳಗಿನ ಸಮಯದಲ್ಲಿ ಕೆರೆಯ ನೀರು ಕೋಡಿ ಹರಿದಿದೆ ಎಂದು, ಸಣ್ಣ ನೀರಾವರಿ ಮತ್ತು ಅಂತರ್ಜಲ  ಅಭಿವೃದ್ಧಿ ವಿಬಾಗದ ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಕುಮಾರ್  ತಿಳಿಸಿದ್ದಾರೆ. ಕೆರೆ ಏರಿಯನ್ನು ತಾಂತ್ರಿಕವಾಗಿ ಪರಿಶೀಲಿಸಲಾಗಿದ್ದು ಸುರಕ್ಷಿತವಾಗಿರುತ್ತದೆ. ಕೆರೆ ಏರಿಯ ಹಿಂಭಾಗದಲ್ಲಿ ಕೆಲವು ಕಡೆ ಅಲ್ಪ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ಈ ಭಾಗದಲ್ಲಿ ಉತ್ತಮ ಗುಣಮಟ್ಟದ ಮಣ್ಣನ್ನು ಹರಡಿ ಗಟ್ಟಿಗೊಳಿಸಿದ್ದು. ಕೆರೆಯ ಏರಿ ಮತ್ತು ಕೋಡಿ  ಸುಸ್ಥಿತಿಯಲ್ಲಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.  ಈ ಬಗ್ಗೆ ಮತನಾಡಿರುವ ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು, ಅಮ್ಮೇರಹಳ್ಳಿ ಕೆರೆ ಕಟ್ಟೆಯಲ್ಲಿ ಮಣ್ಣು ಕುಸಿದ ಸಂಬಂದ ಮಾಹಿತಿ ಬಂದಿತ್ತು, ಸ್ಥಳಕ್ಕೆ ಖುದ್ದು ನಾನು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಕೆರೆ ಕೋಡಿ ಹರಿದಿದ್ದು ಸಂತಸ ತಂದಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.


ಒಟ್ಟಿನಲ್ಲಿ ಕೋರಮಂಗಲ ಚಲ್ಲಘಟ್ಟ ವ್ಯಾಲಿ (ಕೆಸಿ ವ್ಯಾಲಿ) ಯೋಜನೆಯಡಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಒಟ್ಟು 126  ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ಅಭಿವೃದ್ಧಿ ಪಡಿಸುವ ಸರ್ಕಾರದ ಪ್ರತಿಷ್ಠಿತ  ಯೋಜನೆ ಇದಾಗಿದ್ದು, ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಹಾಗಾಗಿ ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಅಭಿವೃದ್ಧಿ ಕ್ರಾಂತಿ ಸದ್ದಿಲ್ಲದೆ ಸಾಗುತ್ತಿದೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು