ಮುಡಗೇರಿಯಲ್ಲಿ ಕೈಗಾರಿಕಾ ಸ್ಥಾಪನೆಗೆ ಚಿಂತನೆ; ನೌಕಾನೆಲೆ ಕೈಗಾರಿಕಾ ವಸಾಹತು ಕೇಂದ್ರವಾಗಲಿದೆ ‌ಕಾರವಾರ

ಕೈಗಾರಿಕೆಗಳ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಐಡಿಬಿ) ಸುಮಾರು 210 ಎಕರೆ ಭೂಮಿಯನ್ನು ಕಳೆದ 20 ವರ್ಷಗಳ ಹಿಂದೆ ಕಾರವಾರ ತಾಲೂಕಿನ ಮುಡಗೇರಿ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಂಡಿತ್ತು.

ಕಾರವಾರದ ನೌಕಾನೆಲೆ

ಕಾರವಾರದ ನೌಕಾನೆಲೆ

  • Share this:
ಕಾರವಾರ (ಫೆ. 1):ರಾಜ್ಯದ ಗಡಿ ತಾಲೂಕು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಕೈಗಾರಿಕೆಗಳಿಲ್ಲ. ನಿರುದ್ಯೋಗ ಸಮಸ್ಯೆ ತಾಲೂಕಿನಲ್ಲಿ ಹೆಚ್ಚಾಗಿದೆ ಎನ್ನುವ ಕೂಗು ಸಾಕಷ್ಟು ವರ್ಷಗಳಿಂದ ಕೇಳಿ ಬಂದಿತ್ತು. ಇದೀಗ ಕಾರವಾರ ತಾಲೂಕಿನ ಮುಡಗೇರಿ ಗ್ರಾಮದಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನೌಕಾನೆಲೆಗೆ ಸಂಬಂಧಪಟ್ಟ ಸಣ್ಣ ಕೈಗಾರಿಕೆಗಳ ಸ್ಥಾಪನೆಗಾಗಿ ‘ನೌಕಾನೆಲೆ ಕೈಗಾರಿಕಾ ವಸಾಹತು’ ನಿರ್ಮಾಣ ಯೋಜನೆ ಸಿದ್ಧವಾಗಿದೆ.

ಕಾರವಾರ ತಾಲೂಕಿನಲ್ಲಿರುವ ಐಎನ್‌ಎಸ್ ಕದಂಬ ನೌಕಾನೆಲೆ ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ನೌಕಾನೆಲೆಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಮುಕ್ತಾಯವಾದ ನಂತರ ಸಾಕಷ್ಟು ಯುದ್ಧ ನೌಕೆಗಳು ಕಾರವಾರದಲ್ಲಿ ನಿಲುಗಡೆಯಾಗಲಿದೆ. ಜೊತೆಗೆ ನೌಕಾದಳ, ಭೂಸೇನೆ ಹಾಗೂ ವಾಯುಸೇನೆಯ ‘ಮೆರಿಟೈಮ್ ಥಿಯೇಟರ್ ಕಮಾಂಡ್’ ಕೇಂದ್ರ ಕಚೇರಿ ಕೂಡ ಕಾರವಾರದಲ್ಲಿ ಸ್ಥಾಪನೆಯಾಗಲಿದೆ.

ಸದ್ಯ, ನೌಕೆಗಳ ದುರಸ್ಥಿ ಕಾರ್ಯಕ್ಕೆ ಬಳಕೆಯಾಗುವ ಬಿಡಿ ಭಾಗಗಳನ್ನು ಬೇರೆ ರಾಜ್ಯಗಳಲ್ಲಿರುವ ಕಾರ್ಖಾನೆಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇದ್ದು, ನೌಕಾನೆಲೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವುದರಿಂದ ಕಾರವಾರದಲ್ಲಿಯೇ ಬಿಡಿ ಭಾಗಗಳ ಉತ್ಪಾದನೆಗೆ ಕೈಗಾರಿಕೆಗಳನ್ನು ಸ್ಥಾಪಿಸುವಂತಹ ಕೈಗಾರಿಕೆಗಳನ್ನು ತರಲು ಚಿಂತನೆ ನಡೆದಿದೆ. ಇದಕ್ಕೆ ನೌಕಾದಳದವರು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.
ಕೈಗಾರಿಕೆಗಳ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಐಡಿಬಿ) ಸುಮಾರು 210 ಎಕರೆ ಭೂಮಿಯನ್ನು ಕಳೆದ 20 ವರ್ಷಗಳ ಹಿಂದೆ ಕಾರವಾರ ತಾಲೂಕಿನ ಮುಡಗೇರಿ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಂಡಿತ್ತು.

ಇದನ್ನೂ ಓದಿ: ಆಸ್ಪತ್ರೆಯಿಂದ ಬಿಡುಗಡೆಯಾದರೂ ಚೆನ್ನೈಗೆ ತೆರಳದ ಶಶಿಕಲಾ; ಇನ್ನೂ 10 ದಿನ ಬೆಂಗಳೂರಿನಲ್ಲೇ ವಾಸ್ತವ್ಯ

ಆದರೆ, ಕೈಗಾರಿಕೆಗಳ ಸ್ಥಾಪನೆ ಮಾಡದೇ ಭೂಮಿಯನ್ನು ಬಂಜರಾಗಿ ಬಿಟ್ಟಿದ್ದರಿಂದ ಹಲವರ ಆಕ್ರೋಶಕ್ಕೆ ಸಹ ಕಾರಣವಾಗಿತ್ತು. ಇದೀಗ ಕೆಐಡಿಬಿ, ನೌಕಾದಳಕ್ಕೆ ಸಂಬಂಧಿಸಿದಂತೆ ಸಣ್ಣ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲೆಂದೇ ಸುಮಾರು 70 ಎಕರೆ ಜಾಗವನ್ನು ಮೀಸಲಿಡಲು ಮುಂದಾಗಿದೆ. ಅಂದರೆ, ಒಂದು ರೀತಿಯ ಉತ್ಪಾದನಾ ಪಾರ್ಕ್ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಳ್ಳುತ್ತಿದೆ.

ಮೀಸಲಿಟ್ಟ ಜಾಗದಲ್ಲಿ ನೌಕಾದಳದಲ್ಲಿ ಉಪಯೋಗವಾಗುವ ನೌಕೆಗಳ ಬಿಡಿಭಾಗ, ಇನ್ನಿತರ ವಸ್ತುಗಳ ಉತ್ಪಾದನೆ ಘಟಕಗಳನ್ನು ಮಾತ್ರ ಸ್ಥಾಪಿಸಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ಸರ್ಕಾರದ ಮಟ್ಟಿಗೂ ಈ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಒಂದೊಮ್ಮೆ ಈ ಕೈಗಾರಿಕೆ ಸ್ಥಾಪನೆಗೆ ಸಮ್ಮತಿ ಸೂಚಿಸಿದರೆ ಖಾರ್ಖಾನೆಗಳನ್ನು ಪ್ರಾರಂಭಿಸಲು ಆಹ್ವಾನ ಮಾಡಲಿದ್ದು, ಆಸಕ್ತರು ನಿಯಮಾನುಸಾರ ನೌಕಾದಳಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ಸ್ಥಾಪಿಸಲು ಮುಂದಾಗಬಹುದಾಗಿದೆ. ಇದರಿಂದ ಉದ್ಯೋಗ ಕೂಡ ಸೃಷ್ಟಿಯಾಗಲಿ ಎನ್ನಲಾಗಿದೆ.

ಇನ್ನು ನೌಕಾದಳದ ಅಧಿಕಾರಿಗಳ ಜೊತೆ ಸಹ ಈ ಬಗ್ಗೆ ಚರ್ಚೆ ನಡೆಸಿದ್ದು, ಅವರು ಸಹ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಬೇರೆ ರಾಜ್ಯಗಳಿಂದ ತಾವು ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುವುದಿಲ್ಲ. ಮುಡಗೇರಿಯಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಿಂದಲೇ ವಸ್ತುಗಳನ್ನು ಖರೀದಿ ಮಾಡುತ್ತೇವೆ ಎಂಬ ಭರವಸೆ ಸಹ ನೀಡಿದ್ದಾರೆ ಎನ್ನಲಾಗಿದ್ದು, ಶೀಘ್ರದಲ್ಲಿಯೇ ಈ ಪ್ರಕ್ರಿಯೆ ಪ್ರಾರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾರವಾರದಲ್ಲಿ ನೌಕಾನೆಲೆ ಇರುವ ಹಿನ್ನಲೆಯಲ್ಲಿ ನೌಕಾನೆಲೆಗೆ ಬಳಕೆಯಾಗುವ ವಸ್ತುಗಳ ತಯಾರಿಕೆಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಮುಡಗೇರಿಯಲ್ಲಿ ಇದಕ್ಕೆ ಸಂಬಂಧಿಸಿದ ಕೈಗಾರಿಕೆಗಳ ಸ್ಥಾಪನೆಗೆ ಚಿಂತನೆ ನಡೆದಿದೆ ಎಂದು ಉತ್ತರ ಕನ್ನಡ  ಜಿಲ್ಲಾಧಿಕಾರಿ ಡಾ.ಕೆ. ಹರೀಶ್‌ಕುಮಾರ್ ತಿಳಿಸಿದ್ದಾರೆ.

ಕೆಐಡಿಬಿ ಕಾರ್ಯ ಕೈಗಾರಿಕೆ ಉದ್ದೇಶದಿಂದ ಭೂಮಿಯನ್ನು ವಶಕ್ಕೆ ಪಡೆದು, ಅವುಗಳನ್ನು ಅಭಿವೃದ್ಧಿಪಡಿಸಿ ನಂತರ ಕೈಗಾರಿಕೆ ಸ್ಥಾಪನೆಗೆ ಮುಂದೆ ಬರುವವರಿಗೆ ಭೂಮಿಯನ್ನು ನೀಡುವುದಾಗಿದೆ. ಅದರಲ್ಲೂ ಯಾವ ಜಿಲ್ಲೆಯಲ್ಲಿ ಯಾವ ಕೈಗಾರಿಕೆಗೆ ಹೆಚ್ಚಿನ ಬೇಡಿಕೆ ಇರುತ್ತದೆಯೋ ಅಂತಹ ಕೈಗಾರಿಕೆ ಸ್ಥಾಪನೆಗೆ ಒತ್ತು ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಕಾರವಾರದಲ್ಲಿ ನೌಕಾನೆಲೆ ಇರುವ ಹಿನ್ನಲೆಯಲ್ಲಿ ಅಲ್ಲಿಗೆ ಪೂರೈಕವಾಗುವ ವಸ್ತುಗಳ ತಯಾರಿಕೆಗೆ ಬೇಡಿಕೆ ಇರುವ ಹಿನ್ನಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ವಶಕ್ಕೆ ಪಡೆದಿರುವ ಭೂಮಿಯನ್ನು ಇನ್ನು ಸಾಕಷ್ಟು ಅಭಿವೃದ್ಧಿಪಡಿಸಿ, ನಂತರ ಈ ಕಾರ್ಯ ಪ್ರಾರಂಭವಾಗುತ್ತದೆ. ಸದ್ಯ ಈ ಪಕ್ರಿಯೆ ಪ್ರಾಥಮಿಕ ಹಂತದಲ್ಲಿದೆ ಎನ್ನುವುದು ಎಂದು ಅವರು ತಿಳಿಸಿದ್ದಾರೆ.

ಕಾರವಾರದಲ್ಲಿ ಕೈಗಾರಿಕೆಗಳಿಲ್ಲದೇ ನಿರುದ್ಯೋಗ ಸಮಸ್ಯೆ ದೊಡ್ಡದಾಗಿ ಕಾಡುತ್ತಿದೆ. ಮುಡಗೇರಿಯಲ್ಲಿ ವಶಕ್ಕೆ ಪಡೆದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಿ ಎಂದು ಹಲವು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಸದ್ಯ ನೌಕಾದಳಕ್ಕೆ ಪೂರೈಕೆಯಾಗುವಂಥ ಸಣ್ಣ ಕೈಗಾರಿಕೆ ಸ್ಥಾಪನೆಯಿಂದ ಹಲವರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಇದರಿಂದ ಗಡಿ ಭಾಗದ ಅಭಿವೃದ್ಧಿಗೆ ಸಹ ಸಹಕಾರಿಯಾಗಲಿದೆ. ಜಿಲ್ಲಾಡಳಿತ, ಕೈಗಾರಿಕಾ ಇಲಾಖೆ ತೆಗೆದುಕೊಂಡಿರುವ ಕ್ರಮ ಉತ್ತಮವಾಗಿದೆ ಎಂದು ಜನರ ಆಶಾದಾಯಕ ಅಭಿಪ್ರಾಯವಾಗಿದೆ.
Published by:Sushma Chakre
First published: