ಕೋಲಾರ: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮುಂಬರುವ ವಿಧಾನಸಭಾ ಚುನಾವಣೆಗೆ (Assembly Election) ಕ್ಷೇತ್ರ ಹುಡುಕಾಟದಲ್ಲೇ ಇನ್ನೂ ತೊಡಗಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದರೂ ಕ್ಷೇತ್ರ ಮಾತ್ರ ಇನ್ನೂ ಅಂತಿಮವಾಗಿಲ್ಲ. ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರನ್ನು ಬಾದಾಮಿ ಕ್ಷೇತ್ರದ ಜನರು ನೀವು ಪುನಃ ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂದು ಒತ್ತಾಯ ಮಾಡಿದ್ದರು. ಸಿದ್ದರಾಮಯ್ಯ ಮಾತ್ರ ಬಾದಾಮಿ ಕ್ಷೇತ್ರಕ್ಕೆ ಹೋಗಿ ಬರಲು ಸಮಯ ಹೆಚ್ಚು ತೆಗೆದುಕೊಳ್ಳುತ್ತದೆ ಅನ್ನೋ ಕಾರಣಕ್ಕೆ ಪುನಃ ಬಾದಾಮಿಯಿಂದ ಸ್ಪರ್ಧಿಸಲ್ಲ ಎಂದು ಹೇಳಿದ್ದರು. ಇದೆಲ್ಲದರ ಮಧ್ಯೆ ತಾನು ಕೆಲ ಸಮಯದ ಹಿಂದೆ ಕೋಲಾರದಲ್ಲಿ (Kolar) ಸ್ಪರ್ಧೆ ಮಾಡ್ತೀನಿ ಎಂದು ಘೋಷಣೆ ಮಾಡಿದ್ದರು.
ಕೋಲಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದಾಗ ರಾಜಕೀಯ ಪಡಸಾಲೆಯಲ್ಲಿ ಜೋರಾಗಿಯೇ ಶುರುವಾಗಿತ್ತು. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಆಗಾಗ ಹೋಗಿ ಸಂಘಟನೆ ಕಾರ್ಯವನ್ನು ಮಾಡಿದ್ದರು. ಈ ಮಧ್ಯೆ ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ಮಾತ್ರವಲ್ಲದೇ ಸ್ವಪಕ್ಷದಲ್ಲೂ ಸಂಚು ರೂಪಿಸಿದ್ದಾರೆ ಎಂದು ಚರ್ಚೆಗಳು ಶುರುವಾಗಿತ್ತು. ಇದರ ಬೆನ್ನಲ್ಲೇ ಎರಡು ದಿನದ ಹಿಂದೆ ಸ್ವತಃ ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯ ಅವರಿಗೆ ‘ನೀವು ಕೋಲಾರದಲ್ಲಿ ಸ್ಪರ್ಧಿಸಬಾರದು. ಅಲ್ಲಿ ನಿಮ್ಮನ್ನು ಸೋಲಿಸುವ ಸಂಚು ನಡೆಸಲಾಗಿದೆ’ ಹೀಗಾಗಿ ನೀವು ವರುಣಾ ಕ್ಷೇತ್ರದಲ್ಲೇ ಸ್ಪರ್ಧಿಸುವುದು ಉತ್ತಮ ಎಂದು ಹೇಳಿದ್ದಾರೆ ಎಂದು ಸುದ್ದಿಯಾಗಿತ್ತು.
ಇದನ್ನೂ ಓದಿ: Congress: ಸಿದ್ದರಾಮಯ್ಯ ನಿರ್ಧಾರ ಹಿಂದಿದ್ಯಾ ರಾಹುಲ್ ಗಾಂಧಿ ಸಲಹೆ? ರಾಜ್ಯ ರಾಜಕಾರಣದಲ್ಲಿ ಬಿಗ್ ಟ್ವಿಸ್ಟ್
'ಗೆಲ್ಲಿಸುವ ಜವಾಬ್ದಾರಿ ನಮ್ಮದು'
ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಿದ್ದಾರೆ ಎಂದು ಸುದ್ದಿಯಾದ ಬೆನ್ನಲ್ಲೇ ಸಿದ್ದರಾಮಯ್ಯ ಕೂಡ ಹೈಕಮಾಂಡ್ ಹೇಳಿದ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಕೋಲಾರದಿಂದಲೂ ಸಿದ್ದರಾಮಯ್ಯ ಹಿಂದಕ್ಕೆ ಸರಿಯುವ ಮುನ್ಸೂಚನೆ ನೀಡಿದ್ದರು. ಇದು ಕೋಲಾರ ಕ್ಷೇತ್ರದ ಜನರಿಗೆ ನಿರಾಸೆ ಉಂಟಾಗಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಸಿದ್ದರಾಮಯ್ಯ ಅಭಿಮಾನಿಗಳು ನೀವು ಕೋಲಾರದಲ್ಲೇ ಚುನಾವಣೆಗೆ ಸ್ಪರ್ಧಿಸಬೇಕು. ನಿಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಒತ್ತಾಯ ಮಾಡಿದ್ದಾರೆ.
‘ರಕ್ತ ಕೊಟ್ಟೇವು ನಿಮ್ಮನ್ನ ಬಿಡೆವು’
ಈ ಮಧ್ಯೆ ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ‘ಸಿದ್ದರಾಮಯ್ಯ ಮನೆ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದರ ಭಾಗವಾಗಿ ಕೋಲಾರ ನಗರದ ಶಾರದಾ ಥಿಯೇಟರ್ ಸರ್ಕಲ್ ನಿಂದ ಬೆಂಗಳೂರಿಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರ ತಂಡ ಹೊರಟಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮನೆ ಮುಂದೆ ಬಂದು ಕೋಲಾರದಿಂದಲೇ ಸ್ಪರ್ಧೆ ಮಾಡುವಂತೆ ಪ್ಲೇ ಕಾರ್ಡ್ ಪ್ರದರ್ಶಿಸಲು ಸಜ್ಜಾಗಿದ್ದಾರೆ. ‘ರಕ್ತ ಕೊಟ್ಟೇವು ನಿಮ್ಮನ್ನ ಬಿಡೆವು’ ಸೇರಿದಂತೆ ಹತ್ತಾರು ಕೈಬರಹಗಳಿರುವ ಪ್ಲೇಕಾರ್ಡ್ ಪ್ರದರ್ಶನ ಮಾಡಿ ಕೋಲಾರದಿಂದಲೇ ಸ್ಪರ್ಧೆ ಮಾಡುವಂತೆ ಅಭಿಮಾನಿಗಳು ಒತ್ತಾಯಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Karnataka Elections 2023: ಸಿದ್ದರಾಮಯ್ಯ ಹಿಂದೆ ಸರಿದರೆ ಯಾರಾಗುತ್ತಾರೆ ಕೋಲಾರ ಅಭ್ಯರ್ಥಿ? ಮತ್ತೆ ಶುರುವಾಯ್ತಾ ಬಣ ಬಡಿದಾಟ?
ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲದೇ ಕೋಲಾರ ಜಿಲ್ಲೆಯ ಕಾಂಗ್ರೆಸ್ ನಾಯಕರು ಕೂಡ ಇಂದು ಸಿದ್ದರಾಮಯ್ಯ ಮನೆಗೆ ಬರಲಿದ್ದು, ಬೆಳಗ್ಗೆ 9 ಗಂಟೆ ಸುಮಾರಿಗೆ ಸಿದ್ದರಾಮಯ್ಯ ಮನೆ ಮುಂದೆ ಸೇರಲು ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಸೂಚಿಸಲಾಗಿದೆ. ಕೋಲಾರದ ಎಲ್ಲಾ ನಾಯಕರು ಒಟ್ಟಾಗಿ ಸಿದ್ದರಾಮಯ್ಯ ಅವರ ಮನೆಮುಂದೆ ಶಕ್ತಿ ಪ್ರದರ್ಶನ ಮಾಡಲಿದ್ದು, ಆ ಮೂಲಕ ಕೋಲಾರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಲಿದ್ದಾರೆ.
ಇನ್ನೊಂದೆಡೆ ಕೋಲಾರದಿಂದ ಕಾಂಗ್ರೆಸ್ ಕಾರ್ಯಕರ್ತರು ಬರುವ ಸುದ್ದಿ ಸಿದ್ದರಾಮಯ್ಯ ಅವರಿಗೂ ತಲುಪಿದ್ದು, ಹೀಗಾಗಿ ಕೋಲಾರದ ಕೈ ಮುಖಂಡರು ಹಾಗು ಕಾರ್ಯಕರ್ತರ ಭೇಟಿಗಾಗಿ ಬೆಳಗ್ಗೆ 11ರ ವರೆಗೂ ಸಿದ್ದರಾಮಯ್ಯ ಸಮಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ