Madikeri: ಫಾರಿನ್ ವೆಹಿಕಲ್ ಅಲ್ಲ ಕಣ್ರೀ, ಇದು ಕೊಡಗಿನ ಹುಡುಗನ ದೇಸಿ ಬೈಕ್!

ಬಾಲ್ಯದಲ್ಲಿ ಬರೀ ಆಟಿಕೆಯ ಬೈಕ್ ತೆಗೆದುಕೊಂಡು ಆಟ ಆಡ್ತಾ ಇರಲಿಲ್ಲ. ಅದರ ಜೊತೆಗೆ ಅಂಥದ್ದೇ ಆಟಿಕೆಯ ಬೈಕ್ ರೆಡಿ ಮಾಡ್ತಿದ್ದ. ಇದೀಗ ದೇಸಿ ತಂತ್ರಜ್ಞಾನದಲ್ಲೇ ಬೈಕ್ ರೆಡಿ ಮಾಡುತ್ತಿರೋ ಈ ಯುವಕ, ಯುವಜನತೆಗೆ ಸ್ಫೂರ್ತಿಯಾಗಿದ್ದಾನೆ. ಈ ಸಾಧಕನ ಕಥೆ ನೀವೂ ಓದಿ...

ಆಕಾಶ್ ತಯಾರಿಸಿರುವ ದೇಸಿ ಬೈಕ್

ಆಕಾಶ್ ತಯಾರಿಸಿರುವ ದೇಸಿ ಬೈಕ್

  • Share this:
ಬಾಲ್ಯದಲ್ಲಿ (Childhood) ಆಟಿಕೆಗಳು (Toys) ಅಂದ್ರೆ ಎಲ್ಲರಿಗೂ ಕ್ರೇಜ್ ಇದ್ದೇ ಇರುತ್ತೆ. ಅದ್ರಲ್ಲೂ ಮಕ್ಕಳಿಗಂತೂ ಸ್ಮಾಲ್ ವೆಹಿಕಲ್‌ಗಳು (Small Vehicles)  ಅಂದ್ರೆ ತುಂಬಾನೇ ಇಷ್ಟ. ಆದ್ರೆ ಈ ಬಾಲಕ ಆಟಿಕೆಗಳು ಇಷ್ಟ ಅಂತ ಅದೆಲ್ಲೋ ಮಾರ್ಕೆಟ್‌ನಿಂದ ತಂದು ಆಟ ಆಡ್ತಿರಲಿಲ್ಲ. ಅಂಥದ್ದೇ ವೆಹಿಕಲ್ಸ್‌ ತಾನ್ಯಾಕೆ ತಯಾರು ಮಾಡಬಾರದು ಅಂತ ಯೋಚನೆ ಮಾಡ್ತಿದ್ದ.  ಆಟಿಕೆಯ ವಾಹನಗಳನ್ನು ಮಾಡಿ ಎಂಜಾಯ್ ಮಾಡಿದ್ದ. ಆಗಲೇ ಬಾಲಕನಿಗೆ ಸ್ವತಃ ನೈಜ ವಾಹನಗಳ ತಯಾರು ಮಾಡ್ಬೇಕು ಅನ್ನೋ ಆಸೆ ಚಿಗುರೊಡೆದಿತ್ತು. ಶಾಲೆ (School) ಮುಗಿಸಿ ಕಾಲೇಜು (College) ಹಂತಕ್ಕೆ ಹೋಗುವಷ್ಟರಲ್ಲಿ ಆ ಆಸೆ ಬೆಟ್ಟದಷ್ಟಾಗಿತ್ತು. ಅದಕ್ಕೆ ನೀರೆರೆದಿದ್ದು ಆತನ ಐಟಿಐ (ITI) ಶಿಕ್ಷಣ. ಈಗ ಸ್ವತಃ ವಾಹನಗಳ ತಯಾರು ಮಾಡಿ ಹತ್ತಾರು ವಾಹನಗಳ ಮಾರಾಟದ ಮೂಲಕ ತನ್ನದೆ ಛಾಪು ಮೂಡಿಸಿದ್ದಾನೆ ಆ ಯುವಕ. ಹಾಗಿದ್ರೆ ಯಾರು ಆ ಯುವ ಸಾಧಕ? ಅವ್ರ ಸಾಧನೆಯೇನು? ಇಲ್ಲಿದೆ ನೋಡಿ ಯುವಕರಿಗೆ ಸ್ಫೂರ್ತಿ ತುಂಬುವ ಸ್ಟೋರಿ…

ಸಾಧನೆಯಲ್ಲಿ ‘ಆಕಾಶ’ಕ್ಕೆ ಏರುವ ಕನಸು

ಈ ಕಥೆಯ ಹೀರೋ ಆಕಾಶ್. ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದ ನಿವಾಸಿಯಾದ ಆಕಾಶ್, ಐಟಿಐಯಲ್ಲಿ ಎಂಎಂವಿ ಮುಗಿಸಿ, ಮೊದಲು ಹಲವು ವಾಹನ ತಯಾರಿಕಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರು. ನಂತರ ತಾನೇ ಏಕೆ ಸ್ವತಃ ವಾಹನಗಳನ್ನು ತಯಾರಿಸಬಾರದೆಂಬ ಆಸೆಯಿಂದ ತೀವ್ರವಾಗಿ ಯೋಚಿಸಿ ಕೆಲಸಕ್ಕೆ ಗುಡ್ ಬೈ ಹೇಳಿ ಮನೆ ಕಡೆ ಮುಖ ಮಾಡಿದ್ದ.

ಹಲವು ವಾಹನಗಳ ತಯಾರಿಕೆ

ಆರಂಭದಲ್ಲಿ ಪೆಡಲಿಂಗ್ ಮಾಡುವ ಬೈಕ್, ಕಾರು ಸಿದ್ಧಗೊಳಿಸಿದ ಆಕಾಶ್, ನಂತರ ಅವುಗಳಿಗೆ ಎಂಜಿನ್ ಫಿಕ್ಸ್ ಮಾಡಿ ನೈಜ ವಾಹನಗಳನ್ನೇ ಸಿದ್ಧಗೊಳಿಸಿ ಯಶಸ್ವಿಯಾದರು. ಇದೀಗ ಕಳೆದ ಕೆಲವು ವರ್ಷಗಳಿಂದ ಬೈಕ್, ಕೃಷಿ ಯಂತ್ರೋಪಕರಣ ಸೇರಿದಂತೆ ಹಲವು ವಾಹನಗಳನ್ನು ತಯಾರಿಸಿ ಸೈ ಅನ್ನಿಸಿಕೊಂಡಿದ್ದಾರೆ.

ಇದನ್ನೂ ಓದಿ: Bengaluru: ಅಪ್ಪನ ಬೈಕ್​ಗಾಗಿ 25 ವರ್ಷ ಹುಡುಕಾಡಿದ ಬೆಂಗಳೂರಿನ ಟೆಕ್ಕಿ, ಅದು ಸಿಕ್ಕ ಕತೆಯೇ ರೋಚಕ!

ಜನರಿಗೆ ಬೇಕಾದ ದರದಲ್ಲಿ ವಾಹನ ತಯಾರು

ಜನರಿಗೆ ಬೇಕಾಗುವ ವಾಹನಗಳನ್ನು, ಜನರಿಗೆ ಬೇಕಾದ ಬೆಲೆಯ ಪ್ರತಿಯೊಂದು ಬಿಡಿಭಾಗವನ್ನು  ತಂದು ಮನೆಯಲ್ಲಿ ಜನರಿಗೆ ಬೇಕಾದ ವೆಚ್ಚದಲ್ಲಿ ವಾಹನಗಳನ್ನು ರೆಡಿಮಾಡಿ ಕೊಡುತ್ತಿದ್ದಾರೆ ಆಕಾಶ್. ಇದುವರೆಗೆ 6 ವಿಥೌಟ್ ಗೇರ್ ಬೈಕ್, 2 ವಿಥ್ ಗೇರ್ ಸ್ಕೂಟರ್ ತಯಾರಿಸಿ ಮಾರಾಟ ಮಾಡಿದ್ದಾರೆ.

ದೇಶಿ ವಾಹನಕ್ಕೆ ರೆಸಾರ್ಟ್ ಮಾಲೀಕರಿಂದ ಬೇಡಿಕೆ

ಆಕಾಶ್ ಇದೀಗ ವಿಶೇಷ ರೀತಿಯ ಬೈಕ್ ತಯಾರಿಸಿದ್ದಾರೆ. ಇದು ವಿಶೇಷವಾಗಿದ್ದು ನೋಡಲು ಆಕರ್ಷಕವಾಗಿವೆ. ಇಷ್ಟಕ್ಕೆ ಯುವಕನ ಉತ್ಸಾಹ ಕಡಿಮೆಯಾಗಿಲ್ಲ. ಇದುವರೆಗೆ ಇಂಧನಚಾಲಿತ ವಾಹನಗಳನ್ನು ತಯಾರು ಮಾಡಿರು ಆಕಾಶ್,  ಇದೀಗ ಬ್ಯಾಟರಿಚಾಲಿತ ವಾಹನಗಳನ್ನು ತಯಾರು ಮಾಡಿದ್ದಾರೆ. ಇನ್ನೂ ವಿಶೇಷ ಎಂದರೆ ಆಕಾಶ್ ತಯಾರಿಸಿದ ಬೈಕ್ ಹಾಗೂ ಸಣ್ಣ ಕಾರುಗಳು ಕೊಡಗಿನ ರೆಸಾರ್ಟ್, ಹೋಂಸ್ಟೇಗಳಲ್ಲಿ ಉಪಯೋಗಿಸಲು ಹೇಳಿ ಮಾಡಿಸಿದಂತಿವೆ. ಹೀಗಾಗಿ ಕೆಲವು ರೆಸಾರ್ಟ್ ಗಳ ಮಾಲೀಕರು ಆಕಾಶ್‌ಗೆ ಆರ್ಡರ್ ನೀಡಿ ವಾಹನಗಳನ್ನು  ಮಾಡಿಸಿಕೊಂಡಿದ್ದಾರೆ.

ಕೃಷಿ ಯಂತ್ರೋಪಕರಣಗಳ ತಯಾರಿಕೆಯಲ್ಲಿಯೂ ಆಸಕ್ತಿ

ಬೈಕ್, ಕಾರುಗಳ ಆರ್ಡರ್ ಇಲ್ಲದ ವೇಳೆ ಕೊಡಗಿನ ಕೃಷಿಗೂ ಅನುಕೂಲವಾಗುವಂತೆ ಕೃಷಿ ಯಂತ್ರೋಪರಕಣಗಳ ತಯಾರಿಸುತ್ತಿದ್ದಾರೆ ಆಕಾಶ್. ಏಲಕ್ಕಿ ಹಾಗೂ ಕಾಳು ಮೆಣಸು ಒಣಗಿಸುವ ಯಂತ್ರಗಳು, ಮೆಣಸು ಬಿಡಿಸುವ ಯಂತ್ರಗಳನ್ನು ತಾನೇ ತಯಾರು ಮಾಡುತ್ತಿರುವುದು ವಿಶೇಷ. ವಿವಿಧ ತೂಕದ ಸಾಮಾಗ್ರಿ ಸಾಗಿಸುವ 4 ಟ್ರ್ಯಾಲಿಗಳನ್ನು ತಯಾರಿಸಿ ಮಾರಾಟ ಮಾಡಿದ್ದಾರೆ.

ಇದನ್ನೂ ಓದಿ: "ನನ್ನ ಹೆಂಡ್ತಿಗೆ ಹೆಣ್ಣೇ ಹುಟ್ಟಲಿ" ಎಂದು ಆಂಜನೇಯನಿಗೆ ಪತ್ರ! ಹನುಮನ ಬಾಲದಷ್ಟು ದೊಡ್ಡದು ಭಕ್ತರ ಬೇಡಿಕೆ

ಆಕಾಶ್ ಪ್ರತಿಭೆಗೆ ಮನ್ನಣೆ

ಆಕಾಶ್ ಅವರ ದೇಶಿಯ ವಾಹನಗಳ ತಯಾರು ಮಾಡುವ ಈ ಸಾಧನೆಯನ್ನು ಗಮನಿಸಿರುವ ಕೆಲವು ಸಂಘ ಸಂಸ್ಥೆಗಳು ಸಹಾಯಾಸ್ತ ಚಾಚಲು ಮುಂದಾಗಿದ್ದು ,ಶೋ ರೂಂ ಒಂದನ್ನು ಮಾಡಿಕೊಡಲು ಚಿಂತನೆ ನಡೆಸಿವೆ. ಆ ಮೂಲಕ ಕೊಡಗಿನ ಗ್ರಾಮೀಣ ಪ್ರತಿಭೆ ಹೊರಜಗತ್ತಿಗೆ ಗೊತ್ತಾದರೆ ಅವಕಾಶಗಳು ತಾನಾಗಿಯೇ ಬರಬಹುದು ಎನ್ನುತ್ತಾರೆ ಸ್ಥಳೀಯರು.

ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ  ಎಲೆಮರೆ ಕಾಯಿಯಂತಿರುವ ಇಂತಹ ಪ್ರತಿಭೆಗಳಿಗೆ ಉತ್ತಮ ಅವಕಾಶ ಒದಗಿಬರಲಿ ಎನ್ನೋದು ನಮ್ಮ ಆಶಯ.
Published by:Annappa Achari
First published: