ಮಾಲೂರಿನಲ್ಲಿ ಪೊಲೀಸರ ನೈಟ್ ರೋಲ್ ಕಾಲ್; ರಹಸ್ಯ ಕಾರ್ಯಾಚರಣೆಯಲ್ಲಿ ವಸೂಲಿ ದಂಧೆ ಬಯಲು

Kolar: ಪೊಲೀಸರ ರೋಲ್ ಕಾಲ್ ಕರಾಮತ್ತು ನ್ಯೂಸ್ 18 ಕನ್ನಡ ವಾಹಿನಿ ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾಗಿದ್ದು, ಮಾಲೂರು ನೈಟ್ ಬೀಟ್ ಪೊಲೀಸರ ಅಸಲಿ ಮುಖವಾಡ ಕಳಚಿದೆ.

ಮಾಲೂರಿನಲ್ಲಿ ರೋಲ್ ಕಾಲ್

ಮಾಲೂರಿನಲ್ಲಿ ರೋಲ್ ಕಾಲ್

  • Share this:
ಕೋಲಾರ (ಮಾ. 27): ಕಾನೂನು ಪಾಲಿಸಿ ಶಿಸ್ತಿನ ಸಿಪಾಯಿಗಳಂತೆ ಇರಬೇಕಾಗಿರುವ ಪೊಲೀಸರು, ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮಾತ್ರ ವಸೂಲಿ ಗಿರಾಕಿಗಳಂತೆ ರೂಪುಗೊಂಡಿದ್ದಾರೆ, ಪ್ರತಿನಿತ್ಯ ರಾತ್ರಿ‌ 9 ಗಂಟೆಯಾದರೆ ಹೈವೇ ಪೆಟ್ರೋಲಿಂಗ್ ವಾಹನ ಏರಿ ಸವಾರಿಗೆ ಹೋಗುವ ಪೊಲೀಸರು, ರಾತ್ರಿಪೂರಾ ರಸ್ತೆಯಲ್ಲಿ ನಿಂತು ಮಾಸ್ ಆಗಿ ಹಣ  ಕಲೆಕ್ಷನ್ ಮಾಡುತ್ತಿದ್ದಾರೆ, ಪೊಲೀಸರ ರೋಲ್ ಕಾಲ್ ಕರಾಮತ್ತು ನ್ಯೂಸ್ 18 ಕನ್ನಡ ವಾಹಿನಿ ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾಗಿದ್ದು, ಮಾಲೂರು ನೈಟ್ ಬೀಟ್ ಪೊಲೀಸರ ಅಸಲಿ ಮುಖವಾಡ ಕಳಚಿದೆ.

ಮಾಲೂರು ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದ ರಸ್ತೆಯೇ ಪೊಲೀಸರ ವಸೂಲಿ ಕೇಂದ್ರವಾಗಿದೆ. ರಾತ್ರಿ ಸರಿಯಾಗಿ 9 ಗಂಟೆಗೆ ಡ್ಯೂಟಿ ಹತ್ತುವ ಹೈವೇ ಪೆಟ್ರೋಲಿಂಗ್ ವಾಹನದಲ್ಲಿ,  ಓರ್ವ ಎಎಎಸೈ, ಓರ್ವ ಕಾನ್ಸ್‌ಟೇಬಲ್, ಇಬ್ಬರು ಹೋಮ್ ಗಾರ್ಡ್ ಗಳು ಕೆಲಸದಲ್ಲಿ ಇದ್ದಾರೆ. ರಸ್ತೆಯಲ್ಲೆ ನಿಂತು  ಮುಲಾಜಿಲ್ಲದೆ ವಾಹನಗಳನ್ನ ಅಡ್ಡಗಟ್ಟುವ ಹೋಮ್ ಗಾರ್ಡ್, ಪ್ರತಿ ವಾಹನದ ಬಳಿಯು 100 ರೂಪಾಯಿ ಹಣ ವಸೂಲಿ ಮಾಡ್ತಿದ್ದಾರೆ. ರಹಸ್ಯ ಕಾರ್ಯಾಚರಣೆ ವೇಳೆಯಲ್ಲಿ ಹೋಮ್ ಗಾರ್ಡ್ ಒಬ್ಬ ಕರ್ತವ್ಯ ನಿರತನಾಗಿದ್ದರು ಸಾಮಾನ್ಯ ಉಡುಗೆಯಲ್ಲೆ ರಸ್ತೆಯಲ್ಲಿ ನಿಂತು ಹಣ ವಸೂಲಿ ಮಾಡಿದ್ದು ಕಂಡುಬಂದಿತು.

ಪ್ರತಿ ವಾಹನಕ್ಕೂ ಟಾರ್ಚ್ ಲೈಟ್ ಹಾಕಿ, ಲಾಠಿ ತೋರಿಸುವ  ಹೋಮ್ ಗಾರ್ಡ್,  ವಸೂಲಿ ಮಾಡಿದ ಹಣವನ್ನೆಲ್ಲಾ ಸ್ತಳದಲ್ಲಿರೊ ಹಿರಿಯ ಅಧಿಕಾರಿಯ  ಕೈಗೆ ಆ ಕ್ಷಣದಲ್ಲೆ ಕೊಡುವುದು ಕೆಮೆರಾದಲ್ಲಿ ಸೆರೆಯಾಗಿದೆ, ಮಾಲೂರು ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್  ವೇಣುಗೋಪಾಲಯ್ಯ , ಹೋಮ್ ಗಾರ್ಡ್ ಸುನೀಲ್ ಎನ್ನುವರಿಂದ ಹಣ ವಸೂಲಿ ಮಾಡಿರುವ ದೃಶ್ಯಗಳು ಮಾತ್ರ ಸೆರೆಯಾಗಿದ್ದು, ಉಳಿದವರು ಹಣ ಎಣೆಸೋ ಕೆಲಸದಲ್ಲಿ ತಲ್ಲೀನಾರಾಗಿದ್ದರು, ಇನ್ನು ಪ್ರಮುಖವಾದ ವಿಚಾರವೆಂದರೆ ಪೊಲೀಸರು ಹಣ ವಸೂಲಿ ಮಾಡಿದರೆ,  ಸಸ್ಪೆಂಡ್ ಆಗೋ ಭೀತಿಯಿಂದಲೆ ಹೋಮ್ ಗಾರ್ಡ್ ನಿಂದ ಹಣ ವಸೂಲಿಯನ್ನ ಪೊಲೀಸರು ಮಾಡಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಹಿರಿಯ ಅಧಿಕಾರಿಗಳಿಗೆ ಗೊತ್ತಿಲ್ವಾ?:

ಇನ್ನು ಮಾಲೂರು ಪಟ್ಟಣದ ಕೂಗಳತೆ ದೂರದಲ್ಲೆ ರಾಜಾರೋಷವಾಗಿ ನಡೆಯುತ್ತಿರುವ ವಸೂಲಿ ಧಂಧೆಯು,  ಹಿರಿಯ ಅಧಿಕಾರಿಗಳ ಗಮನಕ್ಕೆ ಹೋಗದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ, ಇಲ್ಲವೆ ಅಧಿಕಾರಿಗಳಿಗೆ ಗೊತ್ತಿದ್ದರು ನೋಡಿಯು ನೋಡದಂತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ,   ನೈಟ್ ಶಿಪ್ಟ್ ಪೊಲೀಸರು ಪ್ರತೀ ಲಾರಿ ಹಾಗು ಟ್ರಕ್‍ಗಳಿಂದ 100 ರೂಪಾಯಿ ಹಣ ವಸೂಲಿ ಮಾಡುತ್ತಿದ್ದು,  ಮಾಲೂರಿನಲ್ಲಿ ಪೊಲೀಸರ ವಸೂಲಿ ಧಂದೆಗೆ ಬ್ರೇಕ್ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ,  ಈ ಬಗ್ಗೆ ಮಾತನಾಡಿರುವ ಮಾಲೂರು ನಿವಾಸಿಯಾದ ಪುರಸನಹಳ್ಳಿ ಶ್ರೀನಿವಾಸ್ ಎನ್ನುವರು, ಮಾಲೂರಿನಲ್ಲಿ ಪೊಲೀಸರ ವಸೂಲಿ ಸರ್ವೇ ಸಾಮಾನ್ಯವಾಗಿ ನಡೆಯುತ್ತಿದೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡಲೇ ಇಂತಹ ಕೆಲಸಗಳನ್ನು ನಿಲ್ಲಿಸದೆ ಹೋದಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು.

ಮಾಲೂರು ಹೈವೇ ಪೆಟ್ರೋಲಿಂಗ್ ಸಿಬ್ಬಂದಿಯ ರಾತ್ರಿ ವಸೂಲಿ ಧಂದೆ ಕುರಿತು, ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ದೃಶ್ಯಗಳನ್ನು ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದು, ಕಾನೂನು ಕ್ರಮ ಜರುಗಿಸೋದಾಗಿ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಕೋಲಾರ ಜಿಲ್ಲೆಯ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ,  ‌ವಾಹನಗಳ ದಾಖಲೆ ಪರಿಶೀಲನೆ ನೆಪದಲ್ಲಿ ಚಾಲಕರ ಸುಲಿಗೆ ನಡೆಯುತ್ತಿದ್ದು,  ಪೊಲೀಸರ ವರ್ತನೆಗೆ ಲಾರಿ ಚಾಲಕರು ಹಾಗು ಮಾಲೀಕರು ಹೈರಾಣಾಗಿದ್ದಾರೆ, ಇನ್ನಾದರು ಇಂತಹ ಘಟನೆಗಳು ಮರುಕಳಿಸದಂತೆ ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
Published by:Sushma Chakre
First published: