ನೆಟ್​ವರ್ಕ್​ ಸಮಸ್ಯೆ: ಆನ್​ಲೈನ್​ ಕ್ಲಾಸ್​ಗಾಗಿ ಕೇರಳಕ್ಕೆ ತೆರಳುವ ಕೊಡಗಿನ ಗಡಿಭಾಗದ ವಿದ್ಯಾರ್ಥಿಗಳು

ಕೇರಳದ ಪಾಣತ್ತೂರಿಗೆ ಹೋಗಿ ಅಲ್ಲಿ ಯಾವುದಾದರೂ ಮೈದಾನ ಅಥವಾ ಗುಡ್ಡಗಾಡು ಪ್ರದೇಶದಲ್ಲಿ ಕುಳಿತು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳನ್ನು ಕೇಳಿ ವಾಪಸ್ ಬರಬೇಕಾಗಿದೆ

ನೆಟ್​ವರ್ಕ್​ ಸಮಸ್ಯೆ

ನೆಟ್​ವರ್ಕ್​ ಸಮಸ್ಯೆ

  • Share this:
ಕೊಡಗು (ಆ. 23) : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಶಾಲಾ ಕಾಲೇಜು ಆರಂಭವಾದರು ಕೋವಿಡ್ ಪಾಸಿಟಿವಿಟಿ ರೇಟ್ ಜಾಸ್ತಿ ಇರುವುದರಿಂದ ಕೊಡಗಿನಲ್ಲಿ ಮಾತ್ರ ಇನ್ನೂ ಶಾಲೆಗಳು ಆರಂಭವಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳನ್ನೇ (online Class) ಅವಲಂಬಿಸಬೇಕಾಗಿದೆ. ವಿಪರ್ಯಾಸವೆಂದರೆ ಆನ್‌ಲೈನ್ ತರಗತಿಗೆಯನ್ನಾದರೂ ಕೇಳೋಣ ಎಂದರೆ ಯಾವ ನೆಟ್ವರ್ಕ್ ಕೂಡ ಇಲ್ಲ. ನೆಟ್ ವರ್ಕ್ ಇಲ್ಲದಿರುವುದರಿಂದ ಕೊಡಗಿನ ಗಡಿಭಾಗದ (kodagu border villages) ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗೆ ಬೇಕಾದ ನೆಟ್ ವರ್ಕ್ ಗಾಗಿ (network Issue) ಪಕ್ಕದ ಕೇರಳ (kerala) ರಾಜ್ಯವನ್ನು ಅವಲಂಬಿಸಬೇಕಾಗಿದೆ. ಹೌದು ಕೊಡಗು ಮತ್ತು ಕೇರಳ ಗಡಿಭಾಗದಲ್ಲಿರುವ ಕರಿಕೆ ಗ್ರಾಮದಲ್ಲಿ ಬಿಎಸ್ಎನ್ಎಲ್  2 ಜಿ  (BSNL 2G)ನೆಟ್ವರ್ಕ್  ಬಿಟ್ಟರೆ ಇನ್ನು ಯಾವುದೇ ನೆಟ್ ವರ್ಕ್ ಇಲ್ಲ. ಅದರಲ್ಲೂ ವಿದ್ಯುತ್ ಇಲ್ಲದಿದ್ದರೆ ಬಿಎಸ್ಎನ್ಎಲ್ 2 ಜಿ ನೆಟ್ವರ್ಕ್ ಕೂಡ ಇರೋದಿಲ್ಲ. ಹೀಗಾಗಿ ನೆಟ್ವರ್ಕ್ ಅರಸಿ ಕರಿಕೆ ಮತ್ತು ಚತ್ತುಕಾಯ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಕರ್ನಾಟಕದ ಕರಿಕೆಯಿಂದ ಕೇರಳದ ಪಾಣತ್ತೂರಿಗೆ ಹೋಗಿ ಆನ್‌ಲೈನ್ ತರಗತಿ ಕೇಳಬೇಕಾಗಿದೆ.

ಕರಿಕೆಯಿಂದ ಕೇರಳಕ್ಕೆ ನಿತ್ಯ ಆಟೋ ಬೈಕುಗಳನ್ನು  ಹೇರಿ ಕೇರಳದ ಪಾಣತ್ತೂರಿಗೆ ಹೋಗಿ ಅಲ್ಲಿ ಯಾವುದಾದರೂ ಮೈದಾನ ಅಥವಾ ಗುಡ್ಡಗಾಡು ಪ್ರದೇಶದಲ್ಲಿ ಕುಳಿತು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳನ್ನು ಕೇಳಿ ವಾಪಸ್ ಬರಬೇಕಾಗಿದೆ ಎನ್ನೋದು ವಿದ್ಯಾರ್ಥಿಗಳ ಗೋಳು. ಹೀಗೆ ನಿತ್ಯ ಕೇರಳಕ್ಕೆ ಹೋಗಿ ಬರಬೇಕಾಗಿರುವುದರಿಂದ ಅತ್ತ ಕೇರಳದ ಪೊಲೀಸರು ಆರ್ ಟಿಪಿಸಿಆರ್  ನೆಗೆಟಿವ್ ವರದಿ ಕೇಳುತ್ತಾರೆ.

ಹೇಗಾದರೂ ಮಾಡಿ ಬೆಳಿಗ್ಗೆ ಪಾಣತ್ತೂರಿಗೆ ತಲುಪಿದರೂ ಅಲ್ಲಿ ಆನ್‌ಲೈನ್ ತರಗತಿ ಮುಗಿಸಿ ಕೊಡಗಿನ ಕರಿಕೆ ಚತ್ತುಕಾಯ ಗ್ರಾಮಗಳಿಗೆ ವಾಪಸ್ ಬರಬೇಕಾದರೆ ಇತ್ತ ಕರ್ನಾಟಕದ ಪೊಲೀಸರು ಕೂಡ ಕರಿಕೆ ಚೆಕ್‍ಪೋಸ್ಟ್ ನಲ್ಲಿ ಕೋವಿಡ್ ನೆಗೆಟಿವ್ ವರದಿ ಇಲ್ಲವೆಂದು ಕರ್ನಾಟಕಕ್ಕೆ ಬಿಡುವುದಿಲ್ಲ. ಏನಾದರೂ ಆಗಲಿ ಕೋವಿಡ್ ಟೆಸ್ಟ್ ಮಾಡಿಸೋಣವೆಂದರೆ 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರವೇ ರಾಜ್ಯಕ್ಕೆ ಎಂಟ್ರಿ ಆಗಲು ಸಾಧ್ಯ. ಇಲ್ಲದಿದ್ದರೆ ಸಾಧ್ಯವಿಲ್ಲ. ಗಡಿ ಚೆಕ್‍ಪೋಸ್ಟ್ ನಲ್ಲಿ ನಿಂತು ಪರದಾಡಬೇಕಾದ ಸ್ಥಿತಿ ಇದೆ ಎನ್ನೋದು ಪೋಷಕರಾದ ನಾಸೀರ್ ಅವರ ಅಳಲು.

ಇದನ್ನು ಓದಿ: ಆಗಸ್ಟ್​ 29ರಂದು ನಾಯಂಡಹಳ್ಳಿ-ಕೆಂಗೇರಿ ಮಾರ್ಗಕ್ಕೆ ಹಸಿರು ನಿಶಾನೆ

ಹೀಗಾಗಿ ವಿದ್ಯಾರ್ಥಿ ಪೋಷಕರು ಇನ್ನಿಲ್ಲದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಕೇರಳಕ್ಕೆ ಕರೆದೊಯ್ಯಲು ಪ್ರತೀ ವಿದ್ಯಾರ್ಥಿಯೊಂದಿಗೆ ಪೋಷಕರು ಕೂಡ ಜೊತೆಯಲ್ಲೇ ಹೋಗಬೇಕಾಗಿದ್ದು ಇದು ಕೂಲಿ ಮಾಡಿ ಬದುಕುವ ಕುಟುಂಬಗಳಿಗೆ ಕೂಲಿಯನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಿಸಿದೆ. ಇಡೀ ದಿನ ತಮ್ಮ ಮಗುವಿನೊಂದಿಗೆ ಇದ್ದರೆ ಅತ ಕ ಕೂಲಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹಲವು ವರ್ಷಗಳಿಂದಲೂ ನೆಟ್ವರ್ಕ್ ಸಮಸ್ಯೆ ತೀವ್ರವಾಗಿರುವುದನ್ನು ಜಿಲ್ಲಾಧಿಕಾರಿಗಳು  ಮತ್ತು ಸಚಿವರ ಗಮನಕ್ಕೆ ತರಲಾಗಿದೆ. ಆದರೂ ಯಾರೂ ನಮ್ಮ ಸಮಸ್ಯೆಯನ್ನು ಕೇಳುವವರಿಲ್ಲ ಎನ್ನೋದು ಸ್ಥಳೀಯರ ಅಸಮಾಧಾನ. ಒಟ್ಟಿನಲ್ಲಿ ಕೋವಿಡ್ ಕಾರಣದಿಂದ ಬೌತಿಕ ತರಗತಿಗಳಿಲ್ಲದೆ ಪರದಾಡುತ್ತಿರುವ ಕರಿಕೆ ಗ್ರಾಮದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಾಗಿ ನೆಟ್ವರ್ಕ್ ಅರಸಿ ಕೇರಳಕ್ಕೆ ಅಲೆಯುವಂತಾಗಿರುವುದು ವಿಪರ್ಯಾಸ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: