Tomato Rate: 15 ಕೆಜಿ ಟೊಮೆಟೊ ಕೇವಲ 20 ರೂಪಾಯಿ! ಪಾತಾಳಕ್ಕೆ ಕುಸಿದ ಬೆಲೆಯಿಂದ ರೈತರು ಕಂಗಾಲು

ಕೋಲಾರ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ 15 ಕೆಜಿಯ ಟೊಮೆಟೊ ಒಂದು ಬಾಕ್ಸ್ ಗೆ ಗರಿಷ್ಟ 100 ರಿಂದ 200 ರೂಪಾಯಿ, ಕನಿಷ್ಟ ಬೆಲೆ 20 ರಿಂದ 35 ರೂಪಾಯಿ ಇದೆ.

ಕೋಲಾರ ಟೊಮೆಟೊ ಮಾರುಕಟ್ಟೆ

ಕೋಲಾರ ಟೊಮೆಟೊ ಮಾರುಕಟ್ಟೆ

  • Share this:
ಕೋಲಾರ: ಬಯಲುಸೀಮೆ ಜಿಲ್ಲೆಯಲ್ಲಿ ಮತ್ತೊಮ್ಮೆ ಟೊಮೆಟೊ ಬೆಲೆ (Tomato Rate) ಪಾತಾಳಕ್ಕೆ ಕುಸಿದಿದೆ. ಜಿಲ್ಲೆಯ ರೈತರ  ಆಪತ್ಬಾಂದವ ಎಂದು ಟೊಮೆಟೊ ಬೆಳೆಯನ್ನ ರೈತರು (Kolar Farmers) ಭಾವಿಸಿದ್ದಾರೆ. ಯಾವುದೇ ನೀರಾವರಿ ಆಸರೆಯಿಲ್ಲದಿದ್ದರು ವಾತಾವರಣಕ್ಕೆ ಅನುಕೂಲವಾಗಿ, ಜಿಲ್ಲೆಯಲ್ಲಿ ಟೊಮೆಟೊ ಹೆಚ್ಚಿಗೆ ಬೆಳೆಯುತ್ತಿದ್ದು ಪ್ರಸಕ್ತ ಟೊಮೆಟೊ ಸೀಸನ್ ನಲ್ಲಿ (Tomato Season) ಭರ್ಜರಿಯಾಗಿ ಟೊಮೆಟೊ ಫಸಲು ಮಾರುಕಟ್ಟೆಗೆ ಆಗಮಿಸುತ್ತಿದೆ. ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ಕನಿಷ್ಟ ಬೆಲೆಯಿಲ್ಲದೆ, ತೋಟಗಳಲ್ಲೆ ಟೊಮೆಟೊ ಹಣ್ಣು ಕೊಳೆಯುತ್ತಿತ್ತು. ಆದರೀಗ ಟೊಮೆಟೊ ಬೆಳೆಯಿದ್ದರೂ, ಬೆಲೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಮಾರುಕಟ್ಟೆಗೆ ಟೊಮೆಟೊ ತಂದು ಸೂಕ್ತ ಬೆಲೆ ಸಿಗದೆ ರೈತರು ಟೊಮೆಟೊ ರಸ್ತೆ ಬದಿ ಸುರಿದು ಮನೆಗೆ ವಾಪಾಸ್ ಹೋಗುತ್ತಿದ್ದಾರೆ.

15 ಕೆಜಿ ಟೊಮೊಟೊ ಬೆಲೆ ಕೇವಲ 20 ರೂಪಾಯಿ! 

ಮಾರುಕಟ್ಟೆಯ ಸುತ್ತಮುತ್ತಲಿನ ರಸ್ತೆಗಳ ಬದಿಯಲ್ಲಿ ಟೊಮೆಟೊ ಕೊಳೆತು ಗಬ್ಬು ನಾರುತ್ತಿರುವ ದೃಶ್ಯಗಳು ಕಂಡುಬರುತ್ತಿದೆ.  ಕೋಲಾರ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ 15 ಕೆಜಿಯ ಟೊಮೆಟೊ ಒಂದು ಬಾಕ್ಸ್ ಗೆ ಗರಿಷ್ಟ 100 ರಿಂದ 200 ರೂಪಾಯಿ, ಕನಿಷ್ಟ ಬೆಲೆ 20 ರಿಂದ 35 ರೂಪಾಯಿ ಇದೆ. ಕೋಲಾರ ಜಿಲ್ಲೆ ಸೇರಿದಂತೆ ಪಕ್ಕದ ಜಿಲ್ಲೆಗಳಿಂದ ನಿತ್ಯ  20 ಸಾವಿರ ಕ್ವಿಂಟಾಲ್ ತೂಕದಷ್ಟು ಟೊಮೆಟೊ ಮಾರುಕಟ್ಟೆಗೆ  ಆಗಮಿಸುತ್ತಿದೆ. ಇದರಲ್ಲಿ ಶೇಖಡಾ  80 ರಷ್ಟು ಟೊಮೆಟೊ ನೆರೆ ರಾಜ್ಯಗಳಿಗೆ ರಪ್ತಾಗುತ್ತಿದೆ. ಆದರೆ  ಇತ್ತೀಚೆಗೆ ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ತೀವ್ರ ಮಳೆಯಿಂದಾಗಿ ಟೊಮೆಟೊ ರಫ್ತಾಗದೆ ಬೆಲೆಯು ಕುಸಿತ ಕಂಡಿದೆ.  ಆದರೀಗ ನೆರೆ ರಾಜ್ಯಗಳಲ್ಲಿ ಟೊಮೆಟೊ ಬೆಳೆ ಲಭ್ಯ ಇರುವ ಕಾರಣ, ಕಳೆದ  15 ದಿನದಿಂದ ಟೊಮೆಟೊ ಬೆಲೆ ಇಳಿಕೆಯಾಗುತ್ತಲೆ ಇದೆ. ಕಳೆದ ತಿಂಗಳು  ಭರ್ಜರಿ ಬೆಲೆ ಸಿಕ್ಕಿ ಖುಷಿ ಪಟ್ಟಿದ್ದ ರೈತರಿಗೆ ಬೇಡಿಕೆ ಜನನ ಕುಸಿತದಿಂದ  ಬೆಲೆಯು ದಿಢೀರನೇ ಕಡಿಮೆಯಾಗಿದೆ.

ಮಾರುಕಟ್ಟೆ ಸುತ್ತಮುತ್ತಲಿನ ರಸ್ತೆ ಬದಿ  ರಾಶಿ ರಾಶಿ ಟೊಮೆಟೊ 

ಕೋಲಾರದಲ್ಲಿ ಟೊಮೆಟೊ ಸೇರಿ ಪ್ರಮುಖ ತರಕಾರಿಗಳ ಬೆಲೆಯೂ ಇಳಿಕೆಯಾಗಿದೆ.  ಹೆಚ್ಚಿನ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ  ಬಂಡವಾಳ ಹಾಕಿ, ಕಳೆದ ಎರಡು ತಿಂಗಳು ಭರ್ಜರಿ ಲಾಭ ಗಳಿಸಿದ್ದರು. ಆದರೀಗ ಮಾರುಕಟ್ಟೆಗೆ ಟೊಮೆಟೊ ಸಾಗಾಣೆ ವೆಚ್ಚವು ಸಿಗದೆ ರೈತರು ಕಂಗಾಲಾಗಿದ್ದಾರೆ.  ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಸೀಸನ್ ಮುಗಿಯುತ್ತಿದ್ದರೂ ಕೆಂಪು ಹಣ್ಣಿನ ಬೆಲೆ ಪಾತಾಳಕ್ಕೆ ಕುಸಿದಿದೆ.

ಕೋಲಾರದ ರೈತರು ಕಂಗಾಲು! 

ಉತ್ತಮ ಬೆಲೆ ನಿರೀಕ್ಷೆಯಿಂದ ಮಾರುಕಟ್ಟೆಗೆ ಟೊಮೆಟೊ ತರುವ ರೈತರು ಕಡಿಮೆ ಬೆಲೆ ಕಂಡು  ದಿಕ್ಕೇ ತೋಚದಂತಾಗಿದೆ. ಸಾವಿರಾರು ರೈತರು  ಈಗಲೂ  ಟೊಮೆಟೊ ಬೆಳೆಯನ್ನ ಆರೈಕೆ ಮಾಡುತ್ತಿದ್ದು, ದಿಢೀರ್ ಬೆಲೆ ಕುಸಿತದಿಂದ ಅಯೋಮಯ ಪರಿಸ್ಥಿತಿ ಉಂಟಾಗಿದೆ. ಬೆಲೆ ಇಳಿಕೆ ಬಗ್ಗೆ ಮಾತನಾಡಿದ ರೈತರು ಸಾಲ ಸೋಲ ಮಾಡಿ ಲಕ್ಷ ಲಕ್ಷ ಬಂಡವಾಳ ಹಾಕಿದ್ದೇವೆ. ಬೆಲೆ ಇಳಿಕೆಯಿಂದ ಮತ್ತೊಮ್ಮೆ ಸಾಲದ ಸುಳಿಯಲ್ಲಿ ಸಿಲುಕಬೇಕಿದೆ. ಸರ್ಕಾರ ಕೂಡಲೇ ಟೊಮೆಟೊ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕಿದೆ, ಇಲ್ಲವಾದಲ್ಲಿ ಕೋಲಾರ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಆರಂಭವಾಗಲಿದೆ ಎಂದು ಕೆಜಿಎಫ್​​ ತಾಲೂಕಿನ ರೈತ ಗೋಪಾಲ್ ಎನ್ನುವರು ಅಳಲು ತೋಡಿಕೊಂಡಿದ್ದಾರೆ.

ರೈತರ ನೋವು ಒಂದೆಡೆಯಾದರೆ ಗ್ರಾಹಕರ ಮೊಗದಲ್ಲಿ ಕೊಂಚ ನಗೆ ಮೂಡಿದೆ. ಅತ್ಯಂತ ಕಡಿಮೆ ಬೆಲೆಗೆ ಟೊಮೆಟೊ ಕೊಂಡು ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಗ್ರಾಹಕರಿಗೆ ಒಂದು ರೀತಿಯ ನೆಮ್ಮದಿಯಾದರೆ ರೈತರು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.
Published by:Kavya V
First published: