ಒಮ್ಮೆ ಕಣ್ತುಂಬಿಕೊಳ್ಳಿ ಕೆಮ್ಮಣ್ಣುಗುಂಡಿಯ ಪ್ರಕೃತಿ ಸೊಬಗು

news18
Updated:August 7, 2018, 9:46 AM IST
ಒಮ್ಮೆ ಕಣ್ತುಂಬಿಕೊಳ್ಳಿ ಕೆಮ್ಮಣ್ಣುಗುಂಡಿಯ ಪ್ರಕೃತಿ ಸೊಬಗು
news18
Updated: August 7, 2018, 9:46 AM IST
ವಿರೇಶ್​ ಜಿ ಹೊಸೂರ್​, ನ್ಯೂಸ್​ 18 ಕನ್ನಡ

ಚಿಕ್ಕಮಗಳೂರು (ಆ.7): ಸುತ್ತಲು ಗಿರಿಶಿಖರ, ಹರಿವ ಝರಿಗಳು, ಕಣ್ಣಿಗೆ ಮುದ ನೀಡುವ ಅಚ್ಚ ಹಸಿರು, ಕಾಫಿಯ ಘಮ ಇದುವೆ ನಿಸರ್ಗ ಪ್ರಿಯರ ಸ್ವರ್ಗ ಕೆಮ್ಮಣ್ಣುಗುಂಡಿ.ಕರ್ನಾಟಕದ ಊಟಿ ಎಂದೇ ಖ್ಯಾತಿಯಾಗಿರುವ ಚಿಕ್ಕಮಗಳೂರಿನ ಕೆಮ್ಮಣ್ಣು ಗುಂಡಿಯ ಪ್ರಕೃತಿ ಸೌಂದರ್ಯಕ್ಕೆ ಸಾಟಿ ಇಲ್ಲ. ನಿಸರ್ಗ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿರುವ ಈ ಸ್ಥಳ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುವುದು ಸುಳ್ಳಲ್ಲ.ಆಕಾಶವನ್ನೇ ಚುಂಬಿಸುವಷ್ಟು ಎತ್ತರಕ್ಕೆ ಚಾಚಿಕೊಂಡಿರುವ ಪರ್ವತ ಶ್ರೇಣಿಗಳು. ಎತ್ತ ನೋಡಿದ್ರು ಹಚ್ಚ ಹಸಿರಿನ ವನರಾಶಿ. ಶುದ್ದ ಗಾಳಿಯ ಈ ಪಶ್ಚಿಮ ಘಟ್ಟಕ್ಕೆ ಮನಸೋಲದವರು ಇಲ್ಲ. ಅದರಲ್ಲಿಯೂ ಮಳೆಗಾಲ ಬಂತೆಂದರೆ ಇದು ಸಾಹಸಿತಾಣಗಳ ಸ್ವರ್ಗವಾಗುತ್ತದೆ.


Loading...

ಸಮುದ್ರಮಟ್ಟದಿಂದ ಸುಮಾರು 4,200 ಅಡಿ ಎತ್ತರದಲ್ಲಿರೋ ಕೆಮ್ಮಣ್ಣು ಗುಂಡಿ ಪ್ರಕೃತಿಯ ಹಾಸು ಹೊದ್ದಿರುವ ರಮಣೀಯ ಸ್ಥಳ.  ಅಂಕುಡೊಂಕಿನ ಹಾದಿಯಲ್ಲಿ ಈ ಪ್ರದೇಶಕ್ಕೆ ಸಾಗುವ ಮಜವೇ ಬೇರೆ. ಜನರ ಅಚ್ಚುಮೆಚ್ಚಿನ ಪ್ರವಾಸಿತಾಣವಾದ ಈ ಕೆಮ್ಮಣ್ಣಗುಂಡಿಗೆ ಬಂದರೆ ಅಲ್ಲಿಯೇ ಬಾಬಬುಡನ್​ಗಿರಿ, ಮುಳಯ್ಯನಗಿರಿ, ಕಲ್ಹತ್ತಗಿರಿಯ ಸೌಂದರ್ಯವನ್ನು ಕೂಡ ಸವಿಯಬಹುದು.ನಿಸರ್ಗ ಪ್ರೇಮಿಗಳ ಸ್ವರ್ಗವಾಗಿರುವ ಈ ತಾಣದಲ್ಲಿ ಪ್ರತಿನಿತ್ಯವೂ ಅದೆಷ್ಟೋ ಪ್ರವಾಸಿಗರ ಬಂದು ಭೇಟಿ ನೀಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿ ಮೂಲಸೌಲಭ್ಯವಿಲ್ಲ ಎಂಬ ಮಾತು ಪ್ರವಾಸಿಗರಿಂದ ಕೇಳಿ ಬರುತ್ತಿದೆ. ಜನರ ಅಚ್ಚುಮೆಚ್ಚಿನ ತಾಣವಾದ ಈ ಪ್ರದೇಶಕ್ಕೆ ಇನ್ನು ಹೆಚ್ಚಿನ ಮೂಲಸೌಕರ್ಯವನ್ನು ಒದಗಿಸಿ ಪ್ರವಾಸೋದ್ಯಮವನ್ನು ಈ ಮೂಲಕ ಅಭಿವೃದ್ಧಿ ಪಡಿಸಬೇಕು ಎಂಬುದು ಇಲ್ಲಿಗೆ ಬಂದ ಪ್ರವಾಸಿಗರ ಅಂಬೋಣ ಆಗಿದೆ.ನೈಸರ್ಗಿಕ ಸೊಬಗನ್ನು ತನ್ನ ಮೈಯೆಲ್ಲಾ ತುಂಬಿಕೊಂಡಿರುವ ಕೆಮ್ಮಣ್ಣುಗುಂಡಿ ಪ್ರವಾಸಿಗರನ್ನು ಎಲ್ಲ ಸಮಯದಲ್ಲಿಯೂ ತನ್ನತ್ತ ಕೈ ಬೀಸಿಕರೆಯುತ್ತದೆ. ಅದರಲ್ಲಿಯೂ ಮಳೆಗಾಲದಲ್ಲಿಯಂತೂ ನಿಜಕ್ಕೂ ಅದ್ಭುತ ಅನುಭವ ನೀಡುವ ಈ ತಾಣವನ್ನು ಪ್ರತಿಯೊಬ್ಬರು ಆಹ್ಲಾದಿಸದೇ ಇರಲು ಅಸಾಧ್ಯ. ಅಂತಹ ತಾಣ ನಮ್ಮ ಕೆಮ್ಮಣ್ಣುಗುಂಡಿ ಎಂಬುದು ಸುಳ್ಳಲ್ಲ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ