Kodagu Rains: ಕೊಡಗಿನಲ್ಲಿ ನಿಲ್ಲದ ಪ್ರವಾಹ; ಆ. 11ರವರೆಗೆ ಆರೆಂಜ್ ಅಲರ್ಟ್ ಘೋಷಣೆ
Karnataka Rain: ಭೂಕುಸಿತದಿಂದ ಕೊಡಗಿನಲ್ಲಿ 8 ಕಡೆ ರಸ್ತೆ ಸಂಚಾರ ಬಂದ್ ಆಗಿದೆ. ಒಟ್ಟು 566 ಜನರನ್ನು 9 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಕೊಡಗು ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ.
ಕೊಡಗಿನ ಕೊಡಂಗೇರಿಯಲ್ಲಿ ಸಿಲುಕಿದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುತ್ತಿರುವ ರಕ್ಷಣಾ ಸಿಬ್ಬಂದಿ
ಕೊಡಗು (ಆ. 8): ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ 9 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಇದುವರೆಗೆ ಜಿಲ್ಲೆಯ 52 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, 14 ಪ್ರದೇಶಗಳಲ್ಲಿ ಭೂಕುಸಿತವಾಗಿದೆ. ಹೀಗಾಗಿ, ಇಂದಿನಿಂದ ಆ. 11ರವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೊಡಗಿನಲ್ಲಿ ಈ ವರ್ಷವೂ ಪ್ರವಾಹದ ಭೀತಿ ಎದುರಾಗಿದ್ದು, ನಾಲ್ಕೈದು ದಿನ ಸುರಿದ ಮಳೆಗೆ ಕೊಡಗಿನ ಜನರು ಕಂಗಾಲಾಗಿದ್ದಾರೆ. ಹೀಗಾಗಿ, ಇಂದು ಬೆಳಗ್ಗೆಯಿಂದ ಆ. 11ರ ಬೆಳಗ್ಗೆಯವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೊಡಗಿನಲ್ಲಿ ನಾಲ್ಕೈದು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನದಿಪಾತ್ರದ ಭಾಗದಲ್ಲಿ ಮತ್ತು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ರಿಸ್ಥಿತಿ ನಿರ್ಮಾಣವಾಗಿದೆ.
ಭಾಗಮಂಡಲದ ಬ್ರಹ್ಮಗಿರಿಯಲ್ಲಿ ಗುಡ್ಡವೇ ಕುಸಿದು, ತಲಕಾವೇರಿ ಅರ್ಚಕರ ಮನೆ, ಕುಟುಂಬ, ಹಸುಗಳು ಜಲಸಮಾಧಿಯಾಗಿವೆ. ಎಸ್ಡಿಆರ್ಎಫ್ ತಂಡಗಳು ಈಗಾಗಲೇ ಕೊಡಗಿನಲ್ಲಿ ಬೀಡುಬಿಟ್ಟಿದ್ದು, ಪ್ರವಾಹದ ಅನಾಹುತಗಳನ್ನು ತಪ್ಪಿಸಲು ಸಿದ್ಧವಾಗಿವೆ. ಪ್ರವಾಹ, ಭೂಕುಸಿತದಿಂದ ಕೊಡಗಿನಲ್ಲಿ 8 ಕಡೆ ರಸ್ತೆ ಸಂಚಾರ ಬಂದ್ ಆಗಿದೆ. ಒಟ್ಟು 566 ಜನರನ್ನು 9 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಕೊಡಗು ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ.
ಭಾಗಮಂಡಲ ಬಳಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದವರ ಶೋಧ ಕಾರ್ಯದ ಕಾರ್ಯಚರಣೆಯನ್ನು ನಿನ್ನೆ ಸ್ಥಗಿತಗೊಳಿಸಲಾಗಿತ್ತು. ನಿರಂತರ ಮಳೆಯಿಂದ ಕಾರ್ಯಚರಣೆಗೆ ಅಡ್ಡಿಯಾಗಿತ್ತು. ಹೀಗಾಗಿ, ಇಂದು ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯಿದೆ. ತಲಕಾವೇರಿ ಅರ್ಚಕ ನಾರಾಯಣ ಆಚಾರ್ಯ ಅವರ ಕುಟುಂಬ ಗುಡ್ಡದ ಮಣ್ಣಿನಡಿ ಸಿಲುಕಿ 2 ದಿನಗಳು ಕಳೆದಿವೆ. ಹೀಗಾಗಿ, ಅವರು ಬದಕುಇರುವ ಸಾಧ್ಯತೆ ಕಡಿಮೆ. ಭಾಗಮಂಡಲ, ತಲಕಾವೇರಿ ಸುತ್ತಮುತ್ತ 170 ಮಿಲಿ ಮೀಟರ್ ಮಳೆ ಸುರಿಯುತ್ತಿದ್ದಂತೆ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆಯಾಗಿತ್ತು. ಗುರುವಾರ ಮುಂಜಾನೆ ಬೆಟ್ಟ ಕುಸಿದು ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ಯ ಮತ್ತು ಅವರ ಕುಟುಂಬದ ಐವರು ಕೊಚ್ಚಿಹೋಗಿದ್ದರು.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ