ಬೆಂಗಳೂರು: ರಾಜ್ಯ ಸರ್ಕಾರದ (State Government) ವಿರುದ್ಧ ಶೇ.40 ಕಮಿಷನ್ (40 Percent Commission) ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ವೈಯಾಲಿಕಾವಲ್ ಪೊಲೀಸರು (Vyalikaval Police) ಬಂಧಿಸಿದ್ದಾರೆ. ಕೆಂಪಣ್ಣ ಅವರೊಂದಿಗೆ ಒಟ್ಟು ಐವರನ್ನು ಪೊಲೀಸರು ಬಂಧನ ಮಾಡಿದ್ದು, ಸಚಿವ ಮುನಿರತ್ನ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆ (Defamation Case) ಪ್ರಕರಣ ಅಡಿ ಅವರನ್ನು ಬಂಧನ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಏನಿದು ಪ್ರಕರಣ?
ರಾಜ್ಯ ತೋಟಗಾರಿಕೆ ಮತ್ತು ಯೋಜನಾ ಸಚಿವರಾದ ಮುನಿರತ್ನ ಅವರ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೇ.40 ಕಮಿಷನ್ ಆರೋಪ ಮಾಡಿದ್ದರು. ಆರೋಪ ವಿರುದ್ಧ ಸಚಿವರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ಡಿಸೆಂಬರ್ 19 ರಂದು ಪ್ರಕರಣವನ್ನು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್ ಶೀವಕುಮಾರ್ ಅವರು ವಿಚಾರಣೆ ನಡೆಸಿದ್ದರು. ಅಲ್ಲದೇ ಈ ಸಂಬಂಧ ಕೆಂಪಣ್ಣ ಸೇರಿದಂತೆ 18 ಮಂದಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದರು.
ಇದನ್ನೂ ಓದಿ: BJPಗೆ ಟಾರ್ಗೆಟ್ ಆದ್ರಾ ಸಿದ್ದರಾಮಯ್ಯ? 40% ಕಮಿಷನ್ ಆರೋಪದ ಬಗ್ಗೆ ಠಕ್ಕರ್ ಕೊಡಲು ಪ್ಲ್ಯಾನ್!
ಸದ್ಯ ಕೋರ್ಟ್ ಎನ್ಬಿಡಬ್ಲ್ಯೂ ಹೊರಡಿಸಿದ್ದ ಕಾರಣ ಪೊಲೀಸರು ಕೆಂಪಣ್ಣ ಸೇರಿದಂತೆ ಕೃಷ್ಣಾರೆಡ್ಡಿ, ನಟರಾಜು, ಗುರುಸಿದ್ದಪ್ಪ, ಅಂಬಿಕಾಪತಿ ಅವರನ್ನು ಬಂಧನ ಮಾಡಿದ್ದಾರೆ. ಬಂಧನದ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಸ್ಪಷ್ಟನೆ ನೀಡಿದ್ದಾರೆ.
ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ಸಚಿವರು
ಆರೋಪ ಕೇಳಿ ಬಂದ ಬಳಿಕ ಮಾತನಾಡಿದ್ದ ಸಚಿವ ಮುನಿರತ್ನ ಅವರು, ಗುತ್ತಿಗೆದಾರರ ಸಂಘದವರು ಒಂದು ವರ್ಷಗಳಿಂದ ಸರ್ಕಾರ ಹಾಗೂ ಸಚಿವರ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿಕೊಂಡು ಬರ್ತಿದ್ದಾರೆ. ಬಳಿಕ ಮುಖ್ಯಮಂತ್ರಿಗಳೇ ಅವರನ್ನು ಕರೆದು ಮಾತಾಡಿದ್ರು, ಆದ್ರೂ ಅವರು ಆರೋಪ ಮಾಡಿದ್ದನ್ನು ಬಿಟ್ಟಿಲ್ಲ. ಇವಾಗ ವಿಪಕ್ಷ ನಾಯಕರ ಮನೆಗೆ ಹೋಗಿ, ನನ್ನ ಮೇಲೆ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: 40% Commission: ಬಿಜೆಪಿ ಸರ್ಕಾರದಲ್ಲಿ ಶರವೇಗದ ಕಮಿಷನ್; ಸಿದ್ದರಾಮಯ್ಯ ಆಕ್ರೋಶ, ತನಿಖೆಗೆ ಆಗ್ರಹ
ನಾನು ದೆಹಲಿ ಪ್ರವಾಸ ಸಂದರ್ಭದಲ್ಲಿ ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಹೇಳಿದ್ದೆ. ಆ ಮೇಲೆ ಕೆಂಪಣ್ಣ ಬಳಿ ಇರುವ ದಾಖಲೆಗಳನ್ನು ಲೋಕಾಯುಕ್ತಕ್ಕೆ ಕೊಡಿ ಎಂದು ಕೇಳಿದ್ವಿ. ಆದ್ರೆ 7 ದಿನಗಳ ಕಾಲಾವಕಾಶ ಕೊಟ್ರು ಅವ್ರು ಯಾವುದೇ ರೀತಿಯ ಪ್ರತಿಕ್ರಿಯೆ ಕೊಟ್ಟಿಲ್ಲ. ಅವ್ರು ಎಲ್ಲಿಯೂ ದಾಖಲೆ ಕೊಡುವ ಕೆಲಸ ಮಾಡಿಲ್ಲ. ಅವ್ರು ಕ್ಷಮೆನೂ ಕೇಳಿಲ್ಲ, ನಾನು ಕಳೆದ ತಿಂಗಳ 29ಕ್ಕೆ ಅವ್ರಿಗೆ ನೋಟಿಸ್ ಕೊಟ್ಟಿದ್ದೆ. ಆದರೆ ಅವ್ರು ದಾಖಲೆ ಬಿಡುಗಡೆ ಮಾಡದೆ ಇರೋದಕ್ಕೆ 30ಕ್ಕೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೆ. ಇವಾಗ ಅವರ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದರು.
ಸಿದ್ದರಾಮಯ್ಯ ವಿರುದ್ಧವೂ ಕಿಡಿಕಾರಿದ್ದ ಸಚಿವ ಮುನಿರತ್ನ
ತಮ್ಮ ವಿರುದ್ಧ ಸಾಕ್ಷ್ಯಾಧಾರ, ದಾಖಲೆಗಳಿಲ್ಲದೆ ಶೇಕಡ 40ರಷ್ಟು ಲಂಚ ಪಡೆದ ಅರೋಪ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ದಾಖಲೆರಹಿತವಾಗಿ ತಮ್ಮ ವಿರುದ್ಧ ಅರೋಪ ಮಾಡಿ ಹಿಂಬಾಗಿಲಿನಿಂದ ಓಡಿ ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ನನ್ನ ವಿರುದ್ಧ ಅರೋಪಗಳನ್ನು ಮಾಡುತ್ತಿರುವವರು ನ್ಯಾಯಾಲಯಕ್ಕೆ ದಾಖಲೆಗಳನ್ನು ಒದಗಿಸಿದರೆ ವಿಚಾರಣೆ ಎದುರಿಸುತ್ತೇನೆ. ಅವರು ದಾಖಲೆ ನೀಡದಿದ್ದರೆ ಅವರ ವಿರುದ್ಧ ಕೇಸ್ ದಾಖಲಿಸುತ್ತೇನೆ, ಸೆರೆಮನೆಗೆ ಹೋಗಲು ಅವರು ತಯಾರಾಗಿರಲಿ ಎಂದು ಸವಾಲು ಹಾಕಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ