HOME » NEWS » State » KOLAR FARMER HARVESTED TAIWAN GUAVA FRUITS IN HIS FARM GUAVA BENEFITS RRK SCT

ತೈವಾನ್ ದೇಶದ ಸೀಬೆ ಹಣ್ಣು ಬೆಳೆದು ಭಾರೀ ಲಾಭ ಗಳಿಸಿದ ಕೋಲಾರದ ರೈತ

ಕೋಲಾರದ ತೊಟ್ಲಿ ಗ್ರಾಮದ ರೈತ ಬೆಳೆದಿರುವ ಪಿಂಕ್, ವೈಟ್ ಸೀಬೆ ತಳಿಯ ತೈವಾನ್​ನ ಸೀಬೆ ಹಣ್ಣು ಹಲವು ಔಷಧೀಯ ಗುಣಗಳನ್ನು ಹೊಂದಿದೆ.  ಕೊಬ್ಬಿನಾಂಶ ಇಳಿಸುವ ಶಕ್ತಿಯು ಈ ಹಣ್ಣಿಗಿದ್ದು , ಹಲವು ಪೋಷಕಾಂಶಗಳನ್ನ ಹೊಂದಿದೆ.

news18-kannada
Updated:January 25, 2021, 8:04 AM IST
ತೈವಾನ್ ದೇಶದ ಸೀಬೆ ಹಣ್ಣು ಬೆಳೆದು ಭಾರೀ ಲಾಭ ಗಳಿಸಿದ ಕೋಲಾರದ ರೈತ
ಸೀಬೆ ಹಣ್ಣು ಬೆಳೆದ ಕೋಲಾರದ ರೈತ
  • Share this:
ಕೋಲಾರ (ಜ. 25): ಸಾಮಾನ್ಯವಾಗಿ ಒಂದು ಸೀಬೆ ಹಣ್ಣಿನ ತೂಕ 100 ಗ್ರಾಂ, 250 ಗ್ರಾಂ,  ಹೆಚ್ಚೆಂದರೆ 400 ಗ್ರಾಂ ತೂಕವಿರುತ್ತದೆ. ಆದರೆ ಕೋಲಾರದಲ್ಲಿ ಬೆಳೆದಿರೊ ಈ ಸೀಬೇ ಹಣ್ಣು ಒಂದರ ತೂಕ ಕಡಿಮೆ ಅಂದರೂ 800 ಗ್ರಾಂ ಇದ್ದು,  ಗರಿಷ್ಟ 1 ಕೆಜಿಗೂ ಹೆಚ್ಚಿದೆ. ಹೌದು, ಅಚ್ಚರಿಯಾದರೂ ನೀವೆಲ್ಲ ನಂಬಲೇಬೇಕು. ಬಯಲುಸೀಮೆ ಕೋಲಾರದ ರೈತನ ತೋಟದಲ್ಲಿ ಬೆಳೆದ ತೈವಾನ್ ದೇಶದ ಅತ್ಯಾಧುನಿಕ ತಂತ್ರಜ್ಞಾನದ ಸೀಬೆ ಹಣ್ಣಿನ ತಳಿಗಳು ಇದೀಗ ಜಿಲ್ಲೆಯಲ್ಲೆ ಮನೆಮಾತಾಗಿದೆ.

ಕೋಲಾರದ ತೊಟ್ಲಿ ಗ್ರಾಮದ ರೈತ ಅಂಬರೀಶ್ ಅವರು ಈ ವಿಶೇಷ ತಳಿಯನ್ನು ಬೆಳೆಸಿ ಈಗ ಭರ್ಜರಿ ಲಾಭದ ನಿರೀಕ್ಷೆಯಲ್ಲೂ ಇದ್ದಾರೆ. ಮೊದಲೇ ಕೋಲಾರ ಬರಪೀಡಿತ ಜಿಲ್ಲೆ. ನೀರಿನ ಮೂಲ ಸ್ವಲ್ಪ ಕಡಿಮೆಯೇ ಇದೆ. ಆದರೆ, ಕೋಲಾರದ ರೈತರು ಮಾತ್ರ ಸಾಹಸಿಗಳು ಎಂದರು ತಪ್ಪಾಗಲಾರದು. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವ ಬೆಳೆಗಳನ್ನು ಬೆಳೆಯುತ್ತಾ ತಮ್ಮ ಆದಾಯ ಗಳಿಕೆಯಲ್ಲಿಯೂ ಮುಂದಿದ್ದಾರೆ ಈ ಚಿನ್ನದನಾಡಿನ ರೈತರು. ಅದರಂತೆ ಈ ತೋಟದಲ್ಲಿ ಬೆಳೆಯುವ ಒಂದು ಸೀಬೆ ಹಣ್ಣು ಮಾಲೀಕನಿಗೆ 80 ರಿಂದ 100 ರೂ. ಗಳಿಕೆಯ ಮೂಲವಾಗಿದೆ. ಇದು ತೈವಾನ್ ಮಾದರಿಯ ಪಿಂಕ್ ಹಾಗೂ ವೈಟ್ ಗುವಾ ಎನ್ನುವ (ಸೀಬೆ ಹಣ್ಣು) ತಳಿ.

ಇದನ್ನೂ ಓದಿ: ಕಲಬುರ್ಗಿ; ತಂದೆ-ತಾಯಿಗೆ ದೇವಸ್ಥಾನ ಕಟ್ಟಿಸಿ, ಮೂರ್ತಿ ಪ್ರತಿಷ್ಠಾಪಿಸಿದ ಆಧುನಿಕ ಶ್ರವಣಕುಮಾರ!

ಈ ಒಂದು ಸೀಬೆ ಹಣ್ಣು ಸಾಮಾನ್ಯವಾಗಿ ಒಂದು ಕೆಜಿಯಷ್ಟು ತೂಗುವ ತೂಕದ ಗಾತ್ರದಲ್ಲಿದೆ. ಸಾಮಾನ್ಯರು ಒಂದು ಕಾಯಿಯನ್ನು ಎರಡು ಕೈಯಲ್ಲೂ ಹಿಡಿಯಬೇಕು. ಅದು ಈ ಹಣ್ಣಿನ ಮೊದಲ ವಿಶೇಷತೆಯಾಗಿದೆ. ದಪ್ಪನೆಯ ಭಾರೀ ಗಾತ್ರದ ಈ ಸೀಬೆಹಣ್ಣಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಉತ್ತಮವಾಗಿಯೇ ಇದೆ. ಒಂದು ಕೆಜಿ ಸೀಬೆಹಣ್ಣಿನ ಬೆಲೆ ಈಗ 90ರಿಂದ 100 ರೂ.ವರೆಗೂ ಇದ್ದು, ಮುಂದಿನ ಬೇಸಿಗೆಗೆ ಈ ಬೆಲೆ ದುಪ್ಪಟ್ಟಾಗುವ ಸಾಧ್ಯತೆಯಿದೆ.

ವಾರ್ಷಿಕ 10 ರಿಂದ 13 ಲಕ್ಷ ರೂ. ಲಾಭದ ನಿರೀಕ್ಷೆ:

ತೈವಾನ್‌ ಸೀಬೆ ತಳಿಯ  ತೋಟದಲ್ಲಿ ಒಂದು ಎಕರೆಯಲ್ಲಿ ಒಂದೂವರೆ ಸಾವಿರ ಗಿಡಗಳನ್ನು ನಾಟಿ ಮಾಡಲಾಗಿದೆ. ಪ್ರತಿ ಗಿಡದಿಂದ ಮತ್ತೊಂದು ಗಿಡಕ್ಕೆ 8 ಅಡಿ ಸ್ಥಳಗಳನ್ನು ಬಿಡಲಾಗಿದೆ. ಕೃಷಿ ಹೊಂಡದ ಮೂಲಕ ಡ್ರಿಪ್ ವ್ಯವಸ್ಥೆಯಿಂದ ನೀರನ್ನು ಹಾಯಿಸಲಾಗುತ್ತಿದೆ. ಒಟ್ಟು ಖರ್ಚು 2 ಲಕ್ಷ ರೂಗಳು. ಇರುವ ಕೃಷಿಹೊಂಡದಿಂದ ವಾರದಲ್ಲೊಮ್ಮೆ ನೀರು ಹರಿಸಿ ವರ್ಷಕ್ಕೆರಡು ಬಾರಿ ಸೀಮೆ ಗೊಬ್ಬರ ಕೊಡುತ್ತಾರೆ. ವರ್ಷಕೊಮ್ಮೆ ಔಷಧಿ ಸಿಂಪಡಣೆ ಮಾಡುತ್ತಾರೆ. ಸೀಬೆ ಹಣ್ಣು ಬಿಡಲು ಆರಂಭಿಸಿದಾಗಲೆ ಅದಕ್ಕೆ ಸ್ಪಾಂಜ್ ಮತ್ತು ಪ್ಲಾಸ್ಟಿಕ್ ಕವರ್‌ ಗಳನ್ನು  ಹಾಕಿ ಕೀಟಬಾಧೆ, ರೋಗಗಳು ತಾಕದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗದುಕೊಳ್ಳಲಾಗಿದೆ.

ಇದೀಗ ಅಂಬರೀಶ್ ಅವರ ತೋಟದ ಗಿಡಗಳು 12 ತಿಂಗಳ ಗಿಡಗಳಾಗಿದ್ದು, ಈಗಾಗಲೆ ಫಲ ನೀಡಲು ಆರಂಭಿಸಿದೆ. 12 ಸಾವಿರ ಸೀಬೆ ಫಲಗಳು ಈಗಾಗಲೆ ಕೈಗೆ ಬಂದಿದ್ದು,  ಇನ್ನು 12 ಸಾವಿರ ಸೀಬೆ ಹಣ್ಣು ಕೈಸೇರಲಿದೆ ಎಂದು ರೈತ ಅಂಬರೀಶ್ ತಿಳಿಸಿದ್ದಾರೆ. ಕೆಜಿಯೊಂದಕ್ಕೆ 120 ರೂಪಾಯಿ ಸಿಗುತ್ತದೆ. ಅಲ್ಲಿಗೆ ವಾರ್ಷಿಕ ಲೆಕ್ಕಾಚಾರದಿಂದ ಸುಮಾರು 10 ಲಕ್ಷ ರೂ.ನಿಂದ 13 ಲಕ್ಷ ರೂ. ಆದಾಯದ ನಿರೀಕ್ಷೆಯಲ್ಲಿದ್ದಾರೆ. ವಿಶೇಷ ತಳಿಯ ಗಿಡಗಳನ್ನ ಹಾಕಿರುವ ರೈತರ ಉತ್ಸಾಹಕ್ಕೆ ಸ್ಥಳೀಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದಕ್ಕೂ ಮೊದಲು ರೈತ ಅಂಬರೀಶ್ ಹಿಪ್ಪು ನೇರಳೆ ಸೊಪ್ಪು ಬೆಳೆಸಿ, ರೇಷ್ಮೆ ಕೃಷಿ ಮಾಡುತ್ತಿದ್ದರು, ಆದರೆ ಹವಾಮಾನ ವೈಪರೀತ್ಯ ಹಾಗೂ ಬೆಲೆ ಏರುಪೇರಿನ ಮಧ್ಯೆ ಸಾಕಷ್ಟು ನಷ್ಟ ಅನುಭವಿಸಿದ್ದರು. ಹೀಗಾಗಿ ರಾಯಪುರದಲ್ಲಿನ ಸ್ನೇಹಿತರೊಬ್ಬರ ಸಲಹೆಯಂತೆ, ಕಸಿ ಮಾಡಿ ಬೆಳೆಸಿರುವ ತೈವಾನ್ ದೇಶದ ಸೀಬೆ ಹಣ್ಣಿನ ಗಿಡಗಳನ್ನ ತಂದು ಬೆಳೆಸಿರುವುದಾಗಿ ಅಂಬರೀಶ್ ಹೇಳಿದ್ದಾರೆ.

ಇನ್ನು, ಪಿಂಕ್, ವೈಟ್ ಸೀಬೆ ತಳಿಯ ತೈವಾನ್​ನ ಸೀಬೆ ಹಣ್ಣು ಹಲವು ಔಷಧೀಯ ಗುಣಗಳನ್ನು ಹೊಂದಿದೆ.  ಕೊಬ್ಬಿನಾಂಶ ಇಳಿಸುವ ಶಕ್ತಿಯು ಈ ಹಣ್ಣಿಗಿದ್ದು , ಹಲವು ಪೋಷಕಾಂಶಗಳನ್ನ ಹೊಂದಿದೆ. ಸಕ್ಕರೆಯ ಅಂಶವೂ ಕಡಿಮೆಯಿರೊ ಕಾರಣ ಮಾನವನ ದೇಹಕ್ಕೆ ಹಲವು ಉಪಯೋಗಗಳನ್ನು ನೀಡುವ ಹಣ್ಣು ಇದಾಗಿದೆಯಂತೆ. ಇಷ್ಟೆಲ್ಲಾ ಮಾಹಿತಿಯನ್ನ ಅರಿತುಕೊಂಡು ವಿದೇಶಿ ತಳಿಯ ಸೀಬೆ ಹಣ್ಣು ಬೆಳೆದು ಕೋಲಾರದ ರೈತ ಇಂದು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದಾರೆ.

(ವರದಿ: ರಘುರಾಜ್)
Published by: Sushma Chakre
First published: January 25, 2021, 8:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories