ಬೆಂಗಳೂರು (ಜೂ.26): ಗುರುವಾರ ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಅದ್ವಾನವೇ ಸೃಷ್ಟಿಯಾಗಿದೆ. ಕೆಂಗೇರಿಯ ಮೈಲಸಂದ್ರ ವ್ಯಾಪ್ತಿಯಲ್ಲಿ ಕೆಂಗೇರಿ ಮೋರಿ (ವೃಷಭಾವತಿ ನದಿ) ಹಾಕಿದ್ದ ತಡೆಗೋಡೆ ಕುಸಿದ ಪರಿಣಾಮ ರಸ್ತೆಯ ಮೇಲೆ ನೀರು ನುಗ್ಗಿದೆ. ಹೀಗಾಗಿ, ಕೆಂಗೇರಿ ಸಮೀಪ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ರಾತ್ರಿಯೆಲ್ಲಾ ಭಾರೀ ಮಳೆ ಸುರಿದ ಹಿನ್ನಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಅಪಾಯದ ಮುನ್ಸೂಚನೆ ಹಿನ್ನಲೆಯಲ್ಲಿ ಏಕಮುಖ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಈಗ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.
ಪರಿಸ್ಥಿತಿ ತಹಬದಿಗೆ ತರಲು ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳ ಪಥ ಬದಲಾವಣೆ ಮಾಡಲಾಗಿದೆ. ಕೆಂಗೇರಿ ಉಪನಗರ ರಸ್ತೆಯ ಮೂಲಕ ಬೆಂಗಳೂರು ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು, ಮೈಸೂರಿಗೆ ತೆರಳುವ ವಾಹನಗಳು ನಾಯಂಡಳ್ಳಿ ತಿರುವು ಪಡೆದು ನೈಸ್ ರಸ್ತೆ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಆಸ್ಪತ್ರೆಯ ವಾರ್ಡ್ನಲ್ಲೇ ಕೊರೋನಾ ರೋಗಿ ನೇಣಿಗೆ ಶರಣು
ಘಟನಾಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. ಕಾಲುವೆಯಲ್ಲಿ ನೀರಿನ ಹರಿವು ಕಡಿಮೆಯಾಗದ ಹೊರತೂ ದುರಸ್ತಿ ಸಾಧ್ಯವಿಲ್ಲ. ಹಾಗಾಗಿ ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಚರ್ಚೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ, ಕೆಂಗೇರಿ ಮೂರಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿತ್ತು. ಇದರಿಂದ ತಡೆಗೋಡೆ ಕುಸಿದಿದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ