ಕಲಬುರ್ಗಿ (ಡಿಸೆಂಬರ್. 23): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕೋಮಾ ಸ್ಥಿತಿಯಲ್ಲಿದ್ದುದು ಸತ್ಯ. ಅದನ್ನು ಗುಣಮುಖವನ್ನಾಗಿಸುವ ಕೆಲಸ ಬಿಜೆಪಿ ಸರ್ಕಾರದಿಂದ ನಡೆಯುತ್ತಿದೆ ಎಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಐಸಿಯು ನಲ್ಲಿದೆ, ಕೆ.ಕೆ.ಆರ್.ಡಿ.ಬಿ ಕೋಮಾ ಸ್ಥಿತಿಗೆ ಹೋಗಿದೆ ಎನ್ನುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆಯವರ ಆರೋಪಕ್ಕೆ ದತ್ತಾತ್ರೇಯ ಪಾಟೀಲ ರೇವೂರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ಕೆ.ಕೆ.ಆರ್.ಡಿ.ಬಿ ಕೋಮಾ ಸ್ಥಿತಿಯಲ್ಲಿದ್ದುದು ಸತ್ಯ. ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿದ್ದ ವೇಳೆ ಇದು ಕೋಮಾ ಸ್ಥಿತಿಗೆ ಹೋಗಿತ್ತು. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ 2014-15ನೇ ಸಾಲಿಗೆ 153 ಕೋಟಿ ರೂಪಾಯಿ ಅನುದಾನ ನಿಗದಿಗೊಳಿಸಿ ಕೇವಲ 30 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು ಎಂದು ತಿಳಿಸಿದ್ದಾರೆ.
2015-16 ಹಾಗೂ 2016-17 ನೇ ಸಾಲಿಗೆ 1000 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟು ಅಷ್ಟೇ ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸಿದರೂ ಬಿಡುಗಡೆ ಮಾಡಿದ್ದ ಮಾತ್ರ 750 ಕೋಟಿ ರೂಪಾಯಿ.2017-18 ನೇ ಸಾಲಿಗೆ 1000 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟು, 1500 ಕೋಟಿ ರೂಪಾಯಿಗೆ ಕ್ರಿಯಾ ಯೋಜನೆ ರೂಪಿಸಿ ಕೇವಲ 800 ಕೋಟಿ ರೂಪಾಯಿ ಮಾತ್ರ ಬಿಡುಗಡೆಗೊಳಿಸಲಾಗಿತ್ತು.
2018-19ನೇ ಸಾಲಿಗೆ 1000 ಕೋಟಿ ರೂಪಾಯಿ ಮೀಸಲಿಟ್ಟು, ಅಷ್ಟೇ ಮೊತ್ತದ ಕ್ರಿಯಾ ಯೋಜನೆ ರೂಪಿಸಿ ಅಷ್ಟೇ ಮೊತ್ತದ ಹಣ ಬಿಡುಗಡೆ ಮಾಡಲಾಗಿತ್ತು. ಇದೊಂದು ವರ್ಷ ಬಿಟ್ಟರೆ ಮಿಕ್ಕೆಲ್ಲ ಸಂದರ್ಭಗಳಲ್ಲಿಯೂ ಸರ್ಕಾರ ಸೂಕ್ತ ರೀತಿಯಲ್ಲಿ ಅನುದಾನ ಬಿಡುಗಡೆ ಮಾಡದೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಅನಾದರ ಮಾಡಿವೆ. ಹೀಗಾಗಿ ಕೆ.ಕೆ.ಆರ್.ಡಿ.ಬಿ. ಕೋಮಾ ಸ್ಥಿತಿಗೆ ಜಾರಿತ್ತು ಎಂದರು.
ಬಿಜೆಪಿ ಸರ್ಕಾರ ಬಂದ ಮೇಲೆ ವೆಂಟಿಲೇಟರ್ ತೆಗೆದು ಗುಣಮುಖವನ್ನಾಗಿಸುವ ಕೆಲಸ ಆರಂಭಗೊಂಡಿದೆ. ಬಿಜೆಪಿ ಸರ್ಕಾರ ಬಂದ ನಂತರ ಕೋಮಾ ಸ್ಥಿತಿಯಿಂದ ಕೆ.ಕೆ.ಆರ್.ಡಿ.ಬಿ. ಚೇತರಿಸಿಕೊಳ್ಳುತ್ತಿದೆ. ಪ್ರಸಕ್ತ ವರ್ಷ ರಾಜ್ಯ ಸರ್ಕಾರ 1131 ಕೋಟಿ ರೂಪಾಯಿಗಳ ಅನುಮೋದನೆ ನೀಡಿದೆ. 955 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ರೂಪಿಸಿದ್ದೇವೆ. ಈ ಪೈಕಿ 540 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಉಳಿದ ಅನುದಾನವನ್ನೂ ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ ಎಂದು ರೇವೂರ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಅವಿರೋಧ ಆಯ್ಕೆಗೆ ಗ್ರಾಮಸ್ಥರ ವಿರೋಧ; ಗ್ರಾಮದಲ್ಲಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ
ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ಸರ್ಕಾರ ಇಷ್ಟು ಬಜೆಟ್ ನೀಡಿದೆ. ಆದರೆ ಈ ಹಿಂದಿನ ಸರ್ಕಾರಗಳು ಅನುದಾನ ನಿಗದಿಗೊಳಿಸಿದ್ದು ಒಂದು, ನಂತರ ಕ್ರಿಯಾ ಯೋಜನೆ ರೂಪಿಸಿದ್ದ ಮತ್ತೊಂದು. ಯಾವ ವರ್ಷವೂ ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡಿಲ್ಲ. ಈಗ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸೋ ಯತ್ನ ನಡೆಸಲಾಗ್ತಿದೆ. ಹಿಂದಿನ ಸರ್ಕಾರಗಳಲ್ಲಿ ಕೋಮಾಕ್ಕೆ ಹೋದ ಮಂಡಳಿಯನ್ನು ಚೇತರಿಸಿಕೊಳ್ಳುವಂತೆ ಮಾಡ್ತಿದ್ದೇನೆ. ಶೀಘ್ರವೇ ಮಂಡಳಿ ಸಶಕ್ತಗೊಳ್ಳಲಿದೆ, ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳ ಪರ್ವ ಆರಂಭಗೊಳ್ಳಲಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ