Kodagu: ಮಡಿಕೇರಿಯಿಂದ ವಿರಾಜಪೇಟೆವರೆಗಿನ 66 ಕೆವಿ ವಿದ್ಯುತ್ ಲೈನ್ ಗೆ ರೈತರ ವಿರೋಧ

ಈ ಗ್ರಾಮಗಳ ಮೂಲಕ ಹಾದು ಹೋಗುವ ಲೈನ್ 200 ಕ್ಕೂ ಹೆಚ್ಚು ರೈತರ ತೋಟ ಗದ್ದೆಗಳ ಮೂಲಕ ಹಾದು ಹೋಗಲಿದೆ. ಈ ಎಲ್ಲೆಡೆಯೂ ರೈತರ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ತೋಟ, ಭತ್ತದ ಗದ್ದೆಗಳು ಯೋಜನೆಗೆ ಆಪೋಷನ ಆಗಲಿವೆ.

ವಿದ್ಯುತ್ ಲೈನ್

ವಿದ್ಯುತ್ ಲೈನ್

  • Share this:
ಕೊಡಗು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು (KPTCL- Karnataka Power Transmission Corporation) ಕೊಡಗು ಜಿಲ್ಲೆಯಲ್ಲಿ (Kodagu) 66 ಕೆ ವಿ ವಿದ್ಯುತ್ ಲೈನ್ ಎಳೆಯಲು ಸಿದ್ಧತೆ ನಡೆಸಿದೆ. ಆದರೆ ಈ ಯೋಜನೆಯಿಂದ ತಮ್ಮ ಬದುಕಿಗೆ ಆಸರೆಯಾಗಿದ್ದ ತುಂಡು ಭೂಮಿ, ಹೊಲ, ಗದ್ದೆ, ತೋಟಗಳನ್ನು ನೂರಾರು ರೈತರು  (Farmers) ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಹೌದು ಮಡಿಕೇರಿ(Madikeri)ಯಲ್ಲಿರುವ 66/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿರಾಜಪೇಟೆ(Virajapete)ಯಲ್ಲಿರುವ 66/33/11 ಕೆ ವಿ ವಿದ್ಯುತ್ ವಿತರಣ ಕೇಂದ್ರದವರೆಗೆ ಒಟ್ಟು 37.38 ಕಿ ಲೋ ಮೀಟರ್ ಉದ್ದದ ಲೈನ್ ನಿರ್ಮಿಸಲು ಹೊರಟಿದೆ. ಇದಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮಡಿಕೇರಿಯಿಂದ ವಿರಾಜಪೇಟೆಗಿನ ಈ ವಿದ್ಯುತ್ ಲೈನ್ ಇಬ್ನಿಲವಾಡಿ, ಕಡಗದಾಳು, ಕಗ್ಗೋಡ್ಲು, ಬಿಳಿಗಿರಿ, ಹಾಕತ್ತೂರು, ಮರಗೋಡು, ಕಾಂತೂರು ಮೂಲಕ ಹಾದು ಮೂರ್ನಾಡು ತಲುಪಲಿದೆ. ಅಲ್ಲಿ 66/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರ ಆಗಲಿದೆ. ಮುಂದುವರೆಯುವ ಲೈನ್ ಎಂ. ಬಾಡಗ, ನಾಲ್ಕೇರಿ, ಮೈತಾಡಿ, ದೇವಗಿರಿ, ಐಮಂಗಲ, ಕೊಮ್ಮೆತೋಡು, ಮಗ್ಗುಲ ಗ್ರಾಮದ ಮಾರ್ಗವಾಗಿ ವಿರಾಜಪೇಟೆ ತಲುಪಲಿದೆ.

ಈ ಗ್ರಾಮಗಳ ಮೂಲಕ ಹಾದು ಹೋಗುವ ಲೈನ್ 200 ಕ್ಕೂ ಹೆಚ್ಚು ರೈತರ ತೋಟ ಗದ್ದೆಗಳ ಮೂಲಕ ಹಾದು ಹೋಗಲಿದೆ. ಈ ಎಲ್ಲೆಡೆಯೂ ರೈತರ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ತೋಟ, ಭತ್ತದ ಗದ್ದೆಗಳು ಯೋಜನೆಗೆ ಆಪೋಷನ ಆಗಲಿವೆ.

ಭೂಮಿ ಕಳೆದುಕೊಳ್ಳುವ ಭೀತಿ

ಹೀಗಾಗಿ ಕೊಡಗು ಜಿಲ್ಲಾಡಳಿತ ವಿರಾಜಪೇಟೆ ಮತ್ತು ಮಡಿಕೇರಿ ತಾಲ್ಲೂಕಿನ ರೈತರ ಒಪ್ಪಿಗೆ ಪಡೆಯಲು ವಿರಾಜಪೇಟೆ ಮತ್ತು ಮಡಿಕೇರಿಯಲ್ಲಿ ಪ್ರತ್ಯೇಕವಾಗಿ ಸಭೆ ಕರೆದಿತ್ತು. ಅಲ್ಲದೆ ಇದೇ ಸಭೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರ ಭೂಮಿಗೆ ಪರಿಹಾರದ ಮೊತ್ತವನ್ನು ನಿಗಧಿಗೊಳಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿತ್ತು. ಸಭೆಯಲ್ಲಿ ರೈತರು ಮೊದಲು ಸಮಾಧಾನವಾಗಿಯೇ ಈ ಯೋಜನೆ ಬೇಡವೆಂದು ವಿರೋಧ ವ್ಯಕ್ತಪಡಿಸಿದರು.

ಇದನ್ಣೂ ಓದಿ:  Kodagu Teacher: ವಿದ್ಯಾರ್ಥಿಗಳಿಗಾಗಿ ತಮ್ಮ ಸಂಬಳದ 1 ಲಕ್ಷ ರೂಪಾಯಿ ಮೀಸಲಿರಿಸುವ ಶಿಕ್ಷಕ

ತಮಗಿರುವ ಸಣ್ಣ ಪುಟ್ಟ ಭೂಮಿಯನ್ನು ಕೆಪಿಟಿಸಿಎಲ್ ಗೆ ನೀಡಿದರೆ ನಾವು ಬೀದಿಪಾಲಾಗಬೇಕಾಗುತ್ತದೆ ಎಂದು ಸಣ್ಣ ರೈತರು ವಿರೋಧ ವ್ಯಕ್ತಪಡಿಸಿದರೆ, ತಮ್ಮ ಹೊಲ, ಗದ್ದೆಗಳಲ್ಲಿ ಲೈನ್ ಆದು ಹೋದಲ್ಲಿ ಮುಂದೆಂದೂ ನಾವು ನಮ್ಮ ಭೂಮಿಯನ್ನು ಮತ್ಯಾವುದೇ ಅಭಿವೃದ್ಧಿ ಯೋಜನೆಗೆ ಬಳಸಲು ಸಾಧ್ಯವಿಲ್ಲ. ಆದ್ದರಿಂದ ಯೋಜನೆ ಬೇಡ ಎಂದು ವಿರೋಧಿಸಿದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ


ಪರಿಸರ ಪ್ರೇಮಿಗಳಿಂದಲೂ ವಿರೋಧ

ಇನ್ನು ಸಭೆಯಲ್ಲಿ ಭಾಗವಹಿಸಿದ್ದ ಸಾಕಷ್ಟು ಪರಿಸರ ಪ್ರೇಮಿಗಳು ಇರುವ ವಿದ್ಯುತ್ ಲೈನ್ ಗಳನ್ನೇ ಮೇಲ್ದರ್ಜೆಗೆ ಏರಿಸಿ. ಅದು ಬಿಟ್ಟು ಹೊಸ ಮಾರ್ಗ ಮಾಡಿ ರೈತರ ಹೊಲ ಜಮೀನುಗಳನ್ನು ಕಿತ್ತುಕೊಂಡು, ಕೊಡಗಿನ ಪರಿಸರವನ್ನು ಹಾಳು ಮಾಡಬೇಡಿ ಎಂದು ವಿರೋಧ ವ್ಯಕ್ತಪಡಿಸಿದರು.

ಸಭೆ ಬಹಿಷ್ಕರಿಸಿದ ರೈತರು

ಕೆಪಿಟಿಸಿಎಲ್ ಅಧೀಕ್ಷಕ ಎಂಜಿನಿಯರ್ ಗೋಪಾಲ ಗಾಂವ್ಕರ್ ರೈತರಿಗೆ ಪ್ರತೀ ಎಕರೆಗೆ ಎರಡು ಲಕ್ಷ ಪರಿಹಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕಾಫಿ ತೋಟದ ಮೌಲ್ಯ ಎಕರೆಗೆ 30 ರಿಂದ 40 ಲಕ್ಷ ಇರುವಾಗ ನಿಮ್ಮ ಎರಡು ಲಕ್ಷ ಪರಿಹಾರ ಯಾರಿಗೆ ಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಆದರೂ ಜಿಲ್ಲಾಡಳಿತ ಸಭೆ ಮುಂದುವರೆಸುತ್ತಿದ್ದರಿಂದ ರೊಚ್ಚಿಗೆದ್ದ ರೈತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ.

ಇದನ್ನೂ ಓದಿ:  ನೆಟ್​​ವರ್ಕ್ ಸಮಸ್ಯೆ ನೀಗಿಸಲು ಹೊಸ ಉಪಾಯ; 20 ಅಡಿ ಎತ್ತರದಲ್ಲಿ ಅಟ್ಟಣಿಗೆ ನಿರ್ಮಿಸಿಕೊಂಡ ಕೊಡಗಿನ ಶಿಕ್ಷಕ

ಜಿಲ್ಲಾಧಿಕಾರಿ ಡಾ ಸತೀಶ್ ಅವರು ಸಿಟ್ಟಿಗೆದ್ದಿದ್ದ ರೈತರನ್ನು ಸಮಾಧಾನ ಪಡಿಸಲು ಯತ್ನಿಸಿದರು, ಸಾಧ್ಯವಾಗಲಿಲ್ಲ. ನಾವು ಯಾವುದೇ ಕಾರಣಕ್ಕೂ ಯೋಜನೆಗಾಗಿ ನಮ್ಮ ಜಮೀನು ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸದ್ದಾರೆ.

ಪರಿಸರಕ್ಕೆ ಹಾನಿಯಾಗಲ್ಲ, ಜಿಲ್ಲಾಧಿಕಾರಿಗಳ ಸ್ಪಷ್ಟನೆ

ಈ ಸಂಧರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ ಸತೀಶ್, ಭಾರತೀಯ ವಿದ್ಯುತ್ ಆ್ಯಟ್ ಪ್ರಕಾರ ಯೋಜನೆ ಮಾಡುತ್ತಿದ್ದೇವೆ. ಯಾರಿಗೂ ಅನ್ಯಾಯವಾಗುವುದಿಲ್ಲ. ರೈತರಿಗೆ ಸರಿಯಾದ ಪರಿಹಾರ ನೀಡಲಾಗುವುದು ಎಂದಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಪರಿಸರ ಪ್ರೇಮಿಗಳು ನೀವು ಪರಿಹಾರ ನೀಡಿದರೆ ಹಾಳಾಗುವ ಕೊಡಗಿನ ಪರಿಸರ ಸರಿಯಾಗುವುದಿಲ್ಲ. ಹೀಗಾಗಿ ಜಿಲ್ಲೆಗೆ ಅನಗತ್ಯ ಅಭಿವೃದ್ಧಿ ಯೋಜನೆಗಳು ಬೇಡ ಎಂದು ಪಟ್ಟು ಹಿಡಿದಿದ್ದಾರೆ.

ಒಟ್ಟಿನಲ್ಲಿ ಜಿಲ್ಲಾಡಳಿತವೇನೋ ಯೋಜನೆ ಜಾರಿಗೆ ಮುಂದಾಗಿದ್ದರೆ, ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಪ್ರತಿಭಟನೆಗಳ ಜೊತೆಗೆ ಕಾನೂನು ಹೋರಾಟಕ್ಕೂ ರೈತರು ಮುಂದಾಗಲಿದ್ದು ಸ್ಥಿತಿ ಎಲ್ಲಿಗೆ ತಲುಪುತ್ತೋ ಕಾದು ನೋಡಬೇಕಾಗಿದೆ.
Published by:Mahmadrafik K
First published: