Actor Yash - ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ಕೋರಿದವರಿಗೆ ನಟ ಯಶ್ ಪ್ರತಿಕ್ರಿಯೆ ಇದು

ಸಮಸ್ಯೆಗೆ ಮತ್ತೊಂದು ಸಮಸ್ಯೆ ಎಂದಿಗೂ ಪರಿಹಾರವಲ್ಲ. ಬದಲಿಗೆ ಮುಕ್ತ ಮನಸ್ಸುಗಳ ಬಿಚ್ಚುಮಾತು ಈ ಸಮಸ್ಯೆಗೆ ಪರಿಹಾರವಾಗಬಲ್ಲದು. ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ ಎಂದು ಸಾರಿಗೆ ನೌಕರರಿಗೆ ನಟ ಯಶ್ ಕಿವಿಮಾತು ಹೇಳಿದ್ದಾರೆ.

ಯಶ್​

ಯಶ್​

  • Share this:
    ಬೆಂಗಳೂರು(ಏ. 15): ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ಕೋರಿ ಸಾರಿಗೆ ನೌಕರರ ಒಕ್ಕೂಟ ಬರೆದಿದ್ದ ಪತ್ರಕ್ಕೆ ನಟ ಯಶ್ ಪ್ರತಿಕ್ರಿಯಿಸಿದ್ದಾರೆ. ಸಮಸ್ಯೆಗೆ ಮತ್ತೊಂದು ಸಮಸ್ಯೆ ಯಾವತ್ತೂ ಪರಿಹಾರವಲ್ಲ ಎಂದು ಹೇಳುವ ಮೂಲಕ ಯಶ್ ಅವರು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಬೇಕೆನ್ನುವ ಕೋರಿಕೆಯನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. ಈ ಬಗ್ಗೆ ಸಾರಿಗೆ ನೌಕರರ ಒಕ್ಕೂಟಕ್ಕೆ ಪತ್ರದ ಮೂಲಕವೇ ಉತ್ತರ ನೀಡಿರುವ ಕೆಜಿಎಫ್ ಸ್ಟಾರ್, ತನಗೆ ಸಾರಿಗೆ ನೌಕರರ ಸಂಕಷ್ಟ ಚೆನ್ನಾಗಿ ಅರಿವಿದೆ. ಹಾಗೆಯೇ, ಬಸ್ಸುಗಳ ಮೇಲೆಯೇ ಅವಲಂಬಿತವಾಗಿರುವ ಜನರ ಅಳಲು ಕೂಡ ಗೊತ್ತಿದೆ. ತಾನು ಸಾರಿಗೆ ಸಚಿವರೊಂದಿಗೆ ಮಾತನಾಡಿದ್ದು, ಅವರು ನೌಕರರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

    ನಟ ಯಶ್ ಅವರು ಬಿಎಂಟಿಸಿಯ ನಿವೃತ್ತ ಚಾಲಕನ ಮಗನಾಗಿದ್ದಾರೆ. ಹೀಗಾಗಿ, ಸಾರಿಗೆ ನೌಕರರ ಮುಷ್ಕರಕ್ಕೆ ಅವರು ಬೆಂಬಲ ವ್ಯಕ್ತಪಡಿಸಬೇಕೆಂದು ಕೋರಿ ಸಾರಿಗೆ ನೌಕರರ ಒಕ್ಕೂಟವು ನಿನ್ನೆ ಕೋರಿ ಪತ್ರ ಬರೆದಿತ್ತು. ಆದರೆ, ಮುಷ್ಕರವನ್ನು ಪರೋಕ್ಷವಾಗಿ ಒಪ್ಪದ ಯಶ್, ಸಮಸ್ಯೆಗೆ ಮತ್ತೊಂದು ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಿಗೆ ಮುಕ್ತ ಮನಸ್ಸುಗಳ ಬಿಚ್ಚು ಮಾತು ಈ ಸಮಸ್ಯೆಗೆ ಪರಿಹಾರವಾಗಬಹುದು. ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ ಎಂದು ಕರೆ ನೀಡಿದ್ದಾರೆ.

    ಇದನ್ನೂ ಓದಿ: ತಾಕತ್ತಿದ್ದರೆ ನನ್ನನ್ನ ಎದುರಿಸಿ; ನನ್ನ ಮಗನ ಮೇಲೆ ನಿಮಗೆ ದ್ವೇಷ ಯಾಕೆ? – ತುರುವೇಕೆರೆ ಶಾಸಕ ಅಕ್ರೋಶ

    ಸಾರಿಗೆ ನೌಕರರ ಒಕ್ಕೂಟಕ್ಕೆ ಯಶ್ ಬರೆದಿರುವ ಪತ್ರದಲ್ಲಿನ ವಿವರ ಇಲ್ಲಿದೆ:

    “ಪ್ರೀತಿಯ ಸಾರಿಗೆ ಸಂಸ್ಥೆ ನೌಕರರ ಕುಟುಂಬಕ್ಕೆ ನಿಮ್ಮ ಯಶ್ ಮಾಡುವ ನಮಸ್ಕಾರಗಳು… ಇಂದು ನಿಮ್ಮ ಯಶ್ ಏನೇ ಆಗಿರಬಹುದು… ಆದರೆ ಅದಕ್ಕೂ ಮೊದಲು ನಾನು ನಿಮ್ಮ ಸಂಸ್ಥೆಯ ಪ್ರಾಮಾಣಿಕ ಚಾಲಕನ ಪುತ್ರ.

    ಮನೆಯಲ್ಲಿ ನಾನು ತಡ ಮಾಡಿದ್ರೆ ದಿನಾಲೂ ನನ್ನ ಬಸ್ಸಿನಲ್ಲೇ ಬರೋ ಪ್ರಯಾಣಿಕರಿಗೆ ಟ್ರೈನ್ ಮಿಸ್ ಆಗುತ್ತೇನೋ… ಆಫೀಸ್​ಗೆ ಲೇಟ್ ಆಗುತ್ತೇನೋ.. ಅಂತ ನಮ್ಮಪ್ಪ ಎಷ್ಟೋ ದಿನ ಬೆಳಗ್ಗೆ ಮನೆಯಲ್ಲಿ ತಿಂಡಿ ಕೂಡ ತಿನ್ನದೇ ಗಡಿಬಿಡಿಯಲ್ಲಿ ನಡೆಯುತ್ತಿದ್ದ ಆ ದಿನಗಳು ಈಗಲೂ ನೆನಪಾಗುತ್ತೆ. ಬಹುಶಃ ಇದು ನನ್ನ ಅಪ್ಪನ ಕತೆ ಮಾತ್ರವಲ್ಲ… ಕರ್ತವ್ಯ ನಿಷ್ಠೆ ಮೆರೆದ ಸಾವಿರಾರು ಸಾರಿಗೆ ನೌಕರರುಗಳ ದಿನಚರಿ ಹೀಗೆ ಇರುತ್ತೆ…

    ಸಾರಿಗೆ ಸಂಸ್ಥೆಯ ನೌಕರರು ಮತ್ತು ಪ್ರಯಾಣಿಕರ ನಡುವಿನ ಸಂಬಂಧ ಮತ್ತು ಸಹಕಾರ ಲೆಕ್ಕವಿಲ್ಲದಷ್ಟು ಗೆಳೆತನಗಳಿಗೆ ಸಾಕ್ಷಿಯಾಗಿವೆ….. ಆದರೆ ನಮ್ಮ ಸಾರಿಗೆ ಸಂಸ್ಥೆಯ ನೌಕರರ ಸಂಬಳದ ತಾರತಮ್ಯ ಇರಬಹುದು… ರಜೆಗಳಿಗಾಗಿ ನಡೆಯುವ ತಕರಾರುಗಳಿರಬಹುದು.. ಓವರ್ ಡ್ಯೂಟಿಗಾರಿ ನಡೆಯುವ ಜಟಾಪಟಿಗಳಿರಬಹುದು… ಎಲ್ಲವನ್ನೂ ನಾನು ಹತ್ತಿರದಿಂದ ಬಲ್ಲವನು.

    ಇದನ್ನೂ ಓದಿ: Sringeri Rape Case - ಶೃಂಗೇರಿ ಬಾಲಕಿ ಅತ್ಯಾಚಾರ ಪ್ರಕರಣ: ಪೋಕ್ಸೋ ಕೋರ್ಟ್​ನಲ್ಲಿ ಚಾರ್ಜ್​ಶೀಟ್ ಸಲ್ಲಿಕೆ

    ನ್ಯಾಯ ಕೊಡಿ ಎಂದು ಪ್ರಾಮಾಣಿಕವಾಗಿ ಹೋರಾಟಕ್ಕಿಳಿದಿರುವ ಸಾರಿಗೆ ನೌಕರರ ಕೂಗು ಮತ್ತು ಸಾರಿಗೆ ಬಸ್ಸುಗಳ ಮೇಲೆಯೇ ಅವಲಂಬಿತವಾಗಿರುವ ಮಧ್ಯಮ ವರ್ಗದ ಜನರ ಅಳಲು.. ಈ ಎರಡು ಕೂಡ ನನ್ನನ್ನು ಬಹುವಾಗಿ ಕಾಡುತ್ತಿದೆ…

    ದೊಡ್ಡ ಸಮಸ್ಯೆಯೊಂದರ ಪರಿಹಾರಕ್ಕೆ ಚಿಕ್ಕ ಪ್ರಯತ್ನವೆಂಬಂತೆ ಸನ್ಮಾನ್ಯ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರೊಂದಿಗೆ ಈ ಬಗ್ಗೆ ವಿವರವಾಗಿ ಮಾತನಾಡಿ ಸಾರಿಗೆ ನೌಕರರ ಸಮಸ್ಯೆಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ.

    ಸಮಾಧಾನದ ವಿಷಯ ಅಂದ್ರೆ ಸನ್ಮಾನ್ಯ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರಿಗೆ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಇದ್ದ ಅರಿವು ಮತ್ತು ಕಳಕಳಿ, ಜೊತೆಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆಯಾದ ವೇತನ ತಾರತಮ್ಯವನ್ನು ತಪ್ಪದೇ ಈಡೇರಿಸುವ ಮಾತನ್ನು ನನಗೆ ಕೊಟ್ಟಿದದು ಮತ್ತಷ್ಟು ಖುಷಿ ಕೊಡ್ತು…

    ಸಮಸ್ಯೆಗೆ ಮತ್ತೊಂದು ಸಮಸ್ಯೆ ಎಂದಿಗೂ ಪರಿಹಾರವಲ್ಲ. ಬದಲಿಗೆ ಮುಕ್ತ ಮನಸ್ಸುಗಳ ಬಿಚ್ಚುಮಾತು ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂಬುದು ನನ್ನ ದೃಢ ವಿಶ್ವಾಸ. ವಿರಸ ಬಿಟ್ಟು ಸಾಮರಸ್ಯದೊಮದಿಗೆ ಮುನ್ನಡೆಯೋಣ….”
    Published by:Vijayasarthy SN
    First published: