ಜೂನ್ 27 ರಂದು ಅನುಮಾನಾಸ್ಪದವಾಗಿ ಕಾಣೆಯಾಗಿದ್ದ ಶಾಲಾ ಬಾಲಕ (School Boy) ಮರುದಿನ ಬೆಳಗ್ಗೆ ಕೆರೆಯಲ್ಲಿ (Lake) ಶವವಾಗಿ ಪತ್ತೆಯಾಗಿದ್ದಾನೆ. ಶಾಲೆಗೆಂದು ತಂದೆಯ (Father) ಜೊತೆ ಬೈಕ್ ಏರಿ ಹೋದವನು ಶವವಾಗಿ ಸಿಕ್ಕಿದ್ದು, ಮಗನ ಸಾವಿನಿಂದ ತಾಯಿಯ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಮನಕಲುಕುವ ಘಟನೆ ಕೋಲಾರ (Kolar) ತಾಲೂಕಿನ ಶೆಟ್ಟಿಮಾದಮಂಗಲ ಗ್ರಾಮದಲ್ಲಿ ನಡೆದಿದೆ. ಬೆಳಗ್ಗೆ ಶೆಟ್ಟಿಮಾದಮಂಗಲ ಕೆರೆಯಲ್ಲಿ 12 ವರ್ಷದ ಬಾಲಕನೊಬ್ಬನ ಶವ ಪತ್ತೆಯಾಗಿದ್ದು, ಮೃತ ಬಾಲಕ ಯಾರೆಂದು ನೋಡಲಾಗಿ, ಬಾಲಕ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ (Chinatamani, Chikkaballapura) ತಾಲೂಕಿನ ಮಾದರಕಲ್ಲು ಗ್ರಾಮದ ಮಣಿಕಂಠ ಎಂಬವರ ಮಗ ನಿಖಲ್ ಕುಮಾರ್ ಎಂದು ತಿಳಿದು ಬಂದಿದೆ.
6 ನೇ ತರಗತಿ ಓದುತ್ತಿದ್ದ ನಿಖಿಲ್ ಕುಮಾರ್ ನಿನ್ನೆ ಎಂದಿನಂತೆ ಪಕ್ಕದೂರಿನ ಹಿರೇಕಟ್ಟಿಗೇನಹಳ್ಳಿ ಗ್ರಾಮಕ್ಕೆ ಶಾಲೆಗೆಂದು ಹೋಗುತ್ತಿದ್ದ. ಈ ವೇಳೆ ಆತನ ತಂದೆ ಮಣಿಕಂಠ ಶಾಲೆಗೆ ಬಿಡುವೆ ಎಂದು ಹೇಳಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ.
ಕೆರೆಯಲ್ಲಿ ಬಾಲಕನ ಶವ ಪತ್ತೆ
ಆದಾದ ಮೇಲೆ ಸಂಜೆ ವೇಳೆಗೆ ಮಗ ನಿಖಿಲ್ ಕುಮಾರ್ ಮನೆಗೆ ಬಂದಿಲ್ಲ. ಮಗ ಮನೆಗೆ ಬಾರದೆ ಇದ್ದ ಹಿನ್ನೆಲೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ ಕುಟುಂಬಸ್ಥರು ಮತ್ತು ಸಂಬಂಧಿಕರು ಗ್ರಾಮದ ಸುತ್ತಮುತ್ತ ಬೆಟ್ಟ ಗುಡ್ಡಗಳು, ಕೆರೆ ಕಟ್ಟೆ ಬಳಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ನಿಖಿಲ್ ಕುಮಾರ್ ಸುಳಿವು ಮಾತ್ರ ಸಿಕ್ಕಿಲ್ಲ. ಹೀಗಿರುವಾಗ ಮರುದಿನ ಬೆಳಗ್ಗೆ ಕೋಲಾರ ತಾಲೂಕಿನ ಶಟ್ಟಿಮಾದಮಂಗಲ ಗ್ರಾಮದ ಕೆರೆಯಲ್ಲಿ ಬಾಲಕ ನಿಖಿಲ್ ಕುಮಾರ್ ಶವವಾಗಿ ಪತ್ತೆಯಾಗಿದ್ದಾನೆ.
ಇದನ್ನೂ ಓದಿ: Theft: ಟೈಯರ್ ಪಂಕ್ಚರ್ ಆಗಿದೆ ಅಂತ ಯಾಮಾರಿಸಿದ ಕಳ್ಳರು! ವಿವಿಧೆಡೆ 11 ಲಕ್ಷ ಕ್ಯಾಶ್, ಚಿನ್ನಾಭರಣ ಕದ್ದು ಪರಾರಿ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಓಡೋಡಿ ಬಂದ ನಿಖಿಲ್ ಕುಮಾರ್ ಮಾವ ಮಾರುತಿ ಹಾಗೂ ತಾತ ಮುನಿಯಪ್ಪ ನೇರವಾಗಿ ನಿಖಿಲ್ ಕುಮಾರ್‌ನನ್ನು ಅವರ ತಂದೆಯೇ ಕೊಲೆ ಮಾಡಿ ಕೆರೆಯಲ್ಲಿ ಬಿಸಾಡಿದ್ದಾನೆಂದುಆರೋಪಿಸಿದರು.
ತಂದೆಯೇ ಮೇಲೆ ಅನುಮಾನ
ಮೊನ್ನೆ ಶಾಲೆಗೆಂದು ಹೊರಟಿದ್ದ ಮಗನನ್ನು ತಂದೆ ಮಣಿಕಂಠ ಬೈಕ್‌ನಲ್ಲಿ ಕೂರಿಸಿಕೊಂಡು ಶಾಲೆಗೆ ಬಿಡುತ್ತೀನಿ ಎಂದು ಹೇಳಿ ಕರೆದುಕೊಂಡು ಹೋಗಿದ್ದ. ಈ ವೇಳೆ ಹಿರೇಕಟ್ಟಿಗೇನಹಳ್ಳಿ ಗ್ರಾಮದ ಶಾಲೆಗೆ ಬಿಡದೇ ಜೇಡರಹಳ್ಳಿ ಬಳಿ ಕರೆದುಕೊಂಡು ಬಂದಿದ್ದಾನೆ.
ಮಗನೊಂದಿಗೆ ಬೈಕ್‌ನಲ್ಲಿ ಹೋಗಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯ ಸಿಕ್ಕಿದೆ. ಹಿರೇಕಟ್ಟಿಗೇನಹಳ್ಳಿಯಲ್ಲಿರುವ ಶಾಲೆಗೆ ಹೋಗಬೇಕಾದವರು ಜೇಡರಹಳ್ಳಿಗೆ ಕರೆದುಕೊಂಡು ಹೋಗಿದ್ದೇಕೆ ಅನ್ನೋ ಅನುಮಾನ ಮೂಡುತ್ತಿದೆ. ಈ ಬಗ್ಗೆ ತಂದೆ ಮಣಿಕಂಠನನ್ನು ಮೊದಲು ಎಲ್ಲರು ಪ್ರಶ್ನೆ ಮಾಡಿದಾಗ, ನಿಖಿಲ್ ಶೌಚಕ್ಕೆ ಹೋಗಬೇಕು ಎಂದ ಅದಕ್ಕಾಗಿ ಅವನನ್ನು ಕರೆದುಕೊಂಡು ಬಂದು ಜೇಡರಹಳ್ಳಿ ಕೆರೆಯಲ್ಲಿ ಶೌಚ ಮಾಡಿಸಿ ನಂತರ ಅವನನ್ನು ಶಾಲೆಯ ಬಳಿ ಬಿಟ್ಟೆ ಎಂದು ಸುಳ್ಳು ಹೇಳಿದ್ದಾನೆ.
ಶಾಲೆಯಿಂದ 8 ಕಿಮೀ ದೂರದಲ್ಲಿರೋ ಕೆರೆ
ನಿಖಿಲ್ ಶಾಲೆ ಇರುವ ಹಿರೇಕಟ್ಟಿಗೇನಹಳ್ಳಿಗೂ ಮೃತದೇಹ ಸಿಕ್ಕಿರುವ ಸ್ಥಳ ಶೆಟ್ಟಿಮಾದಮಂಗಲ ಕೆರೆ ಪ್ರದೇಶಕ್ಕೂ ಸುಮಾರು 8 ಕಿ.ಮೀ. ದೂರವಿದೆ. ಅಷ್ಟೊಂದು ದೂರ ಬಂದಿದ್ದೇಕೆ ಅನ್ನೋ ಹಲವು ಪ್ರಶ್ನೆಗಳಿವೆ. ಹಾಗಾಗಿ ತಾತ ಮುನಿಯಪ್ಪ ಹಾಗೂ ಅವರ ಮನೆಯವರಿಗೆ ತಂದೆ ಮಣಿಕಂಠನೇ ಮಗನನ್ನು ಸಾಯಿಸಿದ್ದಾನೆ ಎಂದು ಅನುಮಾನ ಕಾಡಿದೆ.
ಅಲ್ಲದೆ ಮೊದಲಿನಿಂದಲೂ ಮಗನನ್ನು ಕಂಡರೆ ಮಣಿಕಂಠನಿಗೆ ಅಷ್ಟಕಷ್ಟೇ. ಹೀಗಾಗಿ ಮಣಿಕಂಠನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದು, ಬಳಿಕ ತಂದೆಯೇ ಕೊಲೆಗಾರನೆಂದು ಸತ್ಯ ತಿಳಿದು ಬಂದಿದೆ.
ಬೆಟ್ಟಿಂಗ್ ನಿಂದ ಹಣ ಕಳೆದುಕೊಂಡು ಸಾಲಗಾರನಾದ ಮಣಿಕಂಠ
ಕ್ಷೌರಿಕ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಮಣಿಕಂಠನಿಗೆ ಕ್ರಿಕೆಟ್ ಬೆಟ್ಟಿಂಗ್ ಮೇಲೆ ಸಿಕ್ಕಾಪಟ್ಟೆ ವ್ಯಾಮೋಹವಿದೆ. ಅದಕ್ಕಾಗಿ ಬೇರೆಯವರ ಬಳಿ ಹಣ ಸಾಲ ಮಾಡಿದ್ದಾನೆ. ಸಾಲ ಪಡೆದು ವಾಪಾಸ್ ನೀಡದೇ ಇದುದ್ದಕ್ಕೆ ಸಾಲಗಾರರು ಮೊನ್ನೆ ಮಣಿಕಂಠ ಜೊತೆಗೆ ಗಲಾಟೆ ನಡೆಸಿದ್ದಾರೆ.
ಇದನ್ನ ನೋಡಿದ್ದ ಮಗ ನಿಖಿಲ್ ಕುಮಾರ್ ತಾಯಿಗೆ ಗಲಾಟೆಯ ವಿಚಾರ ಹೇಳಿದ್ದಾನೆ. ಇದಕ್ಕೆ ಕೋಪಗೊಂಡ ಮಣಿಕಂಠ ಹೆತ್ತ ಮಗನನ್ನೇ ಕೊಲೆ ಮಾಡಿ ಇದೀಗ ಜೈಲು ಪಾಲಾಗಿದ್ದಾನೆ.
ಇದನ್ನೂ ಓದಿ: Crime News: ಮಕ್ಕಳ ಜೊತೆ ಗೃಹಿಣಿ ಅತ್ಮಹತ್ಯೆ, ಪತ್ನಿ ರುಂಡ ಮುಂಡ ಬೇರ್ಪಡಿಸಿದ ಗಂಡ, ಆತ್ಮಹತ್ಯೆಗೆ ಯತ್ನಿಸಿದವನ ರಕ್ಷಣೆ
ತಂದೆಯಿಂದಲೇ ಮಗನ ಕೊಲೆ
ಈ ಕುರಿತು ಮಾತನಾಡಿದ SP ದೇವರಾಜ್ ತಂದೆಯೇ ಮಗನನ್ನ ಕೊಲೆ ಮಾಡಿರೊದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅವರನ್ನ ಬಂಧಿಸಿ ಮುಂದಿನ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ತಂದೆಯೇ ಮಗನ ಪಾಲಿಗೆ ಮೃತ್ಯುವಾಗಿ ಪರಿಣಮಿಸಿದ್ದು, ಇನ್ನು ಬಾಳಿ ಬದುಕಬೇಕಿದ್ದ 12 ವರ್ಷದ ಕಂದಮ್ಮನನ್ನ ಕಳೆದಕೊಂಡ ತಾಯಿ ಹಾಗೂ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ