Arms Training: ಕೊಡಗಿನ ಶಾಲೆಯ ಆವರಣದಲ್ಲಿ ಭಜರಂಗದಳ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ

ಕೊಡಗಿನ ಪೊನ್ನಂಪೇಟೆ ಸಾಯಿ ಶಂಕರ ಶಾಲೆಯಲ್ಲಿ ಕಳೆದ ವಾರ ಮುಕ್ತಾಯವಾದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ. ಶಾಲಾ ಆವರಣದಲ್ಲೇ ಸುಮಾರು 8 ದಿನಗಳ ಕಾಲ ಶೌರ್ಯ ಪ್ರಶಿಕ್ಷಣ ವರ್ಗದ ತರಬೇತಿ ನಡೆದಿದೆ.

ಶಸ್ತ್ರಾಸ್ತ್ರ ತರಬೇತಿ

ಶಸ್ತ್ರಾಸ್ತ್ರ ತರಬೇತಿ

  • Share this:
ಮಡಿಕೇರಿ (ಮೇ 16): ಕೊಡಗು ಜಿಲ್ಲೆಯ ಪೊನ್ನಂಪೇಟೆ (Ponnampete) ತಾಲೂಕಿನ ಸಾಯಿ ಶಂಕರ ಶಾಲೆಯಲ್ಲಿ ಬಜರಂಗದಳ ದಳದಿಂದ ನೂರಾರು ಯುವಕರಿಗೆ ಶಸ್ತ್ರಾಸ್ರ ತರಬೇತಿ (Arms Training) ನೀಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಶಾಲೆಯ ಆವರಣದಲ್ಲಿ (School Premises)  ಹಿಜಾಬ್‌ಗೆ ಅವಕಾಶ ಇಲ್ಲವೆಂದಿದ್ದ ಸರ್ಕಾರ ಇದೀಗ ಸಂಘ ಪರಿವಾರದಿಂದ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ನೀಡಿದ್ದು ಹೇಗೆ? ಎಂಬ ಅನುಮಾನ ಶುರುವಾಗಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ (Social Media)  ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ.

 ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ

ಕೊಡಗಿನ ಪೊನ್ನಂಪೇಟೆ ಸಾಯಿ ಶಂಕರ ಶಾಲೆಯಲ್ಲಿ ಕಳೆದ ವಾರ ಮುಕ್ತಾಯವಾದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ. ಶಾಲಾ ಆವರಣದಲ್ಲೇ ಸುಮಾರು 8 ದಿನಗಳ ಕಾಲ ಶೌರ್ಯ ಪ್ರಶಿಕ್ಷಣ ವರ್ಗದ ತರಬೇತಿ ನಡೆದಿದೆ. ಈ ತರಬೇತಿ ಶಿಬಿರ ನಡೆದ 8 ದಿನಗಳ ಅವಧಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಜಿಲ್ಲೆಯ ಕೆಲ ಮುಖಂಡರೂ ಪಾಲ್ಗೊಂಡಿದ್ದರು ಎಂದು ಮೂಲಗಳು ಖಚಿತ ಪಡಿಸಿವೆ.

ತ್ರಶೂಲ ಹಿಡಿದು ದೀಕ್ಷೆ ಪಡೆದ ಕಾರ್ಯಕರ್ತರು

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ತರಬೇತಿ ಪಡೆದುಕೊಂಡಿದ್ದಾರೆ. ಶಾಲಾ ಆವರಣದಲ್ಲಿ ಬಂದೂಕು ಹಿಡಿದು ತರಬೇತಿ ಪಡೆಯುತ್ತಿರುವುದು ಹಾಗೂ ಸಂಸ್ಥೆಯ ಸಭಾಂಗಣದಲ್ಲಿ ತ್ರಿಶೂಲ ಹಿಡಿದು ದೀಕ್ಷೆ ಪಡೆಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಕುರಿತು ಟ್ವೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿರುವ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಪ್ರಮುಖರಿಗೆ ಟ್ಯಾಗ್ ಮಾಡಿ, ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Priyanka Gandhi: ಕರ್ನಾಟಕದಿಂದ ರಾಜ್ಯಸಭೆ ಪ್ರವೇಶಿಸುತ್ತಾರಾ ಪ್ರಿಯಾಂಕಾ ಗಾಂಧಿ? ಕಾಂಗ್ರೆಸ್ ನಾಯಕಿಗೆ ಡಿಕೆಶಿ ಆಹ್ವಾನ

ವಿಎಚ್ ಪಿ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಸಮರ್ಥನೆ

ಭಜರಂಗದಳದಿಂದ ಶೌರ್ಯ ಪ್ರಶಿಕ್ಷಣ ವರ್ಗ ತರಬೇತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ತರಬೇತಿ ನೀಡುವುದರಲ್ಲಿ ತಪ್ಪೇನಿದೆ ಎಂದ ವಿಎಚ್ ಪಿ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಸಮರ್ಥನೆ ನೀಡಿದ್ದಾರೆ. ಮೇ 5 ರಿಂದ 11 ರವರೆಗೆ ಶ್ರೀ ಸಾಯಿ ಶಂಕರ ಶಾಲೆಯಲ್ಲಿ ನಡೆದಿದ್ದ ಪ್ರಶಿಕ್ಷಾ ವರ್ಗ ತರಬೇತಿ, ಹಿಂದೂ ದೇವತೆ ದುರ್ಗಾ ಪೂಜೆ ಬಳಿಕ ತ್ರಿಶೂಲ ಹೊಂದುವುದಕ್ಕೆ ಅವಕಾಶವಿದೆ. ಹಿಂದಿನಿಂದಲೂ ಭಜರಂಗದಳದಿಂದ ನಡೆದಿರುವ ಎಲ್ಲಾ ಪ್ರಶಿಕ್ಷಾ ವರ್ಗದಲ್ಲಿ ತ್ರಿಶೂಲ ಹೊಂದಿ ತರಬೇತಿ ನೀಡಲಾಗಿದೆ ಎಂದ್ರು.

ಏರ್​ರೈಫಲ್​ ತರಬೇತಿಗೆ ಯಾರ ಅನುಮತಿ ಬೇಕಿಲ್ಲ

ಹಾಗೆಯೇ ಇಲ್ಲಿಯೂ ತರಬೇತಿ ನೀಡಲಾಗಿದೆ, ಏರ್ ರೈಫಲ್ ಬಳಸಿ ತರಬೇತಿ ನೀಡುವುದಕ್ಕೆ ಯಾವುದೇ ಒಪ್ಪಿಗೆ ಬೇಕಾಗಿಲ್ಲ, ಅವುಗಳನ್ನು ಬಳಸಿ ತರಬೇತಿ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎನ್ನೋ ಮೂಲಕ ತರಬೇತಿ ನೀಡಿರುದನ್ನು ವಿಎಚ್ ಪಿ ಮುಖಂಡ ಕೃಷ್ಣಮೂರ್ತಿ ಒಪ್ಪಿಕೊಂಡಿದ್ದಾರೆ. ತರಬೇತಿಗೆ ಜಿಲ್ಲೆಯ ಇಬ್ಬರು ಶಾಸಕರು ಭೇಟಿ ನೀಡಿ ಹರಸಿ ಹೋಗಿದ್ದಾರೆ. ತರಬೇತಿ ನೀಡಿರುವುದು ಪೊಲೀಸರಿಗೂ ಗೊತ್ತು. ಪೊನ್ನಂಪೇಟೆಯಲ್ಲಿ ಪಥಸಂಚಲನವನ್ನು ಮಾಡಿದ್ದೆವು ಎಂದ ಕೃಷ್ಣಮೂರ್ತಿ ಹೇಳಿದ್ದಾರೆ.

ಇದನ್ನೂ ಓದಿ: HDK v/s Rahul Gandhi: "ಆಪರೇಷನ್‌ ಕಮಲಕ್ಕೆ 'ಕೈ' ಜೋಡಿಸಿದ್ದು ಸೈದಾಂತಿಕ ಬದ್ಧತೆಯಾ?" ರಾಹುಲ್‌ ಗಾಂಧಿ ವಿರುದ್ಧ ಎಚ್‌ಡಿಕೆ ಕಿಡಿಕಿಡಿ

ಡಿಡಿಪಿಐ ವೇದಮೂರ್ತಿ ಸ್ಪಷ್ಟನೆ

ಭಜರಂಗಳದ ಶೌರ್ಯ ಪ್ರಶಿಕ್ಷಣ ವರ್ಗ ಶಿಬಿರಕ್ಕೆ ಶಿಕ್ಷಣ ಇಲಾಖೆ ಅನುಮತಿ ಕೊಟ್ಟಿಲ್ಲ ಎಂದು ಕೊಡಗು ಡಿಡಿಪಿಐ ವೇದಮೂರ್ತಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.  ಸಾಯಿ ಶಂಕರ ಶಾಲೆಗೆ ಇಂದೇ ನೋಟಿಸ್ ನೀಡಲಾಗುವುದು, ನಮ್ಮ ಗಮನಕ್ಕೆ ಬಂದ ತಕ್ಷಣವೇ ಶಾಲೆಗೆ ನೋಟಿಸ್ ನೀಡಲಾಗುತ್ತಿದೆ. ನೋಟಿಸ್ ನೀಡಿ ಮಾಹಿತಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಇಂತಹ ಶಿಬಿರಗಳಿಗೆ ಶಾಲೆಗಳಲ್ಲಿ ನಾವು ಅನುಮತಿ‌ ನೀಡುವಂತಿಲ್ಲ, ಅವರು ಹೇಗೆ ಶಾಲೆಯನ್ನು ತರಬೇತಿಗೆ ಕೊಟ್ಟಿದ್ದಾರೋ ಗೊತ್ತಿಲ್ಲ.  ನಮ್ಮ ಬಳಿ‌ ಅವರು ಅನುಮತಿಯನ್ನೂ ಕೇಳಿಲ್ಲಎಂದು ಕೊಡಗು ಡಿಡಿಪಿಐ ವೇದಮೂರ್ತಿ ತಿಳಿಸಿದ್ದಾರೆ.
Published by:Pavana HS
First published: