ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಹೊರಟ ಕೊಡಗಿನ ಐದು ಆನೆಗಳು

ಈ ಬಾರಿ ಕೋವಿಡ್ ಸೋಂಕಿರುವ ಹಿನ್ನೆಯಲ್ಲಿ ಕೇವಲ ಐದು ಆನೆಗಳನ್ನು ಮಾತ್ರವೇ ಆಯ್ಕೆ ಮಾಡಲಾಗಿದೆ. ದುಬಾರೆಯ ಸಾಕಾನೆ ಶಿಬಿರದಲ್ಲಿ ಆನೆಗಳಿಗೆ ಸರಳವಾಗಿ ಸಿಂಗಾರ ಮಾಡಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.

ಆನೆಗಳು

ಆನೆಗಳು

  • Share this:
ಕೊಡಗು (ಸೆ. 12) : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಂಬೂ ಸವಾರಿಗೆ (Dasara  Elephants) ಆಯ್ಕೆ ಆಗಿದ್ದ ಕೊಡಗಿನ ಐದು ಆನೆಗಳಿಗೆ ಬೀಳ್ಕೊಡಲಾಗಿದೆ. ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರದಿಂದ ಮೂರು ಆನೆಗಳು ಆಯ್ಕೆ ಆಗಿದ್ದವು. ಪಟ್ಟದ ಆನೆ ವಿಕ್ರಮ ಮತ್ತು ಕಾವೇರಿ ಜೊತೆಗೆ ಧನಂಜಯ ಆನೆಗಳು ಆಯ್ಕೆಯಾಗಿದ್ದವು. ಇನ್ನು ವಿರಾಜಪೇಟೆ ತಾಲ್ಲೂಕಿನ ಮತ್ತಿಗೋಡು ಸಾಕಾನೆ ಶಿಬಿರದಿಂದ ಅಂಬಾರಿ ಹೊರಲಿರುವ ಅಭಿಮನ್ಯು ಆನೆ ಮತ್ತು ಗೋಪಾಲಸ್ವಾಮಿ ಆನೆಗಳು ಆಯ್ಕೆಯಾಗಿವೆ. ದುಬಾರೆ ಸಾಕಾನೆ ಶಿಬಿರದಲ್ಲಿ ಧನಂಜಯ, ಕಾವೇರಿ ಮತ್ತು ವಿಕ್ರಮ ಆನೆಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬಳಿಕ ಬೀಳ್ಕೊಟ್ಟರು. ಪ್ರತೀ ಬಾರಿ ಜಿಲ್ಲೆಯಿಂದ ಏಳರಿಂದ ಎಂಟು ಆನೆಗಳು ದಸರಾದಲ್ಲಿ ಭಾಗವಹಿಸುತ್ತಿದ್ದವು. ಆದರೆ ಈ ಬಾರಿ ಕೋವಿಡ್ ಸೋಂಕಿರುವ ಹಿನ್ನೆಯಲ್ಲಿ ಕೇವಲ ಐದು ಆನೆಗಳನ್ನು ಮಾತ್ರವೇ ಆಯ್ಕೆ ಮಾಡಲಾಗಿದೆ. ದುಬಾರೆಯ ಸಾಕಾನೆ ಶಿಬಿರದಲ್ಲಿ ಆನೆಗಳಿಗೆ ಸರಳವಾಗಿ ಸಿಂಗಾರ ಮಾಡಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.

ವಿಶೇಷವೆಂದರೆ ಪ್ರತೀ ಬಾರಿ ದಸರಾಕ್ಕೆ ತೆರಳುವಾಗ ಆನೆಗಳು ಲಾರಿಗೆ ಏರುವಾಗ ಆನೆಗಳು ನಾ ಹೋಗಲೆಲ್ಲ ಎನ್ನೋ ಹಾಗೇ ಹಠ ಹಿಡಿದು ಲಾರಿ ಏರಲು ಸಾಕಷ್ಟು ಸತಾಯಿಸುತ್ತಿದ್ದವು. ಆದರೆ ಈ ಬಾರಿ ಆನೆಗಳು ಮಾತ್ರ ಯಾವುದೇ ಕಿರಿಕಿರಿ ಮಾಡದೆ ಸಲೀಸಾಗಿ ಲಾರಿ ಏರಿ ನಿಂತವು. ಇನ್ನೂ ಕೋವಿಡ್ ಸೋಂಕಿನ ಆತಂಕದಿಂದಲೇ ಆನೆಗಳೊಂದಿಗೆ ಕೇವಲ ಮಾವುತರು ಮತ್ತು ಕವಾಡಿಗರಿಗೆ ಮಾತ್ರವೇ ಮೈಸೂರಿಗೆ ತೆರಳಲು ಅವಕಾಶ ನೀಡಲಾಗಿದೆ. ಆದರೆ ಮಾವುತರು ಮತ್ತು ಕವಾಡಿಗರ ಕುಟುಂಬದ ಯಾರಿಗೂ ದಸರಾದಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ.

ಇದನ್ನು ಓದಿ: ಪಿವಿ ಸಿಂಧುಗಾಗಿ ವಿಶೇಷ ಔತಣಕೂಟ ಆಯೋಜಿಸಿದ ದೀಪಿಕಾ-ರಣವೀರ್​ ಜೋಡಿ

ವಿಕೇಂಡ್​ ಕರ್ಫ್ಯೂ ತೆರವು

ಮತ್ತೊಂದೆಡೆ ಕೋವಿಡ್ ಸೋಂಕಿನ ಪ್ರಮಾಣ ಈಗಷ್ಟೆ ಕಡಿಮೆ ಆಗಿದೆ ಎಂದು ಕೊಡಗು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂವನ್ನು ತೆರವು ಮಾಡಲಾಗಿದೆ. ಹೀಗೆ ವೀಕೆಂಡ್ ಕರ್ಫ್ಯೂ ತೆರವು ಮಾಡಿದ್ದೇ ತಡ ಜಿಲ್ಲೆಗೆ ಪ್ರವಾಸಿಗರು ದಾಂಗುಡಿ ಇಟ್ಟಿದ್ದಾರೆ. ಪ್ರವಾಸಿ ತಾಣಗಳ ಜಿಲ್ಲೆಯಾಗಿರುವ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರಕ್ಕೆ ನೂರಾರು ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

ದುಬಾರೆಗೆ ಪ್ರವಾಸಿಗರ ದಂಡು

ಇದರಿಂದ ದುಬಾರೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ದುಬಾರೆ ಸಾಕಾನೆ ಶಿಬಿರಕ್ಕೆ ಹೋಗಲು ಕಾವೇರಿ ನದಿಯನ್ನು ದಾಟ ಬೇಕಾಗಿರುವುದರಿಂದ ಬೋಟಿನ ಮೂಲಕ ಆಚೆಗೆ ಪ್ರಯಾಣಿಸಬೇಕು. ಹೀಗಾಗಿ ನೂರಾರು ಜನರು ಸಾಮಾಜಿಕ ಅಂತರವನ್ನೂ ಪಾಲಿಸದೆ, ಕೆಲವರು ಮಾಸ್ಕನ್ನೂ ಧರಿಸದೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಆತಂಕ ಸೃಷ್ಟಿಸಿದೆ.

ವೀಕೆಂಡ್ ಕರ್ಫ್ಯೂ ತೆರವು ಮಾಡುತ್ತಿದ್ದಂತೆ ಪ್ರವಾಸಿಗರು ಇಷ್ಟೊಂದು ಸಂಖ್ಯೆಯಲ್ಲಿ ಜಿಲ್ಲೆಗೆ ಬರುತ್ತಿರೋದು ಆತಂಕ ಸೃಷ್ಟಿಸಿದೆ. ಜಿಲ್ಲಾಡಳಿತ ಪ್ರವಾಸಿ ತಾಣಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡದಿದ್ದರೆ ಕೊಡಗಿಗೆ ಮತ್ತೆ ಕೋವಿಡ್ ಸೋಂಕು ಗಂಡಾಂತರ ತಂದಿಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ವೀಕೆಂಡ್ ಕರ್ಫ್ಯೂ ತೆರವು ಮಾಡಿದ್ದರಿಂದ ವ್ಯಾಪಾರಸ್ಥರು ನಾವೊಂದಷ್ಟು ಸುಧಾರಿಸಿಕೊಳ್ಳಲು ಅನುಕೂಲವಾಗಿದೆ ಎನ್ನೋದು ವ್ಯಾಪಾರಿ ಗೌಸ್ ಅವರು ಅಭಿಪ್ರಾಯಿಸಿದ್ದಾರೆ.
Published by:Seema R
First published: