ನ್ಯೂಸ್​ 18 ರಿಯಾಲ್ಟಿ ಚೆಕ್​: ಅಂತರಾಜ್ಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರ ಕಳ್ಳಾಟ, ವಾಹನ ಸವಾರರಿಂದ ಹಣ ಸುಲಿಗೆ

ಅಂತರಾಜ್ಯ ಚೆಕ್ ಪೋಸ್ಟ್ ಗಳಲ್ಲಿನ ಅಕ್ರಮ ಬಯಲಿಗೆ ಎಳೆಯಲು ನ್ಯೂಸ್ 18 ಕನ್ನಡ  ವಾಹಿನಿ  ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಚೆಕ್‍ಪೋಸ್ಟ್ ನಲ್ಲಿ ಪೊಲೀಸರ ರೋಲ್‍ಕಾಲ್ ಬಯಲಿಗೆ ಬಂದಿದೆ

ಘಟನೆಯ ದೃಶ್ಯ

ಘಟನೆಯ ದೃಶ್ಯ

  • Share this:
ಕೋಲಾರ (ಜೂ. 5): ಮಾರಕ ಕೊರೋನಾ ತಡೆಗಟ್ಟಲು ರಾಜ್ಯಾದ್ಯಂತ   ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ರಾಜ್ಯಾದ್ಯಂತ  ಪೊಲೀಸರು ಹಗಲು ರಾತ್ರಿಯೆನ್ನದೆ  ಕೆಲಸ ಮಾಡುತ್ತಿದ್ದು, ಆದರೆ, ಕೋಲಾರ ಜಿಲ್ಲೆಯ ಆಂಧ್ರ ಗಡಿಯ ಚೆಕ್ ಪೋಸ್ಟ್ ನಲ್ಲಿ ಮಾತ್ರ ನಡೆಯುತ್ತಿರುವುದು ಬೇರೆಯೇ ಆಗಿದೆ.  ಶ್ರೀನಿವಾಸಪುರ ತಾಲೂಕಿನ  ತಾಡಿಗೋಳ್ ಕ್ರಾಸ್‍ನಲ್ಲಿ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಅಂತರಾಜ್ಯ ಚೆಕ್ ಪೋಸ್ಟ್ ತೆರೆಯಲಾಗಿದೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಪಂಚಾಯ್ತಿಯ ಸಿಬ್ಬಂದಿಯೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ, ಈ ಚೆಕ್​ಪೋಸ್ಟ್​ ಮೂಲಕ  ದಿನನಿತ್ಯ ಸಾವಿರಾರು ವಾಹನಗಳು ಇಲ್ಲಿ ಓಡಾಡುತ್ತಿದೆ. ಅಗತ್ಯ ವಸ್ತುಗಳ ವಾಹನ ಸಂಚಾರ ಓಡಾಟ ಹೊರತಾಗಿ, ಓಡಾಡುವ ವಾಹನ ಸಂಚಾರವನ್ನೇ ಬಂಡವಾಳ ಮಾಡಿಕೊಂಡಿರು ಗೌನಿಪಲ್ಲಿ ಪೊಲೀಸ್ ಠಾಣೆಯ ಪೊಲೀಸರು ಇಲ್ಲಿ ಸಾರ್ವಜನಿಕವಾಗಿ ಸುಲಿಗೆಗೆ ಇಳಿದಿದ್ದಾರೆ. ಪ್ರತಿ ಕಾರಿನ ತಪಾಸಣೆ ಮಾಡುವ ಸೋಗಿನಲ್ಲಿ, ಒಂದೊಂದು ವಾಹನ ಚಾಲಕರ ಬಳಿ 100, 200, 300 , 500 ರೂಪಾಯಿ ವರೆಗೂ ಹಣ ವಸೂಲಿ ಮಾಡಿಕೊಂಡು, ವಾಹನಗಳನ್ನ ಅಕ್ರಮವಾಗಿ ಬೆಂಗಳೂರು ಹಾಗೂ ಆಂಧ್ರದ ಕಡೆಗೆ ಸಂಚರಿಸಲು ಬಿಡುತ್ತಿದ್ದಾರೆ. 

ಅಂತರಾಜ್ಯ ಚೆಕ್ ಪೋಸ್ಟ್ ಗಳಲ್ಲಿನ ಅಕ್ರಮ ಬಯಲಿಗೆ ಎಳೆಯಲು ನ್ಯೂಸ್ 18 ಕನ್ನಡ  ವಾಹಿನಿ  ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಚೆಕ್‍ಪೋಸ್ಟ್ ನಲ್ಲಿ ಪೊಲೀಸರ ರೋಲ್‍ಕಾಲ್ ಬಯಲಿಗೆ ಬಂದಿದೆ. ಗೌನಿಪಲ್ಲಿ ಪೊಲೀಸ್ ಠಾಣೆ ಕಾನ್ಸ್‌ಟೇಬಲ್  ಶ್ರೀನಿವಾಸ್ ಹಾಗೂ ಹೋಂಗಾರ್ಡ್ ಹನುಮಪ್ಪ ಎನ್ನುವರು, 200 ರೂಪಾಯಿ ಕೊಟ್ಟರೆ ಸಾಕು ಅನುಮತಿ ಇಲ್ಲದ ವಾಹನಗಳು ಎಲ್ಲಿಗೆ ಬೇಕಾದರೂ ಸಂಚರಿಸಲು ದಾರಿ ಮಾಡಿಕೊಡುತ್ತಿದ್ದಾರೆ. ಹಣ ಕೊಡದೆ ಇರುವ ವಾಹನಗಳನ್ನ ಪುನಃ ವಾಪಾಸ್ ಕಳಿಸುತ್ತಿದ್ದಾರೆ.  ಈ ಕುರಿತು ಮಾತನಾಡಿರುವ ಆಂಧ್ರದ ಚಾಲಕರೊಬ್ಬರು,  ನಾವು ಆಗಾಗ್ಗ ಬಂದು ಮೀನು ಮಾರಾಟ ಮಾಡಿ ಹೊಗುತ್ತಿದ್ದೀವಿ. ಪೊಲೀಸರೇ ಹಣ ಕೇಳಿ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು  ಪೊಲೀಸರ ಚೆಕ್‍ಪೋಸ್ಟ್ ರೋಲ್ ಕಾಲ್ ಬಗ್ಗೆ  ಸ್ಥಳೀಯ ರೈತಪರ ಹಾಗೂ ಕಾರ್ಮಿಕಪರ ಹೋರಾಟಗಾರರು ಕಿಡಿಕಾರಿದ್ದು, ಕೂಡಲೇ ಇಂತಹ ದಂಧೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ರಾಯಲ್ಪಾಡು ಚೆಕ್ ಪೋಸ್ಟ್ ನಲ್ಲಿ ರಮೇಶ್ ಕುಮಾರ್ ಪ್ರತಿಭಟನೆ.

ಶ್ರೀನಿವಾಸಪುರ ತಾಲೂಕಿನ  ರಾಯಲ್ಪಾಡು  ಚೆಕ್ ಪೋಸ್ಟ್ ನ  ರಸ್ತೆ ಬದಿಯಲ್ಲೆ ಮಾಜಿ ಸ್ಪೀಕರ್  ರಮೇಶ್ ಕುಮಾರ್ ಏಕಾಂಗಿ  ಪ್ರತಿಭಟನೆ ನಡೆಸಿದ್ದರು.  ರಾಯಲ್ಪಾಡು ಅಂತರಾಜ್ಯ ಗಡಿಯ ಚೆಕ್ ಪೋಸ್ಟ್ ನಲ್ಲಿ, ವಾಹನಗಳಿಂದ ಪೊಲೀಸರು ಹಣವಸೂಲಿ ಮಾಡುತ್ತಿರುವ ಹಿನ್ನಲೆ, ಎಷ್ಟು ಬಾರಿ ಹೇಳಿದರು,  ಸಬ್ ಇನ್ಸ್‌ಪೆಕ್ಟರ್ ನರಸಿಂಹಮೂರ್ತಿ ಹಾಗೂ ಇತರೆ ಸಿಬ್ಬಂದಿ ದೌರ್ಜನ್ಯವಾಗಿ ಸಾರ್ವಜನಿಕರ ನಡೆದುಕೊಂಡು ಹಣ ಪಡೆದುಕೊಳ್ಳುತ್ತಿದ್ದಾರೆ.  ಕೂಡಲೇ ಅವರನ್ನ ಸೇವೆಯಿಂದ ಅಮಾನತು ಮಾಡುವಂತೆ ರಮೇಶ್ ಕುಮಾರ್ ಆಗ್ರಹಿಸಿದ್ದರು.  ರಮೇಶ್ ಕುಮಾರ್ ಪ್ರತಿಭಟನೆ ನಡೆಸುವ ವಿಚಾರ ತಿಳಿದ ಕೋಲಾರ ಜಿಲ್ಲಾ ಪೊಲೀಸ್ ಎಸ್ಪಿ ಕಾರ್ತಿಕ್ ರೆಡ್ಡಿ   ಹಾಗೂ ಇತರೆ ಹಿರಿಯ ಅಧಿಕಾರಿಗಳು ರಮೇಶ್ ಕುಮಾರ್ ಪ್ರತಿಭಟನೆ ನಡೆಸದಂತೆ ಒತ್ತಡ ಹಾಕಿ ಮನವಿ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಕರ್ತವ್ಯ ಲೊಪ ಹಿನ್ನಲೆ ನರಸಿಂಹಮೂರ್ತಿ ಯನ್ನು ಕೂಡಲೇ ಅಮಾನತು ಮಾಡಲಾಗಿತ್ತು.

ಈ ಬಗ್ಗೆ ಮಾತನಾಡಿದ್ದ ರಮೇಶ್​ ಕುಮಾರ್​,  ರಾಜ್ಯ ಪೊಲೀಸರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ನರಸಿಂಹಮೂರ್ತಿ ಅಂತಹ ಸಬ್ ಇನ್ಸ್‌ಪೆಕ್ಟರ್ ಗಳ ದೌರ್ಜನ್ಯ ಅಂತ್ಯವಾಗಬೇಕು. ಸದ್ಯಕ್ಕೆ ಅಮಾನತು ಮಾಡಿ , ತನಿಖೆಗೆ ಸೂಚನೆ ನೀಡಿರುವ ಕ್ರಮಕ್ಕೆ ಬೆಲೆನೀಡಿ ವಾಪಾಸ್ ಹೋಗುತ್ತಿದ್ದೇನೆ ಎಂದು ತಿಳಿಸಿದರು.

ಇನ್ನು  ನ್ಯೂಸ್ 18 ಕನ್ನಡ ವರದಿಗೆ ಕೋಲಾರ ಜಿಲ್ಲಾಧಿಕಾರಿ ಡಾ‌ ಆರ್   ಸೆಲ್ವಮಣಿ ಅವರು ಪ್ರತಿಕ್ರಿಯೆ ನೀಡಿದ್ದು, ಘಟನೆ ಸಂಬಂಧಿಸಿದಂತೆ,  ಪೊಲೀಸ್ ಇಲಾಖೆ ಹಾಗೂ ಹೋಂಗಾರ್ಡ್ ಇಲಾಖೆಗೆ ಸೂಚಿಸಿದ್ದೇನೆ. ಇನ್ನು ಮುಂದೆ ಚೆಕ್ ಪೋಸ್ಟ್ ಗಳಲ್ಲಿ ಅಕ್ರಮ ಆಗದಂತೆ,  ಅನಿರೀಕ್ಷಿತ ಭೇಟಿ ನೀಡಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.  ಇಂತಹ ಘಟನೆ ಆಗಬಾರದು. ವಿಡಿಯೋ ಆಧರಿಸಿ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಇನ್ನಾದರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ತಮ್ಮ ಕೆಳಹಂತದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ.
Published by:Seema R
First published: