ನಾಪತ್ತೆಯಾದ ಮಗು ಸಂಪ್​ನಲ್ಲಿ ಶವವಾಗಿ ಪತ್ತೆ; ಹೆಣ್ಣುಮಗು ಎಂಬ ಕಾರಣಕ್ಕೆ ಹೆತ್ತವರಿಂದಲೇ ಕೃತ್ಯ ಶಂಕೆ

ಪೊಲೀಸ್​ ಶ್ವಾನದಳ ಕರೆಸಿದಾಗ, ನಾಯಿ ಮನೆಯಲ್ಲಿದ್ದ ಸಂಪ್​ ಸುತ್ತ ಗಿರಕಿ ಹೊಡೆಯುತ್ತಿತ್ತು. ಈ ವೇಳೆ ಅನುಮಾನಗೊಂಡು ನೀರಿನ ಸಂಪ್​ ಪರಿಶೀಲಿಸಿದಾಗ ಶವವಾಗಿ ಮಗು ಪತ್ತೆಯಾಗಿದೆ. 

ಮಗುವಿನ ಪೋಷಕರು

ಮಗುವಿನ ಪೋಷಕರು

  • Share this:
ಕೋಲಾರ (ಫೆ.18): ಮನೆಯಲ್ಲಿದ್ದ ಒಂದೂವರೆ ತಿಂಗಳ ಹೆಣ್ಣು ಮಗುವೊಂದು ನಾಪತ್ತೆಯಾಗಿದ್ದು, ಹೆಣ್ಣು ಮಗು ಎಂಬ ಕಾರಣಕ್ಕೆ ಹೆತ್ತ ಅಪ್ಪ-ಅಮ್ಮ ಹಾಗೂ ಅಜ್ಜಿಯೇ ಅದನ್ನು ನೀರಿನ ಸಂಪ್​ನಲ್ಲಿ ಹಾಕಿ ಕೊಂದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕೋಲಾರದಲ್ಲಿ ಇಂತದ್ದೊಂದು ಘಟನೆ ನಡೆದಿದ್ದು ಮಾನವೀಯ ಮೌಲ್ಯಗಳಿಗೆ ಬೆಲೆಯೇ ಇಲ್ಲವೇ ಎಂಬ ಪ್ರಶ್ನೆ ಕೇಳುವಂತೆ ಮಾಡಿದೆ.

ತಾಲೂಕಿನ ಛತ್ರಕೋಡಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಘುಪತಿ ಹಾಗೂ ಹರ್ಷಿತ ಎಂಬ ದಂಪತಿಯ ಮಗು ಶವವಾಗಿ ಪತ್ತೆಯಾಗಿದೆ.

ಮಗು ಮಲಗಿದ ವೇಳೆ ತಾಯಿ  ಹೊರಗೆ ಹೋಗಿ ಬರುವಷ್ಟರಲ್ಲಿ ಈ ಘಟನೆ ನಡೆದಿದೆ. ಮಲಗಿಸಿದ ಮಗು ನಾಪತ್ತೆಯಾದ ಹಿನ್ನೆಲೆ ತಾಯಿ ಗಾಬರಿಗೊಂಡು ಹುಡುಕಿದ್ದಾರೆ. ಈ ವೇಳೆ ಆಕೆಯ ಗಂಡ ರಘುಪತಿ ಹಾಗೂ ಅಜ್ಜಿ ರತ್ನಮ್ಮ ಕೂಡ ಮಗುವಿನ ಶೋಧಕ್ಕೆ ಮುಂದಾಗಿದ್ದು, ಕಡೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಡಾಗ್​ ಸ್ಕ್ವಾಡ್​ ಮನೆಯಲ್ಲಿದ್ದ ಸಂಪ್​ ಸುತ್ತ ಗಿರಕಿ ಹೊಡೆಯುತ್ತಿತ್ತು. ಈ ವೇಳೆ ಅನುಮಾನಗೊಂಡು ನೀರಿನ ಸಂಪ್​ ಪರಿಶೀಲಿಸಿದಾಗ ಶವವಾಗಿ ಮಗು ಪತ್ತೆಯಾಗಿದೆ.

ಇದನ್ನು ಓದಿ: ಆರ್ಥಿಕ ಸಂಕಷ್ಟದಿಂದ ಪಾರಾಗಲು ದಿನಗೂಲಿ ನೌಕರರ ಕೆಲಸದ ದಿನಗಳ ಕಡಿತಕ್ಕೆ ಮುಂದಾದ ಕೋಚಿಮುಲ್

ಮನೆಯ ನೀರಿನ ಸಂಪಿನಲ್ಲಿಯೇ ಮಗು ಪತ್ತೆಯಾದ ಹಿನ್ನೆಲೆ ಪೊಲೀಸರು ಮಗುವಿನ ಅಪ್ಪ, ಅಮ್ಮ ಹಾಗೂ ಅಜ್ಜಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ದಂಪತಿಗೆ ಈಗಾಗಲೇ ಒಂದು ಗಂಡು ಮಗು ಇದೆ.

ಪ್ರಾಥಮಿಕ ತನಿಖೆಯ ಪ್ರಕಾರ ಮಗುವನ್ನು ಹೆತ್ತವರೇ ಕೊಂದಿದ್ದಾರೆ ಎನ್ನಲಾಗುತ್ತಿದೆ. ಒಂದೆಡೆ ಕೇಂದ್ರ ಸರ್ಕಾರ ಭೇಟಿ ಬಚಾವೋ ಭೇಟಿ ಪಡಾವೋ ಎಂಬ ಮಹತ್ತರ ಯೋಜನೆಯನ್ನು ಜಾರಿಗೆ ತಂದಿದೆ. ಇನ್ನೊಂದೆಡೆ ಗಂಡು - ಹೆಣ್ಣು ಎಂಬ ಭೇದಭಾವ ಜನರಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ.

(ವರದಿ: ರಘುರಾಜ್​)
First published: