ಬೆಂಗಳೂರು: ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರ ಎರಡು ದಿನಗಳ ಕರ್ನಾಟಕ (Karnataka) ಭೇಟಿ ಮುಕ್ತಾಯವಾಗಿದೆ. ಡಿಸೆಂಬರ್ 30 ರಂದು ಮಂಡ್ಯದ (Mandya) ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (MANMUL)ನಲ್ಲಿ ನಿರ್ಮಿಸಿದ್ದ ಮೆಗಾ ಡೇರಿಗೆ (Mega Dairy at Mandya) ಚಾಲನೆ ನೀಡಿದ್ದರು. ಆದರೆ ಮೆಗಾ ಡೇರಿ ಉದ್ಘಾಟನೆ ಬಳಿಕ ಅಮಿತ್ ಶಾ ಅವರು ನೀಡಿದ್ದ ಒಂದು ಹೇಳಿಕೆಗೆ ಸದ್ಯ ರಾಜ್ಯದ ಜನರು ಅಸಮಾಧಾನಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ #SaveNandini ಎಂಬ ಅಭಿಯಾನವನ್ನೇ ಶುರು ಮಾಡಿದ್ದಾರೆ. ಇನ್ನು, ಅಮಿತ್ ಶಾ ಅವರ ಹೇಳಿಕೆ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಮೆಗಾ ಡೈರಿ ಉದ್ಘಾಟನೆ ಬಳಿಕ ಅಮಿತ್ ಶಾ ಹೇಳಿದ್ದೇನು?
ಮೆಗಾ ಡೈರಿ ಉದ್ಘಾಟನೆ ಬಳಿಕ ಮಾತನಾಡಿದ್ದ ಅಮಿತ್ ಶಾ, ಗುಜರಾತ್ನಲ್ಲಿರುವ ಸಹಕಾರ ಒಕ್ಕೂಟ ಪ್ರಗತಿಯಲ್ಲಿದೆ. ಕರ್ನಾಟಕದಲ್ಲಿ 1975ರಿಂದಲೂ ಕೆಎಂಎಫ್ ಕೂಡ ಅಭಿವೃದ್ಧಿ ಹೊಂದಿದೆ. ಅಮುಲ್ ಹಾಗೂ ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ ಎಂದಿದ್ದರು. ಅಲ್ಲದೇ ಮುಂದಿ ಮೂರು ವರ್ಷಗಳಲ್ಲಿ ದೇಶದಾದ್ಯಂತ ಸುಮಾರು 82 ಲಕ್ಷಕ್ಕೂ ಅಧಿಕ ಪ್ರಾಥಮಿಕ ಡೇರಿಗಳನ್ನು ಸ್ಥಾಪಿಸಲಾಗುತ್ತದೆ. ಆ ಮೂಲಕ ವಿದೇಶಗಳಿಗೂ ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಹೊಂದಿದ್ದೇವೆ.
ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಅಮಿತ್ ಶಾ ಮೆಚ್ಚುಗೆ
ಕರ್ನಾಟಕದಲ್ಲಿ ಸಿಎಂ ಬೊಮ್ಮಾಯಿ ಅವರ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದೆ. ಈ ಯೋಜನೆಯ ಲಾಭವನ್ನು 35 ಲಕ್ಷ ಹಾಲು ಉತ್ಪಾದಕರು ಪಡೆದುಕೊಳ್ಳುತ್ತಿದ್ದಾರೆ. ಸುಮಾರು 1,250 ಕೋಟಿ ರೂಪಾಯಿ ರೈತರ ಖಾತೆ ನೇರವಾಗಿ ಸೇರುತ್ತಿದೆ. ಕ್ಷೀರ ಭಾಗ್ಯ ಯೋಜನೆಯ ಮೂಲಕ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸಲು, 51,000 ಸರ್ಕಾರಿ ಶಾಲೆಗಳಲ್ಲಿ 65 ಲಕ್ಷ ಮಕ್ಕಳಿಗೆ ಮತ್ತು 64,000 ಅಂಗನವಾಡಿಗಳಲ್ಲಿ 39 ಲಕ್ಷ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ.
ಅಮುಲ್ ಮತ್ತು ನಂದಿನಿ ಒಟ್ಟಾಗಿ ಕರ್ನಾಟಕದ ಪ್ರತಿ ಹಳ್ಳಿಯಲ್ಲಿ ಪ್ರಾಥಮಿಕ ಡೈರಿ ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್ಡಿಡಿಬಿ) ಮತ್ತು ಸಹಕಾರ ಸಚಿವಾಲಯವು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಪ್ರಾಥಮಿಕ ಡೈರಿ ಇಲ್ಲದೆ ಇರುವ ಒಂದೇ ಒಂದು ಹಳ್ಳಿ ಇರೋದಿಲ್ಲ.
ಇದನ್ನೂ ಓದಿ: Amit Shah: ಸಕ್ಕರೆ ನಾಡಲ್ಲಿ ಬಿಜೆಪಿ ಚಾಣಕ್ಯ; ಮಂಡ್ಯದಲ್ಲಿ ಮೆಗಾ ಡೈರಿಗೆ ಅಮಿತ್ ಶಾ ಚಾಲನೆ
ಅಮುಲ್ನಿಂದ ಕೆಎಂಎಫ್ಗೆ ಅಗತ್ಯವಿರುವ ತಾಂತ್ರಿಕ ಬೆಂಬಲ
1975 ರಲ್ಲಿ ಕರ್ನಾಟಕದಲ್ಲಿ ಪ್ರತಿದಿನ ಸುಮಾರು 66,000 ಕೆಜಿ ಹಾಲು ಸಂಸ್ಕರಣೆಯಾಗುತ್ತಿತ್ತು. ಆದರೆ ಇಂದು 82 ಲಕ್ಷ ಕೆಜಿ ಹಾಲನ್ನು ಪ್ರತಿದಿನ ಸಂಸ್ಕರಿಸಲಾಗುತ್ತದೆ. ಇದರಲ್ಲಿ ನಡೆಯುತ್ತಿರುವ ಒಟ್ಟು ವಹಿವಾಟಿನ ಶೇಕಡಾ 80 ಹಣ ರೈತನಿಗೆ ಸೇರುತ್ತದೆ. ಕರ್ನಾಟಕ ಹಾಲು ಒಕ್ಕೂಟಕ್ಕೆ ಅಗತ್ಯವಿರುವ ತಾಂತ್ರಿಕ ಬೆಂಬಲ, ಸಹಕಾರಿ ವಲಯದ ಬೆಂಬಲ ಮತ್ತು ಅಮುಲ್ನಿಂದ ಒಟ್ಟಾರೆ ಕಾರ್ಯನಿರ್ವಹಣೆಯ ಬೆಂಬಲವನ್ನು ಒದಗಿಸಲಾಗುವುದು. ಈ ಕುರಿತು ಅಗತ್ಯವಿರುವ ಕಾರ್ಯಗಳನ್ನು ಸಹಕಾರ ಸಚಿವಾಲಯವು ಪರಿಹರಿಸುತ್ತದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದ್ದರು.
ಅಮುಲ್ ಜತೆ ನಂದಿನಿ ವಿಲೀನ ಸಾಧ್ಯವಿಲ್ಲ. ನಮ್ಮ ರೈತರ ಅನ್ನ ಕಸಿಯುವ ಕೆಲಸವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕೆಎಂಎಫ್ ಕನ್ನಡಿಗರ ಜೀವನಾಡಿ ಮಾತ್ರವಲ್ಲ, ಸಮಸ್ತ ಕನ್ನಡಿಗರ ಆಸ್ತಿ ಮತ್ತು ಅಸ್ಮಿತೆ. ಅಮಿತ್ ಶಾ ಅವರು ಇದೆಲ್ಲವನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು.7/7
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 1, 2023
ಇನ್ನು, ಅಮಿತ್ ಶಾ ಹೇಳಿಕೆಗೆ ಬಗ್ಗೆ ನಾಡಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಬ್ಯಾಂಕ್ಗಳನ್ನು ಕಿತ್ತುಕೊಂಡು ಆರ್ಥಿಕತೆ ನಾಶ ಮಾಡಿದ್ರು, ಈಗ ಹಾಲಿಗೆ ಕೈ ಹಾಕಿದ್ದಾರೆ. ಈ ದುಷ್ಟ ಭಸ್ಮಾಸುರನ ಕೈಗೆ ಈಗಲೆ ಬರೆ ಹಾಕದಿದ್ದರೆ ನಮ್ಮ 25 ಲಕ್ಷ ರೈತ ಕುಟುಂಬಗಳನ್ನು ಬೀದಿಪಾಲು ಮಾಡುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದರು.
ಕರ್ನಾಟಕದ ಹಾಲಿನಲ್ಲಿ ಗುಜರಾತಿನ ಹುಳಿ ಹಿಂಡಲು ಅಮಿತ್ ಶಾ ಹೊರಟ್ಟಿದ್ದಾರೆ
ಹೆಚ್ಡಿ ಕುಮಾರಸ್ವಾಮಿ ಮಾತನಾಡಿ, ಅಮುಲ್ ಜತೆ ನಂದಿನಿ ವಿಲೀನ ಸಾಧ್ಯವಿಲ್ಲ. ನಮ್ಮ ರೈತರ ಅನ್ನ ಕಸಿಯುವ ಕೆಲಸವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕೆಎಂಎಫ್ ಕನ್ನಡಿಗರ ಜೀವನಾಡಿ ಮಾತ್ರವಲ್ಲ, ಸಮಸ್ತ ಕನ್ನಡಿಗರ ಆಸ್ತಿ ಮತ್ತು ಅಸ್ಮಿತೆ. ಅಮಿತ್ ಶಾ ಅವರು ಇದೆಲ್ಲವನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕವನ್ನು ಉತ್ತರ ಭಾರತದ ಬ್ಯಾಂಕ್ ಗಳಿಗೆ ಅಡಿಯಾಳನ್ನಾಗಿಸಿ, ಹಿಂದಿ ಭಾಷಿಗರ ಉದ್ಧಾರಕ್ಕಾಗಿ ಕನ್ನಡಿಗರ ಅನ್ನ ಕಸಿದುಕೊಂಡ ಬಿಜೆಪಿ ಈಗ, ನಂದಿನಿಯನ್ನು ಹೊಡೆದುಕೊಂಡು ಹೋಗಲು ಹಿಡನ್ ಅಜೆಂಡಾ ರೂಪಿಸಿದಂತಿದೆ.
ಇದನ್ನೂ ಓದಿ: Cabinet Expansion: ಸಂಪುಟ ವಿಸ್ತರಣೆಗೆ ಅನುಮತಿ ನೀಡದ ಅಮಿತ್ ಶಾ!
ಕರ್ನಾಟಕ ಎಂದಿಗೂ ಗುಜರಾತಿನ ವಸಾಹತು ಆಗುವುದಿಲ್ಲ. ನೆಲ, ಜಲ, ನುಡಿಯ ಬಗ್ಗೆ ಕನ್ನಡ ಮತ್ತು ಕರ್ನಾಟಕದ ಮೇಲೆ ಸದಾ ಪ್ರಹಾರ ನಡೆಸುತ್ತಿರುವ ಬಿಜೆಪಿ ಕನ್ನಡಿಗರ ವಿರುದ್ಧ ತನ್ನ ರಕ್ಕಸ ನೀತಿಗಳನ್ನು ಮುಂದುವರಿಸಿದೆ. ಈಗ ಕರ್ನಾಟಕದ ಹಾಲಿನಲ್ಲೂ ಗುಜರಾತಿನ ಹುಳಿ ಹಿಂಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊರಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ