ಕೊಡಗು: ಕೊಡಗು (Kodagu) ಜಿಲ್ಲೆ ಪುಟ್ಟದಾಗಿದ್ದು, ಇರುವ ಜನಸಂಖ್ಯೆ ಕೂಡ ಕಡಿಮೆಯೇ. ಆದರೆ ಪ್ರವಾಸಕ್ಕಾಗಿ (Tourist) ನಿತ್ಯ ಸಾವಿರಾರು ಜನರು ಜಿಲ್ಲೆಗೆ ಆಗಮಿಸುವುದರಿಂದ ಜಿಲ್ಲೆಯಲ್ಲಿ ಕಡಿಮೆ ಜನರೇನು ಇರುವುದಿಲ್ಲ. ಜೊತೆಗೆ ನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ತುರ್ತು ಚಿಕಿತ್ಸೆಗಾಗಿ ಹತ್ತಾರು ಜನರು ಜಿಲ್ಲಾಸ್ಪತ್ರೆಯಲ್ಲಿ (District Hospital) ಚಿಕಿತ್ಸೆಗೆ ಅರಸಿ ಬರುತ್ತಾರೆ. ಈ ತುರ್ತು ಚಿಕಿತ್ಸೆ ಅಗತ್ಯವಾಗಿರುವವರಿಗೆ ವಿಶೇಷ ಚಿಕಿತ್ಸೆ ಇಲ್ಲಿ ದೊರೆಯುತ್ತಿಲ್ಲ ಎನ್ನುವುದೇ ವಿಪರ್ಯಾಸ. ಹೀಗಾಗಿ ಜಿಲ್ಲೆಯ ಜನರು ಕಳೆದ ನಾಲ್ಕೈದು ವರ್ಷಗಳಿಂದ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super speciality Hospital) ಆಗಬೇಕೆಂಬ ಹೋರಾಟ ಆರಂಭಿಸಿದ್ದು, ಆ ಕೂಗು ಈಗ ಮತ್ತಷ್ಟು ತೀವ್ರಗೊಂಡಿದೆ. ಈ ಕೂಗು ದಿನದಿಂದ ದಿನಕ್ಕೆ ತೀವ್ರಗೊಳ್ಳುವುದಕ್ಕೆ ಮುಖ್ಯವಾದ ಕಾರಣವೂ ಇದೆ.
ಅಪಘಾತದಿಂದಲೋ, ಇಲ್ಲ ಗಂಭೀರ ಅನಾರೋಗ್ಯದಿಂದಲೋ ಜೀವನ್ಮರಣದಲ್ಲಿ ಹೋರಾಡುತ್ತಿರುವ ರೋಗಿಗಳನ್ನು ನಿತ್ಯ ಒಬ್ಬರನ್ನಾದರೂ ಹೊರ ಜಿಲ್ಲೆಗೆ ಕಳುಹಿಸಲಾಗುತ್ತಿದೆ. ಅಂದರೆ ಸರಾಸರಿ ತಿಂಗಳಿಗೆ ಕನಿಷ್ಠ 30 ಜನರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯವಿಲ್ಲ ಎಂದು, ಪಕ್ಕದ ಮೈಸೂರು ಅಥವಾ ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಇದು ಸ್ವತಃ ಜಿಲ್ಲಾಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಡೀನ್ ಆದ ಕಾರಿಯಪ್ಪ ಅವರೇ ನೀಡಿರುವ ಮಾಹಿತಿ.
ಮೈಸೂರು, ಮಂಗಳೂರಿಗೆ ಹೋಗಬೇಕು
ಅಪಘಾತಗಳಾಗಿ ತೀರಾ ಗಂಭೀರ ಅಲ್ಲದಿದ್ದರೂ ತೀವ್ರ ಪೆಟ್ಟುಬಿದ್ದು ಗಾಯಗಳಾಗಿವೆ ಎಂದರೂ ಅಂತಹ ಪ್ರಕರಣಗಳನ್ನು ಮೈಸೂರು ಅಥವಾ ಮಂಗಳೂರಿಗೆ ಕಳುಹಿಸಬೇಕು. ಯಾರಿಗಾದರೂ ಹಾವು ಕಚ್ಚಿದೆ ಎಂದು ಆಸ್ಪತ್ರೆಗೆ ಬಂದರೂ ಅಂತಹ ಪ್ರಕರಣಗಳನ್ನು ಹೊರ ಜಿಲ್ಲೆಗೆ ಕಳುಹಿಸಬೇಕಾಗಿದೆ.
ಹೀಗೆ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಹೊರ ಜಿಲ್ಲೆ ಮೈಸೂರು ಅಥವಾ ಮಂಗಳೂರಿಗೆ ಹೋಗಿ ತಲುಪಬೇಕೆಂದರೆ ಎರಡೂವರೆಯಿಂದ ಮೂರು ಗಂಟೆಗಳ ಸಮಯ ಬೇಕು. ಇಷ್ಟು ಸಮಯದಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಯನ್ನು ಹೊರ ಜಿಲ್ಲೆಯ ಆಸ್ಪತ್ರೆಗಳಿಗೆ ಕರೆದೊಯ್ಯವಷ್ಟರಲ್ಲಿ, ಆ ರೋಗಿಯು ಮೃತಪಟ್ಟಿರುವ ಪ್ರಕರಣಗಳು ಸಾಕಷ್ಟಿವೆ.
ಚಳವಳಿ ಮತ್ತಷ್ಟು ತೀವ್ರ
ಇಂತಹ ಘಟನೆಗಳು ಇತ್ತೀಚೆಗಂತು ಹೆಚ್ಚುತ್ತಲೇ ಇವೆ. ಇದೇ ಕಾರಣವೇ ಜಿಲ್ಲೆಯ ಜನರು ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ಆಂದೋಲನವನ್ನೇ ಆರಂಭಿಸುವಂತೆ ಮಾಡಿದೆ. ಹಿಂದಿನಿಂದಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶುರು ಮಾಡುವಂತೆ ಅಭಿಯಾನ ಆರಂಭಿಸಿದ್ದ ಕೊಡಗು ರಕ್ಷಣಾ ವೇದಿಕೆ ತಂಡ ತನ್ನ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಇದನ್ನೂ ಓದಿ: HDK-Yogeshwar: ಕುಮಾರಸ್ವಾಮಿ ನನಗೆ ಹಾರ್ಟ್ ಪ್ರಾಬ್ಲಂ ಎಂದು ಕಣ್ಣೀರು ಹಾಕ್ತಾರೆ; ನಂಬಬೇಡಿ ಎಂದ್ರು ಯೋಗೇಶ್ವರ್
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಮೆಡಿಕಲ್ ಆಸ್ಪತ್ರೆ ಮತ್ತು ಕಾಲೇಜಿನ ಡೀನ್ ಕಾರಿಯಪ್ಪ ಅವರು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಿದೆ. ಆದರೆ ನಾವು ಈಗ ನಮ್ಮಲ್ಲಿರುವ ಸೌಲಭ್ಯಗಳಲ್ಲೇ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Rahul Gandhi Letter: ಕರುನಾಡಿನಲ್ಲಿ ಭಾರತ್ ಜೋಡೋ ಯಾತ್ರೆ ಅಂತ್ಯ; ಕನ್ನಡಿಗರಿಗೆ ರಾಹುಲ್ ಗಾಂಧಿ ಪತ್ರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ