• Home
  • »
  • News
  • »
  • state
  • »
  • Theerthodbhava: ತಲಕಾವೇರಿಯಲ್ಲಿ ಮೇಷ ಲಗ್ನದಲ್ಲಿ ತೀರ್ಥೋದ್ಭವ; ಬ್ರಹ್ಮ ಕುಂಡಿಕೆಯಲ್ಲಿ ತೀರ್ಥ ರೂಪಿಣಿಯಾದ ಕಾವೇರಿ

Theerthodbhava: ತಲಕಾವೇರಿಯಲ್ಲಿ ಮೇಷ ಲಗ್ನದಲ್ಲಿ ತೀರ್ಥೋದ್ಭವ; ಬ್ರಹ್ಮ ಕುಂಡಿಕೆಯಲ್ಲಿ ತೀರ್ಥ ರೂಪಿಣಿಯಾದ ಕಾವೇರಿ

ತಲಕಾವೇರಿಯಲ್ಲಿ ತೀರ್ಥೋದ್ಭವ

ತಲಕಾವೇರಿಯಲ್ಲಿ ತೀರ್ಥೋದ್ಭವ

ಇಂದು (ಅ.17) ಸಂಜೆ 7 ಗಂಟೆ 21 ನಿಮಿಷಕ್ಕೆ ಮೇಷ ಲಗ್ನದಲ್ಲಿ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವವಾಗಿದೆ. ಈ ಅದ್ಭುತವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಿದೆ. (Talacauvery Theerthodbhava) ಇಂದು (ಅ.17) ಸಂಜೆ 7 ಗಂಟೆ 21 ನಿಮಿಷಕ್ಕೆ ಮೇಷ ಲಗ್ನದಲ್ಲಿ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವವಾಗಿದೆ. ತುಲಾ ಮಾಸದ ಮೊದಲ ದಿನ ಅಂದರೆ ತುಲಾ ಸಂಕ್ರಮಣದ ದಿನ ಪ್ರತಿ ವರ್ಷ ಕಾವೇರಿ ಕೊಡಗಿನ ಮಡಿಕೇರಿ ತಾಲ್ಲೂಕಿನ ತಲಕಾವೇರಿಯ ಭ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಆವಿರ್ಭವಿಸಿ ಭಕ್ತರಿಗೆ ದರ್ಶನ ನೀಡುತ್ತಾಳೆ.


ಭಕ್ತರ ಸಾಗರವೇ ಹರಿದು ಬಂದಿದೆ


ಒಂದೆಡೆ ಪವಿತ್ರ ಕುಂಡಿಕೆ ಕಡೆಗೆ ಹೋಗಲು ಅವಕಾಶವಿದ್ದರೆ ಮತ್ತೊಂದೆಡೆ ಅಲ್ಲಿಂದ ಹೊರಗೆ ಬರಲು ವ್ಯವಸ್ಥೆ ಕಲ್ಪಿಸಲಾಗಿದೆ. ಅದಕ್ಕೂ ಮೊದಲು ತೀರ್ಥ ಕುಂಡಿಕೆ ಮತ್ತು ಕೊಳದ ಬಳಿಗೆ ಯಾರಿಗೂ ಹೋಗಲು ಅವಕಾಶವಿಲ್ಲ. ಸಂಪೂರ್ಣ ಬ್ಯಾರಿಕೇಡ್ ಅಳವಡಿಸಿ ನಿರ್ಬಂಧಿಸಲಾಗಿದೆ. ತೀರ್ಥ ಕೊಳದಲ್ಲಿ ಈ ಬಾರಿ ಪುಣ್ಯಸ್ನಾನಕ್ಕೂ ಅವಕಾಶ ನೀಡಲಾಗಿದ್ದು, ಭಕ್ತರು ಪುಣ್ಯಸ್ನಾನ ಮಾಡಿ ಬಳಿಕ ಕಾವೇರಿ ತೀರ್ಥವನ್ನು ಪಡೆಯಲು ಅವಕಾಶ ನೀಡಲಾಗಿದೆ. ಇನ್ನು ವಿವಿಐಪಿಗಳು ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಪತ್ಯೇಕ ವ್ಯವಸ್ಥೆ ಮಾಡಲಾಗಿತ್ತು.


ಎಲ್ಲೆಡೆ ಬಿಗಿ ಪೊಲೀಸ್​ ಬಂದೋಬಸ್ತ್​

ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ತಲಕಾವೇರಿಯಿಂದ ಭಾಗಮಂಡಲದವರೆಗೆ 10 ಕಿಲೋ ಮೀಟರ್ ದೂರದವರೆಗೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಎಲ್ಲೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗಾಗಿ 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮೂವರು ಡಿವೈಎಸ್‍ಪಿಗಳು, 7 ಎನ್‍ಸ್ಪೆಕ್ಟರ್​ಗಳು, 17 ಸಬ್‍ಇನ್‍ಸ್ಪೆಕ್ಟರ್​, 300 ಪೊಲೀಸರು ಹಾಗೂ ಮೀಸಲು ಸಶಸ್ತ್ರ ಪಡೆಯ 100 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.




ಕಾವೇರಿ ಕಥೆ!


ಕವೇರ ಮುನಿಗಳು ಪುತ್ರ ಸಂತಾನಕ್ಕಾಗಿ, ಬ್ರಹ್ಮಗಿರಿ ಬೆಟ್ಟದ್ದಲ್ಲಿ ಬ್ರಹ್ಮದೇವ ಕುರಿತು ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡುತ್ತಾರೆ. ಮುನಿಗಳ ತಪಸ್ಸಿಗೆ ಮೆಚ್ಚಿ ಬ್ರಹ್ಮದೇವ ಪ್ರತ್ಯಕ್ಷನಾಗುತ್ತಾನೆ. ಮಕ್ಕಳನ್ನು ನೀಡುವಂತೆ ಬ್ರಹ್ಮದೇವನಲ್ಲಿ ಕವೇರ ಮುನಿ ಪ್ರಾರ್ಥಿಸುತ್ತಾರೆ. ಆದರೆ ಕಳೆದ ಜನ್ಮದ ಕರ್ಮಫಲಗಳಿಂದಾಗಿ ಕವೇರಮುನಿಗೆ ಮಕ್ಕಳ‌ ಭಾಗ್ಯವಿರುವುದಿಲ್ಲ. ಹಾಗಾಗಿ ಬ್ರಹ್ಮನ ಮಾನಸ ಪುತ್ರಿ‌ ಲೋಪಾಮುದ್ರೆಯನ್ನೇ ಕವೇರ ಮುನಿಗೆ ದಯಪಾಲಿಸುತ್ತಾನೆ.




ಹಾಗೆ ಲೋಪಾಮುದ್ರೆ ಕವೇರನ‌ ಮಗಳಾಗಿ ಕಾವೇರಿಯಾಗುತ್ತಾಳೆ. ಹಲವು ವರ್ಷಗಳ ಬಳಿಕ ಅಗಸ್ತ್ಯ ಮುನಿ ಬ್ರಹ್ಮಗಿರಿಗೆ ಬರುತ್ತಾರೆ. ಅಲ್ಲಿ ಬಹಳ ಸುಂದರಿಯಾಗಿದ್ದ ಕಾವೇರಿಯ‌ ಮೇಲೆ‌ ಮೋಹಗೊಳ್ಳುತ್ತಾರೆ. ಕಾವೇರಿಯನ್ನು ವಿವಾಹಮಾಡಿಕೊಡುವಂತೆ ಕವೇರ‌ ಮುನಿಯನ್ನು ಕೋರುತ್ತಾರೆ. ಆದರೆ ಕಾವೇರಿ ಒಂದು ಷರತ್ತಿನೊಂದಿಗೆ ವಿವಾಹಕ್ಕೆ ಸಮ್ಮತಿಸುತ್ತಾಳೆ. ನನ್ನನ್ನು ಯಾವತ್ತೂ ಬಿಟ್ಟು ಹೋಗಕೂಡದೆಂದು ಅಗಸ್ತ್ಯ ಮುನಿಗೆ ಷರತ್ತು ವಿಧಿಸುತ್ತಾಳೆ.


ಒಂದು ದಿನ ಅಗಸ್ತ್ಯ ಮುನಿ ಸಂಧ್ಯಾವಂದನೆ ಮಾಡಲೆಂದು ನದಿಗೆ ಇಳಿಯುತ್ತಾರೆ. ಈ ಸಂದರ್ಭದಲ್ಲಿ ಕಾವೇರಿಯನ್ನು ನೀರಿನ‌ ರೂಪದಲ್ಲಿ ತನ್ನ ಕಮಂಡಲಿನಿಯಲ್ಲಿ ಕೂಡಿಟ್ಟು ತೆರಳುತ್ತಾರೆ. ಇದನ್ನು ಗಮಿನಸಿದ ಗಣಪತಿ ಕಾಗೆ ರೂಪದಲ್ಲಿ ಬಂದು ಕಮಂಡಲಿನಿಯನ್ನು ಮಗುಚಿ ಹಾಕುತ್ತಾನೆ. ಈ ಕಮಂಡಲಿನಿಯಿಂದ ನೀರೆ ಕಾವೇರಿಯಾಗಿ ಹರಿಯುತ್ತಾಳೆ.


ಇದನ್ನೂ ಓದಿ: Vokkaliga Community: ಒಕ್ಕಲಿಗರಿಗೂ ಬೇಕು ಮೀಸಲಾತಿ; ಹೋರಾಟದ ಸುಳಿವು ಕೊಟ್ರು ನಿರ್ಮಲಾನಂದನಾಥ ಸ್ವಾಮೀಜಿ!


ಆರಂಭದಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಕಾವೇರಿ ಭಾಗಮಂಡಲದ‌ ಸಮೀಪ ದರ್ಶನ‌ ನೀಡುತ್ತಾಳೆ. ಈ ಸಂದರ್ಭ ಅಗಸ್ತ್ಯ ಮುನಿ ಕಾವೇರಿಯನ್ನು ತನ್ನನ್ನ ಬಿಟ್ಟು ತೆರಳದಂತೆ ಪರಿ ಪರಿಯಾಗಿ ಬೇಡುತ್ತಾರೆ. ಆದರೆ ಇದಕ್ಕೊಪ್ಪದ ಕಾವೇರಿ ಲೋಕ ಪಾವನಗೊಳಿಸಲು ತಾನು ನದಿಯಾಗಿ ಹರಿಯುವುದಾಗಿ ಹೇಳುತ್ತಾಳೆ. ಆದರೆ ವರ್ಷಕ್ಕೊಮ್ಮೆ ತುಲಾ ಸಂಕ್ರಮಣದ ದಿನ ಬ್ರಹ್ಮಗಿರಿಯ ಬ್ರಹ್ಮ ಗುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಉಕ್ಕಿ ಹರಿದು ದರ್ಶನ ನೀಡುವುದಾಗಿ ಭರವಸೆ ನೀಡುತ್ತಾಳೆ. ಅದರಂತೆ ಪ್ರತವರ್ಷ ತುಲಾ‌ಸಂಕ್ರಮಣದ ದಿನ ಸೂರ್ಯ ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶ ಮಾಡುವ ಆ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗುತ್ತದೆ ಎಂಬ ನಂಬಿಕೆ ಇದೆ.


Published by:ಪಾವನ ಎಚ್ ಎಸ್
First published: