ಕೊಡಗು (ಜೂನ್ 19): ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಕೊಡಗಿನ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕರ ಕುಟುಂಬವೇ ಜೀವಂತ ಸಮಾಧಿಯಾಗಿತ್ತು. ಈ ದುರಂತದ ನೆನಪು ಇನ್ನೂ ಜನರ ಮನಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಅಷ್ಟರಲ್ಲಾಗಲೇ ಕೊಡಗು ಮತ್ತೊಂದು ದುರಂತಕ್ಕೆ ಸಾಕ್ಷಿಯಾಗಲಿದೆಯಾ? ಎಂಬ ಅನುಮಾನ ಹೆಚ್ಚಾಗಿದೆ. ಕೊಡಗಿನ ರಾಜಾಸೀಟ್ ಕೆಳಭಾಗದ ಜನರಿಗೆ ಕಂಟಕ ಕಾದಿದೆಯಾ? ಎಂಬ ಆತಂಕ ಹೆಚ್ಚಾಗಿದೆ.
ಕಳೆದ ವರ್ಷ ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಉಂಟಾದ ರೀತಿಯದ್ದೇ ದುರಂತ ಈ ವರ್ಷವೂ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಕೊಡಗಿನ ರಾಜಾಸೀಟ್ ಕೆಳಭಾಗದ ಜನರಿಗೆ ಕಂಟಕ ಎದುರಾಗುವ ಸಾಧ್ಯತೆಗಳಿವೆ. ಬೆಟ್ಟಗಳ ಕೊರೆದು ವ್ಯೂ ಪಾಯಿಂಟ್ (View Point) ನಿರ್ಮಾಣ ಮಾಡಿರುವುದರಿಂದ ಈ ಭಾಗದ ಕೆಳಗಿನ ಜನರಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ.
ಮಡಿಕೇರಿ- ಮಂಗಳೂರು ರಸ್ತೆಗೆ ಹೊಂದಿಕೊಂಡಿರುವ ರಾಜಾಸೀಟ್ ವ್ಯೂ ಪಾಯಿಂಟ್ಗಾಗಿ ಮೂರೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಬೆಟ್ಟ ಕೊರೆಯುವ ಕಾಮಗಾರಿ ನಡೆಸಲಾಗುತ್ತಿದೆ. ನಾಲ್ಕು ಹಂತವಾಗಿ ಬೆಟ್ಟವನ್ನೇ ಕತ್ತರಿಸಿ ಕಾಮಗಾರಿ ನಡೆಸಲಾಗಿದೆ. ಮಂಗಳೂರಿನ ಗುತ್ತಿಗೆದಾರನಿಂದ ಕಾಮಗಾರಿ ನಡೆಸಲಾಗುತ್ತಿದ್ದು, ಕೊಡಗಿಗೆ ಪ್ರವಾಸಿಗರ ಸೆಳೆಯಲು ಅಭಿವೃದ್ಧಿ ನೆಪದಲ್ಲಿ ಬೆಟ್ಟಗಳ ಕತ್ತರಿಸಲು ಅವಕಾಶ ನೀಡಲಾಗಿದೆ.
ಈಗಾಗಲೇ 2018ರಿಂದಲೂ ಕೊಡಗಿನಲ್ಲಿ ಸಾಕಷ್ಟು ಭೂಕುಸಿತ ಪ್ರಕರಣಗಳು ಸಂಭವಿಸಿವೆ. ಕಳೆದ ಬಾರಿಯೂ ತಲಕಾವೇರಿಯಲ್ಲಿ ಭೂಕುಸಿತ ಸಂಭವಿಸಿತ್ತು. ಇಲ್ಲಿನ ಬ್ರಹ್ಮಗಿರಿ ಬೆಟ್ಟ ಕುಸಿದು ಐವರು ಭೂ ಸಮಾಧಿ ಆಗಿದ್ದರು. ಗಜಗಿರಿ ಬೆಟ್ಟ, ಬ್ರಹ್ಮಗಿರಿ ಬೆಟ್ಟದಲ್ಲಿ ಇಂಗುಗುಂಡಿ ತೆಗೆಯಲಾಗಿತ್ತು. ಇದರಿಂದ ಪರಿಣಾಮ ಬೆಟ್ಟ ಕುಸಿದು ನಾರಾಯಣ ಆಚಾರ್ಯರ ಕುಟುಂಬ ಜೀವಂತ ಸಮಾಧಿಯಾಗಿತ್ತು. ಇದೀಗ ರಾಜಾಸೀಟ್ ನಲ್ಲಿ ಬೆಟ್ಟ ಕೊರೆದು ಕಾಮಗಾರಿ ನಡೆಸುತ್ತಿರುವುದರಿಂದ ಬೆಟ್ಟದ ಕೆಳಗಿರುವ ಹತ್ತಾರು ಕುಟುಂಬಗಳಿಗೆ ಅಪಾಯ ಎದುರಾಗಿದೆ.
ಮೂರು ಬೆಟ್ಟಗಳನ್ನು ಕೊರೆದು ವ್ಯೂ ಪಾಯಿಂಟ್ ನಿರ್ಮಿಸಲಾಗುತ್ತಿದೆ. ಕಾಮಗಾರಿ ಆರಂಭವಾದಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಸಾರ್ವಜನಿಕರ ವಿರೋಧದ ನಡುವೆಯೂ ಜಿಲ್ಲಾಡಳಿತ ಕಾಮಗಾರಿ ಮುಂದುವರಿಸಿತ್ತು. ಒಂದೆಡೆ ಚಾಮುಂಡಿ ಬೆಟ್ಟದ ನಿವಾಸಿಗಳ ಖಾಲಿ ಮಾಡಿಸಿರುವ ಜಿಲ್ಲಾಡಳಿತ ಮತ್ತೊಂದೆಡೆ ಪಕ್ಕದ ರಾಜಾಸೀಟ್ ಬೆಟ್ಟ ಕೊರೆದು ಕಾಮಗಾರಿ ನಡೆಸುತ್ತಿದೆ. ಹೀಗಾಗಿ, ಈ ವರ್ಷ ಮಳೆಗಾಲದಲ್ಲಿ ಕೊಡಗಿನಲ್ಲಿ ಮತ್ತೊಂದು ದುರಂತ ಸಂಭವಿಸಿದರೆ ಅದಕ್ಕೆ ಜಿಲ್ಲಾಡಳಿತ, ಸರ್ಕಾರವೇ ನೇರ ಹೊಣೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಕಳೆದ ವರ್ಷ ಬ್ರಹ್ಮಗಿರಿ ಮತ್ತು ಗಜಗಿರಿ ಬೆಟ್ಟ ಕುಸಿದು ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕ ನಾರಾಯಣ ಆಚಾರ್, ಅವರ ಸಹೋದರ ಸೇರಿದಂತೆ ಐವರು ಜೀವಂತ ಸಮಾಧಿಯಾಗಿದ್ದರು. 15 ದಿನಗಳಿಗೂ ಹೆಚ್ಚು ಕಾಲ ಗಜಗಿರಿ ಮತ್ತು ಬ್ರಹ್ಮಗಿರಿ ಬೆಟ್ಟದ ಆಸುಪಾಸಿನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಆದರೂ ಯಾರೊಬ್ಬರನ್ನೂ ಬದುಕಿಸಲು ಸಾಧ್ಯವಾಗಿರಲಿಲ್ಲ. ಮಣ್ಣಿನಡಿ ಅರ್ಚಕರ ಮನೆ, ದನ-ಕರುಗಳು, ಕಾರು ಸೇರಿದಂತೆ ಎಲ್ಲವೂ ಸಮಾಧಿಯಾಗಿತ್ತು.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ