Kodagu: ಮಾತು ತಪ್ಪಿದ ಸರ್ಕಾರ; ಪುನರ್ವಸತಿ ಕೇಂದ್ರಗಳ ಬಿಟ್ಟು ಹಾಡಿಗೆ ಬಂದ ಆದಿವಾಸಿಗಳು

ಪುನರ್ವಸತಿ ಕೇಂದ್ರದಲ್ಲಿ ಮೂಲಸೌಲಭ್ಯ ನೀಡದ ಹಿನ್ನೆಲೆ ಕೊಡಗಿನ ಹಾಡಿಗಳಿಗೆ 177 ಕುಟುಂಬಗಳು ವಾಪಸ್ ಆಗಿವೆ. ಆದ್ರೆ ಅವರು ಮರಳಿ ಅರಣ್ಯ ಪ್ರವೇಶಿಸಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಡೆದಿದೆ.

ಆದಿವಾಸಿಗಳ ಪ್ರತಿಭಟನೆ

ಆದಿವಾಸಿಗಳ ಪ್ರತಿಭಟನೆ

  • Share this:
ಕೊಡಗು (ಮೇ. 10): ಅವರೆಲ್ಲಾ ಹಚ್ಚ ಹಸಿರ ಅಡವಿಯಲ್ಲಿ ಪ್ರಾಣಿ ಪಕ್ಷಿಗಳೊಂದಿಗೆ ಬೆರೆತು ಬದುಕನ್ನ (Life) ಕಟ್ಟಿಕೊಂಡಿದ್ರು. ಪ್ರಕೃತಿಯೇ ಅವರ ಪ್ರಪಂಚ ಆಗಿತ್ತು. ಅವರನ್ನು  ನಾಡಿಗೆ ಬನ್ನಿ ಅಂತ ಸರ್ಕಾರ (Government) ಆಹ್ವಾನ ಕೊಟ್ಟು ಆಸೆ ತೋರಿಸಿತ್ತು. ಆದ್ರಂತೆ ಸರ್ಕಾರವನ್ನ ನಂಬಿ ಬಂದ‌ ಮುಗ್ಧ ಜನರಿಗೆ ಕೊಟ್ಟ ಮಾತನ್ನು (Words) ಸರ್ಕಾರ ಉಳಿಸಿಕೊಳದಾಗಿದೆ. ಇದು ಕಾಡಿನ‌ (Forest) ಮಕ್ಕಳನ್ನ  ಕೆರಳಿಸಿದೆ. ಇದ್ರಿಂದ ಅವರೆಲ್ಲಾ ಮರಳಿ ಕಾಡು ಸೇರುವ ಸ್ಥಿತಿ ಬಂದೊದಗಿದೆ.

ನಾಡಿನಾಸೆ ತೋರಿಸಿದ ಅಧಿಕಾರಿಗಳು

ಅವರಿಗೆ ಕಾಡೇ ಪ್ರಪಂಚ. ಪ್ರಾಣಿ ಪಕ್ಷಿಗಳೇ ಬಂದು ಬಳಗ. ಅರಣ್ಯ ಸಂಪತ್ತೇ ಆಹಾರ. ಪ್ರಕೃತಿಯೇ ದೇವರು. ಹೀಗೆ ಬದುಕುತ್ತಿದ್ದ ಮುಗ್ಧ ಕಾಡಿನ ಮಕ್ಕಳಿಗೆ ಸರ್ಕಾರ ಕ್ಷಮಿಸಲಾರದ ದ್ರೋಹ ಮಾಡಿಬಿಟ್ಟಿದೆ. ಕೊಟ್ಟ ಮಾತು ತಪ್ಪಿದೆ. ಅರಣ್ಯದಲ್ಲಿ ಬದುಕು ಕಟ್ಟಿಕೊಂಡವರಿಗೆ ನಾಡಿನಾಸೆ ತೋರಿಸಿ ಬೀದಿಗೆ ತಳ್ಳಿಬಿಟ್ಟಿದೆ. ಇಂತದ್ದೊಂದು ಅಮಾನವೀಯ ಘಟನೆ ನಡೆದಿರೋದು ಕೊಡಗು ಜಿಲ್ಲೆಯಲ್ಲಿ.

ಕೊಟ್ಟ ಮಾತು ತಪ್ಪಿದ ಸರ್ಕಾರ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಆಡುಗುಂಡಿ ಹಾಡಿ, ಜಂಗಲ್ ಹಾಡಿಗಳಿಂದ 2018 ರಲ್ಲಿ ಆದಿವಾಸಿಗಳನ್ನ ಸ್ಥಳಾಂತರ ಮಾಡಲಾಗಿತ್ತು. ಹೆಚ್ ಡಿ ಕೋಟೆಯ ಮಾಸ್ತಿಗುಡಿ, ಹುಣಸೂರು ತಾಲ್ಲೂಕಿನ ನಾಗಪುರ ಹಾಡಿಗಳ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ಹೀಗೆ ಸ್ಥಳಾಂತರ ಮಾಡುವಾಗ ಪ್ರತೀ ಕುಟುಂಬಕ್ಕೆ ಮೂರು ಎಕರೆ ಭೂಮಿ ಕೊಡುವ ಭರವಸೆ ನೀಡಲಾಗಿತ್ತು. ಅದ್ರಂತೆ ಹಕ್ಕುಪತ್ರ ಮಾತ್ರ ನೀಡಲಾಗಿದ್ದು, ಅರಣ್ಯ ಭೂಮಿಯಂತಹ ಜಾಗವನ್ನು ತೋರಿಸಿ ಬಿಡಲಾಗಿದೆ ಅಷ್ಟೇ. ಅದನ್ನು ಸಮತಟ್ಟು ಮಾಡಿಕೊಟ್ಟಿಲ್ಲ ಭೂಮಿಗೆ ಆರ್‌ಟಿಸಿ ಕೊಟ್ಟಿಲ್ಲ. ಮೈಸೂರು ಜಿಲ್ಲೆಯಲ್ಲಿ ಕೂಲಿಯೂ ಇಲ್ಲದಿರುವುದರಿಂದ ಬದುಕೇ ದುಸ್ಥರವಾಗಿದೆ ಅಂತ ಪ್ರತಿಭಟನಾನಿರತ ಲಲಿತಾ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನು ಓದಿ: ಆಂಧ್ರ ಕರಾವಳಿಯಲ್ಲಿ ಪರಿಸ್ಥಿತಿ ನಿಭಾಯಿಸಲು NDRF​​​ ಸಜ್ಜು; ಬೆಂಗಳೂರಲ್ಲಿ ಶುರುವಾದ ಮಳೆ

ಪುನರ್ವಸತಿ ಕೇಂದ್ರ ತೊರೆದ ಹಾಡಿ ಜನರು

ಹೆಚ್ ಡಿ ಕೋಟೆ ತಾಲ್ಲೂಕಿನ ಮಾಸ್ತಿಗುಡಿ ಪುನರ್ವಸತಿ ಕೇಂದ್ರವನ್ನು ಬಿಟ್ಟು ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಪಂಚಾಯಿತಿ ವ್ಯಾಪ್ತಿಯ ಆಡುಗುಂಡಿಗೆ ಬಂದು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಕೊಟ್ಟ ಭರವಸೆ ಈಡೇರಿಸುವಂತೆ ಕಳೆದ ನಾಲ್ಕು ವರ್ಷಗಳಿಂದ ಪರಿಪರಿಯಾಗಿ ಬೇಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಒಂದು ತಿಂಗಳ ಹಿಂದೆ ಪ್ರಧಾನಿ ಮೋದಿ, ಹೆಚ್‌ಡಿ ಕೋಟೆ ಶಾಸಕ ಚಿಕ್ಕಮಾದು, ಮೈಸೂರು ಜಿಲ್ಲಾಧಿಕಾರಿಗೆ ಪತ್ರ ಬರೆಯ ಲಾಗಿತ್ತು. ಆದ್ರೆ ಯಾರು ಗಮನಹರಿಸದ ಹಿನ್ನೆಲೆ ತಮ್ಮ ಮೂಲ ಸ್ಥಾನ ಕಾಡಿನತ್ತ ಮುಖ ಮಾಡಿದ್ದೇವೆ ಎಂದು ನೊಂದ ಸಣ್ಣಪ್ಪ ಹೇಳಿದ್ದಾರೆ.

ಇದನ್ನು ಓದಿ: Bidar​ನಲ್ಲಿ ನೀರಿಗೆ ಹಾಹಾಕಾರ; ನಮ್ಮ ಅಳಲು ಯಾರಿಗೂ ಬೇಡ ಎನ್ನುತ್ತಿದ್ದಾರೆ ಗ್ರಾಮಸ್ಥರು

ಮೂಲ ಸೌಲಭ್ಯ ವಂಚನೆ

ಪುನರ್ವಸತಿ ಕೇಂದ್ರದಲ್ಲಿ ಮೂಲಸೌಲಭ್ಯ ನೀಡದ ಹಿನ್ನೆಲೆ ಕೊಡಗಿನ ಹಾಡಿಗಳಿಗೆ 177 ಕುಟುಂಬಗಳು ವಾಪಸ್ ಆಗಿವೆ. ಆದ್ರೆ ಅವರು ಮರಳಿ ಅರಣ್ಯ ಪ್ರವೇಶಿಸಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಡೆದಿದೆ. ಹೀಗಾಗಿ ಆದಿವಾಸಿ ಕುಟುಂಬಗಳು ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆಯಲ್ಲಿ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆಯಲ್ಲಿಯೇ ಟೆಂಟ್‌ಗಳನ್ನು ಹಾಕಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸುತ್ತಿದ್ದಾರೆ. ಸೌಲಭ್ಯ ಕಲ್ಪಿಸದ ಹೊರತು ಪುನರ್ ವಸತಿ ಕೇಂದ್ರಗಳಿಗೆ ಹೋಗುವುದಿಲ್ಲ ಎಂದು ಆದಿವಾಸಿಗಳ ಮುಖಂಡ ಅಯ್ಯಪ್ಪ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಒಟ್ಟಿನಲ್ಲಿ ಮುಗ್ಧ ಕಾಡಿನ ಜನರಿಗೆ ಇದ್ದ ಸೂರು ಕಿತ್ಕೊಂಡು ಪಟ್ಟಣದ ಆಸೆ ತೋರಿಸಿ ಸರ್ಕಾರ ಮೋಸ ಮಾಡಿಬಿಟ್ಟಿದೆ. ಹೀಗಾಗಿ ಆದಿವಾಸಿಗಳು ಮತ್ತೆ ತಮ್ಮ ಮೂಲಸ್ಥಾನ ಕಾಡಿನತ್ತ ಮುಖಮಾಡಿದ್ದು, ಸದ್ಯ ಅವರ ಬದುಕು ಬಾಂಡಲೆಗೆಯಿಂದ ಬೆಂಕಿಗೆ ಬಿದ್ದಂತಾಗಿದೆ.
Published by:Seema R
First published: