‘ಟೋಕ್ಯೋ ಒಲಂಪಿಕ್ಸ್​ಗೆ ಕಂಬಳ ಹೀರೊ ಶ್ರೀನಿವಾಸ ಗೌಡ ಕಳಿಸಿ‘- ಕರ್ನಾಟಕ ಒಲಂಪಿಕ್ಸ್ ಬೇಡಿಕೆ

ಉದ್ಯಮಿ ಆನಂದ್ ಮಹೀಂದ್ರಾ ಕೂಡ ಶ್ರೀನಿವಾಸ ಗೌಡರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರಿಗೆ ಸೂಕ್ತ ತರಬೇತಿ ನೀಡಿದಲ್ಲಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗ್ಯಾರಂಟಿ ಎಂದು ಹೇಳಿದ್ದಾರೆ.

ಕಂಬಳ ಸ್ಪರ್ಧೆಯಲ್ಲಿ ಶ್ರೀನಿವಾಸ ಗೌಡ ಅವರ ಓಟ.

ಕಂಬಳ ಸ್ಪರ್ಧೆಯಲ್ಲಿ ಶ್ರೀನಿವಾಸ ಗೌಡ ಅವರ ಓಟ.

 • Share this:
  ಬೆಂಗಳೂರು(ಫೆ.15): ಕರಾವಳಿಯ ಜಾನಪದ ಕ್ರೀಡೆ ಕಂಬಳ ಸ್ಪರ್ಧೆಯಲ್ಲಿ ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆ ಮುರಿದ ಶ್ರೀನಿವಾಸಗೌಡರನ್ನು ಟೋಕ್ಯೋ ಒಲಂಪಿಕ್ಸ್​ಗೆ ಕಳಿಸಿ ಎಂದು ಕರ್ನಾಟಕ ಒಲಂಪಿಕ್ಸ್ ಬೇಡಿಕೆಯಿಟ್ಟಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದ ಅಧಿಕಾರಿಗಳಿಗೆ ಪತ್ರ ಬರೆದಿರುವ ರಾಜ್ಯ ಒಲಂಪಿಕ್‌ ಅಸೋಸಿಯೇಶನ್‌ ಅಧ್ಯಕ್ಷ ಗೋವಿಂದರಾಜು ಹೀಗೆ ಶಿಫಾರಸು ಮಾಡಿದ್ದಾರೆ.

  ಇತ್ತೀಚೆಗೆ ಫೆಬ್ರವರಿ 1ನೇ ತಾರೀಕಿನಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡರು, 142.50 ಮೀಟರ್ ಕರೆಯನ್ನು ಕೇವಲ 13.62 ಸೆಕೆಂಡ್​​ಗಳಲ್ಲಿ ಕ್ರಮಿಸಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದೆ. ಈ ಮೂಲಕ ಶ್ರೀನಿವಾಸ್ ಗೌಡರು ಉಸೇನ್ ಬೋಲ್ಟ್ ದಾಖಲೆ ಮರಿದಿದ್ದಾರೆ. ಇವರು ದೇಶಕ್ಕೆ ಅತ್ಯಗತ್ಯ. ಹಾಗಾಗಿ ಕಂಬಳದ ಗದ್ದೆಯಲ್ಲಿ ಉಸೇನ್ ಬೋಲ್ಟ್ ದಾಖಲೆ ಮುರಿದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಮೂಲದ ಯುವಕ ಶ್ರೀನಿವಾಸಗೌಡರನ್ನು ಟೋಕ್ಯೋ ಒಲಂಪಿಕ್ಸ್ ಕಳಿಸಿಕೊಡಿ ಎಂದು ರಾಜ್ಯ ಒಲಂಪಿಕ್‌ ಅಸೋಸಿಯೇಶನ್‌ ಅಧ್ಯಕ್ಷ ಗೋವಿಂದರಾಜು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.  ಸದ್ಯ ಶ್ರೀನಿವಾಸಗೌಡ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ಇವರ ದಾಖಲೆ ಓಟಕ್ಕೆ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತೆಯೇ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು, ಶ್ರೀನಿವಾಸ ಗೌಡರ ಸಾಧನೆ ಬಗ್ಗೆ ತಿಳಿದುಕೊಂಡಿದ್ದಾರೆ. ಈಗಾಗಲೇ ಸಾಯ್ ಅಧಿಕಾರಿಗಳು ಶ್ರೀನಿವಾಸ ಗೌಡರನ್ನು ಸಂಪರ್ಕಿಸಿ ರೈಲು ಟಿಕೆಟ್ ಬುಕ್ ಮಾಡಿದ್ದಾರೆ. ಸೋಮವಾರ ಸಾಯ್ ಕೇಂದ್ರವನ್ನು ಶ್ರೀನಿವಾಸಗೌಡರು ಸಂಪರ್ಕಿಸಲಿದ್ದು ಅವರಿಗೆ ರಾಷ್ಟ್ರೀಯ ತರಬೇತುದಾರರಿಂದ ಸೂಕ್ತ ತರಬೇತಿ ಕೊಡಿಸಲಾಗುವುದು ಎಂದು ಹೇಳಿದ್ದಾರೆ.

  ಇದನ್ನೂ ಓದಿ: ಕಂಬಳ ವೀರನ ಮಿಂಚಿನ ವೇಗಕ್ಕೆ ಕ್ರೀಡಾ ಸಚಿವರ ಮೆಚ್ಚುಗೆ; ಟ್ರಯಲ್ಸ್​ಗೆ ಆಹ್ವಾನಿಸಿದ ಕಿರಣ್ ರಿಜಿಜು

  ಉದ್ಯಮಿ ಆನಂದ್ ಮಹೀಂದ್ರಾ ಕೂಡ ಶ್ರೀನಿವಾಸ ಗೌಡರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರಿಗೆ ಸೂಕ್ತ ತರಬೇತಿ ನೀಡಿದಲ್ಲಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗ್ಯಾರಂಟಿ ಎಂದು ಹೇಳಿದ್ದಾರೆ.
  First published: