ಕೋಲಾರ: ವಿಪಕ್ಷ ನಾಯಕ (Leader of the Opposition), ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಕೋಲಾರದಿಂದ (Kolar Constituency) ಸ್ಪರ್ಧಿಸೋದಾಗಿ ಘೋಷಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಕ್ಷೇತ್ರ ಘೋಷಣೆ ಆಗುತ್ತಿದ್ದಂತೆ, ಕೋಲಾರದಲ್ಲಿ ವಿಪಕ್ಷಗಳು ಮಾಜಿ ಸಿಎಂ ವಿರುದ್ಧ ಅಭಿಯಾನವನ್ನೂ ಆರಂಭಿಸಿದ್ದರು. ಈ ಎಲ್ಲದರ ನಡುವೆ ಕ್ಷೇತ್ರ ತ್ಯಾಗ ಮಾಡಿರುವ ಹಾಲಿ ಶಾಸಕ, ಜೆಡಿಎಸ್ ಉಚ್ಛಾಟಿತ ಎಂಎಲ್ಎ ಶ್ರೀನಿವಾಸಗೌಡ (Kolar MLA Srinivas Gowda) ಅವರು ಮಾತನಾಡಿದ್ದು ಎನ್ನಲಾದ ಆಡಿಯೋ (Viral Audio) ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಆಡಿಯೋದಲ್ಲಿ ಶ್ರೀನಿವಾಸಗೌಡ ಅವರಿಗೆ MLC ಸ್ಥಾನದ ಜೊತೆಗೆ ಮಂತ್ರಿಗಿರಿ ನೀಡುವ ಆಫರ್ ನೀಡಲಾಗಿದ್ಯಂತೆ ಎಂಬ ಮಾತು ಕೇಳಿ ಬಂದಿದೆ.
ಆಡಿಯೋದಲ್ಲಿ ಏನಿದೆ?
ವೈರಲ್ ಆಡಿಯೋದಲ್ಲಿ ಕೋಲಾರ ತಾಲೂಕಿನ ವೇಮಗಲ್ ನಿವಾಸಿ ಚನ್ನೈಗೌಡ ಅವರೊಂದಿಗೆ ಶಾಸಕ ಶ್ರೀನಿವಾಸಗೌಡ ಮಾತನಾಡಿದ್ದಾರೆ ಎನ್ನಲಾಗಿದೆ. ಸಂಭಾಷಣೆಯಲ್ಲಿ ಚನ್ನೈಗೌಡ ಅವರು, ಕ್ಷೇತ್ರ ತ್ಯಾಗ ಮಾಡದಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೇ ನೀವೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಕಳೆದ ಚುನಾವಣೆಗೆ 17 ಕೋಟಿ ಖರ್ಚು ಮಾಡಿದ್ದೀನಿ
ಇದಕ್ಕೆ ಉತ್ತರಿಸಿರುವ ಶ್ರೀನಿವಾಸಗೌಡ ಅವರು, ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಗೆದ್ದರೆ ಅವರೇನು ಕ್ಷೇತ್ರದಲ್ಲಿ ಓಡಾಡಲ್ಲ, ನಾನೇ ಎಲ್ಲಾ ನೋಡಿಕೊಳ್ಳುವುದು. ಕಳೆದ ಎಲೆಕ್ಷನ್ ನಲ್ಲಿ 17 ಕೋಟಿ ಖರ್ಚು ಮಾಡಿದ್ದೇನೆ, ಅದರ ಸಾಲ ಇನ್ನೂ ತೀರಿಸಿಲ್ಲ ಎಂದಿದ್ದಾರೆ.
ನಾನೇ ಇದ್ದೀನೆಂದು ಸಿದ್ದರಾಮಯ್ಯ ಅವರಿಗೆ ಮತ ನೀಡಿ
ಇದಕ್ಕೆ ಚನ್ನೈಗೌಡರು ಪ್ರತಿಕ್ರಿಯೆ ನೀಡಿ, ನಿಮ್ಮ ಸಾಲದ ಹಣವನ್ನು ನಾವು ತೀರಿಸ್ತೀವಿ, ನೀವೇ ಎಲೆಕ್ಷನ್ ನಿಲ್ಲಿ ಎಂದು ಮತ್ತೆ ಒತ್ತಾಯ ಮಾಡಿದ್ದಾರೆ. ಆದರೆ ಇದಕ್ಕೆ ನಿರಾಕರಿಸಿರುವ ಶ್ರೀನಿವಾಸ ಗೌಡ ಅವರು, 17 ಕೋಟಿ ರೂಪಾಯಿ ಕೊಡೊಕೆ ನಿಮ್ಮ ಕೈಯಲ್ಲಿ ಆಗಲ್ಲ. ನಾನೇ ಎಲೆಕ್ಷನ್ ನಲ್ಲಿ ಇದ್ದೀನೆಂದು ಸಿದ್ದರಾಮಯ್ಯ ಅವರಿಗೆ ಮತ ನೀಡಿ ಎಂದು ಹೇಳಿದ್ದಾರೆ.
ಇನ್ನು, ಎಂಎಲ್ಸಿ ಸ್ಥಾನ ನೀಡಿ ಮಂತ್ರಿ ಮಾಡ್ತಾರೆ ಎಂಬ ಆಡಿಯೋ ವೈರಲ್ ವಿಚಾರವಾಗಿ ನ್ಯೂಸ್18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸಗೌಡ ಅವರು, ನನಗೆ ಯಾವುದೇ ಆಮಿಷ ಇರುವ ವಿಚಾರವೇ ಸುಳ್ಳು. ಕಳೆದ ಚುನಾವಣೆಗೆ ನಾನು 17 ಕೋಟಿ ರೂಪಾಯಿ ಹಣ ಖರ್ಚು ಮಾಡಿದ್ದು ನಿಜ. DRDOಗೆ ಭೂಮಿ ನೀಡಿದಾಗ ಬಂದ 17 ಕೋಟಿ ರೂಪಾಯಿ ಹಣದಲ್ಲಿ ಚುನಾವಣೆ ಮಾಡಿದ್ದೇನೆ.
ಇದನ್ನೂ ಓದಿ: Siddaramaiah: ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ; ಅಧಿಕೃತವಾಗಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ನನಗೆ ಮತ್ತೊಮ್ಮೆ ಶಾಸಕನಾಗಿ, ಮಂತ್ರಿ ಆಗುವ ಆಸೆಯಿಲ್ಲ. ಮುಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಎಂಎಲ್ಸಿ ಮಾಡಿ, ಮಂತ್ರಿ ಮಾಡಿದರೆ ಜವಾಬ್ದಾರಿ ನಿರ್ವಹಿಸುವೆ. ಕೋಲಾರ ಶಾಸಕ ಸ್ಥಾನ ತ್ಯಾಗ ಮಾಡಲು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು, ವೈರಲ್ ಆಡಿಯೋ ಕುರಿತಂತೆ ಚಿಕ್ಕೋಡಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ಸಿದ್ದರಾಮಯ್ಯ ಅವರು ನಿರಾಕರಿಸಿದ್ದಾರೆ.
ಇನ್ನು, ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರವನ್ನು ತೊರೆದಿರುವ ಬಗ್ಗೆ ಜನರು, ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ಸ್ಥಾನಕ್ಕೆ ಮತ್ಯಾರನ್ನು ತರಲಾಗುತ್ತದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ