ಕೋಲಾರ (ಜೂ. 24): ಕುಂಟುನೆಪ ಹೇಳಿ ತಾಯಿಯನ್ನು ಮನೆಯಿಂದ ಹೊರಗೆ ಕಳಿಸಿ, ಮನೆಯಲ್ಲೆ ನೇಣು ಬಿಗಿದುಕೊಂಡು ಗ್ರಾಮ ಪಂಚಾಯತಿ ಕಾರ್ಯದರ್ಶಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ನಗರದ ಕೋಲಾರಮ್ಮ ಬಡಾವಣೆಯಲ್ಲಿ ನಡೆದಿದೆ. ಕಾವ್ಯ (ಕಾವ್ಯಾಂಜಲಿ) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದು, ಕಾವ್ಯ ಕೋಲಾರ ತಾಲೂಕಿನ ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡ್ತಿದ್ದರು. 2 ದಿನ ಹಿಂದೆ ಸಂಜೆ ವೇಳೆ ಮನೆಯ ರೂಂನಲ್ಲಿ ನೇಣು ಬಿಗಿದುಕೊಂಡಿದ್ದು, ಪೋಷಕರು ಕೊಠಡಿಗೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಇನ್ನು, ಕಾವ್ಯಾಳ ಆತ್ಮಹತ್ಯೆಯ ಸುತ್ತ ಅನುಮಾನ ಹೆಚ್ಚಾಗಿದ್ದು, ಸ್ಥಳದಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಬದಲಾಗಿ ಕಾವ್ಯ ಬಳಸುತ್ತಿದ್ದ ಪೋನ್ ಸಹ ನಜ್ಜು ಗುಜ್ಜಾಗಿದ್ದು, ಆತ್ಮಹತ್ಯೆಗೂ ಮೊದಲು ಯಾರ ಜೊತೆಗಾದರೂ ಸಂಭಾಷಣೆ ನಡೆಸಿದ್ದರಾ? ಅಥವಾ ಇಲ್ಲವಾ? ಎನ್ನುವ ಬಗ್ಗೆ ಕೋಲಾರ ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಈಗಾಗಲೇ ಕಾವ್ಯಾಳ ತಂದೆ ಮತ್ತ ಅಕ್ಕ ಇಬ್ಬರೂ ಸಾವನ್ನಪ್ಪಿದ್ದು, ಇರುವ ಒಬ್ಬ ತಾಯಿಯೊಂದಿಗೆ ಕೋಲಾರಮ್ಮ ಬಡಾವಣೆಯಲ್ಲಿ ಜೀವನ ನಡೆಸುತ್ತಿದ್ದಳು. ಏನೂ ಕಾರಣವಿಲ್ಲದೆ ಏಕಾಏಕಿ ಮಗಳು ಆತ್ಮಹತ್ಯೆಗೆ ಶರಣಾಗಿದ್ದಕ್ಕೆ ತಾಯಿ ಪುಷ್ಪಲತಾ ಸಹ ದಿಗ್ಬ್ರಮೆ ವ್ಯಕ್ತಪಡಿಸಿದರು.
ಇದನ್ನೂ ಓದಿ: Murder Mystery: ಪ್ರೇಮಿಯೊಂದಿಗೆ ಮಂಚವೇರಲು ಗಂಡನೇ ಅಡ್ಡಿ; ಗೂಗಲ್ ಸರ್ಚ್ನಿಂದ ಕೊಲೆ ರಹಸ್ಯ ಬಯಲು!
ಮೊನ್ನೆ ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಕಾವ್ಯಾಂಜಲಿ, ತನ್ನ ತಾಯಿಗೆ ತಿನ್ನೋದಕ್ಕೆ ಏನಾದರೂ ಹೊರಗಿನಿಂದ ತೆಗೆದುಕೊಂಡು ಬರುವಂತೆ ಹೇಳಿದ್ದಾಳೆ. ತಾಯಿ ಪುಷ್ಪಲತಾ ಲಾಕ್ ಡೌನ್ ಇದೆ ಏನು ಸಿಗುವುದಿಲ್ಲ ಎಂದರೂ ಮಾತು ಕೇಳದ ಕಾವ್ಯ, ಏನಾದರೂ ತೆಗೆದುಕೊಂಡು ಬಾ ಎಂದು ಹೊರಗೆ ಕಳುಹಿಸಿದ್ದಾಳೆ. ಆದರೆ ತಾಯಿ ವಾಪಸ್ ಬರುವಷ್ಟರಲ್ಲಿ ಕಾವ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೂಡಲೇ ನೆರೆಹೊರೆಯವರ ಸಹಾಯದಿಂದ ಆಸ್ಪತ್ರೆಗೆ ರವಾನಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ತಾಯಿ ಪುಷ್ಪಲತಾ ತಿಳಿಸಿದ್ದಾರೆ.
ಅಪ್ಪ, ಅಕ್ಕನಂತೆ ಕಾವ್ಯಾ ನೇಣಿಗೆ ಶರಣು:
ಕಾವ್ಯಾ ಅವರ ಕುಟುಂಬದಲ್ಲಿ ಇಂಥದ್ದೇ ಎರಡು ದುರ್ಘಟನೆಗಳು ನಡೆದುಹೋಗಿದ್ದು, ಇದೇ ಮೊದಲ ಆತ್ಮಹತ್ಯೆಯಲ್ಲ ಎಂದು ತಿಳಿದುಬಂದಿದೆ. ಯಾವುದೊ ಕಾರಣಕ್ಕೆ ಕಾವ್ಯ ಅವರ ಅಕ್ಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಕಾವ್ಯ ತಂದೆ ಕೂಡಾ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ತಂದೆಯ ನಿಧನ ನಂತರ ಕಾವ್ಯಾಳಿಗೆ ಸರ್ಕಾರಿ ಕೆಲಸ ಅನುಕಂಪದ ಆಧಾರದ ಮೇಲೆ ಸಿಕ್ಕಿತ್ತು. ಆದರೆ ಕಾವ್ಯಾ ಸಹ ನಿಗೂಢಡವಾಗಿ ಮನೆಯಲ್ಲೆ ನೇಣಿಗೆ ಶರಣಾಗಿದ್ದಾರೆ. ಎರಡು ವರ್ಷಗಳ ಹಿಂದೆ ಗ್ರಾಮ ಪಂಚಾಯತ್ ಪಿಡಿಒ ಆಗಿದ್ದ ತಂದೆ ಆತ್ಮಹತ್ಯೆ ಮಾಡಿಕೊಂಡ ಮೇಲೆ ಅನುಕಂಪದ ಆಧಾರದಲ್ಲಿ ಕೆಲಸವನ್ನು ಕಾವ್ಯಾರಿಗೆ ಸರ್ಕಾರ ನೀಡಿತ್ತು.
ಆತ್ಮಹತ್ಯೆಗೆ ಪ್ರೇಮ ವೈಫಲ್ಯವೆ ಕಾರಣವಾ?:
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ನಗರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾವ್ಯಾ ಅವರು ಸೌಮ್ಯ ಸ್ವಭಾವದ ಯುವತಿಯಾದರು ತಾನಾಯಿತು, ತನ್ನ ಕೆಲಸವಾಯಿತು ಎಂದು ತಾಯಿಯೊಂದಿಗೆ ಜೀವನ ನಡೆಸುತ್ತಿದ್ದರು. ಆದರೆ ಮೃತದೇಹದ ಸ್ಥಳದಲ್ಲಿ ಚೂರು ಚೂರಾಗಿದ್ದ ಮೊಬೈಲ್ ಪೋನ್ ಸಿಕ್ಕಿದೆ ಎನ್ನಲಾಗಿದ್ದು, ಸಾವಿನ ಹಿಂದೆ ಪ್ರೇಮ ವೈಫಲ್ಯ ಏನಾದರೂ ಇದೆಯಾ ಎನ್ನುವ ಆಯಾಮದಲ್ಲು ಪೊಲೀಸರು ತನಿಖೆ ನಡೆಸುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಮನೆಯಲ್ಲಿ ಎರಡು ಆತ್ಮಹತ್ಯೆಗಳ ಬಳಿಕ, ಮೂರನೇ ದುರ್ಘಟನೆಯು ನಡೆದುಹೋಗಿದ್ದು, ನೆಮ್ಮದಿಯಿಂದ ಇದ್ದ ಕುಟುಂಬಕ್ಕೆ ದುಡುಕು ನಿರ್ಧಾರಗಳೇ ಬಿರುಗಾಳಿಯಂತೆ ಬಂದು ಅಪ್ಪಳಿಸಿದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ