ಸಿದ್ದರಾಮಯ್ಯಗೆ ವಿಪಕ್ಷ ನಾಯಕನ ಸ್ಥಾನ: ‘ಪಕ್ಷದ ತೀರ್ಮಾನಕ್ಕೆ ಬದ್ಧ’ – ಮುನಿಸು ನುಂಗಿಕೊಂಡ ಕೆ.ಎಚ್. ಮುನಿಯಪ್ಪ

ಪಕ್ಷದಲ್ಲಿ ವಲಸಿಗರು, ಮೂಲ ಕಾಂಗ್ರೆಸ್ಸಿಗರು ಎಂಬ ಬಣಗಳಿಲ್ಲ. ಕಾಂಗ್ರೆಸ್​ಗೆ ಒಂದು ಬಾರಿ ಬಂದ ಮೇಲೆ ಮುಗಿಯಿತು. ಹೊಸಬರು, ಹಳಬರು ಎಂಬ ಪ್ರಶ್ನೆಯೇ ಇರುವುದಿಲ್ಲ ಎಂದು ಕೆ.ಹೆಚ್. ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:October 9, 2019, 10:22 PM IST
ಸಿದ್ದರಾಮಯ್ಯಗೆ ವಿಪಕ್ಷ ನಾಯಕನ ಸ್ಥಾನ: ‘ಪಕ್ಷದ ತೀರ್ಮಾನಕ್ಕೆ ಬದ್ಧ’ – ಮುನಿಸು ನುಂಗಿಕೊಂಡ ಕೆ.ಎಚ್. ಮುನಿಯಪ್ಪ
ಮಾಜಿ ಸಂಸದ ಕೆ.ಎಚ್.ಮುನಿಯಪ್ಪ
news18-kannada
Updated: October 9, 2019, 10:22 PM IST
ಬೆಂಗಳೂರು(ಅ. 09): ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕನ ಸ್ಥಾನ ನೀಡಿದ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವನ್ನು ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಸ್ವಾಗತಿಸಿದ್ದಾರೆ. ವಿಪಕ್ಷ ನಾಯಕನ ಸ್ಥಾನದಲ್ಲಿ ನಿಂತು ಸಿದ್ದರಾಮಯ್ಯ ಅವರು ಜನರ ಸಮಸ್ಯೆ ಬಗ್ಗೆ ಸಮರ್ಥವಾಗಿ ಧ್ವನಿ ಎತ್ತಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು ಮಾಜಿ ಸಿಎಂಗೆ ಅಭಿನಂದನೆ ಕೂಡ ಹೇಳಿದ್ದಾರೆ. ಪರಿಷತ್ ವಿಪಕ್ಷ ನಾಯಕನಾಗಿ ಆಯ್ಕೆಯಾಗಿರುವ ಎಸ್.ಆರ್. ಪಾಟೀಲ್ ಅವರಿಗೂ ಮುನಿಯಪ್ಪ ಅಭಿನಂದನೆ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರಿಂದ ವಿಪಕ್ಷ ನಾಯಕನ ಸ್ಥಾನ ತಪ್ಪಿಸಬೇಕೆಂದು ಶ್ರಮ ವಹಿಸುತ್ತಿದ್ದ ಮೂಲ ಕಾಂಗ್ರೆಸ್ಸಿಗರಲ್ಲಿ ಕೆ.ಹೆಚ್. ಮುನಿಯಪ್ಪ ಕೂಡ ಒಬ್ಬರು. ಈಗ ಸಿದ್ದರಾಮಯ್ಯಗೆ ವಿಪಕ್ಷ ನಾಯಕನ ಪಟ್ಟ ಸಿಕ್ಕಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ತಾವೆಲ್ಲರೂ ಪಕ್ಷದ ಒಳಗೆ ಕಷ್ಟ ಸುಖಗಳನ್ನ ತಿಳಿಸಿದ್ದೇವೆ. ಪಕ್ಷ ಏನೇ ತೀರ್ಮಾನ ಮಾಡಿದರೂ ಅದಕ್ಕೆ ತಾವು ಬದ್ಧವಾಗಿರುತ್ತೇವೆ. ಸಿದ್ದರಾಮಯ್ಯರ ನೇಮಕದಿಂದ ಯಾವುದೇ ಬಂಡಾಯ ಉದ್ಭವವಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ವಿಧಾನಸಭೆ, ಪರಿಷತ್ನಲ್ಲಿ ಸಿದ್ದರಾಮಯ್ಯ ಮತ್ತು ಎಸ್.ಆರ್. ಪಾಟೀಲ್ ವಿಪಕ್ಷ ನಾಯಕರು; ಮೂಲ ಕಾಂಗ್ರೆಸ್ಸಿಗರಿಗೆ ಹಿನ್ನಡೆ

ಸಿದ್ದರಾಮಯ್ಯ ಅವರು ಈ ರಾಜ್ಯದ ಸಿಎಂ ಆಗಿ ಸೇವೆ ಮಾಡಿದ್ದಾರೆ. ಅವರಿಗೆ ಸಾಕಷ್ಟು ಅನುಭವ ಇದೆ. ಎಲ್ಲವನ್ನೂ ಸರಿದೂಗಿಸಿ, ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ. ಬಂಡಾಯ ಏಳದಂತೆ ಸಿದ್ದರಾಮಯ್ಯ ಮತ್ತು ಎಸ್.ಆರ್. ಪಾಟೀಲ್ ಇಬ್ಬರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಯಾವುದೇ ಸಮಸ್ಯೆಗಳಿಗೆ, ಗೊಂದಲಗಳಿಗೆ ಅವಕಾಶ ಮಾಡಿಕೊಡದ ರೀತಿಯಲ್ಲಿ ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿಗೆ ಮುನಿಯಪ್ಪ ಸಲಹೆ ನೀಡಿದ್ಧಾರೆ.

ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗಿದೆ ಎಂಬ ಮಾತನ್ನು ಈ ಸಂದರ್ಭದಲ್ಲಿ ಕೆ.ಎಚ್. ಮುನಿಯಪ್ಪ ಅಲ್ಲಗಳೆದಿದ್ದಾರೆ.

ಪಕ್ಷದಲ್ಲಿ ವಲಸಿಗರು, ಮೂಲ ಕಾಂಗ್ರೆಸ್ಸಿಗರು ಎಂಬ ಬಣಗಳಿಲ್ಲ. ಕಾಂಗ್ರೆಸ್​ಗೆ ಒಂದು ಬಾರಿ ಬಂದ ಮೇಲೆ ಮುಗಿಯಿತು. ಹೊಸಬರು, ಹಳಬರು ಎಂಬ ಪ್ರಶ್ನೆಯೇ ಇರುವುದಿಲ್ಲ ಎಂದು ಕೆ.ಹೆಚ್. ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ವಿಧಾನಸಭೆ ಕಲಾಪಕ್ಕೆ ಮಾಧ್ಯಮದವರಿಗೆ ನಿರ್ಬಂಧ ಇನ್ನು ಅಧಿಕೃತ; ಬಿಎಸ್​ವೈ ಮಾತಿಗೂ ಕಿವಿಗೊಡದ ಸಭಾಧ್ಯಕ್ಷ ಕಾಗೇರಿ
Loading...

ಜಿ. ಪರಮೇಶ್ವರ್ ಮತ್ತು ಹೆಚ್.ಕೆ. ಪಾಟೀಲ್ ಅವರು ವಿಪಕ್ಷ ನಾಯಕನ ಸ್ಥಾನಕ್ಕೆ ಪ್ರಯತ್ನಿಸಿದ್ದರಲ್ಲಿ ತಪ್ಪಿಲ್ಲ. ಈಗ ಸಿದ್ದರಾಮಯ್ಯ ವಿಪಕ್ಷ ನಾಯಕನಾದ ಮೇಲೆ ಪರಮೇಶ್ವರ್ ಮತ್ತು ಹೆಚ್.ಕೆ. ಪಾಟೀಲ್ ಅವರಿಗೆ ಕೆಲ ಜವಾಬ್ದಾರಿಗಳಿವೆ. ಅದನ್ನು ಯಾವ ರೀತಿ ಮಾಡಬೇಕು ಎಂದು ನಾನು ಸಲಹೆ ಕೊಟ್ಟಿದ್ದೇನೆ. ಆ ಜವಾಬ್ದಾರಿಯನ್ನು ಅವರಿಬ್ಬರು ಮಾಡುತ್ತಾರೆ ಎಂದು ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

ಇದೇ ವೇಳೆ, ಪಕ್ಷ ವಿರೋಧಿಗಳನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಹೇಳಿದ್ಧೇನೆ. ಸಿದ್ದರಾಮಯ್ಯ ಅವರು ಆ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದೂ ಕೋಲಾರದ ಮಾಜಿ ಸಂಸದರೂ ಆಗಿರುವ ಮುನಿಯಪ್ಪ ತಿಳಿಸಿದ್ದಾರೆ.

ಕೆಹೆಚ್ ಮುನಿಯಪ್ಪ ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಸೋಲುಣ್ಣಲು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೊದಲಾದವರೇ ಕಾರಣ ಎಂಬುದು ಕಾಂಗ್ರೆಸ್ ಸತ್ಯಶೋಧನಾ ವರದಿಯಲ್ಲಿ ತಿಳಿಸಲಾಗಿದೆ. ಮುನಿಯಪ್ಪ ಅವರೂ ಕೂಡ ಹಲವು ಬಾರಿ ಇದೇ ವಿಚಾರ ಎತ್ತಿಕೊಂಡು ಆರೋಪ ಮಾಡುತ್ತಾ ಬಂದಿದ್ದರು. ರಮೇಶ್ ಕುಮಾರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಉಚ್ಛಾಟಿಸುವಂತೆ ಹಲವು ಬಾರಿ ಅವರು ಆಗ್ರಹಿಸುತ್ತಾ ಬಂದಿದ್ಧಾರೆ. ಆದರೆ, ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರ ಆಪ್ತರಾಗಿರುವುದು ಇಲ್ಲಿ ಗಮನಾರ್ಹ.

(ವರದಿ: ಕೃಷ್ಣ ಜಿ.ವಿ.)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...