ನೀವು ಕುಡಿಯುತ್ತಿರುವ ಕೆ.ಎಂ.ಎಫ್​ ನಂದಿನಿ ಹಾಲಿನಲ್ಲಿ ಏನು ಬೆರೆಸಿದ್ದರು ಗೊತ್ತೇ?

news18
Updated:August 28, 2018, 7:44 PM IST
ನೀವು ಕುಡಿಯುತ್ತಿರುವ ಕೆ.ಎಂ.ಎಫ್​ ನಂದಿನಿ ಹಾಲಿನಲ್ಲಿ ಏನು ಬೆರೆಸಿದ್ದರು ಗೊತ್ತೇ?
news18
Updated: August 28, 2018, 7:44 PM IST
- ನ್ಯೂಸ್ 18 ಕನ್ನಡ 

ಬೆಂಗಳೂರು(ಆಗಸ್ಟ್ 28): ಹಾಲು ಆಹಾರ ಪದಾರ್ಥಗಳ ಪೈಕಿ ಅತ್ಯಂತ ಸೂಕ್ಷ್ಮವಾದ ದ್ರವ. ಕೊಂಚ ಹೆಚ್ಚು ಕಡಿಮೆಯಾದರೂ, ನಿನ್ನೆ ತಂದ ಹಾಲು ಬೆಳಗ್ಗೆ ಒಡೆದು ಹೋಗಿರುತ್ತದೆ. ಹೀಗಿರುವಾಗ, ಹಾಲನ್ನೇ ನಕಲಿ ಮಾಡಲು ಸಾಧ್ಯನಾ?

ನಕಲಿ ಹಾಲನ್ನು ತಯಾರಿಸುವುದು ಅಷ್ಟೆ ಅಲ್ಲ, ಅದನ್ನು ಕೆಎಂಎಫ್‌ಗೆ ಮಾರಾಟ ಮಾಡುವ ಸಾಧ್ಯತೆಯನ್ನು ಕಂಡುಕೊಂಡಿದ್ದಾರೆ ಚಿಕ್ಕಮಗಳೂರಿನ ಕೆಲವು ಜನ. ಪರಿಣಾಮ, ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಮೂರ್ನಾಲ್ಕು ಹಾಲು ಉತ್ಪಾದನಾ ಕೇಂದ್ರಗಳೀಗ ಕಲಬೆರಕೆ ಹಾಲು ಪೂರೈಕೆ ಆರೋಪವನ್ನು ಹೊತ್ತುಕೊಂಡಿವೆ.

ಏನಿದು ಪ್ರಕರಣ?:

ಚಿಕ್ಕಮಗಳೂರು ಜಿಲ್ಲೆಯ ಕರುಬರಹಳ್ಳಿ, ಕುರುಬರ ಬೂದಿಹಾಳ್, ಮಾಚೇನಹಳ್ಳಿ, ನರಸೀಪುರ ಎಂಬ ಪುಟ್ಟ ಹಳ್ಳಿಗಳು. ಇಲ್ಲಿನ ರೈತರು ನಿತ್ಯ ಸ್ಥಳೀಯ ಹಾಲು ಉತ್ಪಾದಕ ಸಂಘಗಳಿಗೆ ಹಾಲು ಪೂರೈಸುತ್ತಿದ್ದರು. ಕುರುಬರಹಳ್ಳಿಯ ಒಂದು ಸಂಘದಿಂದಲೇ ನಿತ್ಯ ಸುಮಾರು 800 ಲೀಟರ್ ಹಾಲು ಸರಬರಾಜಾಗುತ್ತಿತ್ತು. ಹೀಗಿರುವಾಗ, ಕಳೆದ ಎರಡು ಅಥವಾ ಮೂರು ವರ್ಷಗಳ ಅಂತರದಲ್ಲಿ ಈ ಭಾಗದಲ್ಲಿ ಹಾಲು ಪೂರೈಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಯಿತು. ದಿನಕ್ಕೆ 4800 ಲೀಟರ್ ಹಾಲು ಇಲ್ಲಿಂದ ಅರಸೀಕೆರೆಯ ಶಿಥಿಲೀಕರಣ ಘಟಕಕ್ಕೆ ಕಳುಹಿಸಲು ಶುರುಮಾಡಿದರು.

ಮೇಲ್ನೋಟಕ್ಕೆ ಇದು ಹೈನುಗಾರಿಕೆಯ ಪ್ರಗತಿಯಂತೆ ಕಾಣಿಸಿತ್ತು.ಆದರೆ, ಜುಲೈ 25ರಂದು ಹಾಸನದ ಹಾಲು ಉತ್ಪಾದಕ ಸಂಘಗಳ ಒಕ್ಕೂಟದ ಅಧ್ಯಕ್ಷ ಗೋಪಾಲಯ್ಯ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದರು. ಹಾಲಿನಲ್ಲಿ ಕಲಬೆರಕೆ ಆಗುತ್ತಿರುವ ಮಾಹಿತಿ ಮೇರೆಗೆ ಅರಸೀಕೆರೆಯ ಶೀಥಲೀಕರಣ ಕೇಂದ್ರದಲ್ಲಿ ಪರೀಕ್ಷೆ ನಡೆಸಿದಾಗ ಅಕ್ರಮ ನಡೆದಿರುವುದು ಪತ್ತೆಯಾಗಿದೆ’ ಎಂದು ದೂರಿನಲ್ಲಿ ಮಾಹಿತಿ ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕುರುಬರಹಳ್ಳಿಯ ಹಾಲು ಉತ್ಪಾದಕ ಮಹಿಳಾ ಸಂಘದ ಕಾರ್ಯದರ್ಶಿ ಪಾರ್ವತಮ್ಮ ಅವರ ಮಗ ಶ್ರೀನಿವಾಸ್ ಎಂಬುವವನನ್ನು ಬಂಧಿಸಿದರು. ಜತೆಗೆ, ಅಶೋಕ್, ಸಣ್ಣಸ್ವಾಮಿ ಒಟ್ಟು 9 ಜನರನ್ನು ಈವರೆಗೆ ಬಂಧಿಸಿದ್ದಾರೆ.ಪ್ರಕರಣದ ತನಿಖೆ ಆರಂಭವಾಗಿದೆ ಅಷ್ಟೆ. ಮೇಲ್ನೋಟಕ್ಕೆ ಇದು ಚೈನ್ ಲಿಂಕ್ ತರಹ ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನ ಸಾಧ್ಯತೆಗಳಿವೆ ಎಂದು ಚಿಕ್ಕಮಗಳೂರು ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿ ಗವಿರಾಜ್ ಹೇಳುತ್ತಾರೆ.
Loading...

ಕಲಬೆರಕೆ ಹೇಗೆ?:
ಕೆಎಂಎಫ್‌ ರೈತರಿಂದ ನೇರವಾಗಿ ಹಾಲನ್ನು ಖರೀದಿಸುವುದಿಲ್ಲ. ಬದಲಿಗೆ ಸ್ಥಳೀಯ ಹಾಲು ಉತ್ಪಾದಕ ಸಂಘಗಳ ಮೂಲಕ ಹಾಲು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ರೈತರು ತರುವ ಹಾಲಿನಲ್ಲಿರುವ ಕೊಬ್ಬಿನ ಅಂಶ, ಗುಣಮಟ್ಟವನ್ನು ಅಳೆದು ಹಾಲನ್ನು ಸಂಘಗಳು ಖರೀದಿಸುತ್ತವೆ. ನಂತರ ಆ ಹಾಲನ್ನು ಸಮೀಪದ ಒಕ್ಕೂಟಕ್ಕೆ ಕಳುಹಿಸುವ ವ್ಯವಸ್ಥೆ ಇದೆ. ಅಲ್ಲಿಯೂ ಕೂಡ ಹಾಲಿನ ಗುಣಮಟ್ಟ ಪರೀಕ್ಷಿಸಿ ನಂತರ ಪ್ಯಾಕೆಟ್ ಮಾಡಿ ಜನರಿಗೆ ಮಾರಲಾಗುತ್ತದೆ.

ಕುರಬರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಎರಡು- ಮೂರು ವರ್ಷಗಳ ಹಿಂದೆ ಹಾಲಿನ ಉತ್ಪಾದನೆ ದೊಡ್ಡ ಮಟ್ಟದಲ್ಲಿ ಹೆಚ್ಚಾಯಿತು. ಅಷ್ಟೂ ಹಾಲನ್ನು ಸ್ಥಳೀಯ ಸಂಘ ಖರೀದಿಸಿ, ಅರಸೀಕೆರೆಯ ಶೀಥಲೀಕರಣ ಘಟಕಕ್ಕೆ ಕಳುಹಿಸಲಾಗುತ್ತಿತ್ತು. ಅಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಪಟ್ಟ ಹಾಲು ಹಾಸನ ಒಕ್ಕೂಟಕ್ಕೆ ತಲುಪುತ್ತಿತ್ತು. ಅಲ್ಲಿಂದ ನಾನಾ ರೂಪಗಳಲ್ಲಿ ಇದೇ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಜನರಿಗೆ ಮಾರಾಟ ಮಾಡಿಕೊಂಡು ಬರಲಾಗಿದೆ.ಅಸಲಿಗೆ, ಕುರಬರಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿರಲಿಲ್ಲ.

ಬದಲಿಗೆ ಕಲಬೆರೆಕೆ ಮಾಡಿದ ಅಥವಾ ಕೃತಕವಾಗಿ ಸೃಷ್ಟಿಸಿದ 4 ಸಾವಿರ ಲೀಟರ್ ಹಾಲು ಪೂರೈಕೆ ಆಗುತ್ತಿತ್ತು.ಸದ್ಯ ಲಭ್ಯ ಮಾಹಿತಿ ಪ್ರಕಾರ, ಬಂಧನಕ್ಕೆ ಒಳಗಾಗಿರುವ ಶ್ರೀನಿವಾಸ್ ಮನೆಯಲ್ಲಿಯೇ ಸಾವಿರಾರು ಲೀಟರ್ ನೀರಿಗೆ ಸ್ಕಿಮ್ಡ್ ಮಿಲ್ಕ್‌ ಪೌಡರ್ ಬೆರಸುತ್ತಿದ್ದ. ಕೊಬ್ಬಿನ ಅಂಶಕ್ಕಾಗಿ ಅಡುಗೆ ಎಣ್ಣೆ ಹಾಗೂ ಈ ಎಣ್ಣೆ ನೀರಿನಲ್ಲಿ ಬೆರೆತು ಹೋಗಲು ರಾಸಾಯನಿಕ ಒಂದನ್ನು ಬಳಸುತ್ತಿದ್ದ. ಪ್ರೊಟೀನ್‌ ಅಂಶಕ್ಕಾಗಿ ರಸಗೊಬ್ಬರನ್ನೂ ಬಳಸಲಾಗುತ್ತಿತ್ತು ಎಂಬ ಮಾಹಿತಿ ಇದೆ. ಒಟ್ಟಾರೆ, ಮೇಲ್ನೋಟಕ್ಕೆ ಬೆಳ್ಳಗೆ, ಹಾಲಿನಂತೆ ಕಾಣುತ್ತಿದ್ದ ದ್ರವ ಹಾಲೇ ಆಗಿರಲಿಲ್ಲ. ಆದರೂ ಅದನ್ನು ಸಂಘ ಖರೀದಿಸಿ, ಶೀಥಲೀಕರಣ ಘಟಕಕ್ಕೆ ಕಳುಹಿಸುತ್ತಿತ್ತು

ಪ್ರಮಾಣ ಎಷ್ಟು?:
ಶ್ರೀನಿವಾಸ್ ಹಾಗೂ ಸಂಗಡಿಗರ ಈ ಕೃತ್ಯದಿಂದ ಈವರೆಗೆ ಸರಬರಾಜು ಆಗಿರುವ ಕಲಬೆರಕೆ ಹಾಲಿನ ಪ್ರಮಾಣ ದಂಗುಬಡಿಸುವಷ್ಟಿದೆ. ಪ್ರತಿ ದಿನ 4 ಸಾವಿರ ಲೀಟರ್ ಅಂದುಕೊಂಡರೂ ತಿಂಗಳಿಗೆ ಸುಮಾರು 1.20 ಲಕ್ಷ ಲೀಟರ್ ಹಾಲು. ಕನಿಷ್ಟ ಎರಡು ವರ್ಷ ಅಂದುಕೊಂಡರೂ, 28,80,000 ಲೀಟರ್ ಕಲಬೆರಕೆ ಹಾಲು ಹಾಸನ ಒಕ್ಕೂಟಕ್ಕೆ ಹಾಗೂ ಅಲ್ಲಿಂದ ಜನರಿಗೆ ವಿತರಣೆಯಾಗಿದೆ.ಒಂದು ಲೀಟರ್ ಹಾಲಿಗೆ ಹಾಸನ ಹಾಲು ಒಕ್ಕೂಟ, ಸರಾಸರಿ21 ರೂಪಾಯಿಗಳನ್ನು ರೈತರಿಗೆ ನೀಡುತ್ತದೆ.

ಜತೆಗೆ ಸರಕಾರದ ಐದು ರೂಪಾಯಿ ಸಹಾಯ ಧನ ಪ್ರತಿ ಲೀಟರ್‌ಗೆ ನೀಡಲಾಗುತ್ತದೆ. ಈಗ ಒಟ್ಟು ಹಣವನ್ನು 28,80,000 ಲೀಟರ್ ಹಾಲಿನ ಜತೆ ಗುಣಿಸಿ ನೋಡಿ, ಕಲಬೆರಕೆ ಹಾಲಿನಿಂದ ಆರೋಪಿಗಳು ಗಳಿಸಿರುವ ಸಂಪಾದನೆಯ ಮೊತ್ತ ಲಭ್ಯವಾಗುತ್ತದೆ.ಇದರ ಜತೆಗೆ ಲೆಕ್ಕಪತ್ರದ ವಿಚಾರದಲ್ಲಿಯೂ ಅಕ್ರಮ ನಡೆದಿದೆ ಎಂದು ತನಿಖೆಯೊಂದು ಆರಂಭವಾಗಿದೆ. ಆದರೆ ಅದು ಇಲ್ಲಿನ ಮೂರ್ನಾಲ್ಕು ಸಂಘಗಳಿಗೆ ಮಾತ್ರವೇ ಸೀಮಿತವಾಗಿ ನಡೆಯುತ್ತಿದೆ.

ರಾಜ್ಯಾದ್ಯಂತ ಕಲಬೆರಕೆ ಶಂಕೆ:
ಕಳೆದ ಒಂದು ವರ್ಷದ ಅವಧಿಯಲ್ಲಿ ಕೆಎಂಎಫ್‌ಗೆ ಬರುತ್ತಿರುವ ಹಾಲಿನ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ. ಈ ಕುರಿತು ಒಕ್ಕೂಟದ ಆಡಳಿತಾತ್ಮಕ ಮಾಹಿತಿ ವ್ಯವಸ್ಥೆ ವಿಭಾಗವನ್ನು ಸಂಪರ್ಕಿಸಿತಾದರೂ, ಮಾಹಿತಿ ಲಭ್ಯವಾಗಲಿಲ್ಲ.ಆದರೆ, ಹಾಲು ಉತ್ಪಾದನೆ ಹೆಚ್ಚಾಗಿದೆ. ಹೀಗಾಗಿ ಪ್ಯಾಕೆಟ್ ಹಾಲಿನ ಜತೆಗೆ ಅದನ್ನು ಪೌಡರ್ ಮಾಡಿ ಮಾರಾಟ ಮಾಡಲು ತೀರ್ಮಾನ ತೆಗೆದುಕೊಂಡಿದ್ದೆವು.

ಕೊನೆಗೆ ಪೌಡರ್ ದಾಸ್ತಾನು ಹೆಚ್ಚಾದ ಕಾರಣ ಶಾಲೆಗಳಿಗೆ ಪೂರೈಕೆ ಮಾಡುವ ಯೋಜನೆ ರೂಪುಗೊಂಡಿತು. ಈಗ ನೋಡಿದರೆ ಹಾಸನ ಒಕ್ಕೂಟಕ್ಕೆ ಕಳುಹಿಸುತ್ತಿದ್ದ ಹಾಲು, ಹಾಲೇ ಆಗಿರಲಿಲ್ಲ ಎಂಬ ಮಾಹಿತಿ ಸಿಗುತ್ತಿದೆ. ಇದು ಇತರೆ ಜಿಲ್ಲೆಗಳಲ್ಲೂ ನಡೆದಿರುವ ಸಾಧ್ಯತೆ ಇದೆ. ಈ ಬಗ್ಗೆ ಸಮಗ್ರ ತನಿಖೆಯೊಂದು ನಡೆಯಬೇಕಿದೆ ಎಂದು ವಿಭಾಗದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಕೆಎಂಎಫ್‌ಗೆ ಕಾಯಕಲ್ಪ ಕಲ್ಪಿಸುವ ಅಗತ್ಯತೆಯನ್ನು ಅಂದಿನ ವ್ಯವಸ್ಥಾಪಕ ನಿರ್ದೇಶಕರ ಖಾರವಾದ ಪತ್ರ ಬಯಲಿಗೆಳೆದಿತ್ತು. ಅದಾದ ನಂತರ ರಾಜಕೀಯ ಕಚ್ಚಾಟದ ತಾಣದಂತಾದ ಕೆಎಂಎಫ್‌ ನಂತರದ ದಿನಗಳಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆಯನ್ನು ತೋರಿಸಿತ್ತು. ಆದರೆ ಇದೀಗ ಚಿಕ್ಕಮಗಳೂರಿನಲ್ಲಿ ಹೊರಬಿದ್ದಿರುವ ಪ್ರಕರಣ, ಒಟ್ಟಾರೆ ಕೆಎಂಎಫ್‌ ಹಾಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಈ ಬಗ್ಗೆ ಸಮಾಚಾರ ಡಾಟ್​ ಕಾಮ್ ವರದಿ ಮಾಡಿದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...