HOME » NEWS » State » KOCHIMUL DECIDED TO CUT OFF WORKERS WHO WORKS DAILY WAGES SESR

ಆರ್ಥಿಕ ಸಂಕಷ್ಟದಿಂದ ಪಾರಾಗಲು ದಿನಗೂಲಿ ನೌಕರರ ಕೆಲಸದ ದಿನಗಳ ಕಡಿತಕ್ಕೆ ಮುಂದಾದ ಕೋಚಿಮುಲ್

ಹೈನೋದ್ಯಮದಿಂದ ರೈತರಿಗೆ ಲಾಭ ಸಿಗದೆ ಇರುವ ಕಾರಣಕ್ಕೆ ಹಸುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಮತ್ತೆ ಕೆಲವು ಖಾಸಗಿ ಡೈರಿಗಳು 35 ರೂಪಾಯಿಗೆ ಹಾಲು ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಒಕ್ಕೂಟದ ಹಾಲು ಉತ್ಪಾದನೆಯಲ್ಲಿ ಇಳಿಮುಖವಾಗಿದೆ.

Seema.R | news18-kannada
Updated:February 17, 2020, 6:27 PM IST
ಆರ್ಥಿಕ ಸಂಕಷ್ಟದಿಂದ ಪಾರಾಗಲು ದಿನಗೂಲಿ ನೌಕರರ ಕೆಲಸದ ದಿನಗಳ ಕಡಿತಕ್ಕೆ ಮುಂದಾದ ಕೋಚಿಮುಲ್
ಕೋಚಿಮುಲ್​
  • Share this:
ಕೋಲಾರ (ಫೆ. 17): ಇತ್ತೀಚೆಗಷ್ಟೇ ಹಾಲಿನ ಖರೀದಿ ದರವನ್ನು ಲೀಟರ್​ಗೆ ಎರಡು ರೂ.ಗೆ ಹೆಚ್ಚಿಸಿ, ಹೈನುಗಾರರಿಗೆ ಬಂಪರ್​ ಕೊಡುಗೆ ನೀಡಿದ್ದ ಕೋಲಾರ ಹಾಲು ಉತ್ಪಾದಕರ ಸಹಕಾರ ಒಕ್ಕೂಟ (ಕೋಚಿಮುಲ್)​, ಸಿಬ್ಬಂದಿ ವೆಚ್ಚ ಕಡಿತಕ್ಕೆ ಮುಂದಾಗಿದೆ. ಈ ಮೂಲಕ ತಾತ್ಕಾಲಿಕ ನೌಕರರಿಗೆ ಶಾಕ್​ ನೀಡಿದೆ.

ಈ ಹಿಂದೆ ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದ ಕೋಚಿಮುಲ್​, ಈಗ ಮೂರನೇ ಸ್ಥಾನಕ್ಕೆ ಇಳಿದಿದೆ. ಇದರಿಂದಾಗಿ ಈ ಕ್ರಮ ಅನಿವಾರ್ಯ ಎಂದು ಒಕ್ಕೂಟ ತಿಳಿಸಿದೆ.

ಬರಗಾಲದ ಪ್ರದೇಶದಲ್ಲಿ ಈ ಹಿಂದೆ ಸರ್ಕಾರ ಹೈನುಗಾರಿಕೆಗೆ ಉತ್ತೇಜನ ನೀಡಿತ್ತು. ಆದರೆ,  ಹೈನೋದ್ಯಮದಿಂದ ರೈತರಿಗೆ ಲಾಭ ಸಿಗದೆ ಇರುವ ಕಾರಣಕ್ಕೆ ಹಸುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಮತ್ತೆ ಕೆಲವು ಖಾಸಗಿ ಡೈರಿಗಳು 35 ರೂಪಾಯಿಗೆ ಹಾಲು ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಒಕ್ಕೂಟದ ಹಾಲು ಉತ್ಪಾದನೆಯಲ್ಲಿ ಇಳಿಮುಖವಾಗಿದೆ. 

ಈ ಹಿಂದೆ ಗರಿಷ್ಠ 11.50 ಲಕ್ಷ ಲೀಟರ್ ಶೇಖರಣೆ ಮಾಡುತ್ತಿದ್ದ ಕೋಚಿಮುಲ್ ಈ ತಿಂಗಳಲ್ಲಿ ಕೇವಲ 8.40 ಲಕ್ಷ ಲೀಟರ್ ಸಂಗ್ರಹಣೆಗೆ ತೃಪ್ತಿಪಟ್ಟುಕೊಂಡಿದೆ. ಹೀಗಾಗಿ ಖರ್ಚು ಕಡಿಮೆ ಮಾಡಿ, ಹಾಲಿನ ಸಂಗ್ರಹ ಹೆಚ್ಚಳ ಮಾಡಲು ಒಕ್ಕೂಟ ತೀರ್ಮಾನಿಸಿದೆ. ಕಾಯಂ ನೌಕರರನ್ನು ಹೊರತುಪಡಿಸಿ, ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರ ಮಾನವ ದಿನಗಳನ್ನು ಕಡಿಮೆ ಮಾಡುವುದು ಮತ್ತು ಹೊಸದಾಗಿ ಯಾರನ್ನು ಕೆಲಸ ನೇಮಕ ಮಾಡಿಕೊಳ್ಳದೇ ಇರಲು ಒಕ್ಕೂಟದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ದಿನಗೂಲಿ ನೌಕರರ ಕೆಲಸದ ದಿನಗಳನ್ನು ಕಡಿಮೆ ಮಾಡಲು ಒಕ್ಕೂಟ ತೀರ್ಮಾನಿಸಿರುವುದು ದಿನಗೂಲಿ ನೌಕರರಿಗೆ ಬರೆ ಎಳೆದಂತಾಗಿದೆ. ಅಲ್ಲದೇ ಕೆಲಸ ಸಿಗುವ ನಿರೀಕ್ಷೆಯಲ್ಲಿದ್ದ ಸಾವಿರಾರು ಯುವಕರಿಗೂ ಹಿನ್ನಡೆಯಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ. ನಂಜೇಗೌಡ, ಒಕ್ಕೂಟವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಈ ಕ್ರಮ ಅನಿವಾರ್ಯ ಎಂದಿದ್ದಾರೆ ಹಾಗೂ ಬೇಸಿಗೆ ಆರಂಭಕ್ಕೂ ಮೊದಲೇ ಹಾಲು ಉತ್ಪಾದನೆ ಹೆಚ್ಚಳಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರೈತರು ಹೈನೋದ್ಯಮಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಮನವಿ ಮಾಡಿದ್ದಾರೆ.
First published: February 17, 2020, 6:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories