2007ರಲ್ಲಿ ಉಗ್ರರ ಸೆದೆಬಡಿದು ಹುತಾತ್ಮರಾದ ಕೊಡಗಿನ ವೀರ ಯೋಧನ ಸಾಹಸಗಾಥೆ ಇಲ್ಲಿದೆ

ನಾಯಕ್ ಕೆ ಕೆ ತಿಮ್ಮಯ್ಯ ಮಡಿಕೇರಿಯ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾಗ ಪಕ್ಕದ ಮೈದಾನದಲ್ಲಿ ಆರ್ಮಿ ಕ್ಯಾಂಪ್ ನಡೆಯುತ್ತಿತ್ತಂತೆ. ಕುತೂಹಲಕ್ಕೆ ಅಲ್ಲಿಗೆ ಹೋದ ಯುವಕ ದೇಶಸೇವೆಗೆ ಬದುಕನ್ನು ಮುಡಿಪಾಗಿಡಲು ನಿರ್ಧರಿಸಿಬಿಟ್ಟಿದ್ದರು.

ನಾಯಕ್ ಕೆ. ತಿಮ್ಮಯ್ಯ

ನಾಯಕ್ ಕೆ. ತಿಮ್ಮಯ್ಯ

  • Share this:
ಬೆಂಗಳೂರು(ನ.11): ಆತ ಸೈನ್ಯ ಸೇರಿದ್ದೇನೋ ಉತ್ತಮ ಉದ್ಯೋಗ ಅವಕಾಶಕ್ಕಾಗಿ. ಆದ್ರೆ ಸೈನ್ಯದ ತರಬೇತಿ ಆರಂಭದ ದಿನಗಳಿಂದಲೇ ದೇಶಪ್ರೇಮ ಆತನೆದೆಯಲ್ಲಿ ಕಿಚ್ಚು ಹಚ್ಚಿಸಿತ್ತು. ಜೀವ ಪಣಕ್ಕಿಟ್ಟು ಆತ ಅಂದು ಉಗ್ರಗಾಮಿಗಳ ‌ಜೀವ ತೆಗೆಯದೇ ಇದ್ದಿದ್ರೆ ಇನ್ನೆಷ್ಟು ಅಮಾಯಕರ ಪ್ರಾಣ ಹೋಗುತ್ತಿತ್ತೋ ಏನೋ.. ಈ ಸಾಹಸಿಯ ಹೆಸರು ನಾಯಕ್ ಕೆ ತಿಮ್ಮಯ್ಯ ಮತ್ತು ಆತ ಕನ್ನಡ ನಾಡಿನ ಹೆಮ್ಮೆಯ ವೀರ. ಅದು ಜುಲೈ 2007. ರಜೆ ಮುಗಿಸಿ ಮರಳಿ ಸೇವೆಗೆ ಸೇರಿದ ಮಾರನೇ ದಿನ ಕಾಶ್ಮೀರದಲ್ಲಿ ಎರಡು ಟ್ರಕ್ ಗಳಲ್ಲಿ ಮಡ್ರಾಸ್ ರೆಜಿಮೆಂಟ್ ನ ಸೈನಿಕರನ್ನು ಕರೆದುಕೊಂಡು ಹೋಗಲಾಗ್ತಿತ್ತು. ಅದೆಲ್ಲಿದ್ದರೋ... ಉಗ್ರಗಾಮಿಗಳು ಕಳ್ಳದಾರಿಯಲ್ಲಿ ನುಗ್ಗಿ ಹೇಡಿಗಳಂತೆ ಆಕ್ರಮಣ ಮಾಡಿದ್ದರು. ಆಗ ಎಲ್ಲರಿಗಿಂತ ಮುಂಚೆ ಮುನ್ನುಗ್ಗಿದವರು ನಾಯಕ್ ಕೆ ತಿಮ್ಮಯ್ಯ. ಉಗ್ರರು ಮತ್ತು ಸೈನಿಕರ ನಡುವಿನ‌ ಈ ಧಿಡೀರ್ ಚಕಮಕಿಯಲ್ಲಿ ಇವರಿಗೆ ಮೂರು ಗುಂಡುಗಳು ತಗುಲಿದ್ದವು. ನಂತರ ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ 4 ದಿನ ನರಳಿ ಕೊನೆಗೆ ಉಸಿರು ಚೆಲ್ಲಿದರು.  

ವೀರರ ನಾಡು ಕೊಡಗಿನ ಕುವರ ನಾಯಕ್ ಕೆ ಕೆ ತಿಮ್ಮಯ್ಯ ಇಷ್ಟಪಟ್ಟು ಹೆಚ್ಚು ಅಪಾಯದ ಪ್ರದೇಶಗಳಲ್ಲಿ ದೇಶ ಕಾದಿದ್ದರು. ಸಿಯಾಚಿನ್, ಲಡಾಕ್, ಭಾರತ-ಚೀನಾ ಗಡಿ, ಕಾಶ್ಮೀರದ ಗಡಿ ಇವೆಲ್ಲಾ ಉಳಿದವರಿಗೆ ಡೇಂಜರ್ ಜೋನ್ ಎನಿಸಿದ್ರೆ ಇವರಿಗೆ ಮಾತ್ರ ಶತ್ರುಗಳನ್ನು ಸದೆಬಡೆಯಲು ಅತ್ಯುತ್ತಮ ವೇದಿಕೆಯಂತೆ ಭಾಸವಾಗಿತ್ತು. ತಾನು ಸಿಪಾಯಿಯಾಗಿರುವ ಅದೇ ತಂಡವನ್ನು ಯುದ್ಧಭೂಮಿಯಲ್ಲಿ ಮುನ್ನೆಡೆಸೋ ಬೃಹತ್ ಕನಸು ಅವರದಾಗಿತ್ತು. ಕುಟುಂಬದ ಜೊತೆ ಮಾತನಾಡುವಾಗೆಲ್ಲಾ ಕ್ಲಿಷ್ಟಕರವಾದ ಗಡಿ ಭಾಗದ ಕಥೆಗಳನ್ನು, ಅಲ್ಲಿ ಸೈನಿಕರು ದೇಶ ಕಾಯಲು ಮಾಡುವ ಸಾಹಸದ ಗಾಥೆಗಳನ್ನು ಹೆಮ್ಮೆಯಿಂದ ಹೇಳುತ್ತಿದ್ದರಂತೆ. 

ಗ್ರಾಮ ಪಂಚಾಯತ್ ಚುನಾವಣೆ ಸಮೀಪ ಹಿನ್ನೆಲೆ; ಸಾವಿನ‌ ಮನೆಯಲ್ಲೂ ಬಿಜೆಪಿ-ಜೆಡಿಎಸ್​ ಸಾಂತ್ವನದ ರಾಜಕೀಯ

ಪತ್ನಿ ಆಶಾ ಬಳಿ ಗಂಡನ ನೆನಪಿಗೆ ಇರುವುದು ಮಗಳು ದೀಯಾ. ಮಗಳ ಮೊದಲನೇ ವರ್ಷದ ಹುಟ್ಟು ಹಬ್ಬಕ್ಕೆ 20 ದಿನ ರಜೆ ತೆಗೆದುಕೊಂಡು ಊರಿಗೆ ಬಂದು ಹೋಗಿ ವಾಪಸ್ ಡ್ಯೂಟಿಗೆ ಸೇರಿದ್ದಷ್ಟೇ ಗೊತ್ತು.  ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಹತನಾದ ಯೋಧ ತನ್ನ ತಂದೆ ಎಂದು ಹೇಳಿಕೊಳ್ಳೋಕೆ ಆ ಮಗಳ ಬಳಿ ಇರೋದು ಒಂದೇ ಒಂದು ಚಿತ್ರ. ಅದೂ ಆಕೆಗೆ 1 ವರ್ಷವಿದ್ದಾಗ ತೆಗೆದಿದ್ದು. ಆನಂತರ ಅಪ್ಪ ಎನ್ನುವ ವ್ಯಕ್ತಿ ಎಲ್ಲರ ಮಾತುಗಳಲ್ಲಿ ಬರುವ ವೀರಯೋಧ ಮಾತ್ರ.ನಾಯಕ್ ಕೆ ಕೆ ತಿಮ್ಮಯ್ಯ ಮಡಿಕೇರಿಯ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾಗ ಪಕ್ಕದ ಮೈದಾನದಲ್ಲಿ ಆರ್ಮಿ ಕ್ಯಾಂಪ್ ನಡೆಯುತ್ತಿತ್ತಂತೆ. ಕುತೂಹಲಕ್ಕೆ ಅಲ್ಲಿಗೆ ಹೋದ ಯುವಕ ದೇಶಸೇವೆಗೆ ಬದುಕನ್ನು ಮುಡಿಪಾಗಿಡಲು ನಿರ್ಧರಿಸಿಬಿಟ್ಟಿದ್ದರು.

ಇನ್ನು, ದೇಶ ಕಾಯುವ ಯೋಧನಿಗೇ ಮಗಳನ್ನು ಕೊಡುವ ನಿರ್ಧಾರ ಮಾಡಿದ್ದರು ಆಶಾಳ ಪೋಷಕರು. ಅದರಂತೆ  ಆಶಾಳನ್ನು ಮದುವೆಯಾಗಿ ಇನ್ನೇನು ಬದುಕು ಬಂಗಾರವಾಗ್ತಿತ್ತು.. ಆದ್ರೆ ಅಷ್ಟರಲ್ಲಾಗಲೇ ವಿಧಿ ಇವರ ಬಾಳಿನಲ್ಲಿ ಆಟವಾಡಿತ್ತು. ಒಂದು ವರ್ಷದ ಕಂದ ದೀಯಾ ಜೊತೆಗೆ ಆಶಾ ತಿಮ್ಮಯ್ಯ ಬದುಕು ಮುಂದುವರೆದಿದೆ. ಬದುಕ್ಕಿದ್ದಷ್ಟು ದಿನ ಇವರು ಭೇಟಿಯಾಗಿದ್ದು ಆರೇ ಆರು ಸಲ. ನೆನಪುಗಳಿಗೆ ಇರುವುದು ಮದುವೆಯ ಆಲ್ಬಂ ಮತ್ತು ಆರ್ಮಿ ಕ್ಯಾಂಪ್ ನಿಂದ ಆತ ಮಾಡುತ್ತಿದ್ದ ಚುಟುಕಾದ ಕರೆಗಳ ಸ್ಮರಣೆ ಮಾತ್ರ.

ಪ್ರತಿಷ್ಟಿತ ಮಡ್ರಾಸ್ ರೆಜಿಮೆಂಟ್‌ಗೆ ಸೇರಿದ್ದರು ನಾಯಕ್ ಕೆ ತಿಮ್ಮಯ್ಯ. ‌ಸಿಪಾಯಿಯಿಂದ ನಾಯಕ್ ಸ್ಥಾನಕ್ಕೆ ಏರಿದ್ದ ಇವರಿಗೆ ಒಂದೆರಡು ತಿಂಗಳಲ್ಲಿ ಮತ್ತೊಂದು ಪ್ರೊಮೋಷನ್ ಆಗಿ ಸುಬೇದಾರ್ ಪಟ್ಟ ಸಿಗುವುದರಲ್ಲಿತ್ತು. ಆಗಲೇ ಹದಿಮೂರುವರೆ ವರ್ಷ ಸೈನ್ಯದಲ್ಲಿ ಕಳೆದಿದ್ದ ಇವರಿಗೆ 15 ವರ್ಷ ಆದ ನಂತರ ನಿವೃತ್ತಿ ಪಡೆದು ಮರಳಲು ಪತ್ನಿ ಸೂಚಿಸಿದಾಗೆಲ್ಲಾ ತಾನಿನ್ನೂ ಹೆಚ್ಚು ವರ್ಷ ದೇಶಸೇವೆ ಮಾಡುತ್ತೇನೆ ಎನ್ನುತ್ತಿದ್ದರಂತೆ. ಅಂಥಾ ವೀರನನ್ನು ಕಳೆದುಕೊಂಡ ದೇಶ ನತದೃಷ್ಟ ಎನ್ನಬೇಕಷ್ಟೇ.
Published by:Latha CG
First published: