ಹಾಸನ: ಕಳೆದ ಭಾನುವಾರ ನಾಪತ್ತೆಯಾಗಿದ್ದ ಮಂಡ್ಯ (Mandya) ಜಿಲ್ಲೆ, ನಾಗಮಂಗಲ (Nagamangal) ತಾಲ್ಲೂಕಿನ, ನರಗಲು ಗ್ರಾಮದ ಮೋಹನ್ ಬರ್ಬರವಾಗಿ ಕೊಲೆಯಾಗಿದ್ದಾನೆ. ಕೊಲೆ (Murder) ಮಾಡಿದ ನಂತರ ಹಾಸನ (Hassan) ಜಿಲ್ಲೆ, ಹೊಳೆನರಸೀಪುರ (Holenarasipura) ತಾಲ್ಲೂಕಿನ ಬಂಟರ ತಳಾಲು ಗ್ರಾಮದ ಹೊರಭಾಗದಲ್ಲಿರುವ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆ (Illegal stone mining) ಮೇಲೆ ಅಧಿಕಾರಿಗಳು ಇತ್ತೀಚಿಗೆ ದಾಳಿ ನಡೆಸಿದ್ದರು. ಮೋಹನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ ಎಂಬ ಅನುಮಾನದಿಂದ ರಾಜು, ಸಂದೀಪ್ ಎಂಬುವರ ಜೊತೆ ಸಂಬಂಧಿಕರು ಸೇರಿ ಮೋಹನ್‌ನನ್ನು ಕೊಲೆಗೈದಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…
ಗಣಿಗಾರಿಕೆಗೆ ಜಮೀನು ನೀಡುವಂತೆ ಒತ್ತಾಯ
ಕೊಲೆಯಾಗಿರುವ ಮೋಹನ್ ಜಮೀನಿನ ಪಕ್ಕದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಗಣಿ ಮಾಲೀಕ ತಮಿಳುನಾಡು ಮೂಲದ ರಾಜು, ಮೋಹನ್ ದೊಡ್ಡಪ್ಪನ ಮಗ ಕುಮಾರ್, ಅವರ ಮಗ ತೇಜು ಸೇರಿ ಮೈನಿಂಗ್ ನಡೆಸುತ್ತಿದ್ದರು. ಗಣಿಗಾರಿಕೆಗೆ ಕುಮಾರ್ ಜಮೀನು ನೀಡಿದ್ದರು. ಅದರ ಪಕ್ಕದಲ್ಲೇ ಮೋಹನ್ ಜಮೀನಿತ್ತು. ಮೈನಿಂಗ್ ನಡೆಸಲು ಜಮೀನು ನೀಡುವಂತೆ ಮೋಹನ್‌ಗೆ ರಾಜು ಹಾಗೂ ಕುಮಾರ್ ದುಂಬಾಲು ಬಿದ್ದಿದ್ದರು ಮೋಹನ್ ಒಪ್ಪಿರಲಿಲ್ಲ.
ಗಣಿಗಾರಿಕೆ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು
ಸುಣ್ಣದ ಕಲ್ಲನ್ನು ಪುಡಿ ಮಾಡಿ ರಸಗೊಬ್ಬರದೊಂದಿಗೆ ಮಿಶ್ರಣ ಮಾಡಿ ಕಾನೂನು ಬಾಹಿರವಾಗಿ ಮಾರಾಟ ಮಾಡುವ ಮೂಲಕ ರೈತರನ್ನು ವಂಚಿಸುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಕಳೆದ ಹದಿನೈದು ದಿನಗಳ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ವಾಹನಗಳನ್ನು ವಶಕ್ಕೆ ಪಡೆದು, ದಂಡ ವಿಧಿಸಲಾಗಿತ್ತು.
ಇದನ್ನೂ ಓದಿ: Crime News: ರಾಜ್ಯದ ಪಾಲಿಗಿಂದು 'ಸಾವಿನ ಸಂಡೇ'! ವಿವಿಧ ಪ್ರಕರಣಗಳಲ್ಲಿ ಐದಕ್ಕೂ ಹೆಚ್ಚು ಮಂದಿ ದುರ್ಮರಣ
ದಾಳಿ ಹಿನ್ನೆಲೆಯಲ್ಲಿ ಮೋಹನ್ ಮೇಲೆ ಅನುಮಾನ
ಅಕ್ರಮ ಕಲ್ಲು ಗಣಿಗಾರಿಕೆ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ನಡೆಸಲು ಮೋಹನ್‌ನೆ ಕಾರಣ, ಈತನೇ ಮಾಹಿತಿ ನೀಡಿದ್ದಾನೆ ಎಂದು ಅನುಮಾನಗೊಂಡ ರಾಜು ಹಾಗೂ ಸಂಬಂಧಿಕರು ಈತನನ್ನು ಹೀಗೆಯೇ ಬಿಟ್ಟರೆ ಮುಂದೆ ನಮಗೇ ಮುಳುವಾಗುತ್ತಾನೆ ಎಂದು ಭ್ರಮಿಸಿ ಆತನನ್ನು ಮುಗಿಸಲು ಸ್ಕೆಚ್ ಹಾಕಿದ್ದಾರೆ.
ಜಮೀನಿಗೆ ಹೋದ ಮೋಹನ್ ವಾಪಸ್ ಬರಲೇ ಇಲ್ಲ
ಕಳೆದ ಮೇ 15 ರಂದು ಜಮೀನು ಬಳಿಗೆ ಹೋಗಿ ಬರುವೆ ಎಂದು ಹೋದ ಮೋಹನ್ ದಿಢೀರ್ ನಾಪತ್ತೆಯಾಗಿದ್ದ. ಮನೆಗೆ ಬಾರದ ಹಿನ್ನಲೆಯಲ್ಲಿ ಪತ್ನಿ, ಸ್ನೇಹಿತರು ಸಾಕಷ್ಟು ಹುಡುಕಾಟ ನಡೆಸಿದ್ದರು. ಮೈನಿಂಗ್ ಬಳಿ ಹೋಗಿ ರಾಜುವನ್ನು ಕೂಡ ಪ್ರಶ್ನಿಸಿದ್ದರು. ಎಲ್ಲಿ ಹುಡುಕಿದರು ಮೋಹನ್ ಪತ್ತೆಯಾಗದ ಕಾರಣ ಬಿಂಡಿಗನವಿಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈಗ ಬಂಧಿತರಾಗಿರುವವರ ಮೇಲೆಯೇ ಅನುಮಾನ ವ್ಯಕ್ತಪಡಿಸಿ, ಇವರನ್ನು ಬಂಧಿಸಿ ವಿಚಾರಣೆ ನಡೆಸಿ ಎಂದು ಮನವಿ ಮಾಡಿದ್ದರು. ಆದರೆ ಪೊಲೀಸರು ಈ ಬಗ್ಗೆ ಆಸಕ್ತಿ ತೋರಲಿಲ್ಲ, ತನಿಖೆಗೂ ಮುಂದಾಗಲಿಲ್ಲ ಎಂದು ಮೃತನ ಕಡೆಯವರು ಆರೋಪಿಸಿದ್ದಾರೆ.
ಶಾಸಕರ ಆದೇಶದ ನಂತರ ತನಿಖೆ ನಡೆಸಿದ ಪೊಲೀಸರು
ನಂತರ ನಾಗಮಂಗಲ ಶಾಸಕ ಸುರೇಶ್‌ಗೌಡ ಅವರು ಮಧ್ಯೆ ಪ್ರವೇಶಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಎಂದು ಸೂಚಿಸಿದ ನಂತರ ಪೊಲೀಸರು ಎಚ್ಚೆತ್ತುಕೊಂಡರು. ಘಟನೆ ನಡೆದ ದಿನದಿಂದಲೂ ಜಾಣಗುರುಡು ಪ್ರದರ್ಶಿಸಿದ್ದ ಪೊಲೀಸರು, ಶಾಸಕರ ಸೂಚನೆ ನಂತರ ದಿಢೀರ್ ಎಚ್ಚೆತ್ತು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ಕೊಲೆ ಕೃತ್ಯ ಬಯಲಾಗಿದೆ. ಮೋಹನ್‌ನನ್ನು ನಾವೇ ಕೊಲೆ ಮಾಡಿ ಹೂತು ಹಾಕಿದ್ದೇವೆ ಎಂದು ಬಂಧಿತರಾದ ರಾಜು, ಸಂದೀಪ್, ಕುಮಾರ್ ತಪ್ಪೊಪ್ಪಿಕೊಂಡಿದ್ದಾರೆ.
ಭೂಮಿ ಆಳದಲ್ಲಿ ಶವ ಹೂತಿದ್ದ ಹಂತಕರು
ಅವರ ಮಾಹಿತಿ ಆಧರಿಸಿ ಆರೋಪಿಗಳೊಂದಿಗೆ ಇಂದು ಶವ ಹೂತಿದ್ದ ಸ್ಥಳಕ್ಕೆ ಆಗಮಿಸಿದ ಬಿಂಡಿಗನವಿಲೆ ಪೊಲೀಸರು, ಹಳ್ಳಿ ಮೈಸೂರು ಪೊಲೀಸರ ಸಹಕಾರದೊಂದಿಗೆ ಗುಡ್ಡಗಾಡು ಪ್ರದೇಶದಲ್ಲಿ ಹೂತಿದ್ದ ಶವವನ್ನು ಹೊರ ತೆಗೆದು ಮಹಜರು ನಡೆಸಿದರು. ಶವವನ್ನು ಸುಮಾರು ಹತ್ತು ಅಡಿಗಿಂತ ಹೆಚ್ಚು ಆಳ ತೆಗೆದು ಹೂಳಲಾಗಿತ್ತು. ಮೊದಲು ಹಾರೆ, ಗುದ್ದಲಿ ಮೂಲಕ ಅಗೆಯಲು ಆರಂಭಿಸಿದರು. ಎಷ್ಟು ಅಗೆದರು ಶವ ಸಿಗದ ಹಿನ್ನಲೆಯಲ್ಲಿ ಜೆಸಿಬಿ ಮೂಲಕ ಬಗೆದು ಶವ ಹೊರ ತೆಗಿಯಲಾಯಿತು.
ಇದನ್ನೂ ಓದಿ: Facebookನಲ್ಲಿ ಫೇಸ್ ನೋಡದೇ ಲವ್ ಮಾಡಿದ! ಮದುವೆ ವೇಳೆ ಗೊತ್ತಾಯ್ತು ಆಕೆ ಹುಡುಗಿಯಲ್ಲ, ಆಂಟಿ!
ತಮ್ಮ ಅಕ್ರಮದ ಹುಳುಕು ಬಯಲಾಗಲು ಮೋಹನನೇ ಕಾರಣ ಎಂದು ಅನುಮಾನಿಸಿ ಅಮಾಯಕನ ಜೀವ ತೆಗೆದ ಮೂವರು ಈಗ ಕಂಬಿ ಎಣಿಸುವಂತಾಗಿದೆ. ಇತ್ತ ಗಣಿಗಾರಿಕೆ ಮೇಲಿನ ದಾಳಿಗೂ, ಮೋಹನ್‌ಗೂ ಯಾವುದೇ ಸಂಬಂಧವಿಲ್ಲ. ಆದರು ಆತನನ್ನು ಅಪಹರಿಸಿ ಕೊಲೆ ಮಾಡಿ, ಹಾಸನ ಜಿಲ್ಲೆಗೆ ಶವ ತಂದು ಹೂತು ಹಾಕಿದ್ದಾರೆ. ಇದೀಗ ಕೊಲೆಗಡುಕರು ಸಿಕ್ಕಿ ಬಿದ್ದಿದ್ದು, ಅವರಿಗೆ ತಕ್ಕಶಾಸ್ತಿಯಾಗಬೇಕು. ಅಲ್ಲದೆ ನಿರ್ಲಕ್ಷ್ಯ ತೋರಿದ ಪೊಲೀಸರ ಮೇಲೂ ಕ್ರಮ ಆಗಬೇಕು ಎಂದು ನರಗಲು ಗ್ರಾಮಸ್ಥರು ಹಾಗೂ ಮೃತನ ಸ್ನೇಹಿತರು, ಸಂಬಂಧಿಕರು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ