Kodagu Flood: ಕೊಡಗಿನಲ್ಲಿ ಧಾರಾಕಾರ ಮಳೆ; ಪ್ರವಾಹದ ಭೂಕುಸಿತದಲ್ಲಿ ತಲಕಾವೇರಿ ದೇಗುಲದ ಅರ್ಚಕರ ಕುಟುಂಬ ಕಣ್ಮರೆ 

Karnataka Rain: ಕೊಡಗಿನಲ್ಲಿ ಒಂದೆಡೆ ಭೂಕುಸಿತವಾಗಿದ್ದರೆ, ಮತ್ತೊಂದೆಡೆ ಉಕ್ಕಿ ಹರಿಯುತ್ತಿರುವ ಕಾವೇರಿ ಪ್ರವಾಹಕ್ಕೆ ಹತ್ತಾರು ಹಳ್ಳಿಗಳ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ನಾಪೋಕ್ಲು ಸಮೀಪದ ಕೊಟ್ಟಮುಡಿಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಹತ್ತಾರು ಮನೆಗಳು ಮುಳುಗಡೆಯಾಗಿವೆ.

sconetwork18 | news18-kannada
Updated:August 7, 2020, 7:55 AM IST
Kodagu Flood: ಕೊಡಗಿನಲ್ಲಿ ಧಾರಾಕಾರ ಮಳೆ; ಪ್ರವಾಹದ ಭೂಕುಸಿತದಲ್ಲಿ ತಲಕಾವೇರಿ ದೇಗುಲದ ಅರ್ಚಕರ ಕುಟುಂಬ ಕಣ್ಮರೆ 
ಕೊಡಗಿನಲ್ಲಿ ಪ್ರವಾಹದಿಂದ ಭೂಕುಸಿತವಾದ ಜಾಗಕ್ಕೆ ದೌಡಾಯಿಸಿದ ರಕ್ಷಣಾ ಸಿಬ್ಬಂದಿ
  • Share this:
ಕೊಡಗು : ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ನಲುಗಿ ಹೋಗಿದ್ದ ಕೊಡಗಿಗೆ ಮೂರನೇ ವರ್ಷವೂ ಆಘಾತ ಎದುರಾಗಿದೆ. ಒಂದೆಡೆ ಜಿಲ್ಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದರೆ, ಮತ್ತೊಂದೆಡೆ ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಭೀಕರ ಭೂಕುಸಿತವಾಗಿ ಐವರು ಕಣ್ಮರೆ ಆಗಿದ್ದಾರೆ. ನಿಜಕ್ಕೂ ಕೊಡಗಿನ ಸ್ಥಿತಿ ಶೋಚನೀಯವಾಗಿದೆ.  ಒಂದೆಡೆ ಉಕ್ಕಿ ಭೋರ್ಗರೆದು ಹರಿಯುತ್ತಿರುವ ಕಾವೇರಿ ನದಿ, ತಾವು ಬದುಕಿದರೆ ಸಾಕೆಂದು ಕೈಗೆ ಸಿಕ್ಕ ಸಾಮಾನು ಸರಂಜಾಮುಗಳ ಗಂಟು ಮೂಟೆ ಕಟ್ಟಿ ಸಾಗಿಸುತ್ತಿರುವ ಜನ. ಮತ್ತೊಂದೆಡೆ ಹತ್ತಾರು ಎಕರೆಯಷ್ಟು ಪ್ರದೇಶದ ಬೆಟ್ಟವೇ ಕುಸಿದು ಹೋಗಿರುವ ದುರಂತ. ಇವೆಲ್ಲವೂ ಕೊಡಗಿನ ಭೀಕರ ಸ್ಥಿತಿಯನ್ನು ಸಾರಿ ಹೇಳುತ್ತಿವೆ.

ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿದಿದ್ದ ಆಶ್ಲೇಷ ಮಳೆ, ಕಾವೇರಿ ಉಗಮ ಸ್ಥಾನ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟವೇ ಸರ್ವನಾಶವಾಗುವಂತೆ ಮಾಡಿದೆ. ಭಾಗಮಂಡಲ, ತಲಕಾವೇರಿ ಸುತ್ತಮುತ್ತ 170 ಮಿಲಿ ಮೀಟರ್ ಮಳೆ ಸುರಿಯುತ್ತಿದ್ದಂತೆ ಜಿಲ್ಲೆಗೆ  ರೆಡ್ ಅಲರ್ಟ್ ಘೋಷಣೆಯಾಗಿತ್ತು. ನಿನ್ನೆ ಮುಂಜಾನೆ ಬೆಟ್ಟ ಕುಸಿದು ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಮತ್ತು ಅವರ ಕುಟುಂಬದ ಐವರು ಕಣ್ಮರೆಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎನ್ ಡಿಆರ್ ಎಫ್ ತಂಡ ಸ್ಥಳಕ್ಕೆ ದೌಡಾಯಿಸಲು ಪ್ರಯತ್ನಿಸಿತ್ತು. ಆದರೆ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆ ಆಗಿದ್ದರಿಂದ ಆ ಪ್ರದೇಶವನ್ನು ದಾಟಿ ಹೋಗಬೇಕಾದ ಸವಾಲಿತ್ತು.

ಭೂಕುಸಿತವಾಗಿರುವ ಸ್ಥಳ


ಇದನ್ನೂ ಓದಿ: Gadag Rain:ಗದಗ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ: ಹೆಚ್ಚಾದ ಬೆಣ್ಣೆ ಹಳ್ಳದ ಅಬ್ಬರ, ಯಾವಗಲ್ ಗ್ರಾಮದ ಸೇತುವೆ ಮುಳುಗಡೆ

ಅಷ್ಟೇ ಅಲ್ಲ, ಪ್ರತೀ ಅರ್ಧ ಕಿಲೋ ಮೀಟರ್ ದೂರದಲ್ಲೂ ಭೂಕುಸಿತ, ಬರೆ ಕುಸಿತ ಆಗಿದ್ದರಿಂದ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲದೆ ಎನ್ ಡಿಆರ್ ಎಫ್ ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿ ನಡೆದ ಹೋಗಬೇಕಾಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಎಸ್ಪಿ ಕ್ಷಮಾ ಮಿಶ್ರಾ ಕೂಡ ಭಾಗಮಂಡಲದಿಂದ ನಡೆದೇ ಭೂಕುಸಿತ ಆಗಿರುವ ಸ್ಥಳಕ್ಕೆ ತಲುಪಬೇಕಾಯಿತು. ವಿಪರ್ಯಾಸವೆಂದರೆ ಮಳೆ ಆರ್ಭಟ ಮಾತ್ರ ಇನ್ನು ನಿಂತಿಲ್ಲ. ಜೊತೆಗೆ ಭಾರೀ ಪ್ರಮಾಣದಲ್ಲಿ ಮಂಜು ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಚರಣೆಗೆ ತೀವ್ರ ಅಡ್ಡಿ ಎದುರಾಗಿದೆ.

ಭೂಕುಸಿತದಲ್ಲಿ ಸಿಲುಕಿ ನಾಪತ್ತೆಯಾಗಿರುವ ಅರ್ಚಕ ನಾರಾಯಣ ಆಚಾರ್


ಒಂದೆಡೆ ಭೂಕುಸಿತವಾಗಿದ್ದರೆ, ಮತ್ತೊಂದೆಡೆ ಉಕ್ಕಿ ಹರಿಯುತ್ತಿರುವ ಕಾವೇರಿ ಪ್ರವಾಹಕ್ಕೆ ಹತ್ತಾರು ಹಳ್ಳಿಗಳ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ನಾಪೋಕ್ಲು ಸಮೀಪದ ಕೊಟ್ಟಮುಡಿಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಹತ್ತಾರು ಮನೆಗಳು ಮುಳುಗಡೆಯಾಗಿವೆ. ಚೆರಿಯಪರಂಬು ಪೈಸಾರಿಯ 70 ಕ್ಕೂ ಹೆಚ್ಚು ಮನೆಗಳು ಪ್ರವಾಹದಲ್ಲಿ ಮುಳುಗಡೆಯಾಗಿವೆ. ವಿರಾಜಪೇಟೆ ತಾಲ್ಲೂಕಿನ ಕರಡಿಗೋಡಿನಲ್ಲೂ ಪ್ರವಾಹದಲ್ಲಿ ಮನೆಗಳು ಮುಳುಗಿ 14 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನು ಗಡಿಭಾಗ ಕುಶಾಲನಗರದಲ್ಲೂ ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳ ಹಲವಾರು ಮನೆಗಳು ಪ್ರವಾಹದ ನೀರಿನಲ್ಲಿ ಮುಳುಗಿವೆ.ಇದನ್ನೂ ಓದಿ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಮಲಪ್ರಭಾ; ನದಿ ಪಾತ್ರದ ಜನರಲ್ಲಿ ಹೆಚ್ಚಾದ ಆತಂಕ

ಹೀಗೆ ಜಿಲ್ಲೆಯೇ ಮುಳುಗುವಷ್ಟು ತೀವ್ರ ಮಳೆಯಾಗುತಿದ್ದರಿಂದ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಇದ್ದ ನಾರಾಯಣ ಆಚಾರ್ ಅವರ ಕುಟುಂಬಕ್ಕೆ ಅಲ್ಲಿಂದ ಸ್ಥಳಾಂತರ ಆಗುವಂತೆ ಹಲವರು ನಿನ್ನೆ ಸಂಜೆಯಷ್ಟೇ ಪರಿಪರಿಯಾಗಿ ಹೇಳಿದ್ದರಂತೆ. ಆದರೆ ತಾವು ಹುಟ್ಟಿ ಬೆಳೆದ ಊರು. ಬಿಟ್ಟು ಹೋಗುವುದು ಹೇಗೆ?, ಏನೂ ಆಗುವುದಿಲ್ಲ ಎಂದು ನಾರಾಯಣ ಆಚಾರ್ ಸುಮ್ಮನಾಗಿದ್ದರಂತೆ. ಆದರೆ ಇಂದು ಬೆಳಗ್ಗೆ ತೋಟದ ರೈಟರ್ ಅಲ್ಲಿಗೆ ಹೋಗಿ ನೋಡಿದಾಗ ನಾರಾಯಣ ಆಚಾರ್ ಅವರ ಕುಟುಂಬದ ಎರಡು ಮನೆಗಳು ಅಷ್ಟೇ ಅಲ್ಲ, ಇಡೀ ಬೆಟ್ಟವೇ ಅಲ್ಲಿಂದ ಕಣ್ಮರೆಯಾಗಿದೆ. ಇದರೊಂದಿಗೆ ಕುಟುಂಬದ ಐವರು, 30ಕ್ಕೂ ಹೆಚ್ಚು ಜಾನುವಾರುಗಳು, ಮತ್ತು ಎರಡು ಕಾರುಗಳು ನಾಪತ್ತೆಯಾಗಿವೆ ಎನ್ನೋದು ಸ್ಥಳೀಯರ ನೋವು.

ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದಲೂ ಆಗಸ್ಟ್ ತಿಂಗಳಲ್ಲಿ ಕೊಡಗಿಗೆ ಕಂಟಕ ಎದುರಾಗುತ್ತಿದ್ದು, ಈ ಬಾರಿ ಏನೂ ಆಗೋದಿಲ್ಲ ಎಂಬ ಕೊಂಚ ನಿರಾಳ ಭಾವದಲ್ಲಿದ್ದ ಕೊಡಗಿನ ಜನರ ನೆಮ್ಮದಿಯನ್ನೇ ಆಗಸ್ಟ್ ತಿಂಗಳ ಆಷ್ಲೇಶ ಮಳೆ ಸರ್ವನಾಶ ಮಾಡಿದೆ.

(ವರದಿ: ರವಿ. ಎಸ್ ಹಳ್ಳಿ)
Published by: Sushma Chakre
First published: August 7, 2020, 7:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading