ನ್ಯೂಸ್18 ಕನ್ನಡ ಫಲಶ್ರುತಿ: ಕೋಲಾರದ ಮಾಲೂರು ಪೊಲೀಸರ ರೋಲ್ಕಾಲ್ ಕೇಸ್; ಇಬ್ಬರು ಸಿಬ್ಬಂದಿ ಅಮಾನತು
Kolar Crime: ಮಾಲೂರಿನಲ್ಲಿ ರಾತ್ರಿ 9 ಗಂಟೆಯಿಂದ ಹೈವೇ ಪೆಟ್ರೋಲಿಂಗ್ ಪೊಲೀಸರು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುವುದನ್ನು ನ್ಯೂಸ್ 18 ಕನ್ನಡ ಬಯಲಿಗೆಳೆದಿತ್ತು. ಈ ಕುರಿತು ಇಬ್ಬರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಿ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಕೋಲಾರ (ಮಾ. 30): ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ರಾತ್ರಿಯಿಡೀ ವಾಹನಗಳನ್ನು ಅಡ್ಡಗಟ್ಟಿ ಪೊಲೀಸರು ಹಣ ಸುಲಿಗೆ ಮಾಡುತ್ತಿರುವ ಕುರಿತು ನ್ಯೂಸ್ 18 ಕನ್ನಡ ವರದಿ ಪ್ರಸಾರ ಮಾಡಿತ್ತು. ಈ ಬಗ್ಗೆ ಶಿಸ್ತು ಕ್ರಮ ಜರುಗಿಸಿರುವ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ, ಇಬ್ಬರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮಾಲೂರಿನಲ್ಲಿ ರಾತ್ರಿ 9 ಗಂಟೆಯಿಂದ ಹೈವೇ ಪೆಟ್ರೋಲಿಂಗ್ ಪೊಲೀಸರು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುವುದನ್ನು ರಹಸ್ಯ ಕಾರ್ಯಾಚರಣೆ ಮೂಲಕ ನ್ಯೂಸ್ 18 ಕನ್ನಡ ಬಯಲಿಗೆ ಎಳೆದಿತ್ತು.
ಈ ಹಿನ್ನೆಲೆಯಲ್ಲಿ ಇದೀಗ ಮಾಲೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಆಗಿರುವ ಭೈರಪ್ಪ ಮತ್ತು ವೇಣುಗೋಪಾಲಯ್ಯ ಎನ್ನುವ ಇಬ್ಬರು ಸಿಬ್ಬಂದಿಯನ್ನ ಅಮಾನತು ಮಾಡಿ, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಎಸ್ಪಿ ಕಾರ್ತಿಕ್ ರೆಡ್ಡಿ, ಇಬ್ಬರು ಸಿಬ್ಬಂದಿಯನ್ನ ಅಮಾನತು ಮಾಡಿರುವುದಾಗಿ ಖಚಿತ ಪಡಿಸಿದ್ದು, ತನಿಖೆ ನಂತರ ಅಗತ್ಯ ಕಾನೂನು ಕ್ರಮ ಜರುಗಿಸುವ ಮಾತನಾಡಿದ್ದಾರೆ.
ನ್ಯೂಸ್ 18 ಕನ್ನಡ ನಡೆಸಿರುವ ರಹಸ್ಯ ಕಾರ್ಯಾಚರಣೆ ಮೂಲಕ ಹೈವೇ ಪೆಟ್ರೋಲಿಂಗ್ ವಾಹನ ಪೊಲೀಸರ ಮತ್ತೊಂದು ಮುಖವಾಡ ಕಳಚಿದೆ. ಮಾಲೂರು ಪೊಲೀಸ್ ಠಾಣೆಯ ಹೈವೇ ಪೆಟ್ರೋಲಿಂಗ್ ಸಿಬ್ಬಂದಿಯು ಹಣ ವಸೂಲಿಗೆಂದು ಖಾಸಗಿ ವ್ಯಕ್ತಿಯೊಬ್ಬನನ್ನು ತಮ್ಮೊಂದಿಗೆ ಕರೆದುಕೊಂಡು ಬಂದಿದ್ದು, ಆ ವ್ಯಕ್ತಿ ಹೆಸರು ಸುನೀಲ್ ಎಂದು ತಿಳಿದುಬಂದಿದೆ. ಸುನೀಲ್ ಎಂಬ ವ್ಯಕ್ತಿಯೇ ಕೈಯಲ್ಲಿ ಲಾಠಿ ಹಿಡಿದು, ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಟಾರ್ಚ್ ಹಾಕಿ ಪ್ರತಿ ವಾಹನವನ್ನು ನಿಲ್ಲಿಸಿ ಹಣ ವಸೂಲಿ ಮಾಡಿ, ಕೂಡಲೇ ಹಣವನ್ನ ಪೊಲೀಸ್ ಸಿಬ್ಬಂದಿಗೆ ನೀಡುವ ದೃಶ್ಯಗಳು ಸೆರೆಯಾಗಿದೆ. ಈ ಮೊದಲು ವಿಡಿಯೋದಲ್ಲಿ ಹೋಂ ಗಾರ್ಡ್ ಇದ್ದಾರೆಂದು ಮಾಹಿತಿ ಇತ್ತು. ಈಗ ಆ ವ್ಯಕ್ತಿ ಸುನೀಲ್ಗೂ, ಮಾಲೂರು ಪೊಲೀಸ್ ಠಾಣೆಗೂ ಸಂಬಂದ ಇಲ್ಲ ಎಂದು ತಿಳಿದುಬಂದಿದೆ.
ರಾತ್ರಿ ಪಾಳಯದಲ್ಲಿದ್ದ ಸಿಬ್ಬಂದಿಗಳು ಕೇವಲ ವಾಹನ ಸುಲಿಗೆ ಮಾಡಲು ಮತ್ತೊಬ್ಬರನ್ನ ಕರೆತಂದಿದ್ದರು ಎಂದು ತಿಳಿದುಬಂದಿದೆ. ವಸೂಲಿ ಧಂದೆ ಬೆಳಕಿಗೆ ಬರುತ್ತಿದ್ದಂತೆ ಮಾಲೂರು ಠಾಣೆಯ ಹಿರಿಯ ಅಧಿಕಾರಿಗಳು ಸಿಬ್ಬಂದಿ ಹಾಗೂ ಖಾಸಗಿ ವ್ಯಕ್ತಿಯನ್ನ ಠಾಣೆಗೆ ಕರೆಸಿ ಖಡಕ್ ಎಚ್ಚರಿಕೆ ನೀಡಿ ವಾಪಾಸ್ ಕಳಿಸಿದ್ದು, ಮತ್ತೊಮ್ಮೆ ಮರುಕಳಿಸಿದರೆ ಅಗತ್ಯ ಕ್ರಮ ಜರುಗಿಸೊ ಎಚ್ಚರಿಕೆಯನ್ನ ನೀಡಿದ್ದಾರೆ ಎನ್ನಲಾಗಿದೆ.
ಕೋಲಾರದ ಹಲವೆಡೆ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯಲ್ಲಿ, ಪೆಟ್ರೋಲಿಂಗ್ ವಾಹನ ನಿಲ್ಲಿಸಿ ದಾಖಲೆ ಪರಿಶೀಲನೆ ಮಾಡುವ ಸೋಗಿನಲ್ಲಿ ಪೊಲೀಸರು ಹಣ ಸುಲಿಗೆ ಮಾಡುವುದು ಸರ್ವೇ ಸಾಮಾನ್ಯವಾಗಿದೆಯೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ವಿವಿದೆಡೆ ಗಸ್ತು ತಿರುಗುವ ಪೊಲೀಸರು ಅಧಿಕಾರ ಬಳಸಿ ವಾಹನ ಚಾಲಕರನ್ನ ಸುಲಿಗೆ ಮಾಡುವುದನ್ನ ತಪ್ಪಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಆಗ್ರಹ ವ್ಯಕ್ತವಾಗಿದೆ.
(ವರದಿ: ರಘುರಾಜ್)
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ