Kodagu: ಮಕ್ಕಳ ಭವಿಷ್ಯ ರೂಪಿಸಲು ಈ ಶಾಲೆಯಲ್ಲಿ ಶಿಕ್ಷಕರೇ ಇಲ್ಲ; ನಾಲ್ಕುವರ್ಷದಿಂದಲೂ ಇದೇ ಸಮಸ್ಯೆ

ಅಚ್ಚರಿಯೆಂದರೆ ದೇಶದ ಸೇನೆಯಲ್ಲಿ ಅತ್ಯುನ್ನತ್ತ ಹುದ್ದೆ ಅಲಂಕರಿಸಿದ್ದ ಜನರಲ್ ತಿಮ್ಮಯ್ಯ ಅವರು ಕೂಡ ಕಲಿತಿದ್ದು ಇದೇ ಎಬಿ ಶಾಲೆಯಲ್ಲಿ.

ಶಾಲೆ

ಶಾಲೆ

  • Share this:
ಕೊಡಗು (ಜ. 27): : ನೂರಾರು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದ ಮೂರು ಶಾಲೆಗಳು (School) ಮುಚ್ಚಿಹೋಗುವ ಸ್ಥಿತಿ ತಲುಪಿವೆ. ಈ ಶಾಲೆಗಳಲ್ಲಿ ಕಲಿಯುತ್ತಿರುವ ನೂರಾರು ವಿದ್ಯಾರ್ಥಿಗಳ ಭವಿಷ್ಯವೇ ಕಮರಿ ಹೋಗುವಂತೆ ಆಗಿದೆ. ಅದಕ್ಕೆ ಕಾರಣ ಮಡಿಕೇರಿ ನಗರಸಭೆಯ (Madikeri Munipal)  ದಿವ್ಯ ನಿರ್ಲಕ್ಷ್ಯ ಎನ್ನೋದು ಸ್ಪಷ್ಟ. ಹೌದು 1918 ಮತ್ತು 19 ರಲ್ಲಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಮೂರು ಶಾಲೆಗಳನ್ನು ಆರಂಭಿಸಲಾಗಿತ್ತು. ನಗರದ ಮಹದೇವಪೇಟೆಯಲ್ಲಿರುವ ಎವಿ ಸ್ಕೂಲ್, ಹಿಲ್ ರೋಡ್ ನಲ್ಲಿರುವ ಹಿಂದುಸ್ಥಾನಿ ಶಾಲೆ ಮತ್ತು ತಿಮ್ಮಯ್ಯ ರಸ್ತೆಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ. ಈ ಮೂರು ಶಾಲೆಗಳಲ್ಲಿ ಬಡ ಕುಟುಂಬಗಳಿಂದ ಬಂದ ಒಟ್ಟು 115 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿಪರ್ಯಾಸವೆಂದರೆ ಕಲಿಸುವ ಶಿಕ್ಷಕರಿಗೆ ಸಂಬಳವೇ ಇಲ್ಲದೆ ಇರುವುದರಿಂದ ಮೂರು ಶಾಲೆಗಳ ನೂರಾರು ವಿದ್ಯಾರ್ಥಿಗಳು ಸರ್ವಾಂಗೀಣ ಕಲಿಕೆಯಿಂದ ವಂಚಿತರಾಗುವಂತೆ ಆಗಿದೆ.

ಎರಡು ಸಾವಿರ ಗೌರವಧನ

ಮೂರು ಶಾಲೆಯಲ್ಲಿ ಮುಖ್ಯ ಶಿಕ್ಷಕರು ಮಾತ್ರವೇ ಪರ್ಮನೆಂಟ್ ಉದ್ಯೋಗಿಗಳಾಗಿದ್ದರೆ, ಪ್ರತೀ ಶಾಲೆಯಲ್ಲಿರುವ ಇಬ್ಬರು ಶಿಕ್ಷಕರು ಗೌರವಧನದ ಆಧಾರದಲ್ಲಿ ದುಡಿಯುತ್ತಿದ್ದಾರೆ. ಅದು ಕೂಡ ದಾನಿಗಳು ಕೊಡುತ್ತಿರುವ ಒಂದೂವರೆಯಿಂದ ಎರಡು ಸಾವಿರ ರೂಪಾಯಿಗೆ ಎನೋದು ಅಚ್ಚರಿಯ ಸಂಗತಿ. ಹಿಲ್ಸ್ ರಸ್ತೆ ಮತ್ತು ಎಬಿ ಶಾಲೆಯಲ್ಲಿನ ತಲಾ ಇಬ್ಬರು ಶಿಕ್ಷಕರು ಬರೋಬ್ಬರಿ 22 ವರ್ಷದಿಂದ ಇದೇ ಗೌರವಧನಕ್ಕೆ ಮಕ್ಕಳಿಗೆ ಕಲಿಸುತ್ತಿದ್ದಾರೆ.

ಜನರಲ್ ತಿಮ್ಮಯ್ಯ ಕಲಿತ ಶಾಲೆ

ಅಚ್ಚರಿಯೆಂದರೆ ದೇಶದ ಸೇನೆಯಲ್ಲಿ ಅತ್ಯುನ್ನತ್ತ ಹುದ್ದೆ ಅಲಂಕರಿಸಿದ್ದ ಜನರಲ್ ತಿಮ್ಮಯ್ಯ ಅವರು ಕೂಡ ಕಲಿತಿದ್ದು ಇದೇ ಎಬಿ ಶಾಲೆಯಲ್ಲಿ. 2018 ರವರೆಗೆ ಮಡಿಕೇರಿ ನಗರಸಭೆಯಿಂದಲೇ ಈ ಶಿಕ್ಷಕರಿಗೆ ತಿಂಗಳಿಗೆ ಮೂರುವರೆ ಸಾವಿರ ರೂಪಾಯಿಯನ್ನು ಗೌರವಧನವಾಗಿ ನೀಡಲಾಗುತಿತ್ತು. ಆ ನಂತರ ಇದುವರೆಗೆ ನಗರಸಭೆ ಒಂದೇ ಒಂದು ರೂಪಾಯಿಯನ್ನು ನೀಡಿಲ್ಲ. ಇದೀಗ ಶಾಲೆಯ ಪರಮ್ನೆಂಟ್ ಶಿಕ್ಷಕರು ಮತ್ತು ದಾನಿಗಳು ಸೇರಿ ಪ್ರತೀ ಶಿಕ್ಷಕರಿಗೆ ತಲಾ ಒಂದುವರೆಗೆ ಸಾವಿರದಂತೆ ಗೌರವಧನ ನೀಡಲಾಗುತ್ತಿದೆ. ಇದು ಮೂರು ಶಾಲೆಗಳ ಒಟ್ಟು ಏಳು ಶಿಕ್ಷಕರನ್ನು ಕಂಗಲಾಗುವಂತೆ ಮಾಡಿದೆ.

ಇದನ್ನು ಓದಿ: ಕೂಲಿ ಕೆಲಸ ಅರಸಿ ಬಂದ ಮಹಿಳೆ ಈಗ ಗ್ರಾಮಪಂಚಾಯತಿ ಅಧ್ಯಕ್ಷೆ

ನಗರಸಭೆಯಿಂದ ಯಾವುದೇ ಉತ್ತರ ಇಲ್ಲ

ಸಂಬಳವೇ ಇಲ್ಲದಿದ್ದರೆ ಕಲಿಸುವ ಕೆಲಸ ಎಷ್ಟರಮಟ್ಟಿಗೆ ನಡೆಯುತ್ತದೆ ಎನ್ನೋದನ್ನ ನೀವೇ ಯೋಚಿಸಿ. ನೂರಾರು ವರ್ಷಗಳನ್ನು ಪೂರೈಸಿರುವ ಕಟ್ಟಡಗಳು ಕೂಡ ಶಿಥಿಲಾವಸ್ಥೆಯನ್ನು ತಲುಪಿದ್ದು, ಶಾಲೆಗೆ ಬರುತ್ತಿರುವ ನೂರಾರು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಕಲಿಯಬೇಕಾಗಿದೆ. ನಾಲ್ಕು ವರ್ಷಗಳ ಹಿಂದೆಯೇ ಶಾಲೆಯ ಶಿಕ್ಷಕರಿಗೆ ಸರ್ಕಾರದಿಂದ ವೇತನ ನೀಡುವಂತೆ ನಗರಸಭೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಶಿಕ್ಷಣ ಇಲಾಖೆ ಸರಿಯಾಗಿ ಸ್ಪಂದಿಸಲಿಲ್ಲ ಎನ್ನೋದು ನಗರಸಭೆ ಆಯುಕ್ತ ರಾಮದಾಸ್ ಅವರ ಹೇಳಿಕೆ.

ಇದನ್ನು ಓದಿ: ಬೆಂಗಳೂರಲ್ಲಿ ಶಾಲೆ ಪುನರ್​​​ ಆರಂಭಿಸಲು ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ

ಮಕ್ಕಳ ಜೊತೆಗೆ ಶಿಕ್ಷಕರ ಮೇಲೂ ಶೋಷಣೆ

ಶಿಕ್ಷಕರನ್ನು ನೇಮಿಸಬೇಕಾದರೆ ಶಾಲಾ ಕಟ್ಟಡ ಎಲ್ಲವನ್ನೂ ತಮಗೆ ಬಿಟ್ಟುಕೊಡುವಂತೆ ಸರ್ಕಾರ ಕೇಳಿತ್ತು ಎನ್ನಲಾಗಿದೆ. ಒಂದು ವೇಳೆ ಒಪ್ಪಿಸಿದ್ದರೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಶಾಲೆಗಳ ಆಸ್ತಿ ನಗರಸಭೆಯ ಕೈತಪ್ಪಿಹೋಗಬಹುದೆಂದು ಶಾಲೆಗಳನ್ನು ಸರ್ಕಾರಕ್ಕೆ ಒಪ್ಪಿಸಿಲ್ಲ ಎನ್ನಲಾಗುತ್ತಿದೆ. ಇತ್ತ ತಾನೂ ಕೂಡ ಶಿಕ್ಷಕರಿಗೆ ಸಂಬಳ ನೀಡದೆ, ನೂರಾರು ವಿದ್ಯಾರ್ಥಿಗಳು ಮತ್ತು ಏಳು ಶಿಕ್ಷಕರ ಬದುಕಿನಲ್ಲಿ ಆಟವಾಡುತ್ತಿದೆ.

ಖಾಸಗಿ ಶಾಲೆಗಳಿಗೆ ಸೇರಿಸಿ ತಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗದ ಬಡ ಪೋಷಕರು ಇದೇ ಶಾಲೆಗಳನ್ನು ನಂಬಿಕೊಂಡು ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಆದರೆ ಸರ್ಕಾರ ಮತ್ತು ನಗರಸಭೆಯ ನಡುವೆ ಒಮ್ಮತವಿಲ್ಲದೆ ಶಿಕ್ಷಕರು ಮತ್ತು ಮಕ್ಕಳನ್ನು ಶೋಷಣೆ ಮಾಡಲಾಗುತ್ತಿದೆ ಎನ್ನೋದು ನಗರಸಭೆ ಸದಸ್ಯ ಅಮಿನ್ ಮೊಯಿನ್ಸಿನ್ ಅವರ ಆಕ್ರೋಶ.
Published by:Seema R
First published: