ಕರ್ತವ್ಯದ ನಡುವೆಯೇ ಬಾರದ ಲೋಕಕ್ಕೆ ತೆರಳಿದ ರ‍್ಯಾಂಬೋ; ಕಣ್ಣೀರಿಟ್ಟ ಪೊಲೀಸ್​ ಸಿಬ್ಬಂದಿ

2013ರಲ್ಲಿ ನಾಲ್ಕು ತಿಂಗಳ ಮಗುವಾಗಿದ್ದಾಗ ಸ್ಕ್ವಾಡ್​ ಡಾಗ್​ ಆಗಿ ನೇಮಕಗೊಂಡ ರ‍್ಯಾಂಬೋ ಎಲ್ಲರ ಅಚ್ಚು ಮೆಚ್ಚಿಗೆ ಪಾತ್ರನಾಗಿದ್ದ

ರ‍್ಯಾಂಬೋಗೆ ಅಂತಿಮ ನಮನ

ರ‍್ಯಾಂಬೋಗೆ ಅಂತಿಮ ನಮನ

 • Share this:
  ಕೊಡಗು (ಅ.8): ಆತ ಶಿಸ್ತಿನ ಸಿಪಾಯಿ. ದುಷ್ಕರ್ಮಿಗಳು ಅಡಗಿಸಿಟ್ಟ  ಬಾಂಬ್ ಕ್ಷಣ ಮಾತ್ರದಲ್ಲಿ ಪತ್ತೆ ಹಚ್ಚಿ ದೇಶ ಸೇವೆಗಾಗಿ ಹೋರಾಡಿದಾತ. ಎಂತಹ ಸಮಯದಲ್ಲೂ ಎದೆಗುಂದದೇ ಹೋರಾಡಿದ ಈ ಯೋಧ ಇಂದು ಕರ್ತವ್ಯದ ನಡುವೆಯೇ ಬಾರದ ಲೋಕಕ್ಕೆ ತೆರಳಿದ್ದಾನೆ. ಆತ ಮತ್ಯಾರು ಅಲ್ಲ, ಕೊಡಗಿನ ಸ್ಕ್ವಾಡ್​ ಡಾಗ್​ ರ‍್ಯಾಂಬೋ. ಕಳೆದ ಆರು ವರ್ಷಗಳಿಂದ ಬಾಂಬ್​ ಸ್ಕ್ವಾಡ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರ‍್ಯಾಂಬೋ ಇಂದು ಸುರತ್ಕಲ್​ನಲ್ಲಿ ಮಾಕ್​ ಡ್ರಿಲ್​ ತರಬೇತಿಗೆ ತೆರಳಿದ್ದ ಈ ವೇಳೆ ಉಸಿರಾಟದ ಸಮಸ್ಯೆ ಉಂಟಾಗಿ ಸಾವನ್ನಪ್ಪಿದ್ದಾನೆ. ರ‍್ಯಾಂಬೋ ನಿಧನಕ್ಕೆ ಸಿಬ್ಬಂದಿಗಳು ಕಣ್ಣೀರು ಹಾಕಿದ್ದಾರೆ. ಮಡಿಕೇರಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ರ‍್ಯಾಂಬೋ ಅಂತ್ಯಕ್ರಿಯೆ ನಡೆಸಲಾಯಿತು.

  2013ರಲ್ಲಿ ನಾಲ್ಕು ತಿಂಗಳ ಮಗುವಾಗಿದ್ದಾಗ ಸ್ಕ್ವಾಡ್​ ಡಾಗ್​ ಆಗಿ ನೇಮಕಗೊಂಡ ರ‍್ಯಾಂಬೋ ಎಲ್ಲರ ಅಚ್ಚು ಮೆಚ್ಚಿಗೆ ಪಾತ್ರನಾಗಿದ್ದ.  ಅಂದಿನಿಂದ ಇಂದಿನವರೆಗೂ ತನ್ನ ಧೀರತೆ ಮೂಲಕ ಎಲ್ಲರ ಪ್ರಶಂಸೆಗಳಿಸಿದ್ದ. ರ‍್ಯಾಂಬೋ ಕಾರ್ಯಕ್ಕೆ ಮುಖ್ಯಮಂತ್ರಿಗಳು ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದರು.

  ಶಿಸ್ತು ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ರ‍್ಯಾಂಬೋ, ಅಪರಾಧಿಗಳನ್ನು ಹಿಡಿಯುವಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ. ಅದರಲ್ಲಿಯೂ ಬಾಂಬ್​ ಪತ್ತೆಯಲ್ಲಿ ಎತ್ತಿದ ಕೈ. ಇದುವರೆಗೂ 500ಕ್ಕೂ ಹೆಚ್ಚು ಆಪರೇಷನ್​ಗಳಲ್ಲಿ ಆತ ಕಾರ್ಯ ನಿರ್ವಹಿಸಿದ್ದಾನೆ.

  Kodagu Police squad dog rambo died
  ರ‍್ಯಾಂಬೋಗೆ ಅಂತಿಮ ನಮನ


  ಮೊನ್ನೆ ಕೂಡ ಕರ್ತವ್ಯದ ನಿಮ್ಮಿತ್ತ ರ‍್ಯಾಂಬೋ ಸುರತ್ಕಲ್​ಗೆ ತೆರಳಿದ್ದ. ಮಾಕ್​ ಡ್ರಿಲ್​ ತರಬೇತಿಗೆ ತೆರಳಿದ್ದ  ರ‍್ಯಾಂಬೋಗೆ ಅಲ್ಲಿನ ಹವಾಮಾನ ಒಗ್ಗಿಲ್ಲ. ಕೊಡಗಿನ ತಂಪು ವಾತಾವಾರಣದಲ್ಲಿ ಬೆಳೆದ ರ‍್ಯಾಂಬೋಗೆ ಬಿಸಿಲಿನ ಜಳಕ್ಕೆ ಉಸಿರಾಟದ ಸಮಸ್ಯೆಯುಂಟಾಗಿದೆ. . ತಕ್ಷಣವೇ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರಾದರೂ ಅದು ಫಲಕಾರಿಯಾಗಲಿಲ್ಲ. ಜೀವ ಬಿಡುವಾಗಲೂ ಕೂಡ ತರಬೇತುದಾರ ಸುಕುಮಾರ್​ ಹಾಗೂ ನಿರ್ವಹಣಾಧಿಕಾರಿಯನ್ನು ನೋಡಿ ಬೊಗಳಿ ಕೊನೆಯ ಸಲ್ಯೂಟ್​ ಸಲ್ಲಿಸಿದ್ದಾನೆ ರ‍್ಯಾಂಬೋ.

  ಇದನ್ನು ಓದಿ: ಫಿಲ್ಟರ್​ ಮಾಸ್ಕ್ ಬಳಸುವ ಮುನ್ನ ಯೋಚಿಸಿ; ಅಂಥ ಮಾಸ್ಕ್ ಅಪಾಯಕಾರಿ ಎನ್ನುತ್ತಾರೆ ತಜ್ಞರು

  ಆತನ ಕಳೆದುಕೊಂಡ ನಮ್ಮ ತಂಡ ನಷ್ಟ ಅನುಭವಿಸಿದೆ. ಮುದ್ದಾಗಿ ನಮ್ಮ ಜೊತೆ ಆಡಿಕೊಂಡಿರುತ್ತಿದ್ದ ಎಂದು ಆತ ನೆನೆದಿದ್ದಾರೆ ರ‍್ಯಾಂಬೋ ತರಬೇತುದಾರ ಸುಕುಮಾರ್​.

  ರ‍್ಯಾಂಬೋ ಇಂದು ಮಡಿಕೇರಿಯ ಪೊಲೀಸ್ ಮೈದಾನದಲ್ಲಿ ಎಸ್ ಪಿ ಕ್ಷಮಾ ಮಿಶ್ರಾ ಅವರ ನೇತೃತ್ವದಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.   ಮೂರು ಸುತ್ತು ಕುಶಾಲತೋಪು ಸಿಡಿಸಿ ಕೊನೆಗೆ ಸರ್ಕಾರಿ ಗೌರವದೊಂದಿಗೆ ಪೊಲೀಸ್ ಮೈದಾನದ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಯಿತು.  ಕರ್ತವ್ಯಕ್ಕೆಂದು ತೆರಳಿದ ರ‍್ಯಾಂಬೋ ಕರ್ತವ್ಯದ ನಡುವೆಯೇ ಬಾರದ ಲೋಕಕ್ಕೆ ತೆರಳಿರುವುದು ಎಲ್ಲರ ಮನ ನೋಯುವಂತೆ ಮಾಡಿದೆ.
  Published by:Seema R
  First published: