ಕೋಲಾರ (ನ. 14): ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಅನಿರೀಕ್ಷಿತ ಆಗಿದ್ದು, ಇವಿಎಂ ಯಂತ್ರಗಳನ್ನ ಹ್ಯಾಕ್ ಮಾಡಲಾಗಿದೆ ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಆರೋಪಿಸಿದ್ದಾರೆ. ಕೋಲಾರದ ವಡಗೂರು ಗ್ರಾಮದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ, ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಯಶಸ್ವಿಯಾಗಿ ಕೆಪಿಸಿಸಿ ಅಧ್ಯಕ್ಷ್ಯ ಸ್ಥಾನವನ್ನ ನಿಭಾಯಿಸುತ್ತಿದ್ದಾರೆ, ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಯೇ ಹೆಚ್ಚಿತ್ತು. ಆದರೆ, ಇವಿಎಂ ಯಂತ್ರಗಳನ್ನು ಹ್ಯಾಕ್ ಮಾಡಿ ಬಿಜೆಪಿ ಸುಲಭವಾಗಿ ಜಯ ಸಾಧಿಸಿದೆ, ಇದು ಕಾಂಗ್ರೆಸ್ ಸೋಲು ಅಲ್ಲವೇ ಅಲ್ಲ ಎಂದು ಕಿಡಿಕಾರಿದ್ದಾರೆ.
ಕೋಲಾರ ಜಿಲ್ಲೆಯ ಆರು ನಗರ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ್ಯ ಚುನಾವಣೆ ಮುಗಿದಿದ್ದು, ಶ್ರೀನಿವಾಸಪುರ ಮತ್ತು ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ ಸುಲಭವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದಿತ್ತು. ಆದರೆ, ತಾಲೂಕು ಮಟ್ಟದಲ್ಲಿ ನಾಯಕತ್ವ ಸಮಸ್ಯೆ, ಕಾಂಗ್ರೆಸ್ ಸದಸ್ಯರ ನಡುವೆ ಅಧಿಕಾರಕ್ಕಾಗಿ ಪೈಪೋಟಿಯಿಂದ, ಎರಡೂ ಕಡೆ ಇಂದು ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಿದೆ ಎಂದಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅರುಣ್ ಸಿಂಗ್ ನೇಮಕ; ಸಿಟಿ ರವಿಗೆ ಮೂರು ರಾಜ್ಯಗಳ ಹೊಣೆ
ಇನ್ನೂ ಈ ಬಗ್ಗೆ ಮಾತನಾಡಿದ ಜಿಲ್ಲಾಧ್ಯಕ್ಷ್ಯ ಕೆ. ಚಂದ್ರಾರೆಡ್ಡಿ, ನಮ್ಮ ವೈಪಲ್ಯದಿಂದಲೇ ಅಧಿಕಾರ ಕೈ ತಪ್ಪಿದೆ ಎಂಬುದು ಒಪ್ಪಿಕೊಳ್ಳುತ್ತೇನೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು, ಎರಡೂವರೆ ವರ್ಷದ ನಂತರ ಅಧ್ಯಕ್ಷ ಉಪಾಧ್ಯಕ್ಷ್ಯ ಮೀಸಲಾತಿ ಬದಲಾವಣೆ ಆಗಲಿದೆ. ನಂತರ ಕೈ ತಪ್ಪಿರುವ ಕಡೆ ಅಧಿಕಾರ ಹಿಡಿಯುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಹಾಗು ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಚುನಾವಣೆಯಲ್ಲಿ ಬಿಜೆಪಿ ಇವಿಎಂ ಮತಯಂತ್ರಗಳನ್ನ ಹ್ಯಾಕ್ ಮಾಡಿದೆ ಎನ್ನುವ ಆರೋಪವನ್ನ ಹಲವರು ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೋಲಾರ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ, ಕಾಂಗ್ರೆಸ್ ನವರು ಆರೋಪ ಮಾಡುವುದು ಬಿಟ್ಟು ದಾಖಲೆ ಕೊಡಬೇಕಿದೆ. ಜನಾದೇಶವನ್ನ ಎಲ್ಲರು ಒಪ್ಪಲೇಬೇಕು, ಇಲ್ಲವಾದರೆ ಮತದಾರರನ್ನ ಅವಮಾನ ಮಾಡಿದಂತೆ ಆಗುತ್ತದೆ. ಸುಮ್ಮನೆ ಬಾಯಿ ಮಾತಿಗೆ ಆರೋಪ ಮಾಡಿ ಗೊಂದಲ ಸೃಷ್ಟಿಸಬಾರದು ಎಂದು ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ