Kodagu Rain: ಕೊಡಗಿನಲ್ಲಿ ಮಳೆ ಅಬ್ಬರಕ್ಕೆ ಪಾರಾಣೆ ಮೂರ್ನಾಡು ಸಂಪರ್ಕ ಕಡಿತ

ಒಂದೆಡೆ ಕಾವೇರಿ ನದಿ ಹೆಮ್ಮಾಡು ಗ್ರಾಮವನ್ನು ಸುತ್ತುವರಿದಿದ್ದರೆ ಮತ್ತೊಂದೆಡೆ ಚೆಲಾವರ ಜಲಪಾತದಿಂದ ಹರಿಯುವ ಹೊಳೆ ಹೆಮ್ಮಾಡು ಮತ್ತು ಭೇತ್ರಿ ಗ್ರಾಮವನ್ನು ಸುತ್ತುವರಿದಿದೆ

ರಸ್ತೆ ಮಾರ್ಗ ಕಡಿತವಾಗಿರುವ ದೃಶ್ಯ

ರಸ್ತೆ ಮಾರ್ಗ ಕಡಿತವಾಗಿರುವ ದೃಶ್ಯ

  • Share this:
ಕೊಡಗು (ಜು. 22):  ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ವಿರಾಜಪೇಟೆ ತಾಲ್ಲೂಕಿನ ಭೇತ್ರಿ ಮತ್ತು ಹೆಮ್ಮಾಡುವಿನಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರವಾಹದ ಆತಂಕ ಎದುರಾಗಿದೆ. ಕಾವೇರಿ ಹೊಳೆಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಈ ಎರಡು ಗ್ರಾಮಗಳ ನೂರು ಕುಟುಂಬಗಳಿಗೆ ಪಂಚಾಯಿತಿ ಅಧಿಕಾರಿಗಳು ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೊಟೀಸ್ ಜಾರಿ ಮಾಡಿದ್ದಾರೆ. ಇದು ಈ ನೂರಾರು ಕುಟುಂಬಗಳನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಒಂದೆಡೆ ಕಾವೇರಿ ನದಿ ಹೆಮ್ಮಾಡು ಗ್ರಾಮವನ್ನು ಸುತ್ತುವರಿದಿದ್ದರೆ ಮತ್ತೊಂದೆಡೆ ಚೆಲಾವರ ಜಲಪಾತದಿಂದ ಹರಿಯುವ ಹೊಳೆ ಹೆಮ್ಮಾಡು ಮತ್ತು ಭೇತ್ರಿ ಗ್ರಾಮವನ್ನು ಸುತ್ತುವರಿದಿದೆ. ಹೀಗಾಗಿ ಈ ಎರಡು ಗ್ರಾಮಗಳು ಸಂಪೂರ್ಣ ಜಲಾವೃತಗೊಂಡು ದ್ವೀಪದಂತಾಗುತ್ತಿವೆ. ಹೆಮ್ಮಾಡುವಿಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ನೂತನವಾಗಿ ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ ಎರಡು ವರ್ಷಗಳಾದರೂ ಕಾಮಗಾರಿ ಪೂರ್ಣಗೊಳಿಸದೇ ಇರುವುದು ಹೆಮ್ಮಾಡು ಗ್ರಾಮದ ಹತ್ತಾರು ಕುಟುಂಬಗಳನ್ನು ಆತಂಕಕ್ಕೆ ದೂಡಿದೆ ಎನ್ನೋದು ಸ್ಥಳೀಯರಾದ ದೇವಯ್ಯ ಅವರ ಆತಂಕ. ನಾಲ್ಕೇರಿ ಗ್ರಾಮದ ಹಲವು ಕುಟುಂಬಗಳೂ ಇದೇ ಆತಂಕದಲ್ಲಿವೆ ಎನ್ನೋದು ಪಂಚಾಯಿತಿ ಸದಸ್ಯ ಮೋಹನ್ ಅವರ ಆತಂಕ. ಮಳೆ ಹೀಗೆ ಮುಂದುವರಿದಲ್ಲಿ ಎರಡು ಗ್ರಾಮಗಳ ನೂರು ಕುಟುಂಬಗಳು ಅಪಾಯಕ್ಕೆ ಸಿಲುಕುವ ಆತಂಕವಿದೆ.

ಇನ್ನು ಭೇತ್ರಿಯಲ್ಲಿ ಕಾವೇರಿ ಹೊಳೆ ತುಂಬಿ ಹರಿಯುತ್ತಿದ್ದು, ಇನ್ನು ನಾಲ್ಕೈದು ಅಡಿ ನೀರು ಹೊಳೆಯಲ್ಲಿ ಜಾಸ್ತಿ ಆದಲ್ಲಿ ಭೇತ್ರಿ ಸೇತುವೆ ಮೇಲೆ ಕಾವೇರಿ ನೀರು ಹರಿಯಲಿದೆ. ಒಂದು ವೇಳೆ ಹಾಗೆ ಆದಲ್ಲಿ ಮಡಿಕೇರಿ ವಿರಾಜಪೇಟೆ ನಡುವಿನ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಮತ್ತೊಂದೆಡೆ ಮಡಿಕೇರಿ ತಾಲ್ಲೂಕಿನ ಕಣ್ವ ಬಲಮುರಿಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಪಾರಾಣೆ ಸೇತುವೆ ಮುಳುಗಡೆಯಾಗಿದೆ. ಸೇತುವೆಯ ಮೇಲೆ ನಾಲ್ಕೈದು ಅಡಿಯಷ್ಟು ನೀರು ಹರಿಯುತ್ತಿದೆ. ಪರಿಣಾಮ ಪಾರಾಣೆ, ಕೂಡು ಪರಂಬು ಮತ್ತು ನಾಲ್ಕನೇ ಮೈಲು ಗ್ರಾಮಗಳಿಗೆ ಎರಡು ದಿನಗಳಿಂದ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮಗಳ ಜನರು ಕಣ್ಣ ಬಲಮುರಿಯ ಮೇಲ್ಸೇತುವೆ ಮೇಲೆ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇದನ್ನು ಓದಿ: ಬೆಳಗಾವಿಯಲ್ಲಿ ಮಳೆ ಅಬ್ಬರ; ಮಹಾರಾಷ್ಟ್ರ ಮಳೆಗೆ ಉಕ್ಕಿ ಹರಿಯುತ್ತಿರುವ ಕೃಷ್ಣೆ

ಇದೀಗ ಈ ಗ್ರಾಮಗಳ ಜನರು 8 ಕಿ ಲೋ ಮೀಟರ್ ಸುತ್ತಿ ಬಳಸಿ ಮೂರ್ನಾಡಿಗೆ ಬರಬೇಕಾಗಿದೆ. ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಬಾಗಮಂಡಲದ ತ್ರಿವೇಣಿ ಸಂಗಮ ಬಹುತೇಕ ಭರ್ತಿಯಾಗಿದೆ. ಮಳೆ ಮುಂದುವರೆದಲ್ಲಿ ತ್ರಿವೇಣಿ ಸಂಗಮ ಮುಳುಗಡೆಯಾಗುವ ಸಾಧ್ಯತೆ ಇದೆ.

ಇನ್ನು ಮಡಿಕೇರಿ, ಮುಕ್ಕೋಡ್ಲು, ಮಾದಾಪುರ ಸೇರಿದಂತೆ ಹಾರಂಗಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ 10.300 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಜಲಾಶಯದ ಹಿತದೃಷ್ಟಿಯಿಂದ ಜಲಾಶಯದಿಂದ 10620 ಕ್ಯುಸೆಕ್ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ಹೀಗಾಗಿ ಹಾರಂಗಿ ಜಲಾನಯನ ಪ್ರದೇಶದ ಜನರಲ್ಲಿ ಆತಂಕ ಮೂಡಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: