ಕೋಲಾರ (ಫೆ. 19): ಕಂಠಪೂರ್ತಿ ಕುಡಿಯುವ ಕುಡುಕರು ಕುಡಿದ ಮತ್ತಿನಲ್ಲಿ ಮಾಡುವ ಅನಾಹುತಗಳು ಒಂದೆರಡಲ್ಲ. ಕೋಲಾರದಲ್ಲಿ ಕುಡುಕನ ಮತ್ತಿನ ಏಟಿಗೆ ಪತ್ನಿಯ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ. 10 ಸಾವಿರ ರೂ. ಕೊಡಲಿಲ್ಲ ಎನ್ನುವ ಕಾರಣಕ್ಕೆ ಪತಿಯೇ ಪತ್ನಿಯನ್ನ ಕೊಲೆಗೈದು ಪರಾರಿಯಾಗಿರುವ ಘಟನೆ ಕೋಲಾರ ತಾಲೂಕಿನ ನಾಗನಾಳ ಗ್ರಾಮದಲ್ಲಿ ನಡೆದಿದೆ. 35 ವರ್ಷದ ವಿಜಯಲಕ್ಷ್ಮಿ ಎನ್ನುವ ಗೃಹಿಣಿ ಕೊಲೆಯಾದ ದುರ್ದೈವಿಯಾಗಿದ್ದಾರೆ. ಆಕೆಯ ಗಂಡ ಸೋಮಶೇಖರ ಫೆಬ್ರವರಿ 18ರ ಬೆಳಗ್ಗೆ 5 ಗಂಟೆ ವೇಳೆಯಲ್ಲಿ ಕುಡಿದ ಮತ್ತಿನಲ್ಲಿ ಹೆಂಡತಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಹಣ ಸಮೇತ ಪರಾರಿಯಾಗಿದ್ದಾನೆ.
ಕೂಲಿ ಕೆಲಸ ಮಾಡುತ್ತಿದ್ದ ಪತಿ ಸೋಮಶೇಖರ್, ಫೆಬ್ರವರಿ 13ರ ರಾತ್ರಿ ಪತ್ನಿ ವಿಜಯಲಕ್ಷ್ಮಿ ಕೂಡಿಟ್ಟಿದ್ದ 10 ಸಾವಿರ ಹಣ ನೀಡುವಂತೆ ಕುಡಿದು ಜಗಳವಾಡಿದ್ದ. ಹಣ ಕೊಡಲು ನಿರಾಕರಿಸಿದ್ದಕ್ಕೆ, ಮನೆಯಲ್ಲಿ ನೆಲದ ಮೇಲೆ ಮಲಗಿದ್ದ ಪತ್ನಿ ವಿಜಯಲಕ್ಷ್ಮಿ ತಲೆಗೆ ಸುತ್ತಿಗೆಯಿಂದ ಹೊಡೆದು ಪರಾರಿಯಾಗಿದ್ದಾನೆ. ಬೆಳಗ್ಗೆ ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ವಿಜಯಲಕ್ಷ್ಮಿಯನ್ನು ಗಮನಿಸಿದ ಅಕ್ಕಪಕ್ಕದವರು ಆಸ್ಪತ್ರೆಗೆ ರವಾನಿಸುವ ಮಧ್ಯೆ ವಿಜಯಲಕ್ಷ್ಮಿ ಅವರು ಸಾವನ್ನಪ್ಪಿದ್ದಾರೆ. ಆಕೆಯ ಸಾವಿನ ಸುದ್ದಿ ತಿಳಿದ ತಾಯಿ ರತ್ನಮ್ಮ ಹಾಗು ಸಂಬಂಧಿಕರು ಬಂದು ಗೋಳಾಡಿದ್ದಾರೆ. ರಾತ್ರಿ ನಮ್ಮೊಂದಿಗೆ ಮಾತನಾಡಿದ್ದ ಮಗಳು ಬೆಳಗ್ಗೆ ಹೆಣವಾಗಿದ್ದಾಳೆ. ಹಣದ ವಿಚಾರಕ್ಕೆ ಮಗಳನ್ನ ಅಳಿಯ ಸೋಮಶೇಖರ್ ಕೊಲೆ ಮಾಡಿದ್ದು, ಕೂಡಲೆ ಅವನನ್ನ ಹಿಡಿದು ನೇಣು ಹಾಕುವಂತೆ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Tumkur: ಶಿರಾ ಬಳಿ ಭೀಕರ ಅಪಘಾತ; ಮದುವೆ ದಿಬ್ಬಣದ ಬಸ್ ಉರುಳಿ ಮೂವರು ಸಾವು
ಘಟನಾ ಸ್ಥಳಕ್ಕೆ ಕೋಲಾರ ಹೆಚ್ಚುವರಿ ಎಸ್ಪಿ ಜಾಹ್ನವಿ, ಕೋಲಾರ ಗ್ರಾಮಾಂತರ ಪೊಲೀಸರು ಮತ್ತು ವೇಮಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಸೋಮಶೇಖರ್ ಗ್ರಾಮದ ಹೊರವಲಯದ ಬೆಟ್ಟದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನುವ ಮಾಹಿತಿ ಹಿನ್ನಲೆ, ಪೊಲೀಸರು ಬೆಳಗ್ಗೆ 7 ಗಂಟೆಯಿಂದ ನಿನ್ನೆ ಮಧ್ಯಾಹ್ನದವರೆಗ ಹುಡುಕಾಡಿದರೂ ಆರೋಪಿ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಇನ್ನು ಮೃತಳ ಸಂಬಂದಿಕರು ಆರೋಪಿ ವಿರುದ್ದ ವಾಗ್ದಾಳಿ ನಡೆಸುವಾಗ, ಆರೋಪಿಯ ಸಂಬಂಧಿಕರು ಕೆರಳಿದ್ದು, ಇಬ್ಬರ ಮಧ್ಯೆ ವಾಗ್ವಾದ ಉಂಟಾಗಿ ಪರಸ್ವರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಎರಡು ಗುಂಪಿನವರನ್ನ ಚದುರಿಸಿದರು. ಈ ಬಗ್ಗೆ ಮಾತನಾಡಿದ ಮೃತಳ ತಾಯಿ ರತ್ನಮ್ಮ, ಕುಡಿತದ ಚಟದಿಂದಲೇ ದೈಹಿಕ ಹಿಂಸೆ ನೀಡಿ ಪತ್ನಿಯನ್ನೆ ಕೊಲೆ ಮಾಡಿದ್ದಾನೆ ಎಂದು ನೋವು ತೋಡಿಕೊಂಡರು.
ಇನ್ನು ಈ ಕುಡುಕ ಮಹಾಶಯ ಸೋಮಶೇಖರ್ ಕಳೆದ 4 ವರ್ಷಗಳ ಹಿಂದೆ ಕುಡಿದ ಮತ್ತಿನಲ್ಲಿ, ತನ್ನ ದೊಡ್ಡ ಮಗನ ಕಣ್ಣಿಗೆ ಬಲವಾಗಿ ಹೊಡೆದಿದ್ದಾನೆ, ಕಣ್ಣಿಗೆ ಆದ ಗಾಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅದು ಕ್ಯಾನ್ಸರ್ ಗೆ ತಿರುಗಿ ದೊಡ್ಡ ಮಗ ಗೌತಮ್ ಸಹ ಸತ್ತು ಹೋಗಿದ್ದಾನೆ, ಇಷ್ಟೆಲ್ಲ ಆದರು ಸರಿ ಹೋಗದ ಸೋಮಶೇಖರ ಕುಡಿತದ ಚಟದಲ್ಲೆ ಮುಳುಗಿ ನಿತ್ಯ ಪತ್ನಿ ಹಾಗೂ ಮತ್ತೊಬ್ಬ ಮಗನಿಗೆ ಹಣಕ್ಕಾಗಿ ಕಾಟ ಕೊಡುತ್ತಿದ್ದ. ಕಷ್ಟ ಪಟ್ಟು ಕೂಲಿ ನಾಲಿ ಮಾಡಿಕೊಂಡು ಪೈಸೆ ಪೈಸೆ ಕೂಡಿಟ್ಟು ವಿಜಯಲಕ್ಷ್ಮಿ ಮನೆಯನ್ನು ಕಟ್ಟಿಸಿದ್ದಾರೆ. ಆದರೆ ಕೆಲ ದಿನಗಳಿಂದ ಪತ್ನಿ ವಿಜಯಲಕ್ಷ್ಮಿ ಹಣ ಕೊಟ್ಟಿರಲಿಲ್ಲ. ಇದರಿಂದ ಕೆರಳಿದ ಸೋಮಶೇಖರ ಕೊಲೆ ಮಾಡಿದ ತಕ್ಷಣ ತಲೆ ಮರೆಸಿಕೊಂಡಿದ್ದು, ಬಳಿಕ ಆರೋಪಿ ಸೋಮಶೇಖರನನ್ನು ಪೊಲೀಸರು ಹುಡುಕಿ ಬಂಧಿಸಿದ್ದಾರೆ. ಆದರೆ ಈ ಕೊಲೆಯ ಹಿಂದೆ ಸೋಮಶೇಖರನ ಜೊತೆ ಇನ್ನು ಕೆಲವರು ಇದ್ದಾರೆ ಅಂತ ಅನುಮಾನಿಸಿ ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಂಬಂಧಿಕರು ದೂರು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ