ಬೆಂಗಳೂರು (ಏ.19) : ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಸತತ 13ನೇ ದಿನಕ್ಕೆ ಕಾಲಿಟ್ಟಿದೆ. ಯಾವುದೇ ಕಾರಣಕ್ಕೆ ಮುಷ್ಕರ ಹಿಂಪಡೆಯುವ ಪ್ರಶ್ನೆಯೇ ಇಲ್ಲ, ಮುಷ್ಕರ ಮುಂದುವರೆಯುತ್ತೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೋರಾಟದ ನೇತೃತ್ವದ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್, 6ನೇ ವೇತನ ಆಯೋಗ ಜಾರಿ ಮಾಡುವವರೆಗೂ ಮುಷ್ಕರ ಮುಂದುವರೆಯುತ್ತದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಿದ್ದೇವೆ. ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. ಸರ್ಕಾರದ ತೀರ್ಮಾನದವರೆಗೂ ಕಾಯುತ್ತೇವೆ ಎಂದರು.
ಸಾರಿಗೆ ಸತ್ಯಾಗ್ರಹ ನಾಳೆಯೂ ಮುಂದುವರೆಯುತ್ತದೆ. ಸರ್ಕಾರ ಪ್ರಿವೆಂಟಿವ್ ಅರೆಸ್ಟ್ ಅಂತಾ ಸತ್ಯಾಗ್ರಹಕ್ಕೂ ಮುನ್ನ ಅರೆಸ್ಟ್ ಮಾಡಿದ್ದಾರೆ. ಗೃಹ ಸಚಿವರ ಜೊತೆ ಸಮಾಲೋಚನೆ ಮಾಡಿದ್ದೇನೆ. ಸಾರಿಗೆ ಸಮಸ್ಯೆ ಹೇಳಿದ್ದೀವಿ, ಸರ್ಕಾರದ ಸಮಸ್ಯೆಯನ್ನೂ ಹೇಳಿದ್ದಾರೆ. ಸಿಎಂ ಬಿಒಎಸ್ವೈ ಕೊರೋನಾ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿದ್ದಾರೆ. ಇನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಬೆಂಗಳೂರಿನಲ್ಲಿಲ್ಲ. ಎರಡು ದಿನಗಳ ನಂತರ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಎಂದು ಸಚಿವ ಬೊಮ್ಮಾಯಿ ತಿಳಿಸಿದ್ದಾರೆ ಎಂದು ಕೋಡಿಹಳ್ಳಿ ಹೇಳಿದರು.
ನಮ್ಮ ಮುಂದಿನ ಚಳುವಳಿ ಶಾಂತಿಯುತವಾಗಿ ನಡೆಯುತ್ತದೆ. ಯಾರೂ ಎಲ್ಲೂ ಕಲ್ಲು ಹೊಡೆಯದಂತೆ ಮನವಿ ಮಾಡುತ್ತೇನೆ. ಸರ್ಕಾರದ ಮುಂದೆ ಮೂರು ಆಯ್ಕೆ ನೀಡಿದ್ದೇವೆ. ಸರ್ಕಾರಿ ನೌಕರರನ್ನಾಗಿ ಮಾಡಬೇಕು. 6ನೇ ವೇತನ ಆಯೋಗ ಜಾರಿ ಮಾಡಬೇಕು. 2004ರ ಕೋರ್ಟ್ನ ಆದೇಶ ಜಾರಿ ಮಾಡಬೇಕು. 6 % ಬಡ್ಡಿ ಸಮೇತ 20% ಹೈಕ್ ಕೊಡಬೇಕು ಎಂದು ಆಗ್ರಹಿಸಿದರು.
ಇನ್ನು ಜೈಲ್ ಬರೋ ಚಳವಳಿ ಸಾರಿಗೆ ನೌಕರರು ಕೈ ಬಿಟ್ಟಿದ್ದಾರೆ. ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜೈಲ್ ಬರೋ ಚಳವಳಿ ಇಲ್ಲ. ಇನ್ನು ಪ್ರತಿಭನಾನಿರತರನ್ನು ಪೊಲೀಸರು ಬಂಧಿಸಿದ್ದಾರೆ. ಅರೆಸ್ಟ್ ಮಾಡಿದವರನ್ನು ಕೋವಿಡ್ ಟೆಸ್ಟ್ಗೆ ಒಳಪಡಿಸಬೇಕು. ಇದರಿಂದ ನೌಕರರಿಗೆ ಹಾಗೂ ಪೋಲಿಸರಿಗೆ ತೊಂದರೆ ಆಗುವುದಿಲ್ಲ ಎಂದರು.
ಇದನ್ನು ಓದಿ: ಬಾರ್ಗಳ ಎದುರು ಮದ್ಯಕ್ಕಾಗಿ ಮುಗಿಬಿದ್ದ ದೆಹಲಿಯ ಜನ; ಔಷಧಿ ಬೇಡ ಮದ್ಯವೇ ಬೇಕು ಎಂದ ಮಹಿಳೆ!
ಒಂದು ಕಡೆ ಸರ್ಕಾರ ಹಾಗೂ ಸಾರಿಗೆ ನೌಕರರ ಗುದ್ದಾಟ, ಮತ್ತೊಂದು ಕಡೆ ಖಾಸಗಿ ಹಾಗೂ ಕೆಎಸ್ಆರ್ಟಿಸಿ ನಡುವೆ ಕಿತ್ತಾಟ ದಿನದಿಂದ ದಿನಕ್ಕೆ ಮುಂದುವರೆದಿದೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಹಾಗೆ ಪ್ರಯಾಣಿಕರು ಬಸ್ಸಿಗಾಗಿ ಪರದಾಡುವುದು ಕೂಡ ಮುಂದುವರೆದಿದೆ. ಜೊತೆಗೆ ಬಿಎಂಟಿಸಿ ನಿಲ್ದಾಣದಲ್ಲಿ ಖಾಸಗಿ ದರ್ಬಾರ್ ಜೋರಾಗಿದ್ದು ಮುಂದಿನ ದಿನಗಳಲ್ಲಿ ಮುಷ್ಕರ ಮತ್ತಷ್ಟು ತೀವ್ರವಾಗೊದು ಖಚಿತ ಆಗಿದೆ.
ಇದೇ ವೇಳೆ, ಮುಷ್ಕರ ನಿರತ ನೌಕರರಿಗೆ ಸರ್ಕಾರ ಶಾಕ್ ಮೇಲೆ ಶಾಕ್ ಕೊಡುತ್ತಿದೆ. ಸಾರಿಗೆ ನೌಕರರ ಸಂಬಳ ತಡೆಯಿಂದ ಹಿಡಿದು ಅಮಾನತುವರೆಗಿನ ಕ್ರಮಗಳನ್ನ ಸಾರಿಗೆ ನಿಗಮಗಳು ಕೈಗೊಳ್ಳುತ್ತಿವೆ. ಶನಿವಾರ 2,443 ಮಂದಿ ಸಿಬ್ಬಂದಿಯನ್ನು ಬಿಎಂಟಿಸಿ ಅಮಾನತುಗೊಳಿಸಿದೆ. ಕೆಲಸಕ್ಕೆ ಹಾಜರಾಗುವಂತೆ ಸಾರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದರೂ ಹಾಜರಾಗದ, ನೋಟಿಸ್ಗೆ ಉತ್ತರಿಸದ ಸಿಬ್ಬಂದಿಯನ್ನು ಅಮಾನತು ಮಾಡಲಾಗುತ್ತಿದೆ.
(ವರದಿ: ಕಾವ್ಯಾ. ವಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ