Kodagu: ಹೈಕೋರ್ಟ್ ತಡೆಯಾಜ್ಞೆ ಇದ್ದರೂ ಶಿವಲಿಂಗ ವಿಸರ್ಜನೆಗೆ ಕುಮ್ಮಕ್ಕು; ಐವರ ವಿರುದ್ಧ ಪ್ರಕರಣ ದಾಖಲು

ಶಿವಲಿಂಗ ಭಗ್ನವಾಗಿರುವುದನ್ನು  ಹಲವು ಸಮಯದವರೆಗೆ ಮುಚ್ಚಿಟ್ಟು, ಆ ನಂತರ ಅಷ್ಟಮಂಗಲ ಪ್ರಶ್ನೆ ಸಂದರ್ಭ ಪ್ರವಾಸಿಗರಿಂದ ಶಿವಲಿಂಗ ಭಗ್ನವಾಗಿದೆ ಎಂದು ಹೇಳಿದ್ದಾರೆ.

ತಲಕಾವೇರಿ-ಶಿವಲಿಂಗ

ತಲಕಾವೇರಿ-ಶಿವಲಿಂಗ

  • Share this:
ಕೊಡಗು(ಆ.22): ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿ ಕ್ಷೇತ್ರದಲ್ಲಿ ಅಗಸ್ತ್ಯ ಮುನಿಯಿಂದ ಸ್ಥಾಪಿತವಾದ ಶಿವಲಿಂಗ ಈಗಾಗಲೇ ಭಗ್ನಗೊಂಡು ಪೆಟ್ಟಿಗೆಯೊಂದನ್ನು ಸೇರಿ ಹಲವು ವರ್ಷಗಳೇ ಕಳೆದಿವೆ. ಹೀಗಾಗಿ ಭಗ್ನಗೊಂಡಿರುವ ಶಿವಲಿಂಗವನ್ನು ಸಮುದ್ರದಲ್ಲಿ ವಿಸರ್ಜನೆ ಮಾಡುವುದು ಒಳ್ಳೆಯದು ಎಂದು ಒಂದು ಗುಂಪು ಒತ್ತಾಯಿಸುತ್ತಿದ್ದರೆ, ಕೊಡವರಲ್ಲಿ ಬಹುತೇಕರು ಶಿವಲಿಂಗವನ್ನು ಮರುಸ್ಥಾಪಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿ,  ಭಗ್ನಗೊಂಡ ಶಿವಲಿಂಗವನ್ನು ಸಮುದ್ರದಲ್ಲಿ ವಿಸರ್ಜಿಸಬಾರದು ಎಂದು ಈಗಾಗಲೇ ಕೋರ್ಟಿನಿಂದ ತಡೆಯಾಜ್ಞೆಯೂ ಇದೆ. ಆದರೂ ಅದನ್ನು ಉಲ್ಲಂಘಿಸಿ ಕೆಲವರು ಅಗಸ್ತ್ಯೇಶ್ವರ ಮುನಿ ಸ್ಥಾಪಿಸಿದ ಶಿವಲಿಂಗದ ವಿಸರ್ಜನೆ ಮಾಡುವಂತೆ ಪ್ರೇರೇಪಿಸುತಿದ್ದಾರೆ ಎಂಬ ಆರೋಪದಲ್ಲಿ ಆಗಸ್ಟ್ 13 ರಂದು ಐದು ಜನರ ವಿರುದ್ಧ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ ಮುಖ್ಯವಾದ ವಿಷಯವೆಂದರೆ ಅಗಸ್ತ್ಯೇಶ್ವರ ಮುನಿಯಿಂದ ಸ್ಥಾಪಿತವಾದ  ಶಿವಲಿಂಗದಲ್ಲಿ ಅಪಾರವಾದ ಶಕ್ತಿ ಇದೆ. ಆ ಶಿವಲಿಂಗದಿಂದಲೇ ಕೊಡವರ ಏಳಿಗೆ ಇತ್ತು. ಇದನ್ನು ಸಹಿಸದ ಒಂದು ವರ್ಗದ ಜನ ಕೊಡವರ ಕೀರ್ತಿಯನ್ನು ಕುಗ್ಗಿಸಬೇಕೆಂತಲೇ ತಲಕಾವೇರಿಯ ಜೀರ್ಣೋದ್ಧಾರದ ಹೆಸರಿನಲ್ಲಿ ಅಗಸ್ತ್ಯ ಮುನಿಯು ಸ್ಥಾಪಿಸಿದ್ದ ಶಿವಲಿಂಗವನ್ನು ಭಗ್ನಗೊಳಿಸಿದರು. ಅದನ್ನು ಹೇಗಾದರೂ ಮಾಡಿ ಸಮುದ್ರದಲ್ಲಿ ವಿಸರ್ಜನೆ ಮಾಡಿ ಕೊಡವರ ಕೀರ್ತಿಯನ್ನು ಕುಗ್ಗಿಸಬೇಕು ಎಂದು ಯತ್ನಿಸಿದ್ದರು. ಹೀಗಾಗಿಯೇ ಐತಿಹಾಸಿಕ ಶಿವಲಿಂಗವನ್ನು ಭಗ್ನಗೊಳಿಸಿರುವುದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಕಾವೇರಿ ಸೇನೆಯ ಅಧ್ಯಕ್ಷ ರವಿಚಂಗಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ಅವರಿಂದಲೇ ನೈಟ್ ಕರ್ಫ್ಯೂ ಉಲ್ಲಂಘನೆ; ರಾತ್ರಿ 9ರ ಬಳಿಕವೂ ಜನರಿಂದ ಅಹವಾಲು ಸ್ವೀಕಾರ...!

ಎರಡು ದಶಕಗಳಿಗೂ ಮೊದಲು ತಲಕಾವೇರಿ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಮಾಡುವುದಾಗಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದ ತಲಕಾವೇರಿ ದೇವಾಲಯದ ಅಂದಿನ ಅರ್ಚಕರಾಗಿದ್ದ ನಾರಾಯಣ ಆಚಾರ್ ಮತ್ತು ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಆಗಿದ್ದ ರಾಜೇಂದ್ರ ಅವರುಗಳೇ ಶಿವಲಿಂಗವನ್ನು ಭಗ್ನಗೊಳಿಸಿರಬಹುದು. ಶಿವಲಿಂಗ ಭಗ್ನವಾಗಿರುವುದನ್ನು  ಹಲವು ಸಮಯದವರೆಗೆ ಮುಚ್ಚಿಟ್ಟು, ಆ ನಂತರ ಅಷ್ಟಮಂಗಲ ಪ್ರಶ್ನೆ ಸಂದರ್ಭ ಪ್ರವಾಸಿಗರಿಂದ ಶಿವಲಿಂಗ ಭಗ್ನವಾಗಿದೆ ಎಂದು ಹೇಳಿದ್ದಾರೆ.

ಋಷಿಮುನಿಯಿಂದ ಸ್ಥಾಪನೆಯಾದ ಶಿವಲಿಂಗವನ್ನು ಪ್ರವಾಸಿಗರು ಭಗ್ನಗೊಳಿಸಿದ್ದರೆ, ಅವರ ವಿರುದ್ಧ ಪೊಲೀಸರಿಗೆ ದೂರು ಕೊಡದೆ ತುಂಬಾ ಸಮಯದವರೆಗೆ ಸುಮ್ಮನಿದ್ದಿದ್ದು ಯಾಕೆ ಎಂಬುದು ರವಿಚಂಗಪ್ಪ ಅವರ ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಶಿವಲಿಂಗವನ್ನು ಭಗ್ನಗೊಳಿಸುವುದಕ್ಕೆ ಮುಖ್ಯವಾದ ಕಾರಣವೆಂದರೆ ಅಗಸ್ತ್ಯೇಶ್ವರ ಮುನಿಯ ವಿರುದ್ಧ ಮಾತನಾಡಿದ ಬ್ರಾಹ್ಮಣರಿಗೆ ಅಗಸ್ತ್ಯ ಮುನಿ 'ಎಲ್ಲಿಯವರೆಗೆ ಕೊಡಗಿನಲ್ಲಿ ಬ್ರಾಹ್ಮಣರು ಇರುತ್ತಾರೆಯೋ ಅಲ್ಲಿಯವರೆಗೆ ಅವರ ಬೆನ್ನ ಹಿಂದೆ ಬಡತನವಿರಲಿ' ಎಂದು ಶಾಪ ಹಾಕಿದ್ದರಂತೆ. ಹೀಗಾಗಿ ಅಗಸ್ತ್ಯಮುನಿಯ ಶಕ್ತಿ ಇರುವ ಈ ಶಿವಲಿಂಗವನ್ನು ಅಲ್ಲಿಂದ ಭಗ್ನಗೊಳಿಸಿ ವಿಸರ್ಜನೆ ಮಾಡಲು ಕೆಲವರು ಉದ್ದೇಶ ಪೂರ್ವಕವಾಗಿ ಮುಂದಾಗಿದ್ದಾರೆ ಎನ್ನೋದು ಹಿರಿಯ ವಕೀಲ ಮಾಚಯ್ಯ ಅವರ ಹೇಳಿಕೆ.

ಇದನ್ನೂ ಓದಿ:Crime News: ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಓಜಿ ಕುಪ್ಪಂ ಗ್ಯಾಂಗ್‌ ಅರೆಸ್ಟ್‌

ಕೊಡವರ ಏಳಿಗೆಗೆ ಪ್ರಬಲವಾದ ಶಕ್ತಿಯಾಗಿರುವ ಆ ಶಿವಲಿಂಗವನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕು ಎನ್ನೋದು ಅವರ ಒತ್ತಾಯ ಕೂಡ. ಸದ್ಯ ಭಗ್ನಗೊಂಡಿರುವ ಶಿವಲಿಂಗವನ್ನು ತಲಕಾವೇರಿ ದೇವಾಲಯದಲ್ಲೇ ಮರದ ಪೆಟ್ಟಿಗೆಯೊಂದರಲ್ಲಿ ಇರಿಸಲಾಗಿದ್ದು ಹೈಕೋರ್ಟ್ ಕೂಡ ಅದನ್ನು ಸಮುದ್ರದಲ್ಲಿ ವಿಸರ್ಜನೆ ಮಾಡದಂತೆ ತಡೆಯಾಜ್ಞೆ ನೀಡಿದೆ. ಆದರೆ ತಡೆಯಾಜ್ಞೆಯನ್ನು ಉಲ್ಲಂಘಿಸಿ ಶಿವಲಿಂಗವನ್ನು ವಿಸರ್ಜನೆಗೆ ಕುಮ್ಮಕ್ಕು ನೀಡುವಂತೆ ಬರಹಗಳನ್ನು ಪ್ರಕಟಿಸಿದವರ ವಿರುದ್ಧ ಹೈಕೋರ್ಟ್ ಗರಂ ಆಗಿದ್ದು ಸದ್ಯ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಲಿಂಗದ ಸ್ಥಿತಿಯನ್ನು ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
Published by:Latha CG
First published: