ಮಾನಸಿಕ ಅಸ್ವಸ್ಥನಿಗೆ ಹೊಸ ಬದುಕು ಕೊಟ್ಟ ಕಿಚ್ಚ ಅಭಿಮಾನಿಗಳು!


Updated:August 3, 2018, 5:31 PM IST
ಮಾನಸಿಕ ಅಸ್ವಸ್ಥನಿಗೆ ಹೊಸ ಬದುಕು ಕೊಟ್ಟ ಕಿಚ್ಚ ಅಭಿಮಾನಿಗಳು!

Updated: August 3, 2018, 5:31 PM IST
ಡಿಎಂಜಿ ಹಳ್ಳಿ ಅಶೋಕ್​, ನ್ಯೂಸ್​ 18 ಕನ್ನಡ

ಹಾಸನ(ಆ.03): ತಮ್ಮ ಸಮಾಜಮುಖಿ ಕಾರ್ಯಕ್ರಮಗಳಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಕಿಚ್ಚ ಅಭಿಮಾನಿಗಳು ಇದೀಗ ಮಾನಸಿಕ ಅಸ್ವಸ್ಥನಾಗಿ ರಸ್ತೆಗಳಲ್ಲಿ ಅಲೆದಾಡಿ ಭಿಕ್ಷೆ ಬೇಡುತ್ತಿದ್ದ ಯುವಕನೊಬ್ಬನಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಯುವಕನೊಬ್ಬನ ಭವಿಷ್ಯವನ್ನು ಸುಭದ್ರಗೊಳಿಸಿ ಮಾನವೀಯತೆ ಮೆರೆದಿದ್ದಾರೆ.

ಹೌದು ಪರಿಚಿತರಿಗೇ ಸಹಾಯಹಸ್ತ ಚಾಚಲು ಹಿಂಜರಿಯುವ ಈ ಕಾಲದಲ್ಲಿ, ಗೊತ್ತು ಪರಿಚಯವಿಲ್ಲದ ಅನಾಮಿಕನೊಬ್ಬನಿಗೆ ಸಹಾಯ ಮಾಡಿ ಮಾನವೀಯತೆ ಮೆರೆಯುವ ಮೂಲಕ ಹಾಸನದ ಕಿಚ್ಚ ಸುದೀಪ್​ ಅಭಿಮಾನಿ ಸಂಘವು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ. ಮಾನಸಿಕ ಸ್ವಸ್ಥನಾಗಿದ್ದ ಗಣೇಶ್​ ಎಂಬ ಯುವಕ ಕಳೆದ 10 ವರ್ಷದಿಂದ ಅನಾಥನಾಗಿ ಹಾಸನ ನಗರದಲ್ಲಿ ಸುತ್ತಾಡಿಕೊಂಡಿದ್ದ. ಹಸಿವಾದಾಗ ಭಿಕ್ಷೆ ಬೇಡಿಕೊಂಡಿರುತ್ತಿದ್ದ ಈತನೆಡೆ ಸರ್ಕಾರದ ಯಾವುದೇ ಅಧಿಕಾರಿಗಳೂ ಕರುಣೆ ತೋರಿರಲಿಲ್ಲ. ಕೊನೆಗೆ ಈತನಿಗೆ ಹೊಸ ಬದುಕನ್ನು ರೂಪಿಸಿ ಸಾಮಾನ್ಯನಂತೆ ಜೀವಿಸಲು ಸಹಾಯ ಮಾಡಿದ್ದು ಕಿಚ್ಚ ಫ್ಯಾನ್ಸ್​.

ಗಣೇಶ್​(ಹಿಂದಿನ ಚಿತ್ರ)


ಈತನ ಪಾಡನ್ನು ನೋಡಿದ ಹಾಸನ ಕಿಚ್ಚ ಅಭಿಮಾನಿ ಸಂಘವು, ಹಾಸನದ ಕ. ರ. ವೇ  ಕಾರ್ಯಕರ್ತರ ಸಹಯೋಗದೊಂದಿಗೆ ಗಣೇಶ್ ಗೆ ಚಿಕಿತ್ಸೆ ಕೊಡಿಸಿದ್ದಾರೆ. ಗುಣಮುಖನಾದ ಗಣೇಶ್​ ಸದ್ಯ ಕಿಚ್ಚ ಅಭಿಮಾನಿ ಸಂಘದ ಅಧ್ಯಕ್ಷ ಸುದೀಪ್​ರವರ ಭಾವ ಮಂಗಳೂರಿನಲ್ಲಿ ನಡೆಸುತ್ತಿರುವ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

ಗುಣಮುಖನಾಗಿರುವ ಗಣೇಶ್​ ತಂದೆ ತಾಯಿ ಆತ 13 ವರ್ಷದವನಿದ್ದಾಗಲೇ ಕೊನೆಯುಸಿರೆಳೆದಿದ್ದರು. ಒಬ್ಬಂಟಿಯಾದ ಗಣೇಶ್​ ಒತ್ತಡಕ್ಕೊಳಗಾಗಿ ಮದ್ಯಪಾನ ಮಾಡಲಾರಂಭಿಸಿದ. ತಂದೆ ತಾಯಿ ಇಲ್ಲದ ಕೊರಗು ಆತನನ್ನು ಅದೆಷ್ಟರ ಮಟ್ಟಿಗೆ ಕಾಡಿತೆಂದರೆ ಕಳೆದ 10 ವರ್ಷಗಳಿಂದ ಈತ ಮಾನಸಿಕ ಅಸ್ವಸ್ಥನಾಗಿ ತಿರುಗಾಡಲಾರಂಭಿಸಿದ್ದನೆಂಬ ವಿಚಾರ ತಿಳಿದು ಬಂದಿದೆ.

ಬೇಕರಿಯಲ್ಲಿ ಕೆಲಸ ಮಾಡಿಕೊಂಡಿರುವ ಗಣೇಶ್

Loading...

ಸದ್ಯ ಈ ಕೆಟ್ಟ ಕನಸಿನಂತಿದ್ದ ಬದುಕಿನಿಂದ ಹೊರಬಂದು ಸಾಮಾನ್ಯನಂತೆ ಬೇಕರಿಯಲ್ಲಿ ಕೆಲಸ ಮಾಡುತ್ತಿರುವ ಗಣೇಶ್​ಗೆ ತಾನು ಕೆಲಸ ಮಾಡಿ ಸಂಪಾದಿಸುವ ಹಣದಲ್ಲಿ ಅನಾಥರಿಗೆ ಸಹಾಯ ಮಾಡುವ ಮಹದಾಸೆ ಇದೆಯಂತೆ. ಇನ್ನು ತನ್ನ ಅಭಿಮಾನಿಗಳು ಇಂತಹ ಮಾನವೀಯ ಕೆಸಲ ಮಾಡಿರುವುದನ್ನು ಕಂಡ ಕಿಚ್ಚ ಸುದೀಪ್​ ತಮ್ಮ ಟ್ವಿಟರ್​ ಮೂಲಕ ಅಭಿನಂದಿಸಿದ್ದಾರೆ.
ಅದೇನಿದ್ದರೂ ಇಂತಹ ಸಮಾಜಮುಖಿ ಕೆಲಸಗಳಿಂದ ಸದ್ದು ಮಾಡುವ ಕಿಚ್ಚ ಅಭಿಮಾನಿಗಳ ಸಂಘದ ಈ ಕೆಲಸಕ್ಕೆ, ಅವರು ಗಣೇಶ್​ಗೆ ತೋರಿರುವ ಅಕ್ಕರೆ ಹಾಗೂ ಪ್ರೀತಿಗೆ ಸಲಾಂ ಎನ್ನಲೇ ಬೇಕು.

 
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...